ರಿಯಾಲಿಟಿ ಶೋ ವೇದಿಕೆಯಲ್ಲೇ ಡಿವೋರ್ಸ್ ಘೋಷಿಸಿದ ಖ್ಯಾತ ನಟಿ: ಒಂದು ವರ್ಷದ ಹಿಂದಿನ ಆ ಕಟು ಸತ್ಯ ರಿವೀಲ್
ಸಾಮಾನ್ಯವಾಗಿ ಸೆಲೆಬ್ರಿಟಿಗಳ ಡಿವೋರ್ಸ್ ವಿಚಾರ ಮೊದಲಿಗೆ ಗಾಸಿಪ್ ಆಗಿರುತ್ತೆ. ಕೊನೆಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಕನ್ಫರ್ಮ್ ಮಾಡ್ತಾರೆ. ಆದರೆ ಇಲ್ಲೊಬ್ಬರು ನಟಿ ರಿಯಾಲಿಟಿ ಶೋ ವೇದಿಕೆಯಲ್ಲೇ ತಮ್ಮ ಡಿವೋರ್ಸ್ ಘೋಷಿಸುವ ಮೂಲಕ ಶಾಕ್ ಕೊಟ್ಟಿದ್ದಾರೆ. ರಿಯಾಲಿಟಿ ಶೋನ ಮೊದಲ ಸಂಚಿಕೆಯಲ್ಲೇ ಸ್ಪರ್ಧಿಯಾಗಿ ಬಂದಿರುವ ಆ ಖ್ಯಾತ ನಟಿ, ತಾವು ಮತ್ತು ತಮ್ಮ ಪತಿ ಅಧಿಕೃತವಾಗಿ ವಿಚ್ಛೇದನ ಪಡೆಯುತ್ತಿರುವುದಾಗಿ ವೇದಿಕೆಯ ಮೇಲೆಯೇ ಘೋಷಿಸಿದ್ದಾರೆ. ಕಳೆದ ಒಂದು ವರ್ಷದಿಂದ ಇಬ್ಬರೂ ರಹಸ್ಯವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಕಟು ಸತ್ಯವನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಮೂಲಕ ಆ ನಟಿ, ಅಭಿಮಾನಿಗಳನ್ನು ಬೆಚ್ಚಿಬೀಳುವಂತೆ ಮಾಡಿದ್ದಾರೆ. ಆದರೂ ಇಬ್ಬರ ನಡುವೆ ಯಾವುದೇ ದ್ವೇಷವಿಲ್ಲದೆ ಪರಸ್ಪರ ಒಪ್ಪಿಗೆಯಿಂದಲೇ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಹೌದು, ಕಿರುತೆರೆಯ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದ್ದ ನಟ ಗೌರವ್ ಖನ್ನಾ (ಬಿಗ್ ಬಾಸ್ 19 ವಿಜೇತ) ಮತ್ತು ನಟಿ ಆಕಾಂಕ್ಷಾ ಚಮೋಲಾ ಅವರ ವೈವಾಹಿಕ ಜೀವನ ಅಧಿಕೃತವಾಗಿ ಅಂತ್ಯಗೊಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ಜನಪ್ರಿಯ ರಿಯಾಲಿಟಿ ಶೋ 'ಲಾಕ್ ಅಪ್ ಸೀಸನ್ 2' (Lock Upp Season 2) ವೇದಿಕೆಯ ಮೇಲೆ ಸ್ವತಃ ಆಕಾಂಕ್ಷಾ ಚಮೋಲಾ ಅವರೇ ತಮ್ಮ ಡಿವೋರ್ಸ್ ವಿಚಾರ ಬಹಿರಂಗಪಡಿಸುವ ಮೂಲಕ ಇಡೀ ಕಿರುತೆರೆ ವೀಕ್ಷಕರಿಗೆ ಭಾರಿ ಶಾಕ್ ನೀಡಿದ್ದಾರೆ.

