ಡಬಲ್ ಡೆಕ್ಕರ್ ಮೆಟ್ರೋ ಬಂದ್ರೆ ಟ್ರಾಫಿಕ್ ಕಮ್ಮಿ ಆಗಲ್ಲ, ಬದಲಿಗೆ ಈ ಸಮಸ್ಯೆ ಹೆಚ್ಚಾಗುತ್ತೆ: ಶಾಕಿಂಗ್ ವರದಿ ಕೊಟ್ಟ IISc

ಬೆಂಗಳೂರು: ನಮ್ಮ ಮೆಟ್ರೋ ಮೂರನೇ ಹಂತದ (Phase-3) ಮಾರ್ಗಗಳಲ್ಲಿ ಮೇಲ್ಸೇತುವೆ ರಸ್ತೆಗಳನ್ನು ಒಗ್ಗೂಡಿಸುವ (ಡಬಲ್ ಡೆಕ್ಕರ್ ಮಾದರಿ) ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಭಾರತೀಯ ವಿಜ್ಞಾನ ಸಂಸ್ಥೆ (IISc) ತಾಂತ್ರಿಕ ಆಕ್ಷೇಪ ಎತ್ತಿದೆ. ಈ ಡಬಲ್ ಡೆಕ್ಕರ್ ಮಾದರಿಯಿಂದಾಗಿ ಸಾರ್ವಜನಿಕ ಸಾರಿಗೆಯ ಮೂಲ ಉದ್ದೇಶವೇ ಹಳ್ಳ ಹಿಡಿಯಲಿದ್ದು, ಯೋಜನೆಯ ವೆಚ್ಚ ಬರೋಬ್ಬರಿ 2,864 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂದು ಎಚ್ಚರಿಸಿದೆ.

ಐಐಎಸ್‌ಸಿಯ ಸುಸ್ಥಿರ ಸಾರಿಗೆ ಪ್ರಯೋಗಾಲಯ ನಡೆಸಿದ ಸಾರಿಗೆ ಮಾದರಿ ಅಧ್ಯಯನದ ಆಧಾರದ ಮೇಲೆ, ಸಂಸ್ಥೆಯ ಸಾರಿಗೆ ತಜ್ಞ ಪ್ರೊ.ಆಶಿಶ್ ವರ್ಮಾ ಅವರು ಜೂನ್ 28ರಂದು ಈ ತಾಂತ್ರಿಕ ವರದಿಯನ್ನು ಮಂಡಿಸಿದ್ದಾರೆ. ಈ ವರದಿ ಈಗಾಗಲೇ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯಕ್ಕೆ (MoHUA) ಸಲ್ಲಿಸಲಾಗಿದೆ. 2041ರ ಹೊತ್ತಿಗೆ ಕೇವಲ ಮೆಟ್ರೋ ನಿರ್ಮಿಸಿದರೆ ಏನಾಗುತ್ತದೆ ಮತ್ತು ಮೆಟ್ರೋ ಜೊತೆಗೆ ರಸ್ತೆ ನಿರ್ಮಿಸಿದರೆ (ಡಬಲ್ ಡೆಕ್ಕರ್) ಏನಾಗುತ್ತದೆ ಎಂಬ ಎರಡು ವಿಭಿನ್ನ ಆಯಾಮಗಳನ್ನು ಈ ವರದಿಯಲ್ಲಿ ಹೋಲಿಕೆ ಮಾಡಲಾಗಿದೆ.

