1000 ಕಾರ್ಮಿಕರ ಕೆಲಸ ಕಸಿದ 50 ರೋಬೋಟ್‌ಗಳು: ಜನರಲ್ ಮೋಟಾರ್ಸ್ ವಿರುದ್ಧ ಭುಗಿಲೆದ್ದ ಕಾರ್ಮಿಕರ ಆಕ್ರೋಶ
ಅಮೆರಿಕದ ಪ್ರಮುಖ ಆಟೋಮೊಬೈಲ್ ಕಂಪನಿಯಾದ ಜನರಲ್ ಮೋಟಾರ್ಸ್ ತನ್ನ ಮಿಚಿಗನ್‌ನ ಫ್ಯಾಕ್ಟರಿ ಜೀರೋ ಅಸೆಂಬ್ಲಿ ಘಟಕದಲ್ಲಿ 50 'ಕೋಬೋಟ್'ಗಳನ್ನು ನಿಯೋಜಿಸಿದೆ. ಇದರ ಬೆನ್ನಲ್ಲೇ ಕಂಪನಿಯು ಅದೇ ಘಟಕದಲ್ಲಿ ಕೆಲಸ ಮಾಡುತ್ತಿದ್ದ 1,000ಕ್ಕೂ ಹೆಚ್ಚು ಕಾರ್ಮಿಕರನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.
ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವ ಮತ್ತು ಕೆಲಸದಲ್ಲಿ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮನುಷ್ಯರ ಬದಲಿಗೆ ಯಂತ್ರಗಳನ್ನು ಬಳಸುತ್ತಿರುವ ಕಂಪನಿಯ ಈ ನಿರ್ಧಾರವು ಈಗ ಕಾರ್ಮಿಕ ಸಂಘಟನೆಗಳ ತೀವ್ರ ಟೀಕೆಗೆ ಗುರಿಯಾಗಿದೆ.

ಜನರಲ್ ಮೋಟಾರ್ಸ್ ಉದ್ಯೋಗ ಕಡಿತದ ಸರಣಿ
ಆಟೋಬ್ಲಾಗ್‌ನ ವರದಿಯ ಪ್ರಕಾರ, ಕೋಬೋಟ್‌ಗಳು ಪ್ರಸ್ತುತ ಉತ್ಪಾದನಾ ಘಟಕದಲ್ಲಿ ಮಾನವ ಉದ್ಯೋಗಿಗಳೊಂದಿಗೆ ಕೆಲಸ ಮಾಡುತ್ತಿವೆ. ವಾಹನಗಳಿಗೆ ಬಾಡಿ ಪ್ಯಾನೆಲ್‌ಗಳನ್ನು ಜೋಡಿಸುವಂತಹ ಪ್ರಮುಖ ಕಾರ್ಯಗಳಲ್ಲಿ ಇವು ಸಹಾಯ ಮಾಡುತ್ತಿವೆ. ಆದರೆ, ಈ ತಂತ್ರಜ್ಞಾನದ ಅಳವಡಿಕೆಯಿಂದಾಗಿ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
ಜನರಲ್ ಮೋಟಾರ್ಸ್ ಕೇವಲ ಫ್ಯಾಕ್ಟರಿ ಕಾರ್ಮಿಕರನ್ನು ಮಾತ್ರವಲ್ಲದೆ, ಇತರೆ ವಿಭಾಗಗಳ ಉದ್ಯೋಗಿಗಳನ್ನೂ ಕಡಿತಗೊಳಿಸುತ್ತಿದೆ. ಮೇ ತಿಂಗಳಲ್ಲಿ ಕಂಪನಿಯು ತನ್ನ ಐಟಿ ವಿಭಾಗದಿಂದ 600ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು (ವಿಭಾಗದ ಶೇ. 10ರಷ್ಟು) ವಜಾಗೊಳಿಸಿತ್ತು. ಇದಕ್ಕೂ ಮೊದಲು, ಅಕ್ಟೋಬರ್ 2025ರಲ್ಲಿ 200ಕ್ಕೂ ಹೆಚ್ಚು ಕಂಪ್ಯೂಟರ್-ಏಡೆಡ್ ಡಿಸೈನ್ ಎಂಜಿನಿಯರ್‌ಗಳನ್ನು ಕೂಡ ಮನೆಗೆ ಕಳುಹಿಸಿತ್ತು. ಎಲೆಕ್ಟ್ರಿಕ್ ವಾಹನಗಳಿಗೆ ನಿರೀಕ್ಷೆಗಿಂತ ಕಡಿಮೆ ಬೇಡಿಕೆ ಇರುವುದರಿಂದ ಕಂಪನಿಯು ತನ್ನ ಉತ್ಪಾದನಾ ಕಾರ್ಯತಂತ್ರವನ್ನು ಬದಲಾಯಿಸುತ್ತಿದೆ.
