'ಲಾಲ್ ಸಿಂಗ್ ಚಡ್ಡಾ': ಇಲ್ಲಿ ಲಾಲ್ ಮಾತ್ರ ಓಡುವುದಿಲ್ಲ, ಇತಿಹಾಸ, ಮನುಷ್ಯತ್ವವೂ ಜೊತೆಗೆ ಸಾಗುತ್ತದೆ
ಇತ್ತಿಚೆಗೆ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಚಿತ್ರ ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ'. 2015ರಲ್ಲಿ ಅಮೀರ್ ಖಾನ್ ಸಂದರ್ಶನವೊಂದರಲ್ಲಿ "ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯಿಂದಾಗಿ ನನ್ನ ಪತ್ನಿ ಕಿರಣ್ ರಾವ್ ದೇಶ ತೊರೆಯಲು ನನಗೆ ಹೇಳುತ್ತಿದ್ದಾರೆ" ಎಂದು ಹೇಳಿಕೆ ನೀಡಿದ್ದರು. ಸದ್ಯ ಅದೇ ವಿಡಿಯೋ ತುಣುಕಗಳನ್ನು ಪೋಸ್ಟ್ ಮಾಡುವ ಮೂಲಕ ಅಮೀರ್ ಖಾನ್ ಚಿತ್ರವನ್ನು ಬಹಿಷ್ಕಾರ ಮಾಡುವಂತೆ ಕರೆ ನೀಡಲಾಗುತ್ತಿದೆ.
ಪರ ವಿರೋಧ ಚರ್ಚೆಗಳನ್ನು ಬದಿಗಿರಿಸಿ ಸಿನಿಮಾವನ್ನು ನೋಡುವುದಾದರೇ ಇದೊಂದು ಸುಂದರ ಚಿತ್ರ. ಪ್ರತಿ ದೃಶ್ಯಗಳು ನಮ್ಮ ಕಣ್ಣಿಗೆ ಹಬ್ಬವೇ. ಮೊದಲ ದೃಶ್ಯದ ಹಕ್ಕಿಯ ಪುಕ್ಕ ಕೊನೆಯವರೆಗೂ ನಮ್ಮಲ್ಲಿ ಒಂದು ಬೆಚ್ಚನೆಯ ಭಾವ ಮೂಡಿಸುತ್ತದೆ.
ಅದ್ವೈತ್ ಚಂದನ್ ನಿರ್ದೇಶಿಸಿರುವ ಲಾಲ್ ಸಿಂಗ್ ಚಡ್ಡಾ ಚಲನಚಿತ್ರವು 1994 ರ ಅಕಾಡೆಮಿ ಪ್ರಶಸ್ತಿ ವಿಜೇತ ಚಲನಚಿತ್ರ, ಟಾಮ್ ಹ್ಯಾಂಕ್ಸ್ ನಟಿಸಿದ ಫಾರೆಸ್ಟ್ ಗಂಪ್ ನ ರೂಪಾಂತರವಾಗಿದೆ. ಆದರೆ, ಆ ಭಾವ ನಿಮ್ಮಲ್ಲಿ ಬರದಂತೆ ಈ ನೆಲಕ್ಕೆ ತಕ್ಕಂತೆ ಹೊಂದಿಸಲಾಗಿದೆ. ಭಾರತದ ಟೈಂ ಮ್ಯಾಪಿಂಗ್‌ಗೆ ತಕ್ಕಂತೆ ಕಥೆಯನ್ನು ಮಾರ್ಪಡಿಸಲಾಗಿದೆ. ಪಂಜಾಬ್‌ನ ದೃಶ್ಯಗಳು, ಲಾಲ್ ಓಡುವ ರಾಜ್ಯಗಳ ದೃಶ್ಯಗಳು, ರೂಪಾಳ ಅಸಹಾಯಕತೆ, ಲಾಲ್ ತಾಯಿಯ ಮನೋಧೈರ್ಯ, ಬಾಲನಾಗಿ ನಗೆ ಉಕ್ಕಿಸುವ ನಾಗ ಚೈತನ್ಯ, ಕೊಲ್ಲಲು ಬಂದು ಬದುಕಿನ ಅವಿಭಾಜ್ಯ ಅಂಗವಾಗುವ ಮಹಮ್ಮದ್ ಫಾಜಿ ಪ್ರತಿಯೊಂದು ಪಾತ್ರವೂ ನಮ್ಮನ್ನು ಗಾಢವಾಗಿ ಆವರಿಸಿಕೊಳ್ಳುತ್ತದೆ.

