ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೊರೆಯ ಪುರಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿರುವ ತವರೂರು

By Super
|
Google Oneindia Kannada News

ಗಾಜನೂರು : ಗಾಜನೂರಿನಲ್ಲಿ 15 ದಿನಗಳಿಂದ ಡೆಡ್‌ ಆಗಿದ್ದ ಫೋನುಗಳು ಈಗ ಟ್ರಿಣಗುಟ್ಟುತ್ತಿವೆ. ಮಡುಗಟ್ಟಿದ ನೋವುಗಳ ನಡುವೆ ಏನೋ ಒಂದು ಬಗೆಯ ವಿದ್ಯುತ್‌ ಸಂಚಾರವಾದಂತೆ ಭಾಸವಾಗುವ ವಾತಾವರಣ ಅಲ್ಲಿ ಇವತ್ತು ನಿರ್ಮಾಣವಾಗಿದೆ. ಊರು ತುಂಬ ಜನ, ಎಲ್ಲಿ ನೋಡಿದರೂ ಪೊಲೀಸರು, ದೇಶವಿದೇಶಗಳಿಂದ ಬಂದಿರುವ ಪತ್ರಕರ್ತರು ಮತ್ತು ಅವರ ಕ್ಯಾಮರಾಗಳು... ಏನಾಗುತ್ತಿದೆ ಇಲ್ಲಿ ?

ವಿಶೇಷ ಪೊಲೀಸ್‌ ಪಡೆಗಳ ವಾಹನಗಳು ಊರಿನ ತುಂಬಾ ಸಂಚರಿಸುತ್ತಿವೆ. ಟಿವಿ ಚಾನೆಲ್‌ಗಳ ಕ್ಯಾಮೆರಾಗಳು ಯಾರದೋ ನಿರೀಕ್ಷೆಯಲ್ಲಿ ಆಕಾಶ ನೋಡುತ್ತಿವೆ. ಊರಿನ ದೊಡ್ಡ ಬಯಲೊಂದರಲ್ಲಿ ಹೆಲಿಕ್ಯಾಪ್ಟರ್‌ ಕೂಡ ಬಂದಿಳಿದಿದೆ. ದೇಶ ವಿದೇಶಗಳ ಪತ್ರಕರ್ತರು ಭಾಷೆ ಗೊತ್ತಿದೆಯೋ ಇಲ್ಲವೋ, ಸಿಕ್ಕಸಿಕ್ಕವರನ್ನೆಲ್ಲಾ ಕೆದಕಿ, ಏನನ್ನೋ ನೋಟ್ಸ್‌ ಮಾಡಿಕೊಳ್ಳುತ್ತಿದ್ದಾರೆ. ಅತ್ತ ಚೆನ್ನೈನಲ್ಲಿ , ಇತ್ತ ಸತ್ಯಮಂಗಲದ ಅರಣ್ಯದಲ್ಲಿ ಸಂಧಾನ ಪ್ರಕ್ರಿಯೆಗಳು ವಿವಿಧ ಹಂತಗಳಲ್ಲಿ ನಡೆಯುತ್ತಿದ್ದರೆ ನಮ್ಮೂರಿನ ಕಡೆ ಜನ ಇನ್ನೇನು ರಾಜ್‌ ಈಗ ಬಂದುಬಿಡುತ್ತಾರೆ, ಇನ್ನೇನು ಬಂದೇಬಿಟ್ಟರು ಎನ್ನುವ ನಿರೀಕ್ಷೆಯಲ್ಲಿ ಸಜ್ಜುಗೊಳ್ಳುತ್ತಿದ್ದಾರೆ, ಅಣ್ಣನ ಸ್ವಾಗತಕ್ಕೆ , ಮರೆಯಲಾರದ ಆ ಗಳಿಗೆಗೆ.

