• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಳೆಗೇರಿ ಮಕ್ಕಳ ಸೇವೆಯಲ್ಲಿ ಉಡುಪಿಯ ಬ್ರಾಹ್ಮಣ ಕುಟುಂಬ...

By ರಹೀಂ ಉಜಿರೆ
|

ಉಡುಪಿ, ಅಕ್ಟೋಬರ್ 31: ಉಡುಪಿಯ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬವೊಂದು ಕಳೆದ 14 ವರ್ಷಗಳಿಂದಲೂ ಕೊಳೆಗೇರಿಯ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವುದರ ಜೊತೆಗೆ ಅವರ ಆರೈಕೆ ಮಾಡುತ್ತಿದೆ. ಕೊಳೆಗೇರಿ ಮಕ್ಕಳ ಶಾಲೆಯ ಫೀಸ್ ಕಟ್ಟುವುದು, ಅವರಿಗೆ ಬಟ್ಟೆಬರೆ ತೆಗೆಸಿಕೊಡುವುದು, ಇದರ ಜೊತೆಗೆ ಅವರಿಗೆ ಭರಪೂರ ಪ್ರೀತಿ ನೀಡುವುದು... ಇಷ್ಟನ್ನು ಸದ್ದಿಲ್ಲದೆ ಮಾಡುತ್ತಾ ಸಾಮಾಜಿಕ ಕಳಕಳಿ ಮೆರೆಯುತ್ತಿದೆ.

ಈ ಸಾಮಾಜಿಕ ಕಳಕಳಿಯ ರೂವಾರಿ ರೂಪಾ ಬಲ್ಲಾಳ್. ಉಡುಪಿಯ ಪ್ರತಿಷ್ಠಿತ, ಪೇಜಾವರ ಮಠಕ್ಕೆ ಒಳಪಟ್ಟ ವಿದ್ಯೋದಯ ಮತ್ತು ಆನಂದತೀರ್ಥ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ನಾಗರಾಜ್ ಬಲ್ಲಾಳ್ ಅವರ ಪತ್ನಿಯಾಗಿರುವ ಇವರು ವೃತ್ತಿಯಲ್ಲಿ ಯೋಗ ಥೆರಪಿಸ್ಟ್. ಇವರಿಗೆ ಮಕ್ಕಳನ್ನು ಕಂಡರೆ ಅಪಾರ ಪ್ರೀತಿ. ಹೀಗಾಗಿ ಉಡುಪಿಯಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ಮಕ್ಕಳಿಗೆ ಕಳೆದ 14 ವರ್ಷಗಳಿಂದಲೂ ಉಚಿತವಾಗಿ ಇಂಗ್ಲಿಷ್ ಪಾಠ, ಕನ್ನಡ ಪಾಠ ಮತ್ತು ಗಣಿತ ಹೇಳಿ ಕೊಡುತ್ತಿದ್ದಾರೆ. ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ...

ಧಾರವಾಡ : ಬೀದಿ ಬದಿ ವ್ಯಾಪಾರಿಗಳ ಮಕ್ಕಳಿಗೆ ಶಿಕ್ಷಣದ ಭಾಗ್ಯ

14 ವರ್ಷದಿಂದ ಕೊಳೆಗೇರಿ ಮಕ್ಕಳಿಗೆ ಪಾಠ

14 ವರ್ಷದಿಂದ ಕೊಳೆಗೇರಿ ಮಕ್ಕಳಿಗೆ ಪಾಠ

ಕೊಳೆಗೇರಿ ಮಕ್ಕಳನ್ನು ತಮ್ಮ ಮನೆಗೇ ಕರೆದುಕೊಂಡು ಹೋಗಿ ಮನೆಯಲ್ಲೇ ಉಚಿತವಾಗಿ ಪಾಠ ಮಾಡುವ ರೂಪಾ ಅವರು 14 ವರ್ಷಗಳ ಹಿಂದೆ ಉತ್ತರ ಕರ್ನಾಟಕದ ಸ್ಲಂ ಹುಡುಗಿಯೊಬ್ಬಳ ಕಷ್ಟ, ತಾಪತ್ರಯ ನೋಡಿ ಈ ಸಾಮಾಜಿಕ ಕಾರ್ಯ ಪ್ರಾರಂಭಿಸಿದ್ದರು. ಅದು ಇವತ್ತಿಗೂ ಮುಂದುವರೆದಿದೆ.

