1,00,00,00,00,000: ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆ: ಸಿಎಂ ಸಿದ್ದರಾಮಯ್ಯ!
ಕಲ್ಯಾಣ ಕರ್ನಾಟಕಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಸರ್ಕಾರ ಇದುವರೆಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗಾಗಿ ವಿನಿಯೋಗಿಸಿದೆ.
ಶಕ್ತಿ ಯೋಜನೆಯಡಿ 77.6 ಕೋಟಿ ಬಾರಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಇದಕ್ಕಾಗಿ 2,100 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಕಳೆದ 2 ವರ್ಷಗಳಲ್ಲಿ ಕೆಕೆಆರ್‌ಟಿಸಿಗೆ ಹೊಸದಾಗಿ 937 ಹೊಸ ಬಸ್‌ಗಳನ್ನು ಖರೀದಿಸಲಾಗಿದ್ದು, 1,873 ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
ಗೃಹಜ್ಯೋತಿ ಯೋಜನೆಯಡಿ 21.42 ಲಕ್ಷ ಗ್ರಾಹಕರು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, ಇದಕ್ಕಾಗಿ 2,328 ಕೋಟಿ ರೂ ವಿನಿಯೋಗಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 24.78 ಲಕ್ಷ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ತಲಾ 2,000 ರೂ.ಗಳಂತೆ ಒಟ್ಟು 9,650 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗಾಗಿ 3,200 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಲಾಗಿದೆ. ಯುವನಿಧಿ ಯೋಜನೆಯಡಿ 5.75 ಲಕ್ಷ ನಿರುದ್ಯೋಗಿ ಯುವಕ-ಯುವತಿಯರಿಗೆ ಒಟ್ಟು 172 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೇ ಕೆಕೆಆರ್‌ಡಿಬಿಗೆ 2013-14ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಸರ್ಕಾರದಿಂದ 24,780 ಕೋಟಿ ರೂ.ಗಳಷ್ಟು ಅನುದಾನ ಹಂಚಿಕೆಯಾಗಿದೆ. ಇದುವರೆಗೆ 14,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಅನುದಾನ ವೆಚ್ಚ ಮಾಡಲಾಗಿದೆ. 41,103 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 32,985 ಕಾಮಗಾರಿಗಳು ಪೂರ್ಣಗೊಂಡಿದೆ. 8,118 ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ.
2013-14ರಿಂದ ಬಿಡುಗಡೆಯಾದ ಅನುದಾನಗಳಲ್ಲಿ ರಸ್ತೆ ಮತ್ತು ಸಂಪರ್ಕ ವ್ಯವಸ್ಥೆಗೆ ಶೇ.50 ರಷ್ಟು, ಇನ್ನಿತರೆ ಮೂಲಸೌಕರ್ಯಗಳಿಗೆ ಶೇ.11ರಷ್ಟು ಹಾಗೂ ಶಿಕ್ಷಣ ಮತ್ತು ಆರೋಗ್ಯ ವಲಯಕ್ಕೆ ಶೇ.39ರಷ್ಟು ಹಣವನ್ನು ವಿನಿಯೋಗಿಸಲಾಗಿದೆ. ಕೆ.ಕೆ.ಆರ್.ಡಿ.ಬಿ.ಗೆ ಪ್ರಸಕ್ತ 2025-26ನೇ ಸಾಲಿಗೆ 5,000 ಕೋಟಿ ರೂಪಾಯಿಗಳನ್ನು ಒದಗಿಸಿ, ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರೆತರೂ ಇದುವರೆಗೆ ಇಲ್ಲಿ ಸಚಿವಾಲಯ ಸ್ಥಾಪನೆಯಾಗಿರಲಿಲ್ಲ. ಇದನ್ನು ಮನಗಂಡ ನಮ್ಮ ಸರ್ಕಾರವು ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಸಚಿವಾಲಯವನ್ನು ಸ್ಥಾಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಮುಂದಿನ ವಾರದೊಳಗೆ ಹುದ್ದೆಗಳ ಸಮೇತ ಅಧಿಸೂಚನೆ ಹೊರಡಿಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ 2025-26ನೇ ಸಾಲಿನಲ್ಲಿ ಒಟ್ಟು 25 ಕೋಟಿ ರೂ.ಗಳ ಅನುದಾನ ನೀಡಿದ್ದೇವೆ ಎಂದಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ 38 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಸಂಪರ್ಕ ಜಾಲವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು "ಕಲ್ಯಾಣ ಪಥ" ಯೋಜನೆಯನ್ನು ರೂಪಿಸಿದ್ದೇವೆ. ಈ ಯೋಜನೆಯ ಮೂಲಕ 1,150 ಕಿ.ಮೀ. ಗ್ರಾಮೀಣ ರಸ್ತೆಗಳನ್ನು 1,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದ್ದೇವೆ.
"ಪ್ರಗತಿ ಪಥ" ಯೋಜನೆಯಡಿ ರಾಜ್ಯಾದ್ಯಂತ 5,200 ಕೋಟಿ ರೂ. ವೆಚ್ಚದಲ್ಲಿ 7,110 ಕಿ.ಮೀ. ರಸ್ತೆಗಳ ಸುಧಾರಣೆಗೆ ಕ್ರಮವಹಿಸುತ್ತಿದ್ದೇವೆ. ಇದರಲ್ಲಿ ಕಲಬುರಗಿ ಜಿಲ್ಲೆಯೊಂದರಲ್ಲೇ 220 ಕಿ.ಮೀ. ರಸ್ತೆ ಸುಧಾರಣೆಯಾಗಲಿದೆ.
ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ: ಇನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಆಗಿದೆ ಎಂದು ಅವರು ಹೇಳಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ 1,000 ಸಾಮರ್ಥ್ಯದ ವಸತಿ ನಿಲಯ ಸಂಕೀರ್ಣವನ್ನು 78 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 2024-25 ರಿಂದ ಈವರೆಗೆ 7 ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಿಂದುಳಿದ ವರ್ಗಗಳ ಹೊಸ ವಸತಿ ನಿಲಯಗಳ ನಿರ್ಮಾಣಕ್ಕಾಗಿ 306 ಕೋಟಿ ರೂ., ಅಲ್ಪಸಂಖ್ಯಾತರ 41 ವಸತಿ ನಿಲಯ/ವಸತಿ ಶಾಲೆಗಳ ಕಟ್ಟಡ ನಿರ್ಮಾಣಕ್ಕಾಗಿ 204 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆ ವತಿಯಿಂದ 316 ಕೋಟಿ ರೂ. ವೆಚ್ಚದಲ್ಲಿ 14 ವಸತಿ ನಿಲಯ/ವಸತಿ ಶಾಲೆಗಳ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದಲ್ಲದೆ ಈ ಜಿಲ್ಲೆಗಳ ವಸತಿ ನಿಲಯ/ವಸತಿ ಶಾಲೆಗಳಿಗೆ 100 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯಗಳನ್ನು ಸಹ ಒದಗಿಸಲಾಗುತ್ತಿದೆ ಎಂದಿದ್ದಾರೆ.












Click it and Unblock the Notifications