Metro Phase 3

ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ, ಖಾಸಗಿ ವಾಹನಗಳ ಹಾವಳಿ ಹೆಚ್ಚಳ

ವರದಿಯ ಪ್ರಕಾರ, ಮೆಟ್ರೋ ಮಾರ್ಗದ ಜೊತೆಯಲ್ಲೇ ರಸ್ತೆ ಸಾಮರ್ಥ್ಯವನ್ನೂ ವಿಸ್ತರಿಸುವುದರಿಂದ ಜನರು ಸಾರ್ವಜನಿಕ ಸಾರಿಗೆಯನ್ನು ಬಿಟ್ಟು ಸ್ವಂತ ವಾಹನಗಳ ಬಳಕೆಗೆ ಮುಂದಾಗುತ್ತಾರೆ. ಇದರಿಂದಾಗಿ ಮೆಟ್ರೋ ಫೇಸ್-3 ರ ಎರಡು ಪ್ರಮುಖ ಕಾರಿಡಾರ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ. ಡಬಲ್ ಡೆಕ್ಕರ್ ನಿರ್ಮಾಣವಾದರೆ ಒಟ್ಟು ಪ್ರಯಾಣದಲ್ಲಿ ಮೆಟ್ರೋ ಪಾಲಿನ ಹಂಚಿಕೆ ಶೇ. 28.1ರಿಂದ ಶೇ. 26.7ಕ್ಕೆ ಕುಸಿಯಲಿದೆ. ಹಾಗೆಯೇ ಬಸ್ ಪ್ರಯಾಣಿಕರ ಪಾಲು ಶೇ. 29.24ರಿಂದ ಶೇ. 22.84ಕ್ಕೆ ಇಳಿಕೆಯಾಗಲಿದೆ. ಇದಕ್ಕೆ ತದ್ವಿರುದ್ಧವಾಗಿ, ಕಾರುಗಳ ಬಳಕೆ ಶೇ. 3.65ರಿಂದ ಶೇ. 7.45ಕ್ಕೆ ಮತ್ತು ದ್ವಿಚಕ್ರ ವಾಹನಗಳ ಬಳಕೆ ಶೇ. 19.59ಕ್ಕೆ ಏರಿಕೆಯಾಗಲಿದೆ.

ಪ್ರತಿದಿನ 11,000 ಪ್ರಯಾಣಿಕರ ನಷ್ಟ

ಈ ರಸ್ತೆ ಕಾರಿಡಾರ್‌ನಿಂದಾಗಿ ಮೆಟ್ರೋ ಪ್ರತಿದಿನ ಸುಮಾರು 11,000 ಪ್ರಯಾಣಿಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಮೆಟ್ರೋದ ಆದಾಯ ಗಳಿಕೆಯನ್ನು ಕುಗ್ಗಿಸುವುದಲ್ಲದೆ, ದೀರ್ಘಾವಧಿಯಲ್ಲಿ ಜನರು ಖಾಸಗಿ ವಾಹನಗಳ ಮೇಲೆಯೇ ಅವಲಂಬಿತರಾಗುವಂತೆ ಮಾಡುತ್ತದೆ. ಇದರೊಂದಿಗೆ ಉದ್ದೇಶಿತ ಉತ್ತರ-ದಕ್ಷಿಣ ಸುರಂಗ ರಸ್ತೆ (Tunnel Road) ಮತ್ತು ಡಬಲ್ ಡೆಕ್ಕರ್ ಯೋಜನೆಗಳು ಒಟ್ಟಾಗಿ ಸೇರಿದರೆ ಸಾರ್ವಜನಿಕ ಸಾರಿಗೆ ಹಾಗೂ ಪರಿಸರ ಸ್ನೇಹಿ ನಡಿಗೆಯ ಒಟ್ಟು ಪಾಲು 2041ರ ವೇಳೆಗೆ ಶೇ.75.56ಕ್ಕೆ ಕುಸಿಯಲಿದೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.

