• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಖ್ಯಮಂತ್ರಿಗಳೆ ಏಕೆ ಅಳುತ್ತೀರಿ ?

|
ಇಂತಹದ್ದೊಂದು ಪ್ರಶ್ನೆ ರಾಜ್ಯದ ಆರು ಕೋಟಿ ಮಂದಿಗೆ ಬಂದಿದೆ ಎಂದರೆ ಸುಳ್ಳಲ್ಲ. ರಾಜ್ಯದ ಅತ್ಯುನ್ನತ ಹುದ್ದೆಯಾಗಿರುವ ಮುಖ್ಯಮಂತ್ರಿ ಪೀಠದಲ್ಲಿ ವಿರಾಜಮಾನರಾಗಿರುವ ಯಡಿಯೂರಪ್ಪ ಅವರು ಕಳೆದ ಒಂದು ವಾರದೊಳಗೆ ಎರಡು ಸಲ ಸಾರ್ವಜನಿಕ ಸಭೆಗಳಲ್ಲಿ ಕಣ್ಣೀರಿಟ್ಟಿದ್ದಾರೆ. ಅವರ ಕಣ್ಣೀರಿಗೆ ಸ್ಪಷ್ಟ ಕಾರಣ ಅವರ ಪೀಠ ಅಲುಗಾಡಲು ಶುರುವಾಗಿರುವುದು. ಸ್ಥಾನ ಹೋಗಲಿದೆ ಎಂಬ ಭಯ ಅವರನ್ನು ತೀವ್ರವಾಗಿ ಕಾಡತೊಡಗಿದೆ. ಅವರ ಏಕಚಕ್ರಾಧಿಪತ್ಯ ರಾಜಕೀಯ ನಡೆಯಿಂದ ಖುರ್ಚಿಗೆ ಗಂಡಾಂತರ ಬಂದಿದೆ. ಇದನ್ನು ಯಡಿಯೂರಪ್ಪ ಕೂಡಾ ಒಪ್ಪಲೇಬೇಕು.

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಲಕ್ಷಾಂತರ ಮಂದಿ ಸಂತ್ರಸ್ಥರಾದರು. ದಿಕ್ಕು ತೋಚದೆ ಕುಂತಾಗ ಅವರ ನೆರವಿಗೆ ಪಾದಯಾತ್ರೆ ಮೂಲಕ ನೂರಾರು ಕೋಟಿ ರುಪಾಯಿ ಸಂಗ್ರಹಿಸಿದಿರಿ. ಅದೊಂದು ದೊಡ್ಡ ಕೆಲಸ. ಆದರೆ, ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮ ಕರ್ತವ್ಯ ನಿರ್ವಹಿಸಿದ್ದೀರಿ, ಅಷ್ಟೇ ಹೊರತು ಅದರಲ್ಲಿ ಏನಿದೆ ವಿಶೇಷ. ಕೋಟ್ಯಂತರ ಜನರ ಬದುಕಿಗೆ ಬರೆ ಬಿತ್ತು. ಒಂದೇ ವಾರದಲ್ಲಿ ಆದ ಅನಾಹುತ ಲೆಕ್ಕವಿಲ್ಲದಷ್ಟಾಯಿತು. ಅಂದು ನೀವು ಕಣ್ಣೀರು ಹಾಕಲಿಲ್ಲ. ಅಂದು ಹಾಕದ ಕಣ್ಣೀರು ಇಂದೇಕೆ ಎನ್ನುವುದನ್ನು ಸ್ಪಷ್ಟಪಡಿಸುತ್ತೀರಾ ? ಯಡಿಯೂರಪ್ಪನವರೇ ಶಾಶ್ವತ ಅಲ್ಲ ಎಂಬುದು ನಿಮಗೂ ಗೊತ್ತಿದೆ. ಐದು ವರ್ಷಗಳ ನಂತರ ಹೋಗಬೇಕಿದ್ದ ಅಧಿಕಾರ ಬರೀ 18 ತಿಂಗಳಿಗೆ ಕಳೆದುಕೊಳ್ಳಬೇಕಾಗಿ ಬಂದಿರುವುದರಲ್ಲಿ ತಪ್ಪು ಯಾರದು ಎಂದು ಅತ್ಮಾಲೋಕನ ಮಾಡಿಕೊಳ್ಳುವುದಕ್ಕೆ ಇದು ಸಕಾಲ.

