ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!

By Super
|
Google Oneindia Kannada News

Indelible ink on voters finger
ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.

ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ ಪೇಪರಿನ ಮೇಲೆ ಮತದಾನದ ಗುರುತು ಹಾಕುವುದೇ ಇರಲಿ, ಎಲೆಕ್ಟ್ರಾನಿಕ್ ಮತಯಂತ್ರದ ಮುಖಾಂತರ ಗುಂಡಿ ಒತ್ತಿ ಮತಚಲಾಯಿಸುವುದೇ ಇರಲಿ ಎಡ ತೋರು ಬೆರಳಿನ ಮೇಲೆ ಅಳಿಸಲಾರದ ಮಸಿ ಮೂಡಿಸುವ ಪರಿಪಾಠ ಮಾತ್ರ ನಿಂತಿಲ್ಲ.

ಹಣ, ಹೆಂಡ, ಸೀರೆ ಹಂಚುವುದರಿಂದ ಹಿಡಿದು ಬ್ಯಾಲೆಟ್ ಬಾಕ್ಸ್ ಗಳನ್ನು ಹೈಜಾಕ್ ಮಾಡುವುದರತನಕ ಪ್ರಜಾತಂತ್ರವನ್ನು ಧಿಕ್ಕರಿಸುವಲ್ಲಿ 'ರೌಡಿ' ರಾಜಕಾರಣಿ ಎಷ್ಟೇ ಚಾಲಾಕಿತನ ತೋರಿಸಿದರೂ ಬೆರಳಿಗಂಟಿರುವ ಇಂಕಿನ ವಿಷಯದಲ್ಲಿ ಯಾವುದೇ ಚಾಲಾಕಿತನ ತೋರಿಸಲು ಸಾಧ್ಯವಿಲ್ಲ. ಇಂಕು ಅಳಿಸಿ ಚುನಾವಣಾಧಿಕಾರಿಗಳ ಮೇಲೆ ಮಂಕುಬೂದಿ ಎರಚಲು ಸಾಧ್ಯವೇ ಇಲ್ಲ. ಅದು ಅಂಥ ಹೆಗ್ಗುರುತು ಮೂಡಿಸಿರುತ್ತದೆ.

ಇದೇ ಕಾರಣಕ್ಕಾಗಿ ಮೈಸೂರಿನಲ್ಲಿ 1937ರಲ್ಲಿ ಸ್ಥಾಪಿತವಾದ ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ಎಂಬ ಕಂಪನಿ ಹಗಲೂ ರಾತ್ರಿ ಇಂಕನ್ನು ತಯಾರಿಸುವ ಕಾಯಕದಲ್ಲಿ ತೊಡಗಿದೆ. ಉದ್ಯಮಗಳಿಗಳಿಗೆ ಬಣ್ಣ, ಥಿನ್ನರ್, ಪಾಲಿಶ್, ಪ್ರೈಮರ್, ಸೀಲಿಂಗ್ ವ್ಯಾಕ್ಸ್ ಮುಂತಾದವುಗಳನ್ನು ತಯಾರಿಸುತ್ತಿದ್ದರೂ ಮತದಾರರ ಇಂಕ್ ತಯಾರಿಕೆಯಲ್ಲಿ ವಿಶೇಷ ಪರಿಣತಿ ಪಡೆದಿದೆ. ಈ ಕಂಪನಿ ಚುನಾವಣೆಗೆಂದೇ ಇಂಕನ್ನು ತಯಾರಿಸಿ ಸರಬರಾಜು ಮಾಡುವ ಉದ್ದೇಶದಿಂದ 1962ರಲ್ಲಿ ಬೇರೆ ಘಟಕವನ್ನು ಸ್ಥಾಪಿಸಿತು. ಪ್ರಸ್ತುತ ರವಿ ಶಂಕರ್ ಕಂಪನಿಯ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಕಂಪನಿ ಇಡೀ ಭಾರತದಲ್ಲಿಯೇ ಇಂಕ್ ತಯಾರಿಕೆಯಲ್ಲಿ ತನ್ನದೇ ಆದ ಕಾಣಿಕೆ ನೀಡುತ್ತ ಬಂದಿದೆ. ಲೋಕಸಭೆ ಚುನಾವಣೆಗಾಗಿಯೇ 10 ಮಿಲಿಲೀಟರ್ ಇಂಕುಳ್ಳ 20 ಲಕ್ಷ ಬಾಟಲಿಗಳನ್ನು ತಯಾರಿಸುತ್ತಿದೆ. ಮತದಾನದ ನಂತರ ಎಡತೋರುಬೆರಳಿಗೆ ಹಾಕುವ ಗುರುತನ್ನು ಬಿಂದುವಿನ ಬದಲಾಗಿ ಉದ್ದ ಲೈನಿನಂತೆ ಮೂಡಿಸುವುದನ್ನು ಚುನಾವಣಾ ಆಯೋಗ 2006ರಲ್ಲಿ ನಿಗದಿ ಮಾಡಿದ ನಂತರ ಇಂಕ್ ಬಾಟಲಿಯ ಗಾತ್ರವನ್ನು ಹೆಚ್ಚಿಸಲಾಯಿತು. ಈಗ ಅದರಲ್ಲಿ 5 ಮಿಲಿ ಲೀಟರ್ ಬದಲು 10 ಮಿಲಿ ಲೀಟರ್ ಇಂಕನ್ನು ತುಂಬಲಾಗುತ್ತಿದೆ.

ರಾಸಾಯನಿಕ, ಬಣ್ಣ, ಸಿಲ್ವರ್ ನೈಟ್ರೇಟ್ ಮೊದಲಾದವುಗಳ ಮಿಶ್ರಣವೇ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಮಸಿ. ಬಣ್ಣ ರಾಸಾಯನಿಕಗಳನ್ನು ಕೂಡಿಸಿ, ಬಾಟಲಿಗೆ ತುಂಬಿಸಿ, ಬಾಯಿ ಮುಚ್ಚಿ, ಲೇಬೆಲ್ ಅಂಟಿಸುವ ಪ್ರಕ್ರಿಯೆ ಅತ್ಯಂತ ಕಟ್ಟುನಿಟ್ಟಾದ ಮೇಲ್ವಿಚಾರಣೆ ಮತ್ತು ಭದ್ರತೆಯಲ್ಲಿ ನಡೆಯುತ್ತಿದೆ. ಕಂಪನಿಯಲ್ಲಿ ನೂರಕ್ಕೂ ಹೆಚ್ಚಿನ ನೌಕರರು ದಿನದಲ್ಲಿ ಎರಡು ಶಿಫ್ಟುಗಳಲ್ಲಿ ನಿರಂತರವಾಗಿ ಕಾಯಕದಲ್ಲಿ ತೊಡಗಿದ್ದಾರೆ.

ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ ಕಂಪನಿ ಇಡೀ ಭಾರತಕ್ಕೆ ಮಾತ್ರವಲ್ಲ ಕೆನಡಾ, ಕಾಂಬೋಡಿಯಾ, ಮಾಲ್ಡೀವ್ಸ್, ನೇಪಾಳ್, ನೈಜೀರಿಯಾ, ದಕ್ಷಿಣ ಆಫ್ರಿಕಾ ಮತ್ತು ಟರ್ಕಿ ದೇಶಗಳಿಗೂ ಅಳಿಸಲಾರದ ಇಂಕನ್ನು ರಫ್ತು ಮಾಡುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X