'ಲಾಕ್ ಅಪ್ 2' ಶೋನ ಮೊದಲ ಸಂಚಿಕೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿರುವ ಆಕಾಂಕ್ಷಾ ಅವರಿಗೆ ತಮ್ಮ ಜೀವನದ ರಹಸ್ಯವೊಂದನ್ನು ಬಿಚ್ಚಿಡುವಂತೆ ಕೇಳಲಾಗಿತ್ತು. ಈ ವೇಳೆ ವೇದಿಕೆಯಲ್ಲಿದ್ದ ಶೋನ ನಿರೂಪಕರಾದ ಫರಾ ಖಾನ್ ಮತ್ತು ರಿತೇಶ್ ದೇಶ್‌ಮುಖ್ ಹಾಗೂ ಇಡೀ ಪ್ರೇಕ್ಷಕ ವರ್ಗವೇ ಬೆಚ್ಚಿಬೀಳುವಂತಹ ಸತ್ಯವನ್ನು ಅವರು ಒಪ್ಪಿಕೊಂಡರು. "ನಾನು ಮತ್ತು ಗೌರವ್ ವಿಚ್ಛೇದನ ಪಡೆಯುತ್ತಿದ್ದೇವೆ. ಕಳೆದ ಒಂದು ವರ್ಷದಿಂದಲೇ ನಾವು ಪರಸ್ಪರ ದೂರವಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಈ ವಿಷಯವನ್ನು ನಾವು ಇಷ್ಟು ದಿನ ಸಾರ್ವಜನಿಕವಾಗಿ ಎಲ್ಲಿಯೂ ಹಂಚಿಕೊಂಡಿರಲಿಲ್ಲ" ಎಂದು ಆಕಾಂಕ್ಷಾ ಹೇಳಿದ್ದಾರೆ.
ವಿಚ್ಛೇದನಕ್ಕೆ ಅಸಲಿ ಕಾರಣವೇನು?
ಸಾಮಾನ್ಯವಾಗಿ ಸೆಲೆಬ್ರಿಟಿಗಳ ಡಿವೋರ್ಸ್ ಎಂದರೆ ಅಲ್ಲಿ ಆರೋಪ-ಪ್ರತ್ಯಾರೋಪಗಳು ಕೇಳಿಬರುವುದು ಸಹಜ. ಆದರೆ ನಮ್ಮಿಬ್ಬರ ಮಧ್ಯೆ ಯಾವುದೇ ದ್ವೇಷವಿಲ್ಲ ಎಂದು ಆಕಾಂಕ್ಷಾ ಸ್ಪಷ್ಟಪಡಿಸಿದ್ದಾರೆ. "ನಮ್ಮಿಬ್ಬರ ನಡುವೆ ಸಂಬಂಧವೇನೂ ಕೆಟ್ಟದಾಗಿಲ್ಲ. ನಾವು ಇಂದಿಗೂ ಪರಸ್ಪರ ಮಾತನಾಡುತ್ತೇವೆ. ಆದರೆ, ದಂಪತಿಯಾಗಿ ಒಟ್ಟಿಗೆ ಬಾಳಲು ನಮ್ಮಿಬ್ಬರ ಆಲೋಚನೆಗಳು ಹೊಂದುವುದಿಲ್ಲ. ಏಕೆಂದರೆ ನಮ್ಮಿಬ್ಬರ ಭವಿಷ್ಯದ ಗುರಿಗಳು ಮತ್ತು ಯೋಚನೆಗಳು ವಿಭಿನ್ನವಾಗಿವೆ. ದುರದೃಷ್ಟವಶಾತ್ ಭವಿಷ್ಯದಲ್ಲಿ ನಾವಿಬ್ಬರೂ ಜೊತೆಯಾಗಿರಲು ಸಾಧ್ಯವಿಲ್ಲ ಎಂಬುದು ನಮಗೆ ಅರ್ಥವಾಗಿದೆ" ಎಂದು ಅವರು ತಿಳಿಸಿದ್ದಾರೆ.
