"ಐಟಿ ಸಿಟಿ, ಸಿಲಿಕಾನ್ ವ್ಯಾಲಿ ವಿಶ್ವಖ್ಯಾತಿ ಪಡೆದ ಬೆಂಗಳೂರಿಗೆ ಕಾಂಗ್ರೆಸ್‌ನಿಂದ ಗುಂಡಿಯೂರು"!
ಬೆಂಗಳೂರು ಹಾಗೂ ಕರ್ನಾಟಕದಲ್ಲಿ ರಸ್ತೆ ಗುಂಡಿಗಳ ಸಮಸ್ಯೆಗೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳಿನಿಂದಲೂ ಹೆಚ್ಚು ಚರ್ಚೆ ಆಗುತ್ತಿದೆ. ಈ ನಡುವೆ ಬೆಂಗಳೂರಿನಿಂದ ಕೆಲವು ಪ್ರಮುಖ ಐಟಿ ಕಂಪನಿಗಳು ಬೆಂಗಳೂರು ತೊರೆಯುವ ಬಗ್ಗೆ ಮಾತನಾಡುತ್ತಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಿಂದ ಪ್ರಮುಖ ಅಥವಾ ಕೆಲವು ಐಟಿ ಕಂಪನಿಗಳು ಬೇರೆ ನಗರಗಳಿಗೆ ಹೋಗುವ ಚರ್ಚೆ ಜೋರಾಗಿದೆ. ಇದೀಗ ಈ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಕಾಂಗ್ರೆಸ್ ಅದಕ್ಷ ಆಡಳಿತಕ್ಕೆ ರೋಸಿಹೋಗಿರುವ ಕೈಗಾರಿಕೋದ್ಯಮಿಗಳು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದು 2.5 ವರ್ಷಗಳಾದರೂ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಲು "ಕೈಲಾಗದ #CM #DCM 60% ಕಮಿಷನ್ ಹೊಡೆಯುವುದರಲ್ಲೇ ಬ್ಯುಸಿಯಾಗಿದ್ದಾರೆ.

ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಎಂದು ವಿಶ್ವಖ್ಯಾತಿ ಪಡೆದಿರುವ ಬೆಂಗಳೂರಿಗೆ ಕಾಂಗ್ರೆಸ್ "ಗುಂಡಿಯೂರು" ಎಂಬ ಹಣೆ ಪಟ್ಟಿಯನ್ನು ತಂದುಕೊಟ್ಟಿದೆ. ಬೆಂಗಳೂರಿನಲ್ಲಿ ಮೂಲಸೌಕರ್ಯಗಳ ಕೊರತೆ ಕಾರಣದಿಂದ ಉದ್ಯಮಿಗಳು ಬೆಂಗಳೂರು ತೊರೆಯುತ್ತಿದ್ದಾರೆ. ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅವರ ನಿವಾಸದಲ್ಲಿ ದಿನ ಬೆಳಗಾದರೇ, ರಿಯಲ್ ಎಸ್ಟೇಟ್ ಉದ್ಯಮಿಗಳು , ಬಿಲ್ಡರ್‌ಗಳ ಭೇಟಿ, ಕಮಿಷನ್ ವ್ಯವಹಾರ ಸಾಂಗವಾಗಿ ನಡೆಯುತ್ತಿದೆ. ಯಾರಿಂದ ಎಷ್ಟು ಕಮಿಷನ್ ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ.
ಬೆಂಗಳೂರನ್ನು ಸಿಂಗಾಪುರಾ ಮಾಡುತ್ತೀನಿ ಎಂದಿದ್ದ ಡಿಕೆಶಿ ತನ್ನ ಸ್ವಂತ ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ 24*7 ಮಗ್ನರಾಗಿದ್ದಾರೆ. ಪಕ್ಕದ ರಾಜ್ಯದ ಸಚಿವರು ಬೆಂಗಳೂರಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಬೊಟ್ಟುಮಾಡಿ, ತಮ್ಮ ರಾಜ್ಯಕ್ಕೆ ಬರುವಂತೆ ಮುಕ್ತವಾಗಿ ಕರ್ನಾಟಕದ ಉದ್ಯಮಿಗಳನ್ನು ಆಹ್ವಾನಿಸುತ್ತಿದ್ದಾರೆ. ಬೆಂಗಳೂರು ಬಿಡುತ್ತೇವೆ ಎನ್ನುವ ಕಂಪನಿಗಳ ಜೊತೆ ಕನಿಷ್ಠ ಸೌಜನ್ಯಕ್ಕಾದರೂ ಯಾವೊಬ್ಬ ಅಧಿಕಾರಿಯೂ ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿರುವುದು ದುರಂತ ಎಂದು ಹೇಳಿದೆ.
ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು, ಬ್ರಾಂಡ್ ಬೆಂಗಳೂರಿಗೆ ಸುಸ್ವಾಗತ, ಇಲ್ಲಿ ಗುಂಡಿಗಳು ಪ್ರವಾಸಿ ತಾಣಗಳಾಗಿವೆ, ಕಸವು ನಗರದ ಲೋಗೋ ಮತ್ತು ಪಿಆರ್ ಬೈಕ್ ಸವಾರಿಗಳು ಹೊಸ ಆಡಳಿತ ಮಾದರಿಯಾಗಿದೆ. ಸಾಮಾನ್ಯ ಜನರು ಕಚೇರಿಯನ್ನು ತಲುಪಲು ತಮ್ಮ ಜೀವವನ್ನು ಪಣಕ್ಕಿಡುತ್ತಿದ್ದಾರೆ. ಆದರೆ ಸಚಿವರು ತಮ್ಮ ಪಿಆರ್ ಸ್ಟಂಟ್‌ಗಳಲ್ಲಿ ಘನತೆಯನ್ನು ಮಾತ್ರ ಪಣಕ್ಕಿಡುತ್ತಾರೆ. ಸ್ಕೈ ಡೆಕ್, ಎಐ ಸಿಟಿ, ಕ್ವಾಂಟಮ್ ಸಿಟಿ... ಕನಸುಗಳನ್ನು ಮಾರುವ ಆದರೆ ರಸ್ತೆಯನ್ನು ಸರಿಪಡಿಸಲು ಸಾಧ್ಯವಾಗದ ಸಚಿವರು.
ಯುನಿಕಾರ್ನ್‌ಗಳು ORR ಅನ್ನು ತೊರೆಯುತ್ತಿರುವುದು ರಾಜಕೀಯದ ಕಾರಣದಿಂದಲ್ಲ, ಆದರೆ ನಗರದಲ್ಲಿ ವಾಸಿಸಲು ಯೋಗ್ಯವಲ್ಲದ ಕಾರಣದಿಂದ. ಬೆಂಗಳೂರಿಗೆ ಬ್ರಾಂಡ್ ಬೆಂಗಳೂರಿನಂತಹ ಮತ್ತೊಂದು ಘೋಷಣೆ ಅಗತ್ಯವಿಲ್ಲ. ಅದಕ್ಕೆ ಆಡಳಿತದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications