ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತ್ತುರಾಜ್‌ ಮತ್ತು ಗಾಜನೂರು, ಒಂದು ಕನ್ನಡಿಯಲ್ಲಿ ಎರಡು ಬಿಂಬ

By Super
|
Google Oneindia Kannada News

ರಾಜ್‌ಕುಮಾರರ ಹೆಸರಿನೊಟ್ಟಿಗೆ ವಿಶ್ವದಾದ್ಯಂತ ಇವತ್ತು ಮಾರ್ದನಿಸಿರುವ ಹೆಸರುಗಳಲ್ಲಿ ಅವರ ಹುಟ್ಟೂರಾದ ಗಾಜನೂರು ಒಂದು . ತಮಿಳುನಾಡು ಕರ್ನಾಟಕದ ಗಡಿಯಲ್ಲಿ ಹಸಿರು ಹೊದ್ದು ಮಲಗಿರುವ ಈ ಪುಟ್ಟಹಳ್ಳಿ ಮೊನ್ನೆ ಮಾಡಿದ ಸುದ್ದಿಯಿಂದ ಈ ಹೊತ್ತು ಇಡೀ ಕರ್ನಾಟಕವೇ ಎಚ್ಚೆತ್ತು ಕುಳಿತಿದೆ. ಗಾಜನೂರಿಗೆ ಆ ಹೆಸರು ಹೇಗೆ ಬಂತೋ ಗೊತ್ತಿಲ್ಲ. ಆದರೆ ಒಂದು ಮಾತು ನಿಶ್ಚಿತ. ಕರ್ನಾಟಕ ರತ್ನ ರಾಜಕುಮಾರ್‌ ಅವರ ಮನಸ್ಸು ಸದಾ ವಿಹರಿಸುವುದು ಈ ಊರಿನಲ್ಲೇ. ರಾಜ್‌ರಂಥ ಅಗಾಧ ವ್ಯಕ್ತಿತ್ವವನ್ನು ರೂಪಿಸಿದ ಗಾಜನೂರು, ತಾನು ಜನ್ಮ ನೀಡಿದ ಮುತ್ತುರಾಜನಂತೆಯೇ ಇಂದು ಜೀವಂತ-ದಂತಕತೆ.

ಮಕ್ಕಳ ಬಗ್ಗೆ ತಂದೆ-ತಾಯಿಗೆ ಇರುವ ಅವಿನಾಭಾವ ಸಂಬಂಧದಂತೆ, ತಾನು ಹುಟ್ಟಿದ ಊರಿನ ಬಗ್ಗೆ ಎಂಥವರಿಗೂ ಅಭಿಮಾನ ಇದ್ದೇ ಇರುತ್ತದೆ. ನಿಮಗೂ ಇದೆ , ಅದು ನಮಗೂ ಇದೆ ಮತ್ತು ಎಲ್ಲರಿಗೂ ಇರತ್ತೆ. ನಾವು ಹುಟ್ಟಿ ಬೆಳೆದು ಆಡಿ ಓಡಿದ ಅಲ್ಲಿನ ಗದ್ದೆ-ತೋಟ, ಬಯಲು-ಆಲಯ, ಬೆಟ್ಟ-ಗುಡ್ಡ, ಕಾಡು-ಸರೋವರ, ಆ ಸರಹದ್ದಿನಲ್ಲಿ ಕುಳ್ಳಿರಿಸಿಕೊಂಡು ಅಮ್ಮನೋ ಅಜ್ಜಿಯೋ ತಲೆ ನೇವರಿಸುತ್ತಾ ಹೇಳಿದ ಕತೆ , ವಿದ್ಯಮಾನಗಳು ವ್ಯಕ್ತಿಯಾಬ್ಬನಿಗೆ ಗೊತ್ತಿಲ್ಲದಂತೆಯೇ ಆತನ ಬದುಕಿನಲ್ಲಿ ಹಾಸುಹೊಕ್ಕಾಗಿರುತ್ತವೆ. ಇದಕ್ಕೆ ರಾಜ್‌ ಕೂಡ ಹೊರತಲ್ಲ, ಯಾರೂ ಹೊರತಲ್ಲ.