ಲಾಲ್ ಪಾತ್ರದಲ್ಲಿ ಅಮೀರ್ ಖಾನ್ ಜೀವಿಸಿದ್ದಾರೆ. ಪಂಜಾಬಿ ಮುಗ್ಧ ಹುಡುಗನಾಗಿ ತಂದೆಯಿಲ್ಲದೇ ಕೃಷಿ ಮಾಡುವ ತಾಯಿಯ ಜೊತೆಯಲ್ಲಿ ಬೆಳೆಯುವ ಈತನಿಗೆ ತಾಯಿಯ ಮಾತೇ ವೇದ ವಾಕ್ಯ. ಆಕೆ ಹೇಳಿದ್ದನ್ನು ಪಾಲಿಸುವಾತ. ಅಮೀರ್ ಖಾನ್ ಬಾಲ್ಯದಿಂದ ಸಾಗುವ ಚಿತ್ರದ ಪ್ರತಿ ಪ್ರೇಮಿನಲ್ಲೂ ಹೊಸತನ ಕಟ್ಟು ಕೊಡುತ್ತಾರೆ. ಪಂಜಾಬಿ ಭಾಷೆ, ರೈಲಿನಲ್ಲಿ ಕಥೆ ಹೇಳುವಾಗ ಹೂ ಗುಟ್ಟುವುದು, ನಿಟ್ಟುಸಿರು ಬಿಡುವುದು, ಕಣ್ಣಿನ ನೋಟಗಳಲ್ಲೇ ಅಮೀರ್ ಮತ್ತಷ್ಟು ಅಂಕ ಗಳಿಸುತ್ತಾರೆ. ಇಷ್ಟವಿಲ್ಲದಿದ್ದರೂ ಮನೆಯ ಸಂಪ್ರದಾಯದಂತೆ ತಾಯಿ ಮಾತಿಗೆ ಒಪ್ಪಿ ಸೈನ್ಯ ಸೇರುವ, ತಾಯಿ ಹೇಳಿದಾಗ ಬಿಟ್ಟು ಬರುವ ಲಾಲ್‌ಗೆ ಜೀವನ ಹೀಗೆಯೇ ಇರಬೇಕು ಎಂಬ ನಿಯಮಗಳಿಲ್ಲ. ಹೇಗಿದ್ದರೂ, ಎಷ್ಟು ವರ್ಷವಾದರೂ ರೂಪಾಳ ಮೇಲಿನ ನಿಷ್ಕಲ್ಮಶ ಪ್ರೀತಿ ಕಡಿಮೆಯಾಗದು. ಸ್ನೇಹಿತನ ಆಸೆಗಾಗಿ ಚಡ್ಡಿ ಬನಿಯನ್ ಕಂಪನಿ ಆರಂಭಿಸುವಷ್ಟು ಒಳ್ಳೆಯವ ಈತ. ಲಾಲ್ ದೊಡ್ಡವನಾಗುವಂತೆಯೇ ಪಂಜಾಬನ್ನು ತೋರಿಸುವ ಪ್ರತಿ ದೃಶ್ಯದಲ್ಲಿಯೂ ಅಲ್ಲಿನ ಬೆಳೆಗಳು ಕೂಡ ಋತುವಿಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಒಮ್ಮೆ ಗೋದಿ, ಒಮ್ಮೆ ಸಾಸಿವೆ, ಒಮ್ಮೆ ಬಿತ್ತನೆ ಮತ್ತೊಮ್ಮೆ ತರಕಾರಿ ಹೀಗೆ...