ಖಾಸಗಿ ವಾಹನಗಳ ಸಂಚಾರ ಹೆಚ್ಚಾಗುವುದರಿಂದ ವಾಹನಗಳು ಕ್ರಮಿಸುವ ಒಟ್ಟು ಕಿಲೋಮೀಟರ್ ಹೆಚ್ಚಾಗಿ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಡಬಲ್ ಡೆಕ್ಕರ್ ಯೋಜನೆಯಿಂದಾಗಿ ಪ್ರತಿದಿನ ಸುಮಾರು 7,000 ಲೀಟರ್ ಹೆಚ್ಚುವರಿ ಇಂಧನ ವ್ಯಯವಾಗಲಿದ್ದು, ಸಾರ್ವಜನಿಕರ ಜೇಬಿಗೆ ದಿನಕ್ಕೆ 6.45 ಲಕ್ಷ ರೂಪಾಯಿಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ. ಇಷ್ಟೇ ಅಲ್ಲದೆ ಪ್ರತಿದಿನ ಸುಮಾರು 17 ಟನ್‌ನಷ್ಟು ಕಾರ್ಬನ್ ಡೈಆಕ್ಸೈಡ್ (CO2) ಅನಿಲವು ವಾತಾವರಣಕ್ಕೆ ಸೇರಲಿದೆ. ಇದರೊಂದಿಗೆ ಕಾರ್ಬನ್ ಮೊನಾಕ್ಸೈಡ್, ಹೈಡ್ರೋಕಾರ್ಬನ್ ಮತ್ತು ಸಾರಜನಕ ಆಕ್ಸೈಡ್‌ಗಳಂತಹ ಅಪಾಯಕಾರಿ ಮಾಲಿನ್ಯಕಾರಕಗಳು ಹೆಚ್ಚಾಗಲಿವೆ. ಇದು ಮಾಲಿನ್ಯ ಮತ್ತು ಟ್ರಾಫಿಕ್ ಕಡಿಮೆ ಮಾಡುವ ಮೆಟ್ರೋದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಪ್ರೊ.ಆಶಿಶ್ ವರ್ಮಾ ತಿಳಿಸಿದ್ದಾರೆ.

Namma Metro: ಮೂರು ಮೆಟ್ರೋ ಮಾರ್ಗದಲ್ಲಿ ಶನಿವಾರ ಬೆಳಗ್ಗೆ 4 ಗಂಟೆಗೇ ಮೆಟ್ರೋ ಸಂಚಾರ
Namma Metro: ಮೂರು ಮೆಟ್ರೋ ಮಾರ್ಗದಲ್ಲಿ ಶನಿವಾರ ಬೆಳಗ್ಗೆ 4 ಗಂಟೆಗೇ ಮೆಟ್ರೋ ಸಂಚಾರ