ಉಡುಪಿಯಲ್ಲಿ ಬಿಜಾಪುರ, ಬಾಗಲಕೋಟೆ, ರಾಯಚೂರು, ಬಳ್ಳಾರಿ, ದಾವಣಗೆರೆ, ಕೊಪ್ಪಳ ಸಹಿತ ಅನೇಕ ಜಿಲ್ಲೆಗಳ ವಲಸೆ ಕಾರ್ಮಿಕರು ನೆಲೆಸಿದ್ದಾರೆ. ದಿನಗೂಲಿ ಕೆಲಸ ಮಾಡುವ ಇವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ನಗರದ ವಿವಿಧ ಭಾಗಗಳ ಕೊಳೆಗೇರಿಗಳಲ್ಲಿ ಇವರ ವಾಸ. ಅವರಿಗೆ ನೆರವಾಗಲು ರೂಪಾ ಮುಂದಾಗಿದ್ದಾರೆ.

ರೂಪಾ ಅವರ ಕಾರ್ಯಕ್ಕೆ ಪತಿಯ ಸಹಕಾರ

ರೂಪಾ ಅವರ ಕಾರ್ಯಕ್ಕೆ ಪತಿಯ ಸಹಕಾರ

ಈ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನೇನೋ ಶಾಲೆಗೆ ಸೇರಿಸಿ ಕೈತೊಳೆದುಕೊಳ್ಳುತ್ತಾರೆ. ಆದರೆ ಅವರಿಗೆ ಬೇಕಾದ ಲಾಲನೆ-ಪಾಲನೆ, ಆರೈಕೆ ಮತ್ತು ಅವರ ವಿದ್ಯಾರ್ಜನೆ ಕಡೆಗೆ ಗಮನ ಕೊಡುವುದು ಪೋಷಕರಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಿಂತ ಮಿಗಿಲಾಗಿ ಕುಡಿತದ ಚಟ ಹೊಂದಿರುವ ಪೋಷಕರು ಹಣಕಾಸು ಸಹಿತ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಸಹಜವಾಗಿ ಇಂಥವರ ಮಕ್ಕಳು ಪ್ರೀತಿ, ವಾತ್ಸಲ್ಯ, ಹಾರೈಕೆಯಿಂದ ವಂಚಿತರಾಗಿದ್ದಾರೆ. ಇದನ್ನು ಮನಗಂಡ ರೂಪಾ ಬಲ್ಲಾಳ್ ತಮ್ಮ ಪತಿ ನಾಗರಾಜ್ ಸಹಕಾರದೊಂದಿಗೆ ಈ ಒಂದು ಸಾಮಾಜಿಕ ಕಾರ್ಯ ನಡೆಸುತ್ತಿದ್ದಾರೆ.

ಹಾಡ್ಯ ಸರ್ಕಾರಿ ಶಾಲೆಯ ಮಕ್ಕಳ ಗೋಳಿಗೆ ಕೊನೆ ಎಂದು?

ಮನೆಯ ತಾರಸಿಯಲ್ಲಿ ಮಕ್ಕಳಿಗೆ ಪಾಠ

ಮನೆಯ ತಾರಸಿಯಲ್ಲಿ ಮಕ್ಕಳಿಗೆ ಪಾಠ

ಬೆಳಿಗ್ಗೆ 9 ರಿಂದ ಸಂಜೆ ಐದರ ತನಕವೂ ತಮ್ಮ ಮನೆಗೆ ಮಕ್ಕಳನ್ನು ಕರೆಸಿಕೊಳ್ಳುತ್ತಾರೆ. ಮನೆಯ ತಾರಸಿಯಲ್ಲಿ ಅತ್ಯಾಧುನಿಕ ಕಲಿಕಾ ಕೊಠಡಿ ಮತ್ತು ಪರಿಕರಗಳೊಂದಿಗೆ ಖುದ್ದು ಕುಳಿತು ಮಕ್ಕಳ ಬರವಣಿಗೆ ತಿದ್ದುತ್ತಾರೆ. ಅವರಿಗೆ ಇಂಗ್ಲಿಷ್, ಕನ್ನಡ ಹೇಳಿಕೊಡುತ್ತಾರೆ. ಇದಲ್ಲದೆ ಮಕ್ಕಳ ಜೊತೆ ಆತ್ಮೀಯತೆಯಿಂದ ಬೆರೆತು ಅವರ ಕುಟುಂಬದ ಹಿನ್ನೆಲೆ, ಕಷ್ಟ ಇತ್ಯಾದಿ ತಿಳಿದುಕೊಂಡು ಅಗತ್ಯವಿದ್ದರೆ ಅವರ ಶಿಕ್ಷಣದ ವೆಚ್ಚವನ್ನು ಭರಿಸುತ್ತಾರೆ. ರೂಪಾ ಅವರು ತಮ್ಮ ಪರಿಚಯಸ್ಥರ, ಸಂಬಂಧಿಕರ ಮೂಲಕವೂ ಇಂಥ ಮಕ್ಕಳಿಗೆ ನೆರವು ನೀಡಿದ್ದಾರೆ. ಮಕ್ಕಳ ಪ್ರತಿಭೆ ಗುರುತಿಸಿ ಅವರನ್ನು ಭರತನಾಟ್ಯ, ನೃತ್ಯದ ತರಗತಿಗಳಿಗೂ ಸೇರಿಸಿದ್ದಾರೆ. ಎಲ್ಲದರ ಖರ್ಚುವೆಚ್ಚವೂ ಇವರದ್ದೇ.

