₹ 2,95,600 ದಂಡ: ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಭರ್ಜರಿ ಕಾರ್ಯಾಚರಣೆ
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಅವರ ನಿರ್ದೇಶನದಂತೆ, ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಮಳಿಗೆಗಳ ಮೇಲೆ ಮಂಗಳವಾರ (ಸೆಪ್ಟೆಂಬರ್ 16)ರಂದು ದಾಳಿ ನಡೆಸಲಾಗಿದೆ.
ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಜಯನಗರ, ಪದ್ಮನಾಭನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ ವಿಭಾಗದ ವಿಭಾಗಗಳಲ್ಲಿ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಅಕ್ರಮವಾಗಿ ಇರಿಸಿದ್ದ ಪ್ಲಾಸ್ಟಿಕ್ ಗೋದಾಮು ಹಾಗೂ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಒಟ್ಟು 1300.75 ಕೆಜಿ ನಿಷೇಧಿತ ಏಕಬಳಕೆ ಪ್ಲಾಸ್ಟಿಕನ್ನು ಜಪ್ತಿ ಮಾಡಿ ಮಾಲೀಕರುಗಳಿಗೆ ಒಟ್ಟಾರೆಯಾಗಿ 2,95,600 ರೂಪಾಯಿ ದಂಡ ವಿಧಿಸಲಾಗಿದೆ. ದಾಳಿ ಸಂದರ್ಭದಲ್ಲಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಕಾರ್ಯಪಾಲಕ ಎಂಜಿಯರ್ ಹಾಜರಿದ್ದರು.

ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯತ್ತ ಬದ್ಧತೆಯೊಂದಿಗೆ ನಿಷಿದ್ಧ ಏಕಬಳಕೆಯ ಪ್ಲಾಸ್ಟಿಕ್‌ಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತಿದೆ. ಎಲ್ಲ ವ್ಯಾಪಾರ ಸಂಸ್ಥೆಗಳು ಮತ್ತು ನಾಗರಿಕರು ಸಹಕಾರ ನೀಡಿ, ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳುವಂತೆ ಹೇಳಲಾಗಿದೆ.
ಸಾರ್ವಜನಿಕ ಸೇವೆಗಳ ಸುಧಾರಣೆ: ವಿವಿಧ ಸ್ಥಳಗಳಿಗೆ ಆಯುಕ್ತರ ಭೇಟಿ
ಸಾರ್ವಜನಿಕ ಮೂಲಸೌಲಭ್ಯಗಳ ವ್ಯವಸ್ಥಿತ ನಿರ್ವಹಣೆ ಮತ್ತು ಜನಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಾದ ಡಾ. ರಾಜೇಂದ್ರ ಕೆ.ವಿ ಅವರು ವಿವಿಧ ವಾರ್ಡ್‌ಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸೇವೆಗಳ ಸುಧಾರಣೆಗಾಗಿ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಟ್ಟಿದ್ದಾರೆ.
ಬಸವನಗುಡಿ ಮಸ್ಟರಿಂಗ್ ಪಾಯಿಂಟ್ ಭೇಟಿ: ಬಸವನಗುಡಿಯ ಮಸ್ಟರಿಂಗ್ ಪಾಯಿಂಟ್ ಪರಿಶೀಲನೆ ನಡೆಸಿ, ವ್ಯವಸ್ಥಿತ ತ್ಯಾಜ್ಯ ನಿರ್ವಹಣೆಯ ಅಗತ್ಯತೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತ್ಯಾಜ್ಯ ನಿರ್ವಹಣೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ. ವಾರ್ಡ್ 154ರ ಪಾದಚಾರಿ ಮಾರ್ಗದ ಸ್ಥಿತಿಯನ್ನು ಪರಿಶೀಲಿಸಿದ ಆಯುಕ್ತರು, ಸಾರ್ವಜನಿಕರು ಸುಲಭವಾಗಿ ಸಂಚರಿಸುವಂತೆ, ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅಡಚಣೆ ರಹಿತವಾಗಿರಿಸಲು ಸೂಚನೆ ನೀಡಿದ್ದಾರೆ.
ಎನ್.ಆರ್. ಕಾಲೋನಿಯ ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದ ಆಯುಕ್ತರು, ಹೊರರೋಗಿಗಳ ವಿಭಾಗ (OPD)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯರೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಅಹವಾಲಗಳನ್ನು ಖುದ್ದು ಆಲಿಸಿದರು.
ಕೆಂಪಾಂಬುದಿ ಕೆರೆ ಪರಿಶೀಲನೆ: ಪರಿಸರ ಸಂರಕ್ಷಣೆಯ ಉದ್ದೇಶದಿಂದ ಆಯುಕ್ತರು ಕೆಂಪಾಂಬುದಿ ಕೆರೆ ಸ್ಥಳಕ್ಕೆ ಭೇಟಿ ನೀಡಿ, ಕೆರೆಯ ಸ್ವಚ್ಛತೆ, ನೀರಿನ ಮಟ್ಟ ಹಾಗೂ ಸುತ್ತಲಿನ ಪ್ರದೇಶದ ಅಭಿವೃದ್ಧಿಯ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ. ವಾರ್ಡ್ 163ರಲ್ಲಿನ ಇಂದಿರಾ ಕ್ಯಾಂಟೀನಿಗೆ ಭೇಟಿ ನೀಡಿದ ಆಯುಕ್ತರು, ಅಲ್ಲಿ ಆಹಾರ ಸೇವಿಸುತ್ತಿದ್ದ ಸಾರ್ವಜನಿಕರೊಂದಿಗೆ ನೇರವಾಗಿ ಮಾತನಾಡಿದರು. ಜನರಿಂದ ಸೇವೆಯ ಗುಣಮಟ್ಟದ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಿ, ಇನ್ನಷ್ಟು ಉತ್ತಮ ಸೇವೆ ನೀಡಲು ಆದೇಶಿಸಿದ್ದಾರೆ.
ಪಾಲಿಕೆಯ ಅಧಿಕಾರಿಗಳೊಂದಿಗಿನ ಸಭೆ: ಪಾಲಿಕೆಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅಪರ ಆಯುಕ್ತರಾದ ದಿಗ್ವಿಜಯ್ ಬೋಡ್ಕೆ, ಜಂಟಿ ಆಯುಕ್ತರಾದ ಸಂಗಪ್ಪ, ಆರತಿ ಆನಂದ್, ಮುಖ್ಯ ಅಭಿಯಂತರರು, ಉಪ ಆಯುಕ್ತರು ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications