• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಚಿಕೆ ಸುಂದರವಾಗಿಸಿದ ಕೈಗಳಿಗೆ ಧನ್ಯವಾದ

By Prasad
|

AKKA souvenir committee members
ಚರಿತ್ರಾರ್ಹವಾದ 2010ರ ಆರನೆಯ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಹೊರತರುತ್ತಿರುವ ಈ ಸ್ಮರಣ ಸಂಚಿಕೆಯನ್ನು ನಿಮ್ಮ ಮುಂದಿಡಲು ಹರ್ಷವಾಗುತ್ತದೆ. ಈ ನಿಟ್ಟಿನಲ್ಲಿ ಹಲವಾರು ತಿಂಗಳುಗಳಿಂದ ಸಂಪಾದಕ ಮಂಡಳಿಯಲ್ಲಿ ಕೆಲಸ ಮಾಡುತ್ತಿರುವ ನಾವೆಲ್ಲರೂ ಕೂಡಿ ದುಡಿದ ಪ್ರತಿಫಲ ನಿಮ್ಮ ಕೈಯಲ್ಲಿದೆ, ಸ್ವೀಕರಿಸಿ.

2010ರ ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕನಾಗಬೇಕೆಂದು ಸಮ್ಮೇಳನದ ಕೇಂದ್ರ ಸಮಿತಿಯು ನನ್ನನ್ನು ಕೇಳಿದಾಗ ನಾನು ಹೆಚ್ಚು ಯೋಚಿಸದೇ ಒಪ್ಪಿಕೊಂಡೆನಾದರೂ ನಂತರ ಈ ಕೆಲಸದ ವಿಸ್ತಾರ, ವ್ಯಾಪ್ತಿ ಹಾಗೂ ಈ ಕೆಲಸದ ನಿಟ್ಟಿನಲ್ಲಿ ಒಟ್ಟುಗೂಡಿಸಬಹುದಾದ ಎಲ್ಲ ವಿಷಯ-ವಸ್ತುಗಳನ್ನು ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಯೋಚಿಸಿಕೊಂಡಾಗ ಇದು ಕಷ್ಟದ ಕೆಲಸವೆನಿಸಿದ್ದಂತೂ ನಿಜ. ಇಂತಹ ಯಾವುದೇ ಕೆಲಸವನ್ನು ಮಾಡಬೇಕೆಂದರೂ ಒಂದು ಒಳ್ಳೆಯ ತಂಡದ ಅಗತ್ಯವಿದೆ, ಸಮ್ಮೇಳನದ ವಿವಿಧ ಸಮಿತಿಗಳ ಸಹಾಯ-ಸಹಕಾರಗಳು ಬೇಕಾಗುತ್ತವೆ, ಎಲ್ಲಕ್ಕಿಂತ ಮುಖ್ಯವಾಗಿ ಈ ನಿಟ್ಟಿನಲ್ಲಿ ದುಡಿಯಲು ಒಪ್ಪಿಕೊಂಡ ಎಲ್ಲರೂ ಸಹ ಹಗಲಿರುಳೆನ್ನದೆ ಶ್ರಮಿಸಬೇಕಾದಷ್ಟು ಕೆಲಸ-ಕಾರ್ಯಗಳು ಉದ್ಭವಗೊಳ್ಳುತ್ತವೆ. ಕೆಲವೊಂದಿಷ್ಟು ಮಾಡಲೇಬೇಕಾದ ಕೆಲಸಗಳ ಪಟ್ಟಿ ಹಾಗೂ ಅವುಗಳನ್ನು ಹೀಗೆ ಮಾಡಬೇಕು ಎನ್ನುವ ಹಂದರವಾದರೆ, ಇನ್ನು ಕೆಲವೊಂದಿಷ್ಟು ನಮ್ಮ ಮೇಲೆ ನಾವೇ ಹೇರಿಸಿಕೊಂಡ ಕನಸುಗಳ ಪರಿಧಿ ಮತ್ತು ಒಂದು ಕೆಲಸವನ್ನು ಹೀಗೇ ಮಾಡಬೇಕು ಎನ್ನುವ ಉತ್ಕೃಷ್ಠತೆಯ ಚೌಕಟ್ಟು. ಹೀಗೆ ನನ್ನ ಜೊತೆಗೆ ಕೈಜೋಡಿಸಿ ಈ ಸಾಹಸಕ್ಕೆ ಇಳಿದ ಎಲ್ಲರ ಸಹಾಯ-ಸಹಕಾರದೊಂದಿಗೆ ನಮ್ಮ ನಿಲುವುಗಳು ದಿನೇದಿನೇ ಪ್ರಬುದ್ಧಗೊಳ್ಳುತ್ತಾ, ನಮ್ಮ ಆಶಯಗಳು ಕೈಗೂಡುತ್ತಾ ಹಾಗೂ ನಮ್ಮ ಆಲೋಚನೆಗಳು ಹರಳುಗಟ್ಟಿದ ಪರಿಣಾಮವೇ ನಿಮ್ಮ ಮುಂದಿರುವ ಈ ಸಂಪುಟಗಳು, ತೆಗೆದುಕೊಳ್ಳಿ.

ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ, ಈ ಸಂಪುಟದ ಜೊತೆಗೆ ಇನ್ನೊಂದು ಸಂಭಾವನಾ ಗ್ರಂಥದ ಮಾದರಿಯಲ್ಲಿ ಕನ್ನಡ ಪ್ರಜ್ಞೆ (ಚಿತ್ರ ನೋಡಿ) ಎಂಬ ಪ್ರೌಢ ಪ್ರಬಂಧ ಸಂಕಲನವನ್ನೂ ಹೊರತರುತ್ತಿದ್ದೇವೆ, ಆಯಾಯ ಕ್ಷೇತ್ರಗಳಲ್ಲಿ ಪರಿಣಿತರಾದ ಕನ್ನಡನಾಡಿನ ವಿದ್ವಾಂಸರುಗಳ ಲೇಖನಗಳ ಸಂಗ್ರಹ ಅದು. ಇದರೊಂದಿಗೆ, ಮಕ್ಕಳಿಗೋಸ್ಕರ ಗುಬ್ಬಿ ಗೂಡು (ಚಿತ್ರ ನೋಡಿ) ಎನ್ನುವ ಸುಂದರವಾದ ಕನ್ನಡದ ಕಲಿಕೆಗೆ ನೆರವಾಗುವ ಸಂಚಿಕೆಯನ್ನೂ ಹೊರತರುತ್ತಿದ್ದೇವೆ. ಮಕ್ಕಳಲ್ಲಿ ಕನ್ನಡದ ಬಗೆಗಿನ ಆಸಕ್ತಿಯನ್ನು ಉಳಿಸಿ, ಬೆಳೆಸಿ, ಪೋಷಿಸಲು ನೆರವಾಗುವಂತೆ ಮಾಡಿರುವ ಪ್ರಯತ್ನ ಅದು.

ನಾವೆಲ್ಲ ಒಂದಾಗಿ ಈ ಸ್ಮರಣಸಂಚಿಕೆಯ ರೂಪುರೇಶೆಗಳನ್ನು ನಿರ್ಧರಿಸಲು ತೊಡಗಿದಾಗ ನಮ್ಮಲ್ಲಿ ಒಮ್ಮತವಿತ್ತು, ಜೊತೆಗೆ ಯಾವುದೇ ವಿಷಯದಲ್ಲಿಯೂ ಸಹ ನಾವು ಹೊರತರುವ ಗ್ರಂಥವು ಶ್ರೇಷ್ಠ ಗುಣಮಟ್ಟದ್ದಾಗಿರಬೇಕು ಎನ್ನುವ ಸಮಾನ ಧೋರಣೆ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ಹಿಂದಿನ ಐದು ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಹೊರತಂದಿರುವ ಸ್ಮರಣ ಸಂಚಿಕೆಗಳ ಮಾದರಿ ಹಾಗೂ ಅವುಗಳ ಆದರ್ಶ ನಮ್ಮ ಹಲವು ಕಲ್ಪನೆಗಳಿಗೆ ಪೂರಕವಾಗಿದ್ದವು. ಉತ್ತಮ ಅಭಿರುಚಿಯುಳ್ಳ ಸ್ಮರಣ ಸಂಚಿಕೆಯನ್ನು ಹೊರತರಲು ಹಲವು ತಿಂಗಳುಗಳ ಒಂದು ಕಾರ್ಯಯೋಜನೆ ಸಿದ್ಧಗೊಂಡಿತು. ಈ ನಿಟ್ಟಿನಲ್ಲಿ ಕಾರ್ಯಗಳನ್ನು ಹಂಚಿಕೊಂಡು ಒಂದು ಪೂರ್ಣತಂಡವಾಗಿ ದುಡಿಯುವ ಉತ್ಸಾಹದಲ್ಲಿ ತೊಡಗಿಕೊಂಡೆವು. ಮೊಟ್ಟ ಮೊದಲನೆಯದಾಗಿ, ಸ್ಮರಣ ಸಂಚಿಕೆಗೆ ಏನೆಂದು ಹೆಸರಿಡಬೇಕು ಎಂಬುದರಿಂದ ಹಿಡಿದು, ಸ್ಮರಣ ಸಂಚಿಕೆಯಲ್ಲಿ ಯಾವ ಯಾವ ವಿಭಾಗಗಳನ್ನು ಕೊಡಬೇಕು, ಮುಖಪುಟ ವಿನ್ಯಾಸ ಹೇಗಿರಬೇಕು, ಮುಂತಾದ ಮೇಲ್ಮುಖದಲ್ಲಿ ಸರಳವೆಂದು ತೋರುವ ಕಷ್ಟಕರವಾದ ಅನೇಕ ಪ್ರಶ್ನೆಗಳನ್ನು ಉತ್ತರಿಸಲು ಹಲವು ತಿಂಗಳುಗಳೇ ಬೇಕಾದವು.