ನೂರೈವತ್ತಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಭ್ಯಾಸ

ನೂರೈವತ್ತಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾಭ್ಯಾಸ

ಈತನಕ ನೂರೈವತ್ತಕ್ಕೂ ಹೆಚ್ಚು ಕೊಳೆಗೇರಿಯ ಮಕ್ಕಳು ಇವರ ಸಹಾಯದಿಂದ ವಿದ್ಯಾಭ್ಯಾಸ ಕಲಿತಿದ್ದಾರೆ. 25 ಜನ ಕಾಲೇಜು ಮೆಟ್ಟಿಲು ಹತ್ತುವಂತಾಗಲು ರೂಪಾ ಅವರೇ ಕಾರಣ. ಉತ್ತರ ಕರ್ನಾಟಕದ ಓರ್ವ ವಿದ್ಯಾರ್ಥಿಯನ್ನು ಸಿವಿಲ್ ಇಂಜಿನಿಯರ್ ಮಾಡಿ, ತಮ್ಮ ಪತಿಯ ಸಂಸ್ಥೆಯಲ್ಲೇ ಕೆಲಸ ಕೊಟ್ಟಿದ್ದಾರೆ. ಕೊಳೆಗೇರಿ ಮಕ್ಕಳನ್ನು ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಲು ಪ್ರಯತ್ನ ಪಡುತ್ತಿರುವ ರೂಪಾ ಅವರ ಇಬ್ಬರು ಮಕ್ಕಳೂ ವೈದ್ಯರು. ಒಬ್ಬರು ಅಮೆರಿಕಾದಲ್ಲಿದ್ದರೆ, ಇನ್ನೊಬ್ಬರು ಮಣಿಪಾಲದಲ್ಲಿ ಎಂಡಿ ಆಗಿದ್ದಾರೆ. ಈ ಕುಟುಂಬ ಕೊಳೆಗೇರಿ ಮಕ್ಕಳ ಆರೈಕೆಯಲ್ಲಿ ತೊಡಗಿರುವುದು ಶ್ಲಾಘನೀಯ ಕಾರ್ಯ.

 ರೂಪಾ ಅವರಿಗೆ ಪ್ರೇರಣೆ ಏನು?

ರೂಪಾ ಅವರಿಗೆ ಪ್ರೇರಣೆ ಏನು?

ಇಂಥದೊಂದು ಮಾನವೀಯ ಸೇವೆ ಮಾಡಲು ಏನಾದರೂ ಪ್ರೇರಣೆ, ಸ್ಫೂರ್ತಿ ಬೇಕಲ್ಲವೇ? ಈ ಕುರಿತು ರೂಪ ಬಲ್ಲಾಳ್ ಅವರನ್ನು ಕೇಳಿದರೆ, ಅವರು ಹೇಳಿದ್ದಿಷ್ಟು: ನಾನು ಹುಟ್ಟಿದ್ದು ಬಾಗಲಕೋಟೆಯಲ್ಲಿ. ಅಲ್ಲಿ ನನ್ನ ಅಜ್ಜ ತುಂಬಾ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಅದು ನನ್ನ ಮೇಲೆ ಪ್ರಭಾವ ಬೀರಿರಬಹುದು. ಅದರ ಜೊತೆಗೆ ನನಗೆ ಮಕ್ಕಳೆಂದರೆ ತುಂಬಾ ಅಚ್ಚುಮೆಚ್ಚು. ಕೊಳಗೇರಿ ಮಕ್ಕಳಿಗೆ ಪ್ರೀತಿಯ ಅಗತ್ಯವಿದೆ, ಆರೈಕೆ ಅಗತ್ಯವಿದೆ. ಅವರನ್ನು ಹತ್ತಿರ ಮಾಡಿದಷ್ಟು ಅವರು ನಮಗೆ ಇನ್ನಷ್ಟು ಹತ್ತಿರ ಆಗುತ್ತಾರೆ. ಅನೇಕ ಮಕ್ಕಳಿಗೆ ಪಾಠದ ಜೊತೆಗೆ ಪ್ರೀತಿಯನ್ನೂ ನೀಡಿದ್ದೇನೆ ಎನ್ನುತ್ತಾರೆ.