ಪಕ್ಷದೊಳಗೆ ಯಾರೂ ಪ್ರಬಲವಾಗಿ ಬೆಳೆಯಬಾರದು ಎಂಬ ನಿಮ್ಮ ಮನಸ್ಥಿತಿ. ಅದೇ ಕಾರಣಕ್ಕೆ ನೀವು ತೆಗೆದುಕೊಂಡ ಅನೇಕ ನಿರ್ಧಾರಗಳು, ಆಡಿರುವ ರಾಜಕೀಯ ಚದುರಂಗದಾಟದಿಂದಾಗಿ ಇಂದು ಈ ಪರಿಸ್ಥಿತಿ ಉದ್ಭವಿಸಿದೆ. ಒಬ್ಬ ನಾಯಕನಾಗಿ 30 ವರ್ಷಗಳ ರಾಜಕೀಯ ಅನುಭವ ಹೊಂದಿದ ನೀವು, ಅಧಿಕಾರ ಬಂದ 18 ತಿಂಗಳಲ್ಲಿ ಏನೇನು ಮಾಡಿದಿರಿ ಎಂಬುದನ್ನು ವಿವರಿಸುತ್ತೀರಾ ? ಸರಕಾರದ ಸುಭದ್ರಕ್ಕಾಗಿ ನಡೆಸಿದ ಆಪರೇಷನ್ ಕಮಲವೇ ಯಡಿಯೂರಪ್ಪನವರ ಕುರ್ಚಿಯ ಬುಡಕ್ಕೆ ನೀರು ಬಿಟ್ಟಿದೆ. ಆಪರೇಷನ್ ಕಮಲದ ಕಾರ್ಯಾಚರಣೆಯಲ್ಲಿ ಪಕ್ಷಕ್ಕೆ ಬಂದಿರುವ ಶಾಸಕರಲ್ಲಿ ಬಹುತೇಕರು ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆದಿದ್ದಾರೆ !

ಗಣಿಧಣಿಗಳು 'ಆಪರೇಷನ್ ಕಮಲ' ರುವಾರಿಗಳು

ಗಣಿಧಣಿಗಳು ಆಪರೇಷನ್ ಕಮಲದ ಮುಂಚೂಣಿ ನಾಯಕರು. ತನುಮನಧನದಿಂದ ಅನೇಕ ಶಾಸಕರನ್ನು ಬಿಜೆಪಿ ಕಡೆಗೆ ತರುವಲ್ಲಿ ಬಳ್ಳಾರಿ ಮೂವರು ಸಚಿವರ ಪಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಸರಕಾರ ಸುಭದ್ರವಾಯಿತು. ಯಡಿಯೂರಪ್ಪ ಅವರ ಚಿಂತನೆಯೂ ಕಳೆಯಿತು. ಆದರೆ, ಯಡಿಯೂರಪ್ಪ ಅವರು ಅಧಿಕಾರ ಭದ್ರವಾದ ನಂತರ ರೆಡ್ಡಿಗಳನ್ನು ಸಂಪೂರ್ಣವಾಗಿ ಮರೆತುಬಿಟ್ಟರು. ಮರೆಯುವುದಿರಲಿ, ಅವರನ್ನು ಕ್ಯಾರೇ ಎನ್ನುವ ಮಟ್ಟಕ್ಕೆ ತಲುಪಿದರು. ಇದರಿಂದ ರೆಡ್ಡಿ ಮತ್ತು ಯಡಿಯೂರಪ್ಪ ಮಧ್ಯೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಶೆಟ್ಟರ್ ಅವರಿಗೆ ಒಂದು ವರ್ಷದ ನಂತರ ಸಚಿವ ಸ್ಥಾನ ನೀಡುತ್ತೇನೆ ಎಂದಿದ್ದ ಯಡಿಯೂರಪ್ಪ ಅವರನ್ನು ತುಳಿಯುವ ಕೆಲಸಕ್ಕೆ ಕೈಹಾಕಿದರು. ಅವರು ಬೆಳೆಯಬಾರದು ಎಂಬ ಕಾರಣಕ್ಕೆ ಬಸವರಾಜ ಬೊಮ್ಮಾಯಿಗೆ ಸಚಿವ ಸ್ಥಾನ ನೀಡಿದರು. ಅದು ಶೆಟ್ಟರ್ ಅವರ ಕನಸನ್ನು ಭಗ್ನಗೊಳಿಸುವಲ್ಲಿ ಯಶಸ್ವಿಯಾಯಿತು.