ಸಿಂಚನ ತಂದ ಸಂಚಲನ : ಸಂಚಿಕೆಯ ನಾಮಕರಣಕ್ಕೆಂದು ನಾವು ಸುಮಾರು ಇಪ್ಪತ್ತು ಹೆಸರುಗಳನ್ನು ಆಯ್ದುಕೊಂಡು ಕೊನೆಯಲ್ಲಿ ಎರಡು ಹೆಸರುಗಳಲ್ಲಿ ಒಂದನ್ನು ಆಯ್ದುಕೊಳ್ಳೋಣ ಎಂಬ ಅಭಿಪ್ರಾಯಕ್ಕೆ ಬಂದಾಗ, ನನ್ನ ಸೌಕರ್ಯ ಹಾಗೂ ತಿಳಿವಳಿಕೆಗಳಿಗೆ ಮೀರಿದ ಹೊರಗಿನ ಸಹಾಯವನ್ನು ಅಪೇಕ್ಷಿಸುವ ಇಚ್ಛೆಯಿಂದ ಹರಿಹರೇಶ್ವರ ಅವರ ಅಭಿಪ್ರಾಯವನ್ನು ಕೇಳಿ ಇ-ಮೇಲ್ ಕಳಿಸಿದ ಸ್ವಲ್ಪ ಹೊತ್ತಿನಲ್ಲಿಯೇ "ಸಿಂಚನ" (ಚಿತ್ರ ನೋಡಿ) ಎನ್ನುವ ಹೆಸರನ್ನು ಅವರು ಸಮರ್ಪಕವಾಗಿದೆ ಎನ್ನುವುದರ ಜೊತೆಗೆ ಆ ಪದದ ವ್ಯಾಪ್ತಿಯನ್ನೂ ನೀಡಿದರು: ಸಿಂಚನ ಎನ್ನುವ ಪದವನ್ನು - ಪ್ರೋಕ್ಷಣ, ಚಿಮುಕಿಸುವುದು, ಸಿಂಪಿಸುವುದು, ಮೆಲ್ಲಗೆ ಚೆಲ್ಲುವುದು - ಎಂಬ ಅರ್ಥದಲ್ಲಿ ಸಂಸ್ಕೃತ ಕವಿಗಳು (ಉದಾಹರಣೆಗೆ, ಮಾಘ ಕವಿ ಕಿರಾತಾರ್ಜುನೀಯ 8:34, 8:40ರಲ್ಲಿ; ಕಾಳಿದಾಸ ಮೇಘದೂತ 1:26ರಲ್ಲಿ) ಬಹಳ ಹಿಂದೆಯೇ ಬಳಸಿದ್ದಾರೆ. ಸಿಂಪಡಿಸು ಎಂದರೆ ಸಿಂಚನವೇ, ಅದರ ಇನ್ನೊಂದು ರೂಪ ಸಿಂಬಡಿಸು ಎಂದಾಗುತ್ತದೆ (ಉದಾಹರಣೆಗೆ, ಗಂಡ ಹೆಂಡರ ಮಾತು ಒಂದೆ ಹಾಸಿಗೆ ಮ್ಯಾಲ; ಗಂಧ ಸಿಂಬಡಿಸಿ ನಗತಾಳ ನನ ತಮ್ಮ, ಗಂಗಿ ನಿನಗೆಲ್ಲಿ ದೊರೆತಾಳ! ಗರತಿಯ ಹಾಡು 51). ಸಿಂಪಿಣಿ, ಸಿಂಪಣಿ, ಸಿಂಪಣಿಗೆ, ಸಿಂಪಣಿಯಾಡು, ಸಿಂಪಣಿಗೆಗೊಡು, ಸಿಂಪಿಸು, ಸಿಂಪಡಿಸು - ಇತ್ಯಾದಿ ವಿವಿಧ ರೂಪಗಳು ಕನ್ನಡ ಕಾವ್ಯಗ್ರಂಥಗಳಲ್ಲಿ ಹಲವೆಡೆ ಬರುತ್ತವೆ. ಇವೆಲ್ಲವುಗಳಿಗೂ ಸಿಂಚನವೇ ಮೂಲ ಧಾತು ಮತ್ತು ಅರ್ಥ. ಈ ನಿಟ್ಟಿನಲ್ಲಿ ಪ್ರೋಕ್ಷಿಸಿದ ಹನಿಗಳೋಪಾದಿಯಲ್ಲಿನ ಬರಹಗಳನ್ನು ಹೊತ್ತು ತರುವ ಗ್ರಂಥವಾಗಿ ಸಿಂಚನ ಮೂಡಿಬಂತು.

