ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐತಿಹಾಸಿಕ ಮೈಸೂರು ದಸರಾದ ಮರೆಯದ ಚಿತ್ರಗಳು

By Prasad
|
Google Oneindia Kannada News

ಇತ್ತೀಚಿನ ಕೆಲ ವರ್ಷಗಳಲ್ಲಿ ಕಂಡಿರದ ಅದ್ಧೂರಿಯ ಮೈಸೂರು ದಸರಾ ಉತ್ಸವ, ಐತಿಹಾಸಿಕ ಮತ್ತು ವಿಜೃಂಭಣೆಯ ಜಂಬೂ ಸವಾರಿಯಿಂದ ಆರಂಭವಾಗಿ, ರಾತ್ರಿ ಬನ್ನ ಮಂಟಪದ ಮೈದಾನದಲ್ಲಿ ಕಣ್ಮನ ಸೆಳೆಯುವ ಅತ್ಯಾಕರ್ಷಕ ಪಂಜಿನ ಕವಾಯತಿನೊಂದಿಗೆ ಅ.14 ಸೋಮವಾರದಂದು ಸಂಪನ್ನಗೊಂಡಿತು.

ಕಳೆದ ಕೆಲ ವರ್ಷಗಳಿಂದ ದಸರಾದ ಅದ್ಧೂರಿತನಕ್ಕೆ ಏನಾದರೊಂದು ಕಂಟಕ ಕಾಡುತ್ತಲೇ ಇದ್ದವು. ಆದರೆ, ಈ ಬಾರಿ ರಾಜ್ಯಾದ್ಯಂತ ಸಾಕಷ್ಟು ಮಳೆ ಸುರಿದು ಬರ ಪರಿಸ್ಥಿತಿ ನೀಗಿದ್ದು, ಅಣೆಕಟ್ಟೆಗಳು ಭರ್ತಿಯಾಗಿದ್ದರಿಂದ ಯಾವುದೇ ಅಡೆತಡೆಗಳಿಲ್ಲದೆ ವೈಭವದಿಂದ 403ನೇ ಮೈಸೂರು ದಸರಾ ಉತ್ಸವ ಜರುಗಿತು.

ದಶಕಗಳ ಹಿಂದಿನ ಮೈಸೂರು ದಸರಾ ವೈಭವ ಈಗಿಲ್ಲ ನಿಜ. ಅಸಂಖ್ಯೆಯಲ್ಲಿ ಪ್ರವಾಹೋಪಾದಿಯಲ್ಲಿ ಬರುವ ಪ್ರವಾಸಿಗರು, ವಿವಿಐಪಿಗಳ ರಗಳೆ, ಪಾಸ್ ವಿರಣೆಯಲ್ಲಿನ ಗೊಂದಲ, ಕೊನೆಗೆ ಅರ್ಜುನನ ಮೇಲೆ ಇರಿಸಲಾಗಿದ್ದ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಒಂದೆರಡು ಬಾರಿ ಅತ್ತಿತ್ತ ವಾಲಿದ್ದು ಹೊರತುಪಡಿಸಿದರೆ ಉಳಿದ 9 ದಿನಗಳ ಸಂಭ್ರಮಕ್ಕೇನು ಕೊರತೆ ಇರಲಿಲ್ಲ.

ಕೊನೆಯ ದಿನವಂತೂ ಸೇನೆಯಿಂದ ರಾಜ್ಯಪಾಲರಿಗೆ ಗೌರವ ವಂದನೆ, ಸೇನೆಯ ಮೋಟಾರ್ ಬೈಕ್ ಸಾಹಸ, ಯಕ್ಷಗಾನ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಲೇಸರ್ ಶೋ, ಸ್ತಬ್ಧ ಚಿತ್ರಗಳ ಆಕರ್ಷಕ ಮೆರವಣಿಗೆಗಳು ದೇಶ ವಿದೇಶದಿಂದ ಆಗಮಿಸಿದ್ದ ಪ್ರವಾಸಿಗರಿಗೆ ಮೃಷ್ಟಾನ್ನ ಭೋಜನವನ್ನು ಉಣಬಡಿಸಿದವು.

ಖುದ್ದಾಗಿ ಅಥವಾ ದೂರದರ್ಶನದ ಮೂಲಕ ನೋಡಲು ಆಗದವರು ಇಂಟರ್ನೆಟ್ಟಿನಲ್ಲಿಯೇ ಈ ಚಿತ್ರಗಳ ಮೆರವಣಿಗೆಯಲ್ಲಿ ಪಾಲ್ಗೊಂಡು ಮೈಸೂರು ದಸರಾದ ಭವ್ಯತೆಯನ್ನು, ಮರೆಯಲಾರದ ಚಿತ್ರಗಳನ್ನು ಕಣ್ಮನಗಳಲ್ಲಿ ತುಂಬಿಕೊಳ್ಳಿರಿ.