ಗಾಜನೂರು ಹಾಗೂ ಪಕ್ಕದ ಭೀಮರಾಜನಗರದ ಜನ ಸುತ್ತಮುತ್ತಲ ದೇವಾಲಯಗಳಲ್ಲಿ ಕಾಡಪುಷ್ಪಗಳ ಮಳೆಗರೆಯುತ್ತಿದ್ದಾರೆ. ಇವರ ಬೇಡಿಕೆ ರಾಜ್‌ಕುಮಾರರ ಇತರ ಅಭಿಮಾನಿಗಳ ಬೇಡಿಕೆಗಿಂತ ಸ್ವಲ್ಪ ಭಿನ್ನವಾದದ್ದು, 'ಮುತ್ತುರಾಜ್‌ ಬೇಗ ಬರಲಿ, ತಮ್ಮ ಜೀವಿತದ ಉಳಿದೆಲ್ಲ ಕ್ಷಣಗಳನ್ನು ಇಲ್ಲೇ ಕಳೆಯಲಿ- ಅವರದೇ ಆದ ಈ ನಿರ್ಧಾರವನ್ನು ಅಣ್ಣ ಬದಲಿಸದಿರಲಿ "

ಇಲ್ಲೇ ಬಂದು ಇದ್ದು ಬಿಡುತ್ತೇನೆ ಅಂದಿದ್ದರು : ರಾಜ್‌ಕುಮಾರ್‌ ಬೆಂಗಳೂರಲ್ಲಿ ವಾಸ. ಮನಸ್ಸೆಲ್ಲಾ ಗಾಜನೂರಲ್ಲೆ. ರಾಜ್‌ ಆಪ್ತ , ಶಾಲೆಯಾಂದರ ದೈಹಿಕ ಶಿಕ್ಷಕ ರೊದ್ದ ನಾಗರಾಜ್‌ ಹೇಳುತ್ತಾರೆ- 'ನನಗೆ ಬೆಂಗಳೂರು ಜೀವನ ಹಿಡಿಸೋದಿಲ್ಲ. ಇಲ್ಲೇ ಬಂದು ಇದ್ದು ಬಿಡುತ್ತೇನೆ ಅಂತ ಮೂರು ವರ್ಷಗಳ ಹಿಂದೆ ಅಣ್ಣಾವ್ರು ತಿಳಿಸಿದ್ದರು. ಈ ಉದ್ದೇಶದಿಂದಲೇ ಅವರು 35 ಲಕ್ಷ ರುಪಾಯಿ ಖರ್ಚು ಮಾಡಿ ಹೊಸ ಬಂಗಲೆ ಕಟ್ಟಿಸಿದ್ದು. ಜುಲೈ 28ನೇ ತಾರೀಖು ಮನೆ ಪಕ್ಕದ ಜಾಗದಲ್ಲಿ ತೋಡಿಸಿದ್ದ ಬೋರ್‌ವೆಲ್‌ ಪೂಜೆಗಾಗಿ ಅವರು ಬಂದಿದ್ದು. ಆದರೆ ಆದದ್ದು ಹೀಗೆ. ಈಗ ನಮ್ಮದೆಲ್ಲಾ ಒಂದೇ ಯೋಚನೆ, ಮುಂದೆ ಇಲ್ಲಿ ಉಳಿಯೋ ನಿರ್ಧಾರವನ್ನು ಅವರು ಎಲ್ಲಿ ಬದಲಿಸಿಬಿಡುತ್ತಾರೋ ಎಂಬುದು".

ರಾಜ್‌ ಧರಣಿ ನಡೆಸಿದ್ದು : ಗಾಜನೂರು ಹಾಗೂ ಸುತ್ತಮುತ್ತಲ ಹಳ್ಳಿಗಳ ಶಾಲೆಗಳಲ್ಲಿ ಕನ್ನಡ ಬೋಧಿಸಬೇಕು ಎಂದು ಒತ್ತಾಯಿಸಿ 1980ರಲ್ಲಿ ರಾಜ್‌ ಶಾಂತ ರೀತಿಯಲ್ಲಿ ಧರಣಿ ನಡೆಸಿದ್ದುದು ಬಹುಶಃ ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ರಾಜ್‌ಗೆ ತಮ್ಮೂರು, ಹಳೆಯ ಗುಡಿಸಲು, ಬಂಧುಗಳು, ನೆರೆಯವರು ಎಲ್ಲರೂ ಹೇಗೆ ನೆಚ್ಚೋ, ಇಲ್ಲಿನ ಜನರಿಗೂ ರಾಜ್‌ ಅಚ್ಚುಮೆಚ್ಚು. ಎರಡು ತಿಂಗಳ ಹಿಂದೆ ರಾಜ್‌ ಇಲ್ಲಿಗೆ ಬಂದಿದ್ದಾಗ, ತಮ್ಮ ಹಿರೀಕರು ನಿರ್ಮಿಸಿದ್ದ ಹಳೆ ಗುಡಿಸಲಲ್ಲೇ ಒಂದು ರಾತ್ರಿ ಊಟ ಮಾಡಿದ್ದರಂತೆ. 'ಹಳೇ ಗುಡಿಸಲು, ಸುಮ್ನೆ ಯಾಕೆ, ಒಡೆದು ಹಾಕೋಣ" ಅಂತ ಯಾರಾದರೂ ಅಂದರೆ ರಾಜ್‌ಗೆ ಎಲ್ಲಿಲ್ಲದ ಕೋಪ ಬರುತ್ತಂತೆ.