ಅಕ್ಕ ಸಮ್ಮೇಳನದ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಾಡುಗಾರರು ಕೇಳಿದೊಡನೆ ವೇದಿಕೆಯನ್ನು ಹತ್ತೋದಿಲ್ಲ ಎನ್ನುವಂತೆ ನಮ್ಮ ಬರಹಗಾರರೂ ಸಹ ಸಂಕೋಚ ಪ್ರವೃತ್ತಿಯುಳ್ಳವರಿರಬೇಕು. ಆಗಾಗ್ಗೆ ಕಳುಹಿಸಿದ ವಿದ್ಯುನ್ಮಾನ ಪ್ರಕಟಣೆಗಳಿಂದ ಬರಹಗಾರರು ಹೆಚ್ಚು ಪ್ರಚೋದಿತರಾದಂತೆ ಕಂಡುಬರಲಿಲ್ಲ. ಕೊನೆಗೆ, ಹಲವಾರು ಮೂಲಗಳಿಂದ ಕ್ರೋಢೀಕರಿಸಿ ಈ ಹಿಂದೆ ಅಲ್ಲಿಲ್ಲಿ ಬರೆದ ಬರಹಗಾರರ ಪಟ್ಟಿಯೊಂದನ್ನು ಸಿದ್ಧಗೊಳಿಸಿ ಅದರಲ್ಲಿ ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ಸಂಪರ್ಕಿಸಿದ ಮೇಲೆ ಹಲವಾರು ಲೇಖನಗಳು ಬಂದವು. ಅನೇಕ ವಿಷಯ-ವೈವಿಧ್ಯತೆಗಳನ್ನೊಡಗೂಡಿ ಬಂದಂಥ ಲೇಖನಗಳನ್ನು ಹಲವಾರು ರೀತಿಯಲ್ಲಿ ಪರಿಷ್ಕರಿಸಿದ ಮೇಲೆ - ಕವನಗಳು, ಅನುಭವ, ಕಥೆ, ಪ್ರಬಂಧ, ನಾಟಕ - ಮೊದಲಾದ ಪ್ರಕಾರಗಳನ್ನಾಗಿ ವಿಂಗಡಿಸಿಕೊಂಡೆವು. ಕೆಲವು ಸಲ ಒಬ್ಬರೇ ಲೇಖಕರು ಹಲವು ಬರಹಗಳನ್ನು ಕಳುಹಿಸಿದ ಉದಾಹರಣೆಗಳಿದ್ದವು. ಇನ್ನು ಕೆಲವು ಸಲ ನಾನು ಎಷ್ಟೇ ಕೇಳಿಕೊಂಡರೂ ಕೆಲವರು ಬರಹಗಳನ್ನು ಕಳುಹಿಸದ ಉದಾಹರಣೆಗಳೂ ಇದ್ದವು. ಜೂನ್ ತಿಂಗಳ ನಡುವೆ ಮೊದಲ ಪಟ್ಟಿಯಲ್ಲಿನ ಮೊದಲ ಕಂತಿನ ಐವತ್ತಾರು ಲೇಖನಗಳನ್ನು ಒಂದು ಶನಿವಾರ ಮುಂಜಾನೆ ಓದುತ್ತಿದ್ದ ಹಾಗೆ ನಮಗೆ ಅಲ್ಲಿಯವರೆಗೆ ಬಂದಂತಹ ಬರಹಗಳ ಸಂಖ್ಯೆ ಕಡಿಮೆಯಾಯಿತು ಎನ್ನಿಸಿತು. ಅವುಗಳಲ್ಲಿ ಕೆಲವನ್ನು ಆಯ್ದುಕೊಂಡು, ಲೇಖನಗಳನ್ನು ಸ್ವೀಕರಿಸುವ ಕಡೆಯ ದಿನಾಂಕವನ್ನು ಒಂದು ತಿಂಗಳು ಮುಂದೂಡಿದ ಪ್ರಯತ್ನ ಫಲವನ್ನು ತಂದುಕೊಟ್ಟಿತು. ಕೊನೆಕೊನೆಯಲ್ಲಿ ಕಡೆಯ ದಿನಾಂಕ ಮೀರಿದ ಮೇಲೆ ಅನೇಕಾನೇಕ ಲೇಖನಗಳು ಬಂದು, ಅದರಲ್ಲಿ ಕೆಲವು ಸುಂದರವಾದ ಬರಹಗಳು ಇರುವುದು ಖಚಿತವಾದ ಮೇಲೆ ನಮ್ಮ ಆಯ್ಕೆ ಮಾಡುವ ವಿಧಾನ ಬಹಳ ಒತ್ತಡಕ್ಕೆ ತುತ್ತಾಯಿತು. ಒಂದು ಕಡೆಗೆ ಇಂತಿಷ್ಟು ಪುಟಗಳನ್ನು ಮಾತ್ರ ಮುದ್ರಿಸಬೇಕು ಎನ್ನುವ ಚೌಕಟ್ಟಾದರೆ ಮತ್ತೊಂದೆಡೆ ಸಾಧ್ಯವಾದಷ್ಟು ಒಳ್ಳೆಯ ಬರಹಗಳನ್ನು - ಬರಹಗಾರರು, ಸಾಹಿತ್ಯ ಪ್ರಕಾರಗಳು, ಹಲವಾರು ದೇಶಗಳಿಂದ ಬಂದ ಬರಹಗಳು ಹಾಗೂ ಹಿರಿಯರ ಹಾಗೂ ಕಿರಿಯರ ಬರಹಗಳು - ಇವೆಲ್ಲವನ್ನೂ ಹೊಂದಾಣಿಕೆ ಮಾಡುವುದು ಬಹಳ ಮುಖ್ಯವಾಗಿತ್ತು.

ಚಲನಚಿತ್ರ, ರಂಗಭೂಮಿಗೆ ಪತ್ಯೇಕ ವಿಭಾಗ : ಈ ವರ್ಷ ಮೊಟ್ಟ ಮೊದಲನೇ ಬಾರಿಗೆ, ಸ್ಮರಣ ಸಂಚಿಕೆಯ ಭಾಗವಾಗಿ ಕನ್ನಡ ಚಲನಚಿತ್ರ ಹಾಗೂ ರಂಗಭೂಮಿಗೆ ಮುಡಿಪಾಗಿ ಒಂದು ಪ್ರತ್ಯೇಕ ವಿಭಾಗವನ್ನು ಜೋಡಿಸಿದ್ದೇವೆ. ಈ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಹರಡಿರುವ ಕನ್ನಡಿಗರಲ್ಲಿ ಚಲನಚಿತ್ರ ಹಾಗೂ ರಂಗಭೂಮಿಯಲ್ಲಿ ದುಡಿದ, ನುರಿತ ಹಾಗೂ ಅನುಭವಿಗಳಿಂದ ಲೇಖನಗಳನ್ನು ಆಹ್ವಾನಿಸುವ ಸಲುವಾಗಿ ಒಂದು ದೀರ್ಘ ಪಟ್ಟಿಯನ್ನು ಸಿದ್ಧಪಡಿಸಿಕೊಂಡೆವು. ಆ ಪಟ್ಟಿಯಲ್ಲಿನ ಪ್ರತಿಯೊಬ್ಬರನ್ನು ನಾವು ಸಂಪರ್ಕಿಸಿ ಲೇಖನ ಹಾಗೂ ಸಂದರ್ಶನಗಳನ್ನು ಬೇಡಿಕೊಂಡು ಅದನ್ನು ವ್ಯವಸ್ಥಿತವಾಗಿ ಒಟ್ಟುಗೂಡಿಸಿದುದರ ಫಲವಾಗಿ 'ಚಲನಚಿತ್ರ ಮತ್ತು ರಂಗಭೂಮಿ' ವಿಭಾಗ ಸ್ಮರಣಸಂಚಿಕೆಯಲ್ಲಿ ಅಡಕವಾಗಿದೆ. ಕನ್ನಡ ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ಕೆಲಸ ಮಾಡಿದ ದಿಗ್ಗಜರನ್ನು ಸಂಪರ್ಕಿಸಿ ಅವರಿಗೆ ಬರೆಯಲು ಹಾಗೂ ಮಾತನಾಡಲು ಅನುಕೂಲವಾಗುವಂತೆ, ಹಾಗೂ ಅವರನ್ನು ಚಿಂತಿಸುವಂತೆ ಮಾಡುವ ಅನೇಕ ಪ್ರಶ್ನೆಗಳನ್ನು ನಾವು ರೂಪಿಸಿಕೊಂಡು, ನಂತರ ಬಂದ ಬರಹ ಹಾಗೂ ಸಂದರ್ಶನಗಳನ್ನು ಕ್ರೋಢೀಕರಿಸಿ ಬೆಳ್ಳಿತೆರೆ ಹಾಗೂ ರಂಗಭೂಮಿಯ ಇತಿಹಾಸ, ಬೆಳವಣಿಗೆ ಹಾಗೂ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುವ ಲೇಖನಗಳ ಪಟ್ಟಿ ಸಿದ್ಧಗೊಂಡಿತು. ನಮಗೆ ಲೇಖನಗಳನ್ನು ಕಳುಹಿಸಿ, ನಮ್ಮೊಂದಿಗೆ ಮಾತನಾಡಿ ಎಂದು ಅನೇಕ ಗಣ್ಯರನ್ನು ಕೇಳಿಕೊಂಡಾಗ ಅವರ ಸೌಜನ್ಯಭರಿತ ಸಹಕಾರ ಹಾಗೂ ನಮ್ಮ ಅಗತ್ಯಗಳಿಗೆ ಅವರು ಸ್ಪಂದಿಸಿದ ರೀತಿ ನಮ್ಮನ್ನು ಮೂಕರನ್ನಾಗಿಸಿತು. ಅವರು ಸ್ಮರಣ ಸಂಚಿಕೆಗೆ ಕೊಟ್ಟ ಬರಹ ಹಾಗೂ ಉತ್ತೇಜನದ ಮಾತುಗಳು ನಮಗೆ ಅಮೃತಪ್ರಾಯವಾಗಿದ್ದವು. ಹತ್ತು ಹಲವು ಕಡೆಯಿಂದ ಬಂದ ಈ ರೀತಿಯ ಸಹಾಯ ಸಹಕಾರಗಳನ್ನು ನಾವು ಎಂದಿಗೂ ಮರೆಯಲಾರೆವು.

ಚಲನಚಿತ್ರ-ರಂಗಭೂಮಿ ವಿಭಾಗವನ್ನು ಹೊರತು ಪಡಿಸಿದರೆ, ಈ ಸ್ಮರಣ ಸಂಚಿಕೆಯ ಉಳಿದ ಲೇಖನಗಳನ್ನು ಬರೆದವರು ಹವ್ಯಾಸೀ ಬರಹಗಾರರು. ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಹಗಲಿರುಳು ದುಡಿಯುತ್ತ ವ್ಯಸ್ಥರಾಗಿದ್ದರೂ ಸಹ ಸಮಯ ಸಿಕ್ಕಾಗ ಕನ್ನಡವನ್ನು ಓದಿ-ಬರೆಯುವುದನ್ನು ಇನ್ನೂ ಉಳಿಸಿಕೊಂಡವರು. ಹಿರಿಯ-ಕಿರಿಯ ಬರಹಗಾರರೆಲ್ಲರ ಹೊಸ ಬರಹ ಇಲ್ಲಿದೆ, ಕಳೆದ ಕೆಲವು ದಶಕಗಳಲ್ಲಿ ವಿಶ್ವದಾದ್ಯಂತ ಪ್ರಕಟಗೊಳ್ಳುವ ಅನೇಕ ಸ್ಮರಣಸಂಚಿಕೆಗಳ ಯಾದಿಯಲ್ಲೇ ಇಲ್ಲಿನ ಬರಹಗಳು ಬಂದಿವೆ. ಈ ಸಮ್ಮೇಳನದ ಅಂಗವಾಗಿ ಕನ್ನಡ ಸಂಸ್ಕೃತಿಯ ಹಿನ್ನೆಲೆ, ಪ್ರಸ್ತುತ ಸ್ಥಿತಿ ಹಾಗೂ ಮುಂದಿನ ಬೆಳವಣಿಗೆಯನ್ನೂ ಸ್ಥೂಲವಾಗಿ ಪ್ರತಿಬಿಂಬಿಸಬಲ್ಲ ನಿಟ್ಟಿನಲ್ಲಿ ಈ ಬರಹಗಳನ್ನು ಆಯ್ದುಕೊಳ್ಳಲಾಗಿದೆ. ಜೀವನದುದ್ದಕ್ಕೂ ದಾರಿದೀಪವಾಗುವ ಕೆಲವು ಅನುಭವಗಳಿವೆ, ಕರ್ನಾಟಕದ ಇತಿಹಾಸವನ್ನು ಮತ್ತೊಮ್ಮೆ ನೆನಪು ಮಾಡುವ ಲೇಖನಗಳಿವೆ, ಮನೋಜ್ಞವಾದ ಕಥೆಗಳಿವೆ, ಮೈನವಿರೇಳಿಸುವ ಕವನಗಳಿವೆ, ಅನುವಾದಗಳಿವೆ, ಚಿಂತನಶೀಲ ಪ್ರಬಂಧಗಳಿವೆ, ಅಲ್ಲಲ್ಲಿ ನವಿರಾಗಿ ಹಾಸ್ಯವಿದೆ, ಬಯಲು ಸೀಮೆಯ ಕನ್ನಡದಿಂದ ಹಿಡಿದು ಮಲೆನಾಡಿನ ಕನ್ನಡದ ಬಳಕೆಯಿದೆ, ಎಲ್ಲಕ್ಕಿಂತ ಮುಖ್ಯವಾಗಿ ಯುವ ಬರಹಗಾರರ ಲೇಖನಗಳ ಕೊಡುಗೆ ಇದೆ.

ದುಡಿದ ಎಲ್ಲರಿಗೂ ಧನ್ಯವಾದಗಳು : ಇಂತಹದ್ದೊಂದು ಭಾರೀ ಪ್ರಮಾಣದ ಪುಸ್ತಕ ಬೆಳಕು ಕಾಣುವಾಗ ಜಾಹೀರಾತಿನ ರೂಪದಲ್ಲಿ ಹಾಗೂ ಪುಟ-ವಿಭಾಗಗಳನ್ನು ಪ್ರಾಯೋಜಿಸುವಲ್ಲಿ ಆರ್ಥಿಕವಾಗಿ ನಮ್ಮನ್ನು ಬೆಂಬಲಿಸಿದವರನ್ನು ಮನಸಾರೆ ನೆನೆಯುತ್ತೇನೆ. ನಿಮ್ಮ ಈ ಸಹಾಯ ಸದ್ವಿನಿಯೋಗವಾಗಿ ಬಹುಕಾಲ ಉಳಿಯಬೇಕು ಎಂಬುದು ಈ ಸಂಚಿಕೆಯ ಆಶಯ ಹಾಗೂ ಸದಭಿರುಚಿ ಓದುಗರನ್ನು ಮನತಣಿಸುವುದು ಎಂಬುದು ನಮ್ಮ ಕಲ್ಪನೆ. ಸಂಚಾಲಕರಾದ ಶಂಕರ್ ಶೆಟ್ಟಿ ಮತ್ತು ಮಧು ರಂಗಯ್ಯ, ಜಾಹೀರಾತಿನ ಬೆಳವಣಿಗೆಗಳ ವಿಚಾರವಾಗಿ ಮತ್ತು ಹಣ ಸಂಗ್ರಹಣ ಸಮಿತಿಯ ಬೆನ್ ಕಾಂತರಾಜು, ಖಜಾಂಚಿ ಸಂತೋಷ್ ಕಡ್ಳೇಬೇಳೆ ಹಾಗೂ ಬೃಂದಾವನ ಅಧ್ಯಕ್ಷೆ ಉಷಾ ಪ್ರಸನ್ನಕುಮಾರ್ ಇವರೆಲ್ಲರ ಬೆಂಬಲವನ್ನು ಖಂಡಿತ ಸ್ಮರಿಸಿಕೊಳ್ಳುತ್ತೇವೆ. ನಮ್ಮ ಎಲ್ಲ ಆಶಯ ಹಾಗೂ ಅಭಿರುಚಿಗಳನ್ನು ನಿರಂತರವಾಗಿ ಪೋಷಿಸಿದ್ದಕ್ಕೆ ಹೃತ್ಪೂರ್ವಕ ವಂದನೆಗಳು.