ಗಟ್ಟಿಗಿತ್ತಿ ತಾಯಿಯಾಗಿ ಮೋನಾ ಸಿಂಗ್
ಮೋನಾ ಸಿಂಗ್ ಅಮೀರ್ ಖಾನ್ ತಾಯಿಯಾಗಿ ನಟಿಸಿದ್ದು, ಮಗನಿಗೆ ಮನೋಬಲದ ಮೇಲೆ ನಂಬಿಕೆಯಿರಿಸುವಂತೆ ಹೇಳಿಕೊಡುವಾಕೆ. ಉತ್ತಮ ಆರ್ಥಿಕ ಸ್ಥಿತಿಯಲ್ಲಿದ್ದರೂ ಮಗನಿಗಾಗಿ ಇನ್ನೊಬ್ಬರ ಮನೆಯಲ್ಲಿ ಪಾತ್ರೆ ತೊಳೆಯಲು ಕೂಡ ಸಿದ್ಧಳಾಗುತ್ತಾಳೆ. ಗಂಡನಿಲ್ಲದ ಆಕೆ ಒಬ್ಬಳೇ ಇಡಿ ಕೃಷಿ ಕೆಲಸವನ್ನು ಮಾಡುವ ಗಟ್ಟಿಗಿತ್ತಿ. ಸಾವನ್ನು ಕೂಡ ಅದು ಪ್ರಕೃತಿ ಸಹಜ ಇದಕ್ಕೆ ಕಣ್ಣೀರು ಹಾಕುವ ಅವಶ್ಯಕತೆಯಿಲ್ಲ ಎಂದು ಮಗನಿಗೆ ಅಷ್ಟೇ ಸಹಜವಾಗಿ ತಿಳಿಸುವಷ್ಟು ಛಲಗಾತಿ. ಮಗನ ಪ್ರತಿ ಖುಷಿಯಲ್ಲೂ ತನ್ನ ಖುಷಿ ಕಾಣುವ, ಮಗನನ್ನು ಉಳಿಸಲು ಧರ್ಮದ ಕಟ್ಟಳೆಗಳನ್ನು ಮೀರಿಸುವಾಕೆ. ತಾಯಿ ಪಾತ್ರದಲ್ಲಿ ಮೋನಾ ಸಿಂಗ್ ಮತ್ತೆ ಮತ್ತೆ ಕಾಡುತ್ತಾರೆ.
ಅಸಹಾಯಕತೆ, ಬದುಕಿನ ಗೊಂದಲಗಳ ರೂಪವಾಗಿ ಕರೀನಾ ಕಪೂರ್
ಲಾಲ್ ಸಿಂಗ್ ಚಡ್ಡಾನ ಪ್ರೀತಿ ರೂಪ. ಆತನ ಒಲವು ಆಕೆ. ಅಂತರ್ಜಾತಿ ವಿವಾಹವಾಗಿರುವ ತಂದೆ ತಾಯಿಯನ್ನು ಅಜ್ಜಿ ತಾತ ಮನೆಗೆ ಸೇರಿಸದಿರುವುದು, ಪ್ರತಿದಿನ ಹಣಕ್ಕಾಗಿ ನಡೆಯುವ ಜಗಳ. ಹಣಕ್ಕಾಗಿ ಮನೆಗೆ ಹೋಗಲು ಆಕೆಗೆ ಎಂದೂ ಇಷ್ಟವಾಗುವುದಿಲ್ಲ. ಹಣದಿಂದಲೇ ಎಲ್ಲಾ ಸಮಸ್ಯೆಗೂ ಪರಿಹಾರ ಎಂದು ಚಿಕ್ಕ ವಯಸ್ಸಿನಿಂದಲೇ ನಂಬಿರುವ ಆಕೆಗೆ ದೊಡ್ಡ ಶ್ರೀಮಂತೆಯಾಗಬೇಕು ಎನ್ನುವ ಕನಸು. ಕನಸುಗಳ ಹಿಂದೆ ಹೋಗುವ ಆಕೆಗೆ ಲಾಲ್‌ನ ಪ್ರೀತಿಯನ್ನು ಒಪ್ಪುವ ಮನಸ್ಸಿಲ್ಲ. ಆಸೆ ಹಿಂದೆ ಬಿದ್ದು ಸೋತು, ಜೈಲು ಸೇರಿ ಅಲ್ಲಿಂದ ಮತ್ತೆ ಲಾಲ್ ಬಳಿಗೆ ಬರುವ ರೂಪಾಳಾಗಿ ಕರೀನಾ ಕಪೂರ್ ಮತ್ತಷ್ಟು ಮಾಗಿದ ಅಭಿನಯ ತೋರಿದ್ದಾರೆ.