ಸ್ಥಳ ಮಹಿಮೆ : ಇಡೀ ಕರ್ನಾಟಕವನ್ನು ಆತಂಕದ ಸ್ಥಿತಿಗೆ ತಳ್ಳಿರುವ ರಾಜ್‌ ಅಪಹರಣ, ಜುಲೈ 30ರ ಭೀಮನ ಅಮಾವಾಸ್ಯೆಯ ಆ ಕರಾಳ ರಾತ್ರಿಯಲ್ಲಿ ನಡೆಯಿತಷ್ಟೆ. ವ್ಯಕ್ತಿಯ ಪ್ರತಿಷ್ಠೆ, ಪ್ರಸಿದ್ಧಿ ಹೆಚ್ಚಾದಂತೆ ಆತ ಹುಟ್ಟಿ , ಬೆಳೆದ ಮನೆ, ಮನೆತನ, ಊರು, ಪ್ರದೇಶ ಎಲ್ಲವೂ ತಮ್ಮ ಪ್ರಭಾವವನ್ನು ಬೀರತೊಡಗುತ್ತವೆ. ಅಂಥ ಸ್ಥಳ ಮಹಿಮೆ ಇವತ್ತು ಗಾಜನೂರಿಗೆ ಬಂದಿದೆ. ತಮಿಳುನಾಡು, ಕರ್ನಾಟಕ ಗಡಿಯಲ್ಲಿರುವ, ಈಗ ತಮಿಳುನಾಡಿನ ತಾಳವಾಡಿಯ ವ್ಯಾಪ್ತಿಯಲ್ಲಿರುವ ಅಪ್ಪಟ ಕನ್ನಡ ನೆಲ ಗಾಜನೂರು ಚಾಮರಾಜ ನಗರದಿಂದ 24 ಕಿಲೋಮೀಟರ್‌ ದೂರದಲ್ಲಿದೆ. ಈ ಕನ್ನಡ ನೆಲವನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ದನಿ ಯಾವತ್ತಿನಿಂದಲೂ ಕೇಳಿಬರುತ್ತಿದೆ.

ವಿಶ್ರಾಂತಿಗೆ, ವಿಹಾರಕ್ಕೆ, ಮನಃಶಾಂತಿ ಎಲ್ಲದಕ್ಕೂ ಮುತ್ತುರಾಜ್‌ಗೆ ಗಾಜನೂರೇ ಉತ್ತರ. ಅವರು ತುಂಬಾ ಇಷ್ಟಪಡುವ, ಈಜು ಕಲಿತ ಕಲ್ಲಾರಿಕಡು (ಇಲ್ಲಿ ಸಂಪತ್ತಿಗೆ ಸವಾಲ್‌ ಚಿತ್ರದ ಚಿತ್ರೀಕರಣ ಮಾಡಲಾಗಿದೆ) ಪಿತ್ರಾರ್ಜಿತ ಆಸ್ತಿಯಲ್ಲಿರುವ ಜೋಡಿ ಆಲದ ಮರಗಳು, ಬೀರಪ್ಪ ದೇವರ ಗುಡಿಗಳು ತಾಳವಾಡಿ ಪ್ರದೇಶದ ವ್ಯಾಪ್ತಿಯಲ್ಲಿವೆ.

ತನ್ನ ಊರು ಹಾಗೂ ಸುತ್ತಮುತ್ತಲಿನ ಅನೇಕ ಸ್ಥಳಗಳು ರಾಜ್‌ ಅಭಿನಯದ ಚಿತ್ರಗಳಲ್ಲಿ ಕ್ಯಾಮರಾದ ಬೆಳಕು ಕಂಡಿವೆ. ಬೀರಪ್ಪನ ಮಹಿಮೆಯಂತೂ ಚಿತ್ರವೊಂದರಲ್ಲಿ ಹಾಡಾಗಿ ಹರಿದಿದೆ.

ಗಾಜನೂರೆಂದರೆ... : ಊರಿನ ಮಧ್ಯ ಭಾಗದಲ್ಲಿರುವ ಮಣ್ಣಿನ ಪುಟ್ಟ ಮನೆ, ಮನೆಯ ಜಗಲಿ.... ಅಲ್ಲಿ ಊರಿನ ಲೋಕಾಭಿರಾಮ ಮಾತನಾಡುತ್ತಾ ಎಲೆ ಅಡಿಕೆ ಹಾಕಿ ಕೊಳ್ಳುತ್ತಿದ್ದ ಹಿರೀಕರು....ಅಲ್ಲಿ ತಮ್ಮ ತಾಯಿ ಒರಳು ಕಲ್ಲಲ್ಲಿ ಕಾರ ರುಬ್ಬುತ್ತಾ ಕುಳಿತುಕೊಳ್ಳುತ್ತಿದ್ದುದು ಹಾಗೂ ತಂದೆ ಲಾಟೀನು ಹಚ್ಚಿಟ್ಟು ಮಲಗುತ್ತಿದ್ದುದು ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವಿವರಿಸುವ ರಾಜ್‌, ಕಳೆದ ದಿನಗಳ ಬಗ್ಗೆ ಯಾವತ್ತೂ ಭಾವುಕರಾಗಿ ಮಾತನಾಡುತ್ತಾರೆ.

ತಮ್ಮ ಜೀವನದ ಬಹುತೇಕ ಮುಖ್ಯ ನಿರ್ಧಾರಗಳನ್ನು ರಾಜ್‌ ಇಲ್ಲಿಯೇ ತೆಗೆದುಕೊಂಡಿದ್ದಾರೆ ಎಂದು ಹೇಳುವವರುಂಟು. 1978ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದ ಇಂದಿರಾಗಾಂಧಿ ಮರು ಆಯ್ಕೆಗೆ ಚಿಕ್ಕಮಗಳೂರನ್ನು ಆರಿಸಿಕೊಂಡಾಗ ಅವರ ವಿರುದ್ಧವಾಗಿ ಯಾರನ್ನು ನಿಲ್ಲಿಸಬೇಕೆಂಬ ಗೊಂದಲದಲ್ಲಿ ಅಂದಿನ ಪ್ರಧಾನಿ ಮುರಾರ್ಜಿ ದೇಸಾಯಿ ಇದ್ದರು. ಆಗ ಥಟ್ಟನೆ ಹೊಳೆದ ಹೆಸರು ರಾಜ್‌. ಆದರೆ ಯಾವ ಒತ್ತಡಕ್ಕೂ ಮಣಿಯದೆ ತವರೂರಿನ ಮಡಿಲು ಹೊಕ್ಕ ರಾಜ್‌ ರಾಜಕೀಯದಿಂದ ದೂರ ಉಳಿಯುವ ಬಹುಮುಖ್ಯ ನಿರ್ಧಾರ ತೆಗೆದುಕೊಂಡದ್ದು ಇತಿಹಾಸ.