ಸ್ಮರಣ ಸಂಚಿಕೆ ಸಮಿತಿಯ ಮೇಲ್ವಿಚಾರಣೆಯನ್ನು ಸುಸೂತ್ರವಾಗಿ ನಿರ್ವಹಿಸಿ ನಮಗೆ ಸದಾ ಆಧಾರವಾಗಿ ಸ್ಪಂದಿಸಿದ ಸಂಚಾಲಕ ಪ್ರಸನ್ನಕುಮಾರ್ ಅವರ ಸಹಾಯ, ಮೇಲ್ವಿಚಾರಣೆ ಹಾಗೂ ಮಾರ್ಗದರ್ಶನಕ್ಕೆ ನಾವು ಆಭಾರಿಗಳು. ಹಾಗೂ ಸಮ್ಮೇಳನದ ಕಾರ್ಯದರ್ಶಿ ಮೋಹನ್ ಕಡಬಾ ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ನಮಗೆ ಹೀಗೆ ಒಂದುಗೂಡಲು ಅವಕಾಶವನ್ನು ನೀಡಿದ ಹಾಗೂ ನಮ್ಮ ಸಂಪಾದಕ ಮಂಡಳಿಗೆ ಅಲ್ಲಲ್ಲಿ ಸಲಹೆ ನೀಡಿ ನೆರವಾದ ಬೃಂದಾವನ ಕಾರ್ಯಕಾರಿ ಸಮಿತಿ ಹಾಗೂ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಕೇಂದ್ರ ಸಮಿತಿಯವರಿಗೆ ನಾವು ಆಭಾರಿಯಾಗಿದ್ದೇವೆ.

ನಮ್ಮ ಸಮಿತಿಯಲ್ಲಿ ಎಂಟು ಜನರಿದ್ದೇವೆ. ಆದರೆ ಪ್ರತಿಯೊಂದು ಹಂತದಲ್ಲೂ ಸಹ ನಮ್ಮ ಕುಟುಂಬಗಳ ಸದಸ್ಯರು ಕಷ್ಟಪಟ್ಟಿದ್ದಾರೆ. ಹಸ್ತಪ್ರತಿಗಳ ಪರಿಷ್ಕರಣ, ಬೆರಳಚ್ಚಿನ ಪ್ರತಿಗಳ ರಚನೆ, ಕಂಪ್ಯೂಟರೀಕರಣ, ಲೇಖನ ಹಾಗೂ ಸಂದರ್ಶನಗಳಿಗೆ ಬೇಕಾದ ಪ್ರಶ್ನೆಗಳನ್ನು ಸಿದ್ಧಪಡಿಸುವಲ್ಲಿ, ಸಂದೇಶಗಳನ್ನು ತಿದ್ದುವಲ್ಲಿ ಹಾಗೂ ಅನುವಾದ ಮಾಡುವಲ್ಲಿ ಹಾಗೂ ಇನ್ನೂ ಹಲವಾರು ರೀತಿಯಲ್ಲಿ ನಮ್ಮ ಜೊತೆಗೆ ದುಡಿದಿದ್ದಾರೆ. ಈ ವಿಷಯಗಳಲ್ಲಿ ಅವರ ಸಹಕಾರವಿಲ್ಲದಿದ್ದರೆ ನಮ್ಮ ಕೆಲಸ ಸಾಂಗವಾಗಿ ನಡೆಯುತ್ತಿರಲಿಲ್ಲ.

