ಐಟಿ - ಬಿಟಿ ಕಂಪನಿಗಳು ಬೆಂಗಳೂರು ಬಿಡಲಿವೆಯೇ: ಆಂಧ್ರಪ್ರದೇಶದಿಂದ ನೇರ ಗಾಳ!
ಬೆಂಗಳೂರಿನ ಮೂಲಸೌಕರ್ಯದ ಬಗ್ಗೆ ಪದೇ ಪದೇ ಚರ್ಚೆಯಾಗುತ್ತಿದೆ. ಈ ರೀತಿ ಇರುವಾಗಲೇ ಐಟಿ ಕಂಪನಿಗಳು ಬೆಂಗಳೂರು ತೊರೆಯುವುದಕ್ಕೆ ಮುಂದಾಗಿದ್ದು, ಆಂಧ್ರಪ್ರದೇಶ ಗಾಳ ಹಾಕುತ್ತಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯ ಹಾಗೂ ರಸ್ತೆಗುಂಡಿ ಹಾಗೂ ಟ್ರಾಫಿಕ್ ಜಾಮ್‌ನಂತಹ ಸಮಸ್ಯೆಗಳು ಪರಿಹಾರವಾಗದೆ ಇದ್ದರೆ ಬೆಂಗಳೂರಿನಿಂದ ಐಟಿ - ಬಿಟಿ ಕಂಪನಿಗಳು ಹೊರಗೆ ಅಥವಾ ಹೊರ ಊರುಗಳಿಗೆ ಹೋಗಲಿದೆ ಎನ್ನುವುದು ನಿಜವಾಗುವ ಹಂತಕ್ಕೆ ಬಂದು ತಲುಪಿದ್ದೇವೆ. ಬೆಂಗಳೂರಿನಲ್ಲಿ ಇದೇ ರೀತಿಯ ಸಮಸ್ಯೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳು ಬೆಂಗಳೂರು ಬಿಡುವ ಆತಂಕ ಶುರುವಾಗಿದೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಬೆಂಗಳೂರಿನ ಸಹ-ಸಂಸ್ಥಾಪಕ ಮತ್ತು CEO, ಬ್ಲ್ಯಾಕ್‌ಬಕ್ ( BlackBuck Co-Founder & CEO) ರಾಜೇಶ್ ಯಬಾಜಿ ಎನ್ನುವವರು ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರು ಬಿಡುವ ವಿಚಾರ ಮಾಡಿರುವುದಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಆಂಧ್ರಪ್ರದೇಶಕ್ಕೆ ಬನ್ನಿ ಎಂದು ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ.

ರಾಜೇಶ್ ಯಬಾಜಿ ಅವರು, ಕಳೆದ 9 ವರ್ಷಗಳಿಂದ ORR (ಬೆಳ್ಳಂದೂರು) ನಮ್ಮ "ಕಚೇರಿ + ಮನೆ" ಆಗಿದೆ. ಆದರೆ ಈಗ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟ. 💔 ನಾವು ಹೊರಗೆ ಹೋಗಲು ನಿರ್ಧರಿಸಿದ್ದೇವೆ.
ಬೆಂಗಳೂರು ಬಿಡುತ್ತಿರುವುದು ಯಾವ ಕಾರಣಕ್ಕೆ ಎಂದು ಮೂರು ಕಾರಣಗಳನ್ನೂ ಅವರು ಕೊಟ್ಟಿದ್ದಾರೆ.
1. ನನ್ನ ಸಹೋದ್ಯೋಗಿಗಳ ಸರಾಸರಿ ಪ್ರಯಾಣದ ಸಮಯವು 1.5+ ಗಂಟೆಗಳವರೆಗೆ ಹೆಚ್ಚಾಗಿದೆ (ಒಂದು ಮಾರ್ಗ)
2. ಗುಂಡಿಗಳು ಮತ್ತು ಧೂಳಿನಿಂದ ತುಂಬಿರುವ ರಸ್ತೆಗಳು, ಜೊತೆಗೆ ಅವುಗಳನ್ನು ಸರಿಪಡಿಸುವ ಇಚ್ಛಾಶಕ್ತಿ ಕಡಿಮೆಯಾಗಿದೆ.
3. 5 ವರ್ಷಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಆಂಧ್ರ ಸಚಿವ ನಾರಾ ಲೋಕೇಶ್ ಅವರು, ಹಾಯ್ ರಾಜೇಶ್, ನಿಮ್ಮ ಕಂಪನಿಯನ್ನು ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಸ್ಥಳಾಂತರಿಸಬಹುದೇ. ಇಲ್ಲಿಗೆ ಬರಲು ನಿಮಗೆ ಆಸಕ್ತಿ ಇದೆಯೇ. ನಾವು ಭಾರತದ ಟಾಪ್ 5 ಸ್ವಚ್ಛ ನಗರಗಳಲ್ಲಿ ಒಂದು ಎನ್ನುವ ರೇಟಿಂಗ್ ಪಡೆದಿದ್ದೇವೆ. ಅತ್ಯುತ್ತಮ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದೇವೆ ಮತ್ತು ಮಹಿಳೆಯರಿಗೆ ಸುರಕ್ಷಿತ ನಗರವೆಂದು ರೇಟಿಂಗ್ ಪಡೆದಿದ್ದೇವೆ. ದಯವಿಟ್ಟು ನನಗೆ DM ಕಳುಹಿಸಿ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಅಲ್ಲದೇ ಈ ಹಿಂದೆಯೂ ಆಂಧ್ರಪ್ರದೇಶದ ಸಚಿವ ನಾರಾ ಲೋಕೋಶ್ ಅವರು ಬೆಂಗಳೂರಿನ ಕಂಪನಿಗಳಿಗೆ ಗಾಳ ಹಾಕಿರುವುದು ಇದೆ.












Click it and Unblock the Notifications