ಸೇನೆಯಿಂದ ಸಾಹಸ ಪ್ರದರ್ಶನ

ಸೇನೆಯಿಂದ ಸಾಹಸ ಪ್ರದರ್ಶನ

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯಪಾಲ ಹನ್ಸ್‌ರಾಜ್ ಭಾರದ್ವಾಜ್ ಅವರು ಅಶ್ವರೋಹಿ ಪೊಲೀಸ್, ಸಶಸ್ತ್ರ ಪೊಲೀಸ್ ಪಡೆ, ಕೆಎಸ್‌ಆರ್‌ಪಿ, ಪೊಲೀಸ್ ಬ್ಯಾಂಡ್, ಸ್ಕೌಟ್ ಅಂಡ್ ಗೈಡ್ಸ್, ಎನ್‌ಸಿಸಿ, ಭೂಸೇನೆ, ವಾಯುದಳ, ನೌಕದಳದಿಂದ ಗೌರವ ವಂದನೆ ಸ್ವೀಕರಿಸಿದರು.

ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದ ಸೇನೆ

ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದ ಸೇನೆ

ಭಾರತೀಯ ಸೇನೆಯ ಶ್ವೇತಾಶ್ವ ಮೋಟಾರ್ ಬೈಕ್ ಸವಾರರ ತಂಡ ಮೈನವಿರೇಳಿಸುವ ವಿವಿಧ ಸಾಹಸಗಳನ್ನು ಪ್ರದರ್ಶಿಸಿ ನೋಡುಗರನ್ನು ನಿಬ್ಬೆರಗಾಗಿಸಿದರು. ಈ ಸಾಹಸ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಆಕಾಶ ಮುಟ್ಟುವಂತೆ ಚಪ್ಪಾಳೆಯ ಸುರಿಮಳೆ ಸುರಿಯಿತು.

ಹ್ಯಾಟ್ಸಾಫ್ ಟು ಭಾರತೀಯ ಸೇನೆ

ಹ್ಯಾಟ್ಸಾಫ್ ಟು ಭಾರತೀಯ ಸೇನೆ

ಸಾಲು ಬೈಕ್ ಗಳ ಮೇಲೆ ಸೇನಾಪಡೆ ನಿರ್ಮಿಸಿದ ಪಿರಮಿಡ್ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ನಂತರ, 21 ಬಾರಿ ಕುಶಾಲತೋಪು ಸಿಡಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಹಾಡಲಾಯಿತು.

ಯುವತಿಯರಿಂದ ಆಕರ್ಷಕ ನರ್ತನ

ಯುವತಿಯರಿಂದ ಆಕರ್ಷಕ ನರ್ತನ

ಯುವತಿಯರಿಂದ ಭರತನಾಟ್ಯ, ಯಕ್ಷಗಾನ, ಕೂಚುಪುಡಿ ಮುಂತಾದ ನರ್ತನ ವರ್ಣರಂಜಿತ ಸಂಜೆಯ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಸೂಪರ್ ಡೂಪರ್ ಪಂಜಿನ ಕವಾಯತು

ಸೂಪರ್ ಡೂಪರ್ ಪಂಜಿನ ಕವಾಯತು

ಬೆಂಗಳೂರಿನ ಯಲಹಂಕದ ಪೊಲೀಸ್ ತರಬೇತಿ ಶಾಲೆಯ ಪೊಲೀಸರ ಪಂಜಿನ ಕವಾಯತು ಆಕರ್ಷಕವಾಗಿತ್ತು. ಪಂಜು ಹಿಡಿದು ಪೊಲೀಸ್ ಬ್ಯಾಂಡ್‌ಗೆ ಹೆಜ್ಜೆಹಾಕುತ್ತಾ ಪಂಜು ಹಿಡಿದು ಜೈಹಿಂದ್, ಸುಸ್ವಾಗತ, ಹ್ಯಾಪಿ ದಸರಾ ಮೊದಲಾದ ವಿನ್ಯಾಸಗಳನ್ನು ಮೂಡಿಸಿ ಪಂಜಿನ ಕವಾಯತುಗೆ ಜೀವ ತುಂಬಿದರು.