 ರೂಪಾ ಅವರ ಪತಿ ಮಾತು...

ರೂಪಾ ಅವರ ಪತಿ ಮಾತು...

ಪ್ರಾರಂಭದಲ್ಲಿ ನನಗೆ ಇರಿಸುಮುರಿಸು ಆಗುತ್ತಿತ್ತು. ಮಕ್ಕಳ ಗಲಾಟೆ, ಶಬ್ದ ಕಿರಿಕಿರಿ ಅನಿಸುತ್ತಿತ್ತು. ಕ್ರಮೇಣ ನಾನು ಹೊಂದಿಕೊಳ್ಳತೊಡಗಿದೆ. ಮಕ್ಕಳನ್ನು ನೋಡಿದಾಗ ಖುಷಿಯಾಗುತ್ತಿತ್ತು. ಈಗ ನಮ್ಮ ಇಡೀ ಕುಟುಂಬವೇ ಮಕ್ಕಳನ್ನು ಪ್ರೀತಿಸುತ್ತಿದೆ. ಮಕ್ಕಳು ಒಂದು ದಿನ ಬಾರದಿದ್ದರೂ ಅವರು ಯಾಕೆ ಇನ್ನೂ ಬಂದಿಲ್ಲ ಎಂದು ಕೇಳುವಷ್ಟು ಅಭ್ಯಾಸವಾಗಿದೆ ಎನ್ನುತ್ತಾರೆ ರೂಪಾ ಅವರ ಪತಿ ನಾಗರಾಜ್ ಬಲ್ಲಾಳ್.

"ನನಗೆ ಆತ್ಮವಿಶ್ವಾಸ ತುಂಬಿದ್ದೇ ಅವರು"

ನಾನು ನಾಲ್ಕನೇ ಕ್ಲಾಸಿನಿಂದಲೂ ಇಲ್ಲಿಗೆ ಬರುತ್ತಿದ್ದೇನೆ. ಈಗ ಕಾಲೇಜಿಗೆ ಹೋಗುತ್ತಿದ್ದೇನೆ. ಮೇಡಂ ನನ್ನನ್ನು ಭರತನಾಟ್ಯ ಕ್ಲಾಸಿಗೆ ಕಳುಹಿಸುತ್ತಿದ್ದಾರೆ. ಮ್ಯಾರಥಾನ್ ನಲ್ಲೂ ಭಾಗವಹಿಸಿದ್ದೇನೆ. ಪ್ರಾರಂಭದಲ್ಲಿ ತುಂಬಾ ಹಿಂಜರಿಕೆ, ಭಯ ಇತ್ತು. ಮೇಡಂ ನಮಗೆ ಧೈರ್ಯ ತುಂಬಿದ್ದಾರೆ. ಇಂಗ್ಲಿಷ್ ಹೇಳಿ ಕೊಟ್ಟಿದ್ದಾರೆ. ನನಗೀಗ ಧೈರ್ಯ ಬಂದಿದೆ. ಓದಿ ಕೆಲಸ ಮಾಡುವಷ್ಟು ಕಾನ್ಫಿಡೆಂಟ್ ಆಗಿದ್ದೇನೆ ಎಂದು ಖುಷಿಯಿಂದ ನುಡಿಯುತ್ತಾಳೆ ವಿದ್ಯಾರ್ಥಿನಿ ದ್ಯಾಮವ್ವ.

English summary
A traditional Brahmin family of Udupi has been providing free education and care for slum children for the past 14 years. Here is detail about this..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X