ಮುಂದೆ ಅವರು ಈ ಊರಿಗೆ ಬತ್ತಾರೋ ಇಲ್ಲೋ ... : 'ಮನೆ ಕಟ್ಟಿಸಿದ್ದಾಯಿತು, ಗೃಹಪ್ರವೇಶಾನೂ ಆಯಿತು. ಇನ್ನೇನು ನಮ್ಮ ಮುತ್ತುರಾಜ್‌ ಈ ಊರಲ್ಲೇ ಬಂದು ಇರ್ತಾರೆ ಅನ್ನೋ ಆಸೆ ಕಟ್ಕಂಡಿದ್ವಿ. ಅಷ್ಟರಾಗೆ ಇಂಗಾಗೋಯಿತು. ಮುಂದೆ ಅವರು ಈ ಊರಿಗೆ ಬತ್ತಾರೋ ಇಲ್ಲೋ ಅಂತ ಯೋಚ್ನೆ ಆಬುಟ್ಟದೆ" ಎನ್ನುತ್ತಾರೆ ಗಾಜನೂರಿನ ಅಜ್ಜಿ. ರಾಜ್‌ ಬಂಧು ಗೋಪಾಲ್‌ ಕುಟುಂಬ ಸೇರಿದಂತೆ ಇನ್ನೂ ಅನೇಕರು ಗಾಜನೂರ ತೋಟದ ಮನೆಯಲ್ಲಿ ವಾಸಿಸುತ್ತಿದ್ದು, ಊರಿಗೇ ಊರೇ ಇವರನ್ನು ಸಂತೈಸುತ್ತಿದೆ. ಮುತ್ತುರಾಜ್‌ ಮೊದಲು ಬರುವುದು ತನ್ನೂರಿಗೇ, ನಮ್ಮೂರಿಗೆ ಎಂಬ ನಂಬುಗೆಯಲ್ಲಿ 8 ದಿನಗಳಿಂದ ನಿದ್ರೆ ಮಾಡದೆ, ಅತ್ತೂ ಅತ್ತೂ ಕಣ್ಣೆಲ್ಲ ಬತ್ತಿರುವ ಅನೇಕ ಗಾಜನೂರಿಗರು ಇದಿರು ನೋಡುತ್ತಿದ್ದಾರೆ. ಶಿವರಾಜ್‌ಕುಮಾರ್‌ ಶೆಟ್ಟಿ, ಸೆಲ್ವರಾಜ್‌, ನಾಗರಾಜ್‌, ನಾಗೇಶ್‌ ಗೌಡ, ಅಣ್ಣಾವ್ರ ಬಂಧುಗಳು, ರಾಜ್‌ ಬಂದೊಡನೆ ಅಮೋಘ ಸ್ವಾಗತ ನೀಡಲು ಸಜ್ಜಾಗಿ ನಿಂತಿದ್ದಾರೆ. ಈ ಅಪೂರ್ವ ಗಳಿಗೆಯ ಸಕಲ ವೃತ್ತಾಂತವನ್ನು ನಿಮಗೆ ಹೊತ್ತು ತರಲು ನಮ್ಮ ವರದಿಗಾರರು ಅಲ್ಲಿ ಬೀಡುಬಿಟ್ಟಿದ್ದಾರೆ. ವೀರಪ್ಪನ್‌ ಗುಹೆಯಿಂದ ರಾಜ್‌ ಮೊದಲು ಗಾಜನೂರಲ್ಲೇ ಬಂದಿಳಿಯುವುದು ಎಂಬುದು ನಿಮ್ಮ ನಂಬಿಕೆಯೂ ಆಗಿದ್ದರೆ ತಡ ಮಾಡದೆ ಹೊರಡಿ ಗಾಜನೂರಿಗೆ, ಮುತ್ತುರಾಜನೂರಿಗೆ.

English summary
Gajanur waits for his master
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X