ಜೈ ಚಾಮುಂಡಿ

ಜೈ ಚಾಮುಂಡಿ

ಕತ್ತಲು ಕವಿದಿದ್ದ ರಾತ್ರಿಯಲ್ಲಿ ಪಂಜಿನ ಕವಾಯತು ಮಾಡುತ್ತಿದ್ದ ಪೊಲೀಸರು ಪಂಜನ್ನು ಬಳಸಿ ಜೈ ಚಾಮುಂಡಿ ಎಂದು ಮೂಡಿಸಿದಾಗ ಪ್ರೇಕ್ಷಕರು ಚಪ್ಪಾಳೆ ಸುರಿಮಳೆಗರೆದರು, ಧನ್ಯತಾಭಾವದಿಂದ ತಾಯಿ ಚಾಮುಂಡಿಗೆ ಕೈಮುಗಿದರು.

ಗಮನ ಸೆಳೆದ ಲೇಸರ್ ಶೋ

ಗಮನ ಸೆಳೆದ ಲೇಸರ್ ಶೋ

ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಪರಿಚಯಿಸುವ ಲೇಸರ್ ಶೋ ಗಮನಸೆಳೆಯಿತು. ಆ ನಂತರ ಬಾಣ ಬಿರುಸುಗಳ ಪ್ರದರ್ಶನದೊಂದಿಗೆ ಐತಿಹಾಸಿಕ ದಸರಾಕ್ಕೆ ತೆರೆ ಎಳೆಯಲಾಯಿತು.

ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ

ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ

ಐತಿಹಾಸಿಕ 403ನೇ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಲಕ್ಷಾಂತರ ಮಂದಿ ಸೋಮವಾರ ಸಾಕ್ಷಿಯಾದರು. ಈ ಒಂದು ಅಪರೂಪದ ಕ್ಷಣಗಳಿಗಾಗಿ ವರ್ಷದಿಂದ ಕಾಯುತ್ತಿದ್ದ ಮಂದಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾದ ತಾಯಿ ಚಾಮುಂಡೇಶ್ವರಿಯನ್ನು ಕಣ್‌ತುಂಬಿಸಿಕೊಂಡು ಕೃತಾರ್ಥರಾದರು.

ಗಜಪಡೆಯ ಗಾಂಭೀರ್ಯದ ನಡೆ

ಗಜಪಡೆಯ ಗಾಂಭೀರ್ಯದ ನಡೆ

ಜಂಬೂ ಸವಾರಿ ಮೆರವಣಿಗೆಯ ಮುಂಚೂಣಿಯಲ್ಲಿ ಸಿಂಗಾರಗೊಂಡ ಗಜಪಡೆ ಪೈಕಿ ನಿಶಾನೆ ಆನೆಯಾಗಿ ಬಲರಾಮ, ನೌಪಥ್ ಆನೆಯಾಗಿ ಗಜೇಂದ್ರ ತೆರಳಿದರೆ ಅವರೊಂದಿಗೆ ಅಭಿಮನ್ಯು, ವಿಜಯಾ, ವರಲಕ್ಷ್ಮಿ ಸಾಥ್ ನೀಡಿ ಮುನ್ನಡೆದರೆ ಅರ್ಜುನ ಚಿನ್ನದ ಅಂಬಾರಿಯನ್ನು ಹೊತ್ತು ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದನು.

ಲೈಟ್ ಕಂಬ ಏರಿ ಜಂಬೂ ಸವಾರಿ ವೀಕ್ಷಣೆ

ಲೈಟ್ ಕಂಬ ಏರಿ ಜಂಬೂ ಸವಾರಿ ವೀಕ್ಷಣೆ

ಗಜಪಡೆಯ ಮುಂದೆ ವೀರಗಾಸೆ ತಂಡ ವಾದ್ಯಕ್ಕೆ ಹೆಜ್ಜೆಹಾಕುತ್ತಾ ಮುನ್ನಡೆದರೆ ಅವರ ಹಿಂದೆ ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸುವ 42 ಸ್ತಬ್ದ ಚಿತ್ರ ಹಾಗೂ ಸುಮಾರು 100 ಜಾನಪದ ಕಲಾ ತಂಡಗಳು ಅರಮನೆ ಆವರಣದಿಂದ ಬಲರಾಮ ದ್ವಾರಕ್ಕಾಗಿ ಬನ್ನಿಮಂಟಪದತ್ತ ಮೆರವಣಿಗೆಯಲ್ಲಿ ಸಾಗಿದವು. ವಿಪರೀತ ಜನಸಂದಣಿ ಇದ್ದರಿಂದ ಹಲವಾರು ಜನರು ತಮ್ಮ ಜೀವವನ್ನೂ ಲೆಕ್ಕಿಸದೆ ಲೈಟ್ ಕಂಬದ ಮೇಲೆ ಏರಿ ಜಂಬೂ ಸವಾರಿ ವೀಕ್ಷಿಸಿದರು.