ಚಡ್ಡಿ ಬನಿಯನ್ ಅನ್ನೇ ಉಸಿರಾಡುವ ಬಾಲನಾಗಿ ನಾಗ ಚೈತನ್ಯ
ಬಾಲರಾಜು ಆಗಿ ಬಾಲಿವುಡ್ ಪಾದರ್ಪಾಣೆ ಮಾಡಿರುವ ನಾಗ ಚೈತನ್ಯ ಚಡ್ಡಿ ಬನಿಯನ್ ಕಥೆಯಲ್ಲಿ ನಿಮ್ಮನ್ನು ಕೆಲ ಕಾಲ ನಗೆ ಉಕ್ಕಿಸುತ್ತಾರೆ. ಪದೇ ಪದೇ ತಮ್ಮ ಕುಲ ಕಸುಬು ಚಡ್ಡಿ ಬನಿಯನ್ ತಯಾರಿಕೆ ಬಗ್ಗೆ ಹೇಳಿ ಹೇಳಿ ಲಾಲ್‌ಗೂ ಚಡ್ಡಿ ಬನಿಯನ್ ಹೊಲೆಯುವುದನ್ನು ಕಲಿಸುತ್ತಾನೆ. ಇಲ್ಲಿ ಆತನಿಗೂ ಯಾರನ್ನೂ ಕೊಲ್ಲುವ ಆಸೆಯಿಲ್ಲ. ಊರಿಗೆ ಹೋಗಿ ಚಡ್ಡಿ ಬನಿಯನ್ ಅಂಗಡಿ ಮಾಡಬೇಕು ಎಂಬುದೇ ಆತನ ಆಸೆ. ಅಂತಹ ಆಸೆ ಕಾರ್ಗಿಲ್ ಕಣಿವೆಯಲ್ಲಿ ಮಣ್ಣಾಗುತ್ತದೆ. ಕೆಲ ಕಾಲ ಬಂದು ಹೋಗುವ ನಾಗ ಚೈತನ್ಯ, ಲಾಲ್ ಮಾತುಗಳಲ್ಲಿ ಪದೇ ಪದೇ ಬಮದು ಹೋಗುತ್ತಾನೆ. ಬಾಲನ ಆಸೆಗಾಗಿಯೇ ಲಾಲ್ ರೂಪ ಗಾರ್ಮೆಟ್ಸ್ ಆರಂಭಿಸುತ್ತಾನೆ. ನಾಗ ಚೈತನ್ಯ ದವಡೆಗೆ ಏನೋ ಸಿಕ್ಕಿಸುವ ಬದಲು ಅವರು ಇರುವಂತೆಯೇ ತೋರಿಸಿದ್ದರೇ ಇನ್ನು ಇಷ್ಟವಾಗುತ್ತಿದ್ದರು.
ಕೊಲ್ಲಲು ಬಂದು ಗೆಳೆಯನಾಗುವ ಮಹಮ್ಮದ್ ಆಗಿ ಮಾನವ್ ವಿಜ್
ಭಾರತೀಯರನ್ನು ಕೊಲ್ಲಲು ಬಂದು ಯುದ್ಧದಲ್ಲಿ ಲಾಲ್‌ನಿಂದ ರಕ್ಷಿಸಲ್ಪಡುವ ಶತ್ರು ಪಾಳಯದ ಮಹಮ್ಮದ್ ಆಗಿ ಮಾನವ್ ವಿಜ್ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಚಿತ್ರದ ಬಹುತೇಕ ವೀಲ್ಹ್ ಚೇರ್ ಮೇಲೆಯೇ ಕುಳಿತು ನಟಿಸಿದ್ದಾರೆ. ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಮ್ಮದ್ ಲಾಲ್ ಸ್ನೇಹದಿಂದೇ ತನಗೆ ಅರಿವಿಲ್ಲದೆ ಬದಲಾಗುತ್ತಾನೆ. ಟಿವಿಯಲ್ಲಿ ಕಸಬ್‌ನನ್ನು ನೋಡಿ ಮತ್ತೆ ತನ್ನ ದೇಶಕ್ಕೆ ಹೋಗಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ದೇಶದಲ್ಲಿರುವ ಜಾತಿ-ಧರ್ಮಗಳ ಮಲೇರಿಯಾ ಓಡಿಸಬೇಕು. ಮಕ್ಕಳ ತಲೆಯನ್ನು ಹಾಳು ಮಾಡುವವರ ವಿರುದ್ಧ ನಾನು ಮಕ್ಕಳ ತಲೆಯಲ್ಲಿ ಶಿಕ್ಷಣ ತುಂಬುತ್ತೇನೆ ಎಂದು ಹೊರಡುವ ಲಾಲ್‌ನ ಮಹಮ್ಮದ್ ಫಾಜಿಯಾಗಿ ಮಾನವ್ ವಿಜ್ ಮನುಷ್ಯತ್ವದ ಪಾಠ ಬಿಟ್ಟುಹೊಗುತ್ತಾರೆ.
