ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ಸೃಷ್ಟಿ : ಗೌರಿಬಿದನೂರಿನಲ್ಲಿ ಕಾರ್ಯಾಗಾರ

By Staff
|
Google Oneindia Kannada News

Jhulfikarulla addressing the gathering
ಗೌರಿಬಿದನೂರು, ಆ. 4 : ದೇಶದಲ್ಲಿ ಅಸಮಾನತೆಯನ್ನು ನಿವಾರಿಸುವ ಸಲುವಾಗಿ ಜಾರಿಗೆ ಬಂದಿರುವ ಪ್ರಧಾನ ಮಂತ್ರಿಯವರ ಉದ್ಯೋಗ ಸೃಷ್ಟಿ ಹಾಗೂ ಅಲ್ಪಸಂಖ್ಯಾತರಿಗಾಗಿ ಪ್ರಧಾನ ಮಂತ್ರಿಯವರ 15 ಅಂಶಗಳ ಕಾರ್ಯಕ್ರಮ ಕುರಿತು ಗ್ರಾಮ ಪಂಚಾಯತ್ ಸದಸ್ಯರಿಗೆ ಅರಿವು ಮೂಡಿಸಿ ಗ್ರಾಮ ಸಭೆಗಳಲ್ಲಿ ಚರ್ಚೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ ಎಂ.ಎಸ್. ಜುಲ್ಪೀಕರುಲ್ಲಾ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆಯುತ್ತಿರುವ ಭಾರತ ನಿರ್ಮಾಣ ಸಾರ್ವಜನಿಕ ಪ್ರಚಾರಾಂದೋಲನದ ನಾಲ್ಕನೇ ದಿನವಾದ ಮಂಗಳವಾರ ನಡೆದ ಈ ಎರಡು ಯೋಜನೆಗಳ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಜನೆಗಳ ಬಗ್ಗೆ ಪಂಚಾಯತ್ ಮಟ್ಟದಲ್ಲಿ ಜಾಗೃತಿ ಮೂಡಿಸಿ ನೈಜ ಫಲಾನುಭವಿಗಳಿಗೆ ಸೌಲಭ್ಯವನ್ನು ತಲುಪಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.

ಇಂತಹ ಮಹತ್ತರ ಕಾರ್ಯಕ್ರಮಗಳ ಜಾರಿಗೆ ಬ್ಯಾಂಕ್‌ಗಳ ಸಹಕಾರ ಅಗತ್ಯ. ಬ್ಯಾಂಕ್‌ಗಳು ಸೂಕ್ತ ಸಾಲ ಸೌಲಭ್ಯಗಳನ್ನು ನೀಡಬೇಕು. ಹಾಗೊಂದು ವೇಳೆ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಸಾಲ ನೀಡಲು ಸಾಧ್ಯವಾಗದಿದ್ದರೆ ಯಾವ ಕಾರಣದಿಂದ ಸಾಲ ದೊರೆಯುತ್ತಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಹಾಗೂ ತಿರಸ್ಕರಿಸಿದ ಅರ್ಜಿಯ ಹಿಂಬರಹದಲ್ಲಿ ತಿಳಿಸಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ವೇತನವನ್ನು ಬ್ಯಾಂಕ್ ಖಾತೆಗಳ ಮೂಲಕವೇ ಪಾವತಿಸಲಾಗುತ್ತಿದೆ. ಆದ ಕಾರಣ ಎಲ್ಲರೂ ಖಾತೆಗಳನ್ನು ತೆರೆಯಬೇಕೆಂದು ಕರೆ ನೀಡಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯ ಕೃಷಿ ಮತ್ತು ಕೈಗಾರಿಕಾ ಸ್ಧಾಯಿ ಸಮಿತಿ ಅಧ್ಯಕ್ಷೆ ಎಚ್.ಎನ್.ರಾಮಾಂಜನಮ್ಮ, ನಮಗಾಗಿ ಇರುವ ಕೇಂದ್ರ ಸರ್ಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮೊದಲು ಮಾಹಿತಿ ಪಡೆಯಬೇಕು. ನಂತರ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಮನವಿ ಮಾಡಿದರು.