ಜಂಬೂ ಸವಾರಿಯ ಹಾದಿ

ಜಂಬೂ ಸವಾರಿಯ ಹಾದಿ

ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯದಲ್ಲಿ ತೆರಳಿದ ಅರ್ಜುನನಿಗೆ ಮಾರ್ಗದುದ್ದಕ್ಕೂ ಜನ ಭಕ್ತಿಯಿಂದ ನಮಿಸಿ ಗೌರವಿಸಿದರು. ಅರಮನೆ ಆವರಣದಿಂದ ಹೊರಟ ಜಂಬೂಸವಾರಿ ಬಲರಾಮ ದ್ವಾರದ ಮೂಲಕ ಹೊರಟು ಚಾಮರಾಜವೃತ್ತ, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಬನ್ನಿಮಂಟಪದತ್ತ ತೆರಳಿದವು. ಸವಾರಿಗೆ ಅಶ್ವದಳ, ಪೊಲೀಸ್ ಕವಾಯತು ಜೀವ ತುಂಬಿತು.

ಅಸಂಖ್ಯಾತ ಜನರಿಗೆ ನಿರಾಶೆ

ಅಸಂಖ್ಯಾತ ಜನರಿಗೆ ನಿರಾಶೆ

ಜಂಬೂಸವಾರಿ ಸಾಗುವ ರಾಜಮಾರ್ಗದಲ್ಲಿ ಎರಡು ಬಾರಿ ಅಂಬಾರಿ ವಾಲಿತ್ತಾದರೂ ಮಾವುತರು ತಕ್ಷಣ ಸರಿಪಡಿಸಿದರು. ಜಂಬೂಸವಾರಿಯು ಮೆರವಣಿಗೆ ಅದ್ಧೂರಿಯಾಗಿ ನಡೆಯಿತ್ತಾದರೂ ಈ ಬಾರಿ ಮೆರವಣಿಗೆಯು ಅರಮನೆ ಆವರಣದಿಂದ ಪ್ರಾರಂಭವಾಗಿ ಬನ್ನಿಮಂಟಪದ ಬಾಲಭವನದ ಮುಖ್ಯ ದ್ವಾರವನ್ನು ಪ್ರವೇಶಿಸಲಿಲ್ಲ. ಬದಲಾಗಿ ಬನ್ನಿಮಂಟಪದ ಅರ್ಧ ಕಿ.ಮೀ. ಹಿಂದಿನ ಹನುಮಂತ ನಗರಕ್ಕೆ ಹೋಗುವ ಅಡ್ಡ ದಾರಿಯಲ್ಲಿ ಮೆರವಣಿಗೆ ಸಾಗಿತು. ಹೀಗಾಗಿ ಬೆಳಗ್ಗಿನಿಂದ ಕಾದು ಕೂತ ಅಸಂಖ್ಯಾತ ಜನರಿಗೆ ನಿರಾಶೆಯಾಯಿತು.

ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ

ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ

ಸಂಪ್ರದಾಯದಂತೆ ಬೆಳಿಗ್ಗೆ ಅರಮನೆ ದರ್ಬಾರ್ ಹಾಲ್‌ನಲ್ಲಿ ಖಾಸಗಿ ದರ್ಬಾರ್ ಮುಗಿಸಿದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ರವರು ಸಂಪ್ರದಾಯದಂತೆ ಅರಮನೆಯಿಂದ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ನಡೆಯಿತು. ಬನ್ನಿಪೂಜೆ ನೆರವೇರಿಸಿ ಬಂದ ಬಳಿಕ ಒಡೆಯರ್ ಅವರ ಅಪ್ಪಣೆ ಪಡೆದ ಬಳಿಕ ಜಂಬೂಸವಾರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಯಿತು.

ದಸರಾಗೆ ಕಳೆಕಟ್ಟಿದ ಸ್ತಬ್ಧ ಚಿತ್ರಗಳು

ದಸರಾಗೆ ಕಳೆಕಟ್ಟಿದ ಸ್ತಬ್ಧ ಚಿತ್ರಗಳು

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ವಿವಿಧ ಜಿಲ್ಲೆಯ ಹಿರಿಮೆ ಸಾರುವ ಸ್ತಬ್ಧ ಚಿತ್ರಗಳು ಪಾಲ್ಗೊಂಡು ಮೆರವಣಿಗೆಗೆ ಕಳೆಕಟ್ಟಿದವು.