ಕಾರ್ಮಿಕರ ಬದಲಿಗೆ ರೋಬೋಟ್: ಜನರಲ್ ಮೋಟಾರ್ಸ್ ಸಮರ್ಥನೆ
ರೋಬೋಟ್‌ಗಳ ಅಳವಡಿಕೆಯನ್ನು ಸಮರ್ಥಿಸಿಕೊಂಡಿರುವ ಜನರಲ್ ಮೋಟಾರ್ಸ್, "ಈ ರೋಬೋಟ್‌ಗಳು ಕಾರ್ಮಿಕರನ್ನು ಬದಲಾಯಿಸುವ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ಅವರಿಗೆ ಬೆಂಬಲ ನೀಡಲು ಮಾತ್ರ ಅಳವಡಿಸಲಾಗಿದೆ" ಎಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ವಕ್ತಾರ ಕೆವಿನ್ ಕೆಲ್ಲಿ, "ನಮ್ಮ ಕಾರ್ಯಾಚರಣೆಗಳಲ್ಲಿ ಹೆಚ್ಚು ಸುಧಾರಿತ ತಂತ್ರಜ್ಞಾನವನ್ನು ತರುವ ವ್ಯಾಪಕ ಪ್ರಯತ್ನದ ಭಾಗವಾಗಿ ನಾವು ಉತ್ಪಾದನಾ ಘಟಕಗಳಾದ್ಯಂತ ಕೋಬೋಟ್‌ಗಳನ್ನು ಸ್ಥಾಪಿಸುತ್ತಿದ್ದೇವೆ. ಫ್ಯಾಕ್ಟರಿ ಜೀರೋದಲ್ಲಿ, ಸುರಕ್ಷತೆ ಮತ್ತು ದಕ್ಷತೆಯನ್ನು ಸುಧಾರಿಸಲು ಇವುಗಳನ್ನು ನಮ್ಮ ತಂಡದ ಜೊತೆಗೆ ಅಳವಡಿಸಲಾಗುತ್ತಿದೆ. ಇದರಿಂದ ನಮ್ಮ ಕಾರ್ಯಾಚರಣೆಗಳು ಹೆಚ್ಚು ಸ್ಪರ್ಧಾತ್ಮಕವಾಗಿವೆ" ಎಂದು ವಿವರಿಸಿದ್ದಾರೆ. ತಾತ್ಕಾಲಿಕವಾಗಿ ಕಾರ್ಮಿಕರನ್ನ ವಜಾಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದರೂ, ಆ ಕಾರ್ಮಿಕರು ಯಾವಾಗ ಮತ್ತೆ ಕೆಲಸಕ್ಕೆ ಮರಳಬಹುದು ಎಂಬುದರ ಬಗ್ಗೆ ಕೆಲ್ಲಿ ಯಾವುದೇ ನಿರ್ದಿಷ್ಟ ಸಮಯವನ್ನು ನೀಡಿಲ್ಲ.
ಯಂತ್ರಗಳ ವಿರುದ್ಧ ಯುಎಡಬ್ಲ್ಯೂ ಕಾರ್ಮಿಕರ ಪ್ರತಿಭಟನೆ
ಮಾನವ ಕಾರ್ಮಿಕರ ಬದಲಿಗೆ ರೋಬೋಟ್‌ಗಳನ್ನು ನಿಯೋಜಿಸುತ್ತಿರುವುದನ್ನು ಯುನೈಟೆಡ್ ಆಟೋ ವರ್ಕರ್ಸ್ ತೀವ್ರವಾಗಿ ಖಂಡಿಸಿದೆ. ಆಟೊಮೇಷನ್ ಪ್ರಯತ್ನಗಳು ಕಾರ್ಮಿಕರ ಅವಕಾಶಗಳನ್ನು ಕಸಿದುಕೊಳ್ಳುತ್ತಿವೆ ಎಂದು ಒಕ್ಕೂಟ ಆರೋಪಿಸಿದೆ.