ಯೋಜನಾ ವೆಚ್ಚ 2,864 ಕೋಟಿ ರೂ. ಹೆಚ್ಚಳ

ವರದಿಯ ಪ್ರಕಾರ ಎಲಿವೇಟೆಡ್ ರಸ್ತೆಗಳನ್ನು ಮೆಟ್ರೋದೊಂದಿಗೆ ಸೇರಿಸುವುದರಿಂದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮೇಲಿನ ಆರ್ಥಿಕ ಹೊರೆ ವಿಪರೀತವಾಗಿ ಹೆಚ್ಚಾಗಲಿದೆ. ಕೇವಲ ಮೆಟ್ರೋ ಮಾತ್ರ ನಿರ್ಮಿಸಿದರೆ ತಗಲುವ ವೆಚ್ಚ 6,683.8 ಕೋಟಿ ರೂಪಾಯಿಗಳಾಗಿದ್ದರೆ, ಡಬಲ್ ಡೆಕ್ಕರ್ ಮಾದರಿಯಿಂದಾಗಿ ಈ ವೆಚ್ಚ 9,547.34 ಕೋಟಿ ರೂಪಾಯಿಗಳಿಗೆ ಏರಿಕೆಯಾಗಲಿದೆ. ಅಂದರೆ ಬರೋಬ್ಬರಿ 2,863.54 ಕೋಟಿ ರೂಪಾಯಿಗಳ ಹೆಚ್ಚುವರಿ ವೆಚ್ಚವಾಗಲಿದೆ. ಡಬಲ್ ಡೆಕ್ಕರ್ ವಿನ್ಯಾಸಕ್ಕಾಗಿ ಗಟ್ಟಿಮುಟ್ಟಾದ ಪಾಯ, ಬೃಹತ್ ಪಿಲ್ಲರ್‌ಗಳು, ಎತ್ತರದ ನಿಲ್ದಾಣದ ರಚನೆಗಳು ಹಾಗೂ ಮಲ್ಟಿಮಾಡಲ್ ಇಂಟಿಗ್ರೇಷನ್ ಕೆಲಸಗಳು ಬೇಕಾಗುವುದರಿಂದ ಈ ವೆಚ್ಚ ಹೆಚ್ಚಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಆರ್ಥಿಕ ಮಾನದಂಡಗಳ ಪ್ರಕಾರ ಯಾವುದೇ ಮೆಟ್ರೋ ಯೋಜನೆಗೆ ಕನಿಷ್ಠ ಶೇ. 14ರಷ್ಟು ಆರ್ಥಿಕ ಆಂತರಿಕ ಆದಾಯದ ದರ ಇರಬೇಕು. ಆದರೆ ಈ ಡಬಲ್ ಡೆಕ್ಕರ್ ಯೋಜನೆಯಲ್ಲಿ BMRCL ಹೂಡಿಕೆಯ ಮೇಲಿನ EIRR ಕೇವಲ ಶೇ. 9.07ರಷ್ಟಿರುತ್ತದೆ. ರಸ್ತೆ ಸಂಸ್ಥೆಯ ಹೂಡಿಕೆಯನ್ನೂ ಸೇರಿಸಿದರೆ ಇದು ಶೇ. 5.43ಕ್ಕೆ ಕುಸಿಯುತ್ತದೆ. ಹೀಗಾಗಿ ಈ ಯೋಜನೆ ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ಐಐಎಸ್‌ಸಿ ಹೇಳಿದೆ. ಕೇಂದ್ರ ಸರ್ಕಾರದಿಂದ ಹೊಸದಾಗಿ ಅನುಮೋದನೆ ಪಡೆಯುವುದು ಕಡ್ಡಾಯವಾಗಿದೆ.

ಇಷ್ಟೆಲ್ಲಾ ಆಕ್ಷೇಪಗಳಿದ್ದರೂ, ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆ ಮತ್ತು ರಸ್ತೆ ಅಗಲೀಕರಣಕ್ಕೆ ಇರುವ ಮಿತಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಮಾದರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಫೇಸ್-3ರ ಅಡಿಯಲ್ಲಿ ಪಶ್ಚಿಮ ಹೊರವರ್ತುಲ ರಸ್ತೆ ಮತ್ತು ಮಾಗಡಿ ರಸ್ತೆಯುದ್ದಕ್ಕೂ ಸುಮಾರು 44.6 ಕಿಲೋಮೀಟರ್ ಉದ್ದದ ಡಬಲ್ ಡೆಕ್ಕರ್ ಮಾರ್ಗವನ್ನು ಯೋಜಿಸಲಾಗಿದೆ. ಇದರೊಂದಿಗೆ ಹೆಚ್ಚುವರಿ 37 ಕಿಮೀ ಡಬಲ್ ಡೆಕ್ಕರ್ ರಸ್ತೆಗಾಗಿ 9,700 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರವೇ ಸಂಪೂರ್ಣವಾಗಿ ಭರಿಸಲು ಒಪ್ಪಿಗೆ ನೀಡಿದೆ.

ಈ ಯೋಜನೆಯ ಮೂಲ ವಿನ್ಯಾಸ ಬದಲಾಗಿರುವುದರಿಂದ ಕೇಂದ್ರದ ಅನುಮತಿ ಅಗತ್ಯವಿದ್ದು, ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಕಾರಿಡಾರ್‌ನ 18.5 ಕಿಮೀ ಉದ್ದದ ಆರೆಂಜ್ ಲೈನ್ ಸಿವಿಲ್ ಕಾಮಗಾರಿಗಳಿಗಾಗಿ ಬಿಎಂಆರ್‌ಸಿಎಲ್ ಜನವರಿಯಲ್ಲೇ ಟೆಂಡರ್ ಆಹ್ವಾನಿಸಿದ್ದು, ಒಪ್ಪಂದ ಇನ್ನೂ ಅಂತಿಮವಾಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+