ಒಂದೊಂದೂ ಒಂದೊಂದು ಬಗೆಯವು

ಒಂದೊಂದೂ ಒಂದೊಂದು ಬಗೆಯವು

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಬಳ್ಳಾರಿ-ವಿಜಯನಗರ ಸಾಮ್ರಾಜ್ಯ, ಮಂಡ್ಯ- ಮೇಲುಕೋಟೆ ಇತಿಹಾಸ, ಮೈಸೂರು-ರಾಜಮನೆತನದ ವೈಭವ, ಕೊಡಗು-ಜಲಸಿರಿ ತಾಣ, ಬೆಳಗಾವಿ- ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ್ ಕಂಬಾರ, ಧಾರವಾಡ- ಹೆಸರಾಂತ ಕವಿಗಳು ಮುಂತಾದ ಸ್ತಬ್ಧ ಚಿತ್ರಗಳು ಆಕರ್ಷಕವಾಗಿದ್ದವು.

ಸ್ವಾತಂತ್ರ್ಯ ಹೋರಾಟದ ಸ್ತಬ್ಧಚಿತ್ರ

ಸ್ವಾತಂತ್ರ್ಯ ಹೋರಾಟದ ಸ್ತಬ್ಧಚಿತ್ರ

ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ನೆನಪಿಸುವಂಥ ಸ್ತಬ್ಧಚಿತ್ರ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು.

ಮತ್ತೊಂದು ಆಕರ್ಷಕ ಸ್ತಬ್ಧಚಿತ್ರ

ಮತ್ತೊಂದು ಆಕರ್ಷಕ ಸ್ತಬ್ಧಚಿತ್ರ

ಗೊರವ ಕುಣಿತ, ಹುಲಿವೇಶ, ಹಗಲುವೇಷ, ಮರಗಾಲು, ನವಿಲು ಕುಣಿತ, ಕಂಸಾಳೆ, ನಗಾರಿ ನೃತ್ಯ, ಪಟದ ಕುಣಿತ, ಪೂಜಾ ಕುಣಿತ, ಕೊರಗ ಕುಣಿತ, ಕೊಡವ ನೃತ್ಯ ಸೇರಿದಂತೆ ಜಾನಪದ ಕಲಾ ತಂಡಗಳು ಜಂಬೂಸವಾರಿಯಲ್ಲಿ ಭಾಗವಹಿಸುವುದರ ಮೂಲಕ ವೀಕ್ಷಕರನ್ನು ಆಕರ್ಷಿಸಿದವು.

ವಾರ್ತಾ ಇಲಾಖೆಯ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ

ವಾರ್ತಾ ಇಲಾಖೆಯ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ

ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಸ್ತಬ್ಧಚಿತ್ರಗಳ ಪೈಕಿ ಇಲಾಖೆಗಳು ನಿಗಮಗಳ ವಿಭಾಗದಲ್ಲಿ ವಾರ್ತಾ ಇಲಾಖೆಯ ಅನ್ನಭಾಗ್ಯ ಕ್ಷೀರ ಭಾಗ್ಯ ಪ್ರಥಮ ಬಹುಮಾನ ಪಡೆದಿದೆ. ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಎರಡನೇ ಸ್ಥಾನ ಪಡೆದಿದೆ. ಜಿಲ್ಲಾವಿಭಾಗದಲ್ಲಿ ಮೈಸೂರು ಜಿಲ್ಲೆಯ ರಾಜಮನೆತನಗಳು, ಧಾರವಾಡ ಜಿಲ್ಲೆಯ ಕನ್ನಡ ಸಾರಸ್ವತ ಲೋಕದ ದಿಗ್ಗಜರು, ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳು, ರಾಯಚೂರು ಜಿಲ್ಲೆಯ ವಿಜ್ಞಾನ ಮತ್ತು ತಂತ್ರಜ್ಞಾನ, ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹಿನ್ನಲೆ ಮಹತ್ವ/ಜನಪದ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಾದೇಶಿಕ ವಿಶೇಷತೆ ಇವು ಕ್ರಮವಾಗಿ 1ರಿಂದ 6ನೇ ಸ್ಥಾನ ಪಡೆದು ಬಹುಮಾನ ಗಳಿಸಿವೆ.

English summary
Unforgettable pictures of Mysore Dasara 2013. Historical Mysore Dasara festival ended on 14th October, 2013 in a grant fashion with jambu savari, adventure show by soldiers, panjina kavayatu, dance programme etc. Entire festivities were true treat to the eyes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X