"ನಮ್ಮ ಮನುಷ್ಯಶಕ್ತಿಯನ್ನು ನಮ್ಮಿಂದ ಕಸಿದುಕೊಳ್ಳಲಾಗುತ್ತಿದೆ. ನಮ್ಮ ಘಟಕಗಳಲ್ಲಿ ಕೋಬೋಟ್‌ಗಳನ್ನು ಅಳವಡಿಸಿರುವುದು ನಮಗೆ ತೀವ್ರ ಅಸಮಾಧಾನ ತಂದಿದೆ" ಎಂದು ಯುಎಡಬ್ಲ್ಯೂ ಲೋಕಲ್ 22 ಅಧ್ಯಕ್ಷ ಜೇಮ್ಸ್ ಕಾಟನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಟೋಮೊಬೈಲ್ ಉದ್ಯಮದಲ್ಲಿ ಆಟೊಮೇಷನ್ ಮತ್ತು ಸವಾಲುಗಳು
ಐಟಿ ಮತ್ತು ಆಟೊಮೊಬೈಲ್ ವಲಯಗಳಲ್ಲಿ ಪ್ರಸ್ತುತ ಸಾಂಪ್ರದಾಯಿಕ ಉದ್ಯೋಗಗಳನ್ನು ಕಡಿತಗೊಳಿಸಿ, ಎಐ ಮತ್ತು ಆಟೊಮೇಷನ್ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲಾಗುತ್ತಿದೆ. ಉದ್ಯಮ ವಿಶ್ಲೇಷಕರು ಈ ಬೆಳವಣಿಗೆಯನ್ನು "ಸ್ಕಿಲ್ಸ್ ಸ್ವಾಪ್" ಎಂದು ಕರೆದಿದ್ದಾರೆ. ಇದಕ್ಕೆ ಸ್ಪಷ್ಟ ಉದಾಹರಣೆಯಾಗಿ, ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಕುಸಿಯುತ್ತಿದ್ದರೂ ಜನರಲ್ ಮೋಟಾರ್ಸ್ ಕಂಪನಿಯು 2026ರ ಮೊದಲ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕಿಂತ ಶೇ. 22ರಷ್ಟು ಹೆಚ್ಚು, ಅಂದರೆ 4.25 ಬಿಲಿಯನ್ ಡಾಲರ್ ಭಾರಿ ಲಾಭ ಗಳಿಸಿದೆ.
ಈ ಆಟೊಮೇಷನ್ ಬೆಳವಣಿಗೆಯನ್ನು ಯುಎಡಬ್ಲ್ಯೂ ಅಧ್ಯಕ್ಷ ಶಾನ್ ಫೈನ್ ತೀವ್ರವಾಗಿ ವಿರೋಧಿಸಿದ್ದು, ಇದನ್ನು "ಮಾನವೀಯತೆಗಾಗಿ ನಡೆಯುತ್ತಿರುವ ಹೋರಾಟ" ಎಂದು ಬಣ್ಣಿಸಿದ್ದಾರೆ. ಕಂಪನಿಗಳ ಉತ್ಪಾದನೆ ಮತ್ತು ಲಾಭ ಹಿಂದೆಂದಿಗಿಂತಲೂ ಹೆಚ್ಚಾಗಿದ್ದರೂ ಕಾರ್ಮಿಕರಿಗೆ ಅದರ ಸರಿಯಾದ ಲಾಭ ಸಿಗುತ್ತಿಲ್ಲ ಹಾಗೂ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಎಐ ಅನ್ನು ಬಳಸಬಾರದು ಎಂದು ಅವರು ಆಗ್ರಹಿಸಿದ್ದಾರೆ.












Click it and Unblock the Notifications