ಪ್ರಧಾನ ಮಂತ್ರಿಯವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಕುರಿತು ಮಾತನಾಡಿದ ಚಿಕ್ಕಬಳ್ಳಾಪುರದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಯಾನಂದ್, ಬಡವ, ಬಲ್ಲಿದ, ಹಿಂದುಳಿದ, ಮುಂದುವರೆದ ಎಂಬ ಯಾವುದೇ ಜಾತಿ, ಬೇದಭಾವವಿಲ್ಲ. ಇದಕ್ಕೆ ಆದಾಯ ಮಿತಿಯೂ ಇಲ್ಲ. ಜನರಿಗೆ ಉದ್ಯೋಗ ದೊರಕಿಸಿಕೊಡುವ ಎಲ್ಲರಿಗೂ ಸಾಲ ಸೌಲಭ್ಯ ದೊರೆಯಲಿದೆ. ಗರಿಷ್ಠ 25 ಲಕ್ಷ ರೂಪಾಯಿವರೆವಿಗೆ ಸಾಲ ದೊರೆಯಲಿದೆ ಮತ್ತು ಶೇ 25ರಷ್ಟು ಸಹಾಯಧನ ದೊರೆಯಲಿದೆ. ಪಡೆದ ಸಾಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದಿದ್ದರೆ, ಉದ್ಯೋಗ ಸೃಷ್ಟಿಸದಿದ್ದರೆ ಅಂತಹವರ ಸಬ್ಸಿಡಿ ನೆರವನ್ನು ರದ್ದುಪಡಿಸುವ ಅಧಿಕಾರವೂ ಕೂಡ ಇದೆ. ಈ ವರ್ಷ ಜಿಲ್ಲೆಯಲ್ಲಿ 84 ಕೈಗಾರಿಕೆಗಳನ್ನು ಸ್ಧಾಪಿಸುವ ಗುರಿ ಇದೆ ಎಂದು ವಿವರಿಸಿದರು.

ನಂತರ ಮಾತನಾಡಿದ ಚಿಕ್ಕಬಳ್ಳಾಪುರ ಜಿಲ್ಲೆಯ ಬಿ.ಸಿ.ಎಂ. ಜಿಲ್ಲಾ ಅಧಿಕಾರಿ ಮುದ್ದುಕುಮಾರ್, ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ಧಿಗೆ ಈ ಯೋಜನೆ ಸಹಕಾರಿಯಾಗಿದ್ದು, ವಸತಿ ಯೋಜನೆಗಳಾದ ಆಶ್ರಯ, ಇಂದಿರಾ ಆವಾಜ್, ರಾಜೀವ್ ಗಾಂಧಿ ವಸತಿ ಯೋಜನೆಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲೂ ಅಲ್ಪಸಂಖ್ಯಾತರಿಗಾಗಿ ಶೇ 15 ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಮೀಸಲಾತಿ ಸೌಲಭ್ಯ ನೀಡದ ಯೋಜನೆಗಳಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಧೆಗಳಿಂದ ಅನುಮೋದನೆ ದೊರೆಯುವುದಿಲ್ಲ ಎಂದು ಹೇಳಿದರು.

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಭಿವೃದ್ಧಿ ಅಧಿಕಾರಿ ಸಯ್ಯದ್ ಅಬ್ದುಲ್ ಬ್ಯಾರಿ, ಕರ್ನಾಟಕ ಕೈಮಗ್ಗ ನಿಗಮದ ಅಧಿಕಾರಿ ಶ್ರೀನಿವಾಸ ಕೂಡ ಉದ್ಯೋಗಾವಕಾಶ ಮತ್ತು ಬಂಡವಾಳ ಹೂಡಿಕೆ ಬಗ್ಗೆ ಮಾತನಾಡಿದರು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕಾರಿ ಮುತ್ತಣ್ಣ, ಖಾದಿ ಮತ್ತು ಗ್ರಾಮೋದ್ಯಗ ಇಲಾಖೆಯ ಅಧಿಕಾರಿ ಮಣಿ ಮತ್ತಿತರರು ಪಾಲ್ಗೊಂಡರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಕ್ಷೇತ್ರಾಧಿಕಾರಿ ಶಿವಮೇಸ್ತ್ರಿ ಸ್ವಾಗತಿಸಿದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಕ್ಷೇತ್ರಾಧಿಕಾರಿ ನಂಜುಂಡಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X