ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ

By Staff
|
Google Oneindia Kannada News

Belgaum ; second session on Jan 16
ಬೆಳಗಾವಿ ನಗರ ಎರಡನೇ ಬಾರಿ ಅಧಿವೇಶನ(ಜ. 16 ರಂದು)ಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಕಳೆದ 2006 ಸೆಪ್ಟೆಂಬರ್ 28 ರಂದು ಅಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನಿಂದ ಆಚೆ ಪ್ರಥಮ ಬಾರಿಗೆ ಅಧಿವೇಶನ ನಡೆಸಿ ಸೈ ಎನಿಸಿಕೊಂಡಿದ್ದರು. ಇಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎರಡನೇ ಬಾರಿಗೆ ಗಡಿ ನಗರ ಬೆಳಗಾವಿಯಲ್ಲಿ ಅಧಿವೇಶನ ಹಮ್ಮಿಕೊಳ್ಳುವ ಮೂಲಕ ಸೈ ಸೈ ಎನಿಸಿಕೊಳ್ಳಲು ಹೊರಟಿದ್ದಾರೆ. ಉತ್ತರ ಕರ್ನಾಟಕದ ಜನರಿಟ್ಟುಕೊಂಡ ಕನಸು ನನಸಾಗುವುದೇ ? ಅವರ ಆಕಾಂಕ್ಷೆಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸುವುದೇ ?

*ಮೃತ್ಯುಂಜಯ ಕಲ್ಮಠ

ಕಳೆದ ಅಧಿವೇಶನದಲ್ಲಿ ತೆಗೆದುಕೊಂಡು ಅನೇಕ ನಿರ್ಣಯಗಳು ಬರೀ ಸರ್ಕಾರಿ ಕಾಗದದಲ್ಲಿ ಉಳಿದಿವೆ. ಮೂಲಭೂತ ಸೌಕರ್ಯಗಳನ್ನು ಪಡೆಯದ ಉತ್ತರ ಕರ್ನಾಟಕದ ಮಂದಿ ಈ ಬಾರಿಯಾದರೂ ನಮಗೆ ಇದರಿಂದ ಅನುಕೂಲವಾದಿತೆ ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರಕ್ಕೆ ಅಧಿವೇಶನ ನಡೆಸಿ ಶಹಬ್ಬಾಸ್ ಗಿರಿ ಪಡೆದುಕೊಳ್ಳಬೇಕು ಎನ್ನುವ ಮಹದಾಸೆ ಎದ್ದುಕಾಣತೊಡಗಿದೆ. ಉತ್ತರ ಕರ್ನಾಟಕ ಸಮಸ್ತ ಸಮಸ್ಯೆಗಳಿಗೆ ಸ್ಪಂದಿಸುವ ಏಕೈಕ ಸರ್ಕಾರ ಈವರೆಗೂ ಬಂದಿಲ್ಲದಿರುವುದು ಆ ಭಾಗದ ಜನತೆಯ ದುರದೃಷ್ಟಕರ ಸಂಗತಿ.

ಇದೇ ಭಾಗದಿಂದ ಅನೇಕ ಘಟಾನುಘಟಿ ರಾಜಕಾರಣಿಗಳು ಸರ್ಕಾರದ ಪ್ರತಿ ಹುದ್ದೆಗಳನ್ನು ಅಲಂಕರಿಸಿ ಅನುಭವಿಸುತ್ತಾ ಬಂದಿದ್ದಾರೆ. ಆದರೆ ಅವರಿಂದ ಕವಡೆ ಕಾಸಿನ ಪ್ರತಿಫಲವೂ ಇಲ್ಲಿನ ಜನತೆಗೆ ಸಿಕ್ಕಿಲ್ಲ. ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಭರವಸೆಗಳು ನೆನಪಾಗುವುದು ಮುಂದಿನ ಚುನಾವಣೆಗಳು ಬರುವ ತನಕ. ಅಲ್ಲಿ ಜನತೆ ಕೂಡ ಇಂತಹ ಮಹಾನ್ ಮಹಾನುಭಾವ ನಾಯಕರನ್ನು ಬೆಳಸಿ, ಪೋಷಿಸಿ. ಗೆಲ್ಲಿಸಿ ವಿಧಾನಸಭೆ ಕಳುಹಿಸಿಕೊಡುತ್ತಾರೆ. ಪ್ರತಿರೋಧ ಒಡ್ಡುವ ಕೆಲ ನಾಯಕರ ಧ್ವನಿಗೆ ಬಟ್ಟೆ ಕಟ್ಟಲಾಗುತ್ತಿದೆ. ಇದು ಎಷ್ಟು ದಿನ ಅಂತ ಅಲ್ಲಿ ಮಂದಿ ಕೇಳಿಕೊಂಡಿಲ್ಲ. ಕೇಳುವ ಲಕ್ಷಣಗಳೂ ಕಾಣುತ್ತಿಲ್ಲ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಳೆದ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ, ಇಂದು ಅವರು ಮುಖ್ಯಮಂತ್ರಿ. ಯಾವ ಬದಲಾವಣೆ ಕಾಣಲು ಸಾಧ್ಯ ಎನ್ನುವ ಮಾತು ಕೇಳಿಬರತೊಡಗಿದೆ. ಇದನ್ನೆಲ್ಲಾ ಸರ್ಕಾರ ಹುಸಿ ಮಾಡಬೇಕು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮನಸ್ಸು ಮಾಡಬೇಕು. ಏಕೆಂದರೆ ಈ ಸರ್ಕಾರದಲ್ಲಿ ಅಧಿಕ ಪಾಲು ಕೂಡ ಅಲ್ಲಿಯ ಜನತೆಯದ್ದೆ ಎನ್ನುವುದನ್ನು ಯಡಿಯೂರಪ್ಪ ಮರೆಯಬಾರದು. ನೂರಾರು ಭರವಸೆಗಳನ್ನು ಅಲ್ಲಿನ ಪ್ರಜ್ಞಾವಂತ ಜನತೆ ಇಟ್ಟುಕೊಂಡಿದೆ. ಅದಕ್ಕೆ ಸರ್ಕಾರ ಸ್ಪಂದಿಸಬೇಕೆನ್ನುವುದು ಕೂಡ ಅಧಿಕಾರಯುತ ಒತ್ತಾಯ ಹಾಗೂ ಆಗ್ರಹವಾಗಿದೆ.

ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಜನತೆ ಈ ಸರ್ಕಾರದಿಂದ ಏನನ್ನು ನಿರೀಕ್ಷಿಸಬಹುದು ಎಂದು ಹುಡುಕುತ್ತಾ ಹೋದರೆ ಅನೇಕ ಅಂಶಗಳು ನಮ್ಮ ನೆದರಿಗೆ ಬಂದಿವೆ.

* ಈ ವರೆಗಿನ ಸರ್ಕಾರಗಳು ನಂಜುಂಡಪ್ಪ ವರದಿ ಜಾರಿ ಬಗ್ಗೆ ಕೈಗೊಂಡ ಕ್ರಮ, ಇದುವರೆಗಿನ ಪ್ರಗತಿ ಮುಂದೆ ಆಗಬೇಕಿರುವ ಕೆಲಸ ಕಡೆಗೆ ಗಮನ. ಇದರ ಬಗ್ಗೆ ಅಧಿವೇಶನದಲ್ಲಿ ವಿಸ್ತೃತವಾದ ಚರ್ಚೆ ಆಗಬೇಕು.

* ಉತ್ತರ ಕರ್ನಾಟಕದ ಬಹುಮುಖ್ಯ ಅವಶ್ಯಕತೆಗಳಲ್ಲಿ ನೀರಾವರಿ ಸೌಲಭ್ಯ ಒದಗಿಸುವುದು. ನಗರ ಮತ್ತು ಪಟ್ಟಣಗಳಲ್ಲಿ ಸಮರ್ಪಕವಾದ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ರಾಜ್ಯ ಯೋಜನಾ ಮಂಡಳಿ ಸಿದ್ಧಪಡಿಸಿರುವ ಬೃಹತ್ ಕುಡಿಯುವ ನೀರು ಯೋಜನೆ ನೀಲಿನಕ್ಷೆ ಸಂಬಂಧಿಸಿದಂತೆ ಮಹತ್ವದ ಚರ್ಚೆ ನಡೆಯಬೇಕು. ಹಾಗೂ ಈ ಬಗ್ಗೆ ಸೂಕ್ತ ಸರ್ಕಾರದಿಂದ ಸೂಕ್ತ ಉತ್ತರ ದೊರೆಯಬೇಕು.

* ವಿಳಂಬಗತಿಯಲ್ಲಿ ಸಾಗುತ್ತಿರುವ ಕೃಷ್ಣ ಕೊಳ್ಳದ ನೀರಾವರಿ ಯೋಜನೆಗಳ ಕಾಲಮಿತಿ ಅನುಷ್ಠಾನಕ್ಕೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇದುವರೆಗೆ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ತನಿಖೆ ನಡೆಸಬೇಕು.

* ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಹೈದರಾಬಾದ್ ಹಾಗೂ ಮುಂಬೈ ಕರ್ನಾಟಕ ಎರಡೂ ಭಾಗದಲ್ಲಿ ಬೆಂಗಳೂರಿನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆ ಮಾದರಿಯಲ್ಲಿ ಸುಸಜ್ಜಿತ ಆಸ್ಪತ್ರೆ ಶೀಘ್ರದಲ್ಲಿ ಸ್ಥಾಪನೆ ಮಾಡಬೇಕು.

* ಉತ್ತರ ಕರ್ನಾಟಕದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತ್ಯೇಕ ನಿರ್ದೇಶನಾಲಯ ಸೇರಿದಂತೆ ವಿಶೇಷ ಕಾರ್ಯಕ್ರಮ ಅನುಷ್ಠಾನಕ್ಕೆ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯಲ್ಲಿ ಅಧಿವೇಶನ ಪ್ರಥಮ ಅಧಿವೇಶನ ನಡೆದಿತ್ತು. ಬಿಜೆಪಿ ಸರ್ಕಾರ ಅಧಿಕಾರ ಇದ್ದಾಗಲೂ ಬೆಳಗಾವಿಯಲ್ಲಿ ಅಧಿವೇಶನ ನಡೆದಿತ್ತು ಎನ್ನುವಂತಾಗಬಾರದು. ಆದ್ದರಿಂದ ಸರ್ಕಾರ ಗಟ್ಟಿ ನಿರ್ಧಾರ ಮಾಡಲಿ, ಅಲ್ಲಿನ ಜನತೆಯ ಆಶೋತ್ತರಗಳನ್ನು ಈಡೇರಿಸುವತ್ತ ಮುಖಮಾಡಲಿ.

ಜ.17 ರಂದು ವಿಶ್ವ ಕನ್ನಡಿಗರ ಕೂಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X