ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗದಲ್ಲಿ ರಸ್ತೆ ಅಗಲೀಕರಣಕ್ಕೆ ನಿವಾಸಿಗಳ ವಿರೋಧ

By Staff
|
Google Oneindia Kannada News

Savarline residents protest against road widening
ಶಿವಮೊಗ್ಗ, ಸೆ. 15 : ನಗರದ ಸವಾರ್‌ಲೈನ್ ರಸ್ತೆಯನ್ನು ಅಗಲೀಕರಣ ವಿರೋಧಿಸಿ ಸವಾರ್‌ಲೈನ್ ರಸ್ತೆ ನಿವಾಸಿಗಳು ಮತ್ತು ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿ ನಂತರ ಮನವಿ ಸಲ್ಲಿಸಿದರು.

ಸವಾರ್‌ಲೈನ್ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 300ರಷ್ಟು ಕುಟುಂಬಗಳು ವಾಸವಾಗಿದ್ದು, ಹೂ ಮಾರಾಟ ಮತ್ತು ತಳ್ಳುಗಾಡಿಗಳನ್ನು ನಡೆಸಿ ಜೀವನ ನಡೆಸುವ ಕುಟುಂಬಗಳು ಇಲ್ಲಿವೆ. ಒಂದು ವೇಳೆ ಇಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸಿದಲ್ಲಿ ವಾಸಕ್ಕೆ ಯಾವುದೇ ಸ್ಥಳ ಸಿಗದೆ ಜೀವನ ನಡೆಸಲು ಕಷ್ಟಕರವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸವಾರ್‌ಲೈನ್ ರಸ್ತೆಯಲ್ಲಿ ಅಗಲೀಕರಣ ಮಾಡುವ ಅವಶ್ಯಕತೆ ಪ್ರಸ್ತುತ ಇರುವುದಿಲ್ಲ. ಸವಾರ್‌ಲೈನ್ ರಸ್ತೆಗೆ ಸಮಾನಾಂತರವಾಗಿ ಜೆಪಿಎನ್ ರಸ್ತೆ ಇರುತ್ತದೆ. ಹಾಗೆಯೇ, ನಗರದ ಬೇರೆ ಪ್ರದೇಶಗಳಿಗೆ ಹೋಗಲು ಹಲವಾರು ರಸ್ತೆಗಳಿವೆ. ಜೊತೆಗೆ, ಬಿ.ಹೆಚ್.ರಸ್ತೆಯಲ್ಲಿ ಕಾಮಗಾರಿಯಾಗುತ್ತಿರುವುದರಿಂದ ಸವಾರ್‌ಲೈನ್ ರಸ್ತೆಯಲ್ಲಿ ವಾಹನ ಸಂಚಾರ ತಾತ್ಕಾಲಿಕವಾಗಿ ಹೆಚ್ಚಾಗಿದೆಯೇ ಹೊರತು ಇಲ್ಲಿ ದಿನನಿತ್ಯ ದೊಡ್ಡ ವಾಹನಗಳ ಸಂಚಾರ ಕಂಡುಬರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹಾಲಿ ಸವಾರ್‌ಲೈನ್ ರಸ್ತೆಯನ್ನು ನಗರವಾಸಿಗಳು ಮಾತ್ರ ಬಳಸುವ ಅವಶ್ಯಕತೆ ಇರುತ್ತದೆ. ಸವಾರ್‌ಲೈನ್ ರಸ್ತೆಯ ಮೂಲಕ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಲ್ಲಿ, ಸವಾರ್‌ಲೈನ್ ಮತ್ತು ನೆಹರೂ ರಸ್ತೆ ಸಂದಿಸುವ ಗೋಪಿವೃತ್ತದ ಬಳಿ ಟ್ರಾಫಿಕ್ ಜಾಮ್ ಹಾಗೂ ಅಪಘಾತಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಭಿವೃದ್ಧಿ ನೆಪದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿರುವ ಮನೆಗಳನ್ನು ಒಡೆದುಹಾಕಿದಲ್ಲಿ, ಕಡು ಬಡತನದಲ್ಲಿರುವ 300 ಕುಟುಂಬಗಳು ಬೀದಿಗೆ ಬೀಳುವುದು ನಿಶ್ಚಿತವಾಗಿದೆ. ಹಲವಾರು ವರ್ಷಗಳಿಂದ ಕಡುಬಡ ಕುಟುಂಬಗಳು ಕಷ್ಟಪಟ್ಟು ಜೀವನದಲ್ಲಿ ಮೇಲೆ ಬರುತ್ತಿರುವ ಸಂದರ್ಭದಲ್ಲಿ ರಸ್ತೆ ಅಗಲೀಕರಣ ಮಾಡಿದರೆ ಬಡ ಕುಟುಂಬಗಳು ಇನ್ನಷ್ಟು ಕಷ್ಟದ ಪರಿಸ್ಥಿತಿಗೆ ಹೋಗಬೇಕಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಹೀಗಾಗಿ, ಬಡಜನರ ಕಾಳಜಿಯುಳ್ಳ ಅಧಿಕಾರಿಗಳಾದ ತಾವುಗಳು ಸವಾರ್‌ಲೈನ್ ರಸ್ತೆಯ ಅಗಲೀಕರಣವನ್ನು ಕೈಬಿಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಪ್ರತಿಭಟನಾನಿರತರು ಒಕ್ಕೊರಲಿನಿಂದ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಆರ್.ಶಿವಕುಮಾರ್, ಬಾಲರಾಜ್, ಕೃಷ್ಣಮೂರ್ತಿ, ಮಂಜುನಾಥ್, ರಂಗಸ್ವಾಮಿ, ರಘು, ಮಧು, ರಮೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X