ರಾಜ್‌ ರಾಜಕೀಯಕ್ಕೆ ಬಂದಿದ್ದರೆ ಒಳ್ಳೆಯದಾಗುತ್ತಿತ್ತು ಅಥವಾ ಕೆಟ್ಟದ್ದಾಗುತ್ತಿತ್ತು ಎಂಬ ಚರ್ಚೆಗಳು ಇವತ್ತು ಎಷ್ಟು ಅಪ್ರಸ್ತುತವೋ ಹಾಗೆಯೇ ಬರದಿದ್ದುದೇ ಒಳ್ಳೆಯದಾಯಿತು ಎಂಬದೂ ಕೂಡಾ ಅಷ್ಟೇ ಅಪ್ರಸ್ತುತ. ಆದರೆ ಕನ್ನಡ ಚಲನಚಿತ್ರರಂಗದ ಅನಭಿಷಿಕ್ತ ದೊರೆಯಂತೆ, ಅಜಾತಶತ್ರುವಾಗಿ ರಾಜ್‌ ಮುಗಿಲೆತ್ತರ ಬೆಳದಿದ್ದು ಮಾತ್ರ ನಿರ್ವಿವಾದ.

ಇವತ್ತಿಗೂ ರಾಜ್ಯದಲ್ಲಿ ಜನಪ್ರಿಯತೆಯ ಉತ್ತುಂಗ ಶಿಖರವನ್ನು ರಾಜ್‌ ಯಾರಿಗೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ ರಾಜ್‌ ಎಂದರೆ ಕನ್ನಡ ಜನರ ಒಟ್ಟು ಶಕ್ತಿಯ ಪ್ರತೀಕ. ಪ್ರತಿಷ್ಠೆ ಹಾಗೂ ಸಾಂಸ್ಕೃತಿಕ ಸಂದರ್ಭದ ನಾಯಕ. ತಮ್ಮ ಉತ್ಕಟ ದೈವಭಕ್ತಿಯಂತೆಯೇ ತಮ್ಮ ಆತ್ಮ ಸಂಗಾತಕ್ಕೆ ರಾಜ್‌ ಬಳಸುವ, ಇಷ್ಟಪಡುವ ಏಕೈಕ ಹೆಸರು ಗಾಜನೂರು. ಅದು ಅವರ ಹೆಸರಿನೊಟ್ಟಿಗೆ ಅಮರ.

ರಾಜ್‌ಪಹರಣವಾಗಿ ಇಂದಿಗೆ ಒಂಬತ್ತು ದಿನಗಳಾಯಿತು. ಕಾಡಿನ ಅದ್ಯಾವುದೋ ಮನೆಯಲ್ಲಂತೆ, ಇತರ ಮೂವರು ಒತ್ತೆಯಾಳುಗಳ ಜತೆಗೆ ಕ್ಷಣಗಳನ್ನು ದೂಡುತ್ತಿದ್ದಾರೆ. ತಾವು, ತಮ್ಮ ಕುಟುಂಬ, ಅಭಿಮಾನಿ ಸಮೂಹ, ಅಖಂಡ ಕರ್ನಾಟಕದ ಚಿತ್ರ ಇವೆಲ್ಲವನ್ನೂ ಮನಸ್ಸಿನಲ್ಲಿ ಅಚ್ಚೊತ್ತಿಕೊಳ್ಳುತ್ತಾ ದಣಿವಾದರೆ ಮತ್ತೆ ಗಾಜನೂರಿಗೆ ಬರುತ್ತಾರೆ. ಅವರ ತಂದೆ ಒಕ್ಕಲುತನದ ಬೀಡಿನಲ್ಲಿ ಬೆಳೆದು ನಿಂತ ಆ ಆಲದ ಮರದ ಕೆಳಗೆ ಸ್ವಲ್ಪ ವಿಶ್ರಮಿಸಿಕೊಳ್ಳುತ್ತಾರೆ. ಮತ್ತೆ ಜಗತ್ತಿನ ಜಂಜಾಟಕ್ಕೆ ಮರಳುವ ಮುನ್ನ ಬೀರಪ್ಪನ ಗುಡಿಯಲ್ಲಿ ಕ್ಷಣ ಮೌನಿ ಆಗುತ್ತಾರೆ.

English summary
Raj is in karnataka forest range
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X