ನೆರ ಸಂತ್ರಸ್ತರ ವಿಷಯದಲ್ಲಿ ಯಡಿಯೂರಪ್ಪ ಪಾದಯಾತ್ರೆ ಮಾಡಿ ನೂರಾರು ಕೋಟಿ ರುಪಾಯಿ ಸಂಗ್ರಹಿಸಿದರು. ಆದರೆ, ಸಂಗ್ರಹ ಕಾರ್ಯದಲ್ಲಿ ಕಂದಾಯ ಸಚಿವರು ಇರಬೇಕಿತ್ತು (ಕೆಲವಡೆ ಇದ್ದರು). ಈ ಮಧ್ಯೆ ರೆಡ್ಡಿಗಳು ಗಣಿ ಮಾಲೀಕರ ಸಹಯೋಗದಲ್ಲಿ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವುದಾಗಿ ಮುಖ್ಯಮಂತ್ರಿಗಳಲ್ಲಿ ಪ್ರಸ್ತಾಪಿಸಿದರು. ಮನೆ ಕಟ್ಟಿಸಿಕೊಡಲು ರೆಡ್ಡಿಗಳಿಗೆ ಅವಕಾಶ ಮಾಡಿಕೊಟ್ಟರೆ ರೆಡ್ಡಿಗಳು ಮತ್ತಷ್ಟು ಪ್ರಬಲರಾಗುತ್ತಾರೆ ಎಂದು ಕೆಲವರು ಸಿಎಂ ಕಿವಿಕಚ್ಚಿದರು. ಇದರಿಂದ ರೆಡ್ಡಿಗಳ ಮನವಿಯನ್ನು ಸಿಎಂ ಸ್ಪಷ್ಟವಾಗಿ ತಳ್ಳಿಹಾಕಿದರು. ಸಿಎಂ ತೀರ್ಮಾನ ರೆಡ್ಡಿಗಳಿಗೆ ಉರಿಯತೊಡಗಿದರು. ಕಂದಾಯ ಸಚಿವರನ್ನು ಬದಿಗಿಟ್ಟ ಸಿಎಂ ಶೋಭಾ ಕರಂದ್ಲಾಜೆ ಅವರನ್ನು ಮುಂದಿಟ್ಟುಕೊಂಡು ಸಂತ್ರಸ್ತರ ಕಾರ್ಯಗಳನ್ನು ಆರಂಭಿಸಿದಂತೂ ಎಷ್ಟು ಸರಿ ಎನ್ನುವುದನ್ನು ಸಿಎಂ ಉತ್ತರಿಸಬೇಕು.

ಸಂತ್ರಸ್ತರ ಬಗ್ಗೆ ಗಮನಹರಿಸಬೇಕಾದ ಸಿಎಂ ರಾಜಕೀಯ ಕಿತ್ತಾಟಕ್ಕೆ ನಿಂತಿದ್ದು, ಅವರ ಅನುಭವವನ್ನು ಪ್ರಶ್ನಿಸುವಂತಿದೆ. ರೆಡ್ಡಿಗಳು ತಮ್ಮ ನಡವಳಿಕೆ ಬಗ್ಗೆ ಯಾವಾಗ ಸಿಡಿದೆದ್ದರೂ ತಕ್ಷಣ ಎಚ್ಚತ್ತುಕೊಂಡು ಸಮಾಧಾನಕ್ಕೆ ನಿಲ್ಲಬೇಕಿತ್ತು. ಅವರ ಬೇಕು, ಬೇಡಗಳನ್ನು ಆಲಿಸಬೇಕಿತ್ತು. ಅದನ್ನು ಬಿಟ್ಟು ಅಧಿಕಾರಿಗಳ ವರ್ಗಾವಣೆ ಮಾಡುವ ಮೂಲಕ ದ್ವೇಷ ರಾಜಕಾರಣಕ್ಕೆ ಕೈಹಾಕಿದಂತೂ ಎಳ್ಳಷ್ಟು ಸರಿಯಲ್ಲ. ರೆಡ್ಡಿ ಸಹೋದರರನ್ನು ಬಿಟ್ಟು ಸಂಪುಟ ಸಭೆ ನಡೆಸಿದ್ದು ಕೂಡಾ ರೆಡ್ಡಿಗಳು ಬಲಿತುಕೊಳ್ಳಲು ಯಡಿಯೂರಪ್ಪ ಅವರೇ ಅವಕಾಶ ಮಾಡಿಕೊಟ್ಟಂತಾಯಿತು.

ಏನೇ ಆದರೂ ಇದು ನಿಜಕ್ಕೂ ಕನ್ನಡಿಗರ ದೌರ್ಬಾಗ್ಯ ಎನ್ನಬಹುದು. ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಿಂದ ಬೇಸತ್ತು, ಶಿಸ್ತಿನ ಪಕ್ಷ ಎಂದು ಮತ ನೀಡಿ ಅಧಿಕಾರಕ್ಕೆ ತಂದ ಮತದಾರನಿಗೆ ಭ್ರಮನಿರಸವಾಗಿದೆ. ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಬಿಜೆಪಿ ಮನೆಯಲ್ಲಿ ಬೆಂಕಿ ಬಿದ್ದು ದಗದಗಿಸತೊಡಗಿದೆ. ಆರುವ ಲಕ್ಷಣಗಳು ಸದ್ಯಕ್ಕಂತೂ ಗೋಚರಿಸುತ್ತಿಲ್ಲ. ಯಡಿಯೂರಪ್ಪ ಮತ್ತು ರೆಡ್ಡಿಗಳ ನಡುವೆ ಉಂಟಾಗಿರುವ ಸಮರ ರಾಜ್ಯದ ಆಡಳಿತ ಮೇಲೆ ಭಾರಿ ಪರಿಣಾಮ ಬೀರಿದೆ. ನೆರೆಯಿಂದ ಮನೆ ಮಠ ಕಳೆದುಕೊಂಡಿರುವ ಸ್ಥಿತಿಯಂತೂ ದೇವರಿಗೆ ಪ್ರೀತಿ ಎನ್ನುವಂತಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more