ಮಲೇರಿಯಾ ಮತ್ತು ಜಾತಿ-ಧರ್ಮದ ಸಂಘರ್ಷಗಳು
ಇನ್ನು ಸಿನಿಮಾದಲ್ಲಿ ನಮಗೆ ಲಾಲ್ ಸಿಂಗ್ ಚಡ್ಡಾರ ಬಾಲ್ಯ, ಯವ್ವನ ಎಲ್ಲವೂ ಬಂದು ಹೋಗುವುದರಿಂದ ನಿರ್ದೇಶಕ ಎಲ್ಲಾ ಕಾಲಘಟ್ಟಗಳ ಪ್ರಮುಖ ಘಟನೆಗಳನ್ನು ಜೋಡಿಸಿದ್ದಾರೆ. ಆಪರೇಷನ್ ಬ್ಲೂ ಸ್ಟಾರ್, ಇಂದಿರಾ ಗಾಂಧಿ ಹತ್ಯೆ, ಸಿಖ್ಖರ ನರಮೇದ, ಕಪೀಲ್ ನೇತೃತ್ವದಲ್ಲಿ ವಿಶ್ವಕಪ್ ಗೆದ್ದದ್ದು, ಲಾಲ್ ಸಿಂಗ್ ಅಡ್ವಾಣಿಯವರ ರಥಯಾತ್ರೆ, ಬಾಬ್ರಿ ಮಸೀದಿ ಧ್ವಂಸ, ಮುಂಬೈ ಬಾಂಬ್ ದಾಳಿಗಳು ಸೇರಿದಂತೆ ಹಲವು ವಿದ್ಯಾಮಾನಗಳನ್ನು ಸೇರಿಸಿದ್ದಾರೆ. ಆದರೆ, ಇವುಗಳಿಂದ ನಡೆಯುವ ಗಲಭೆಗಳನ್ನು ಮಲೇರಿಯಾ ಎಂದು ಹೇಳಿ ಹೆಚ್ಚಿನ ವಿವರಗಳ ಪ್ರಶ್ನೆಯನ್ನು ಜನರ ತಲೆಗೆ ಬಿಟ್ಟುಬಿಟ್ಟಿದ್ದಾರೆ.

ಇಂದಿರಾಗಾಂಧಿಯಿಂದ ಇಂದಿನ ಪ್ರಧಾನಿ ನರೇಂದ್ರ ಮೋದಿಯವರೆಗಿನ ರಾಜಕೀಯ ವಿದ್ಯಾಮಾನಗಳು ಹಾಗೆ ನಿಮ್ಮ ಕಣ್ಣ ಮುಂದೆ ರಪ್ ಎಂದು ಸಾಗುತ್ತವೆ. ಬಾಲ್ಯದಿಂದ ಇಂದಿನವರೆಗಿನ ಜೀವನಶೈಲಿ ಟಪ್ ಟಪ್ ಎಂದು ಕಣ್ಣ ಮುಂದೆ ಬರುತ್ತವೆ. ಒಟ್ಟಾರೆ ಇಲ್ಲಿ ಲಾಲ್ ಮಾತ್ರ ಓಡುವುದಿಲ್ಲ, ಇತಿಹಾಸ, ಮನುಷ್ಯತ್ವದ ಪಾಠಗಳು ಜೊತೆಗೆ ಸಾಗುತ್ತವೆ,
ಒಮ್ಮೆ ಲಾಲ್‌ಗೆ ಮಹಮ್ಮದ್ ಕೇಳುತ್ತಾರೆ. ಲಾಲ್ ನಿನ್ಯಾವತ್ತೂ ಪ್ರಾರ್ಥನೆ ಮಾಡಿರುವುದನ್ನು ನಾನು ನೋಡಿಯೇ ಇಲ್ಲ ಯಾಕೆ ಮಾಡಲ್ಲ ಎಂದು. ಲಾಲ್ ಹೇಳುತ್ತಾರೆ. ದೇವರಿರುವುದು ಮನುಷ್ಯರಲ್ಲಿ. ನನ್ನಲ್ಲಿ, ನಿಮ್ಮಲ್ಲಿ ಅಲ್ಲವೇ ಮತ್ಯಾಕೆ ಪೂಜೆ ಎಂದು... ಹೀಗೆ ಮನುಷ್ಯ ಮನುಷ್ಯರನ್ನು ಪ್ರೀತಿಸಬೇಕು ಎಂಬ ಸಂದೇಶ ಸಾರಿ ಹೋಗುತ್ತಾನೆ ಲಾಲ್.












Click it and Unblock the Notifications