ನಮ್ಮ ಲೇಖನಗಳನ್ನು ತಿದ್ದಿ ತೀಡುವಲ್ಲಿ ನಮ್ಮೊಡನೆ ಹಗಲಿರುಳು ದುಡಿದ ಹೇಮಾ ಶ್ರೀಕಂಠರವರ ಸಹಾಯವನ್ನು ನೆನಪಿಸಿಕೊಳ್ಳದಿದ್ದರೆ ಕರ್ತವ್ಯ ಲೋಪವಾದೀತು, ಅಲ್ಲದೇ ಈ ಜವಾಬ್ದಾರಿಯನ್ನು ಹೆಗಲಿಗೆತ್ತಿಕೊಂಡಾಗಿನಿಂದ ನನ್ನನ್ನು ಬೆಂಬಲಿಸಿ ಬಲವನ್ನು ತುಂಬಿರುವ ತ್ರಿವೇಣಿ-ಶ್ರೀನಿವಾಸರಾವ್ ಹಾಗೂ ವಿಜಯಾ-ಮನೋಹರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ನಮ್ಮ ತಂಡದ ಫೋಟೋಗಳನ್ನು ಸಕಾಲದಲ್ಲಿ ಒದಗಿಸಿದ ಶ್ರೀಧರ್ ಗುಡುಗುಂಟಿ ಅವರಿಗೆ, ಎಲ್ಲಾ ಕಾರ್ಯಕರ್ತರ ಫೋಟೋಗಳನ್ನು ಒದಗಿಸಿದ ಉಮೇಶ್ ಭಟ್ ಅವರಿಗೆ, ಭಾರತದ ಕಾಲೇಜುಗಳಲ್ಲಿ ಅಕ್ಕವತಿಯಿಂದ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸುವಲ್ಲಿ ಸಹಾಯ ಮಾಡುತ್ತಿರುವ ಗುರುರಾಜ್ ಕುಲಕರ್ಣಿ ಮತ್ತು ಉಮೇಶ್ ಶ್ರೀಧರ್ ಮೂರ್ತಿ ಅವರಿಗೆ, ನಾವು ನಮ್ಮ ಸ್ಮರಣ ಸಂಚಿಕೆಯ ಆಯ್ದ ಸ್ಥಳಗಳಲ್ಲಿ ಕನ್ನಡನಾಡಿನ ಮಾಹಿತಿಯನ್ನು ಚಿಕ್ಕ ಮತ್ತು ಚೊಕ್ಕದಾಗಿ ಅರ್ಪಿಸಲು ಸಹಾಯ ಮಾಡಿದ ಕುಮಾರಿ ಅಮೂಲ್ಯ ಕಟ್ಟಿಮನಿ ಹಾಗೂ ಕಾಮತ್ ಪಾಟ್‌ಪೂರಿಯನ್ನು ಉಪಯೋಗಿಸಲು ಅನುಮತಿ ನೀಡಿದ ಜ್ಯೋತ್ಸ್ನಾ ಕಾಮತ್ ಮತ್ತು ವಿಕಾಸ್ ಕಾಮತ್ ಅವರಿಗೆ, ಮತ್ತು ಅಲ್ಲಲ್ಲಿ ನೆರವು ನೀಡಿದ ಮಾಲಾ ರಾವ್ ಅವರಿಗೆ ನಮ್ಮ ಧನ್ಯವಾದಗಳು.

ಈ ಸಂಚಿಕೆಯ ವಿನ್ಯಾಸವನ್ನು ಮನೋಹರವಾಗಿ ರಚಿಸಿಕೊಟ್ಟು ಅಚ್ಚುಮಾಡಲು ನಮ್ಮೊಂದಿಗೆ ಶ್ರಮಿಸುತ್ತಿರುವ ಆಹಾ ಡಿಸೈನರ್ಸ್‌ನ ರೇಶ್ಮಾ-ನಿಮಿಶ್ ಕಡಾಕಿಯಾ ಅವರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಇಂತಹ ಗ್ರಂಥವೊಂದನ್ನು ಹೊರತರುವಾಗ ನೂರಾರು ಜನರ ಸಹಕಾರ ಮತ್ತು ಸಹಾಯ ಅತ್ಯಗತ್ಯ, ಎಲ್ಲರ ಕಾಣಿಕೆಯೂ ಅವಶ್ಯಕ, ಈ ಎಲ್ಲರ ಸಹಾಯವನ್ನು ಸ್ಮರಿಸುವುದು ನಮ್ಮ ಆಶಯವಾದರೂ ಸ್ಥಳಾವಕಾಶವಿಲ್ಲದೆ ಹಾಗೆ ಮಾಡಲಾಗುತ್ತಿಲ್ಲವಾದ್ದರಿಂದ, ಈ ನಿಟ್ಟಿನಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದವರೆಲ್ಲರಿಗೂ ನಮ್ಮ ಹೃತ್ಪೂರ್ವಕ ವಂದನೆಗಳು.

ಈ ಸಂಚಿಕೆಯಲ್ಲಿರಬಹುದಾದ ಲೋಪ-ದೋಷಗಳನ್ನು ಮನ್ನಿಸಿ ಆದರದಿಂದ ಬರಮಾಡಿಕೊಂಡು ಓದಿ ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಬರೆದು ತಿಳಿಸಿ ಉಪಕಾರ ಮಾಡುತ್ತೀರೆಂದು ಆಶಿಸುವ, ನಿಮ್ಮವ,

ಸತೀಶ್ ಹೊಸನಗರ

ಸಂಪಾದಕ ಮಂಡಳಿ: ಸತೀಶ್ ಹೊಸನಗರ, ಮೀರಾ ಪಿ.ಆರ್., ದಾಶರಥಿ ಗಟ್ಟು, ಶೈಲಾ ಪಾಟಂಕರ್, ಅಶೋಕ್ ಕಟ್ಟೀಮನಿ, ರುದ್ರ ಕುಮಾರ್, ವಿದ್ಯಾ ಮೂರ್ತಿ, ಚಂದ್ರಮೌಳಿ ಬಸೂರ್. ವಿಶೇಷ ನೆರವು : ಹೇಮಾ ಶ್ರೀಕಂಠ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more