ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟ್ಟದಕಲ್ಲು ದೇವಸ್ಥಾನಗಳ ಮೇಲೆ 700ಕ್ಕೂ ಹೆಚ್ಚು ಜನ

|
Google Oneindia Kannada News

ಬೆಂಗಳೂರು, ಅ. 3 : ಹಿಂದೆಂದೂ ಕಾಣದಂತೆ ಜಲಪ್ರಳಯದಿಂದ ಉತ್ತರ ಕರ್ನಾಟಕದಲ್ಲಿ ನೂರಾರು ಜನ ಸಾವಿಗೀಡಾಗಿ, ಸಾವಿರಾರು ಜನ ಮನೆ-ಮಠ, ಜಾನುವಾರುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದು ಮಾತ್ರವಲ್ಲ ಐತಿಹಾಸಿಕ ಮಹತ್ವವುಳ್ಳ ದೇವಾಲಯಗಳು ಕೂಡ ಸಂಕಷ್ಟಕ್ಕೀಡಾಗಿವೆ.

ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ದೇವಾಲಯ ಸಂಪೂರ್ಣ ಜಲಮಯವಾಗಿದೆ, ರಾಯಚೂರು ಜಿಲ್ಲೆಯ ಮಂತ್ರಾಲಯದಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿದಿದ್ದರಿಂದ ಬೃಂದಾವನ ಕೂಡ ನೀರಿನಿಂದ ತುಂಬಿಕೊಂಡಿದೆ. ಮಂತ್ರಾಲಯದ ದೇವಸ್ಥಾನಕ್ಕೆ ಮತ್ತು ವಸತಿಗೃಹಗಳಿಗೆ ಸಾಕಷ್ಟು ಹಾನಿ ಸಂಭವಿಸಿದ್ದರಿಂದ ಕೂಡಲೆ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 10 ಕೋಟಿ ರು. ಬಿಡುಗಡೆ ಮಾಡುವುದಾಗಿ ಮೂರು ದಿನಗಳ ಸುತ್ತೂರು ಚಿಂತನ ಮಂಥನದ ನಂತರ ನೆರೆ ವೀಕ್ಷಣೆಗಾಗಿ ಉತ್ತರ ಕರ್ನಾಟಕಕ್ಕೆ ತೆರಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಪಟ್ಟದಕಲ್ಲಿನ ಸುಮಾರೂ ಹತ್ತಕ್ಕೂ ಹೆಚ್ಚು ದೇವಸ್ಥಾನಗಳ ಮೇಲೆ ಸುಮಾರೂ 700ಕ್ಕೂ ಹೆಚ್ಚಿನ ಜನ ಆಶ್ರಯ ಪಡೆದಿದ್ದಾರೆ. ಕಳೆದ ಎರಡು ದಿನಗಳಿಂದ ಮಳೆಯಲ್ಲಿಯೇ ನೀರು, ಆಹಾರವಿಲ್ಲದೆ ರಕ್ಷಣೆಗಾಗಿ ಕಾದು ಕುಳಿತಿದ್ದಾರೆ. ಮಕ್ಕಳು, ಹೆಂಗಸರು ಮತ್ತು ಹಿರಿಯ ಜೀವಗಳ ಪರಿಸ್ಥಿತಿ ಹೇಳತೀರದಂತಾಗಿದೆ. ನೆರೆಯಲ್ಲಿ ಸಿಲುಕಿದ ಜನರನ್ನು ದೇವರು ಕೂಡ ಕಾಪಾಡಲಾರದಂಥ ಪರಿಸ್ಥಿತಿ ಬಂದೊದಗಿದೆ.

ಮಂತ್ರಾಲಯದಲ್ಲಿ ಮಳೆಯ ಪ್ರಮಾಣ ತಗ್ಗಿದ್ದರೂ ನೂರಾರು ಜನ ಬಸ್ ಮತ್ತು ರೈಲು ಸಂಪರ್ಕವಿಲ್ಲದೆ ಅಲ್ಲಿಯೇ ಉಳಿಯುವಂತಾಗಿದೆ. ಅಲ್ಲಿ ಸಿಲುಕಿರುವ ಜನರಿಗೆ ಆಹಾರ ಪೊಟ್ಟಣಗಳನ್ನು ಮಾತ್ರ ಪೂರೈಸಲಾಗಿದೆ, ರಕ್ಷಣಾ ಕಾರ್ಯಕ್ಕೆ ಸರಕಾರ ಮುಂದಾಗಿಲ್ಲ. ಅಪಾರ ಪ್ರಮಾಣದ ಮಳೆಯಿಂದಾಗಿ ಹೊಸಪೇಟೆಯಲ್ಲಿರುವ ತುಂಗಭದ್ರಾ ಅಣೆಕಟ್ಟೆಗೆ ಹಾನಿಯಾಗಿದೆ ಎಂಬ ವರದಿ ಬಂದಿದೆ. ಅದು ಕಟ್ಟೆಯೊಡೆದರೆ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಇಂದಿನಿಂದ ರಾಯಚೂರು ಜಿಲ್ಲೆಯಲ್ಲಿ ಬಸ್ ಸಂಚಾರ ನಿಧಾನವಾಗಿ ಶುರುವಾಗುತ್ತಿದೆ. ರಾಯಚೂರುನಿಂದ ಬೆಂಗಳೂರಿಗೆ ಬರುವ ಜನರಿಗೆ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X