Akanksha Chamola confirms her divorce with Gaurav Khanna on Lock Upp😱#lockupp2 #lockupp #GauravKhanna pic.twitter.com/Sqo81Qq0Hw
— 𝐌•✰ (@24X7BiggBoss) June 27, 2026
9 ವರ್ಷಗಳ ದಾಂಪತ್ಯಕ್ಕೆ ಬ್ರೇಕ್
ಆಕಾಂಕ್ಷಾ ಚಮೋಲಾ ಮತ್ತು ಗೌರವ್ ಖನ್ನಾ ಅವರು 2016ರಲ್ಲಿ ಗೌರವ್ ಅವರ ಸ್ವಗ್ರಾಮವಾದ ಕಾನ್ಪುರದಲ್ಲಿ ಮೂರು ದಿನಗಳ ಕಾಲ ನಡೆದ ಅದ್ದೂರಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಕಳೆದ 9 ವರ್ಷಗಳಿಂದ ದಾಂಪತ್ಯ ಜೀವನ ನಡೆಸುತ್ತಿದ್ದ ಈ ಜೋಡಿ, ಪರಸ್ಪರರ ವೃತ್ತಿಜೀವನದ ಏಳುಬೀಳುಗಳಲ್ಲಿ ಸದಾ ಜೊತೆಯಾಗಿ ನಿಲ್ಲುತ್ತಿದ್ದರು. ಗೌರವ್ ಖನ್ನಾ ಅವರು ಇತ್ತೀಚೆಗೆ 'ಬಿಗ್ ಬಾಸ್ 19' ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದಾಗಲೂ ಆಕಾಂಕ್ಷಾ ಅವರು ಫ್ಯಾಮಿಲಿ ವೀಕ್‌ನಲ್ಲಿ ಭಾಗವಹಿಸಿ ಪತಿಯನ್ನ ಬೆಂಬಲಿಸಿದ್ದರು.

ಮಕ್ಕಳ ವಿಷಯದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯ
ಬಿಗ್ ಬಾಸ್ ಮನೆಯಲ್ಲಿದ್ದಾಗ ಗೌರವ್ ಖನ್ನಾ ಅವರು ಸಹ-ಸ್ಪರ್ಧಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ, ತಮಗೆ ಮಕ್ಕಳಾಗಬೇಕೆಂಬ ಆಸೆ ಇರುವುದಾಗಿ ಆದರೆ ತಮ್ಮ ಪತ್ನಿ ಸದ್ಯಕ್ಕೆ ತಾಯಿಯಾಗಲು ಸಿದ್ಧರಿಲ್ಲ ಎಂದು ಹೇಳಿಕೊಂಡಿದ್ದರು. "ನನ್ನ ಹೆಂಡತಿಗೆ ಸದ್ಯಕ್ಕೆ ಮಗು ಬೇಡವಾಗಿದೆ. ನನಗೆ ಆಸೆ ಇದೆ, ಆದರೆ ಇದು ಪ್ರೇಮ ವಿವಾಹವಾಗಿರುವುದರಿಂದ ಆಕೆಯ ನಿರ್ಧಾರವನ್ನು ಗೌರವಿಸಲೇಬೇಕು" ಎಂದು ಗೌರವ್ ಹೇಳಿದ್ದರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಆಕಾಂಕ್ಷಾ ಅವರನ್ನು ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಆಕಾಂಕ್ಷಾ, "ತಾಯ್ತನವನ್ನು ಆಯ್ಕೆ ಮಾಡಿಕೊಳ್ಳದಿರುವುದು ನನ್ನ ವೈಯಕ್ತಿಕ ನಿರ್ಧಾರ. ನಮ್ಮಿಬ್ಬರ ನಡುವೆ ವಯಸ್ಸಿನ ವ್ಯತ್ಯಾಸವಿದೆ, ಗೌರವ್ ನನ್ನ ನಿರ್ಧಾರವನ್ನು ಅರ್ಥಮಾಡಿಕೊಳ್ಳುವಷ್ಟು ಪ್ರೌಢಿಮೆ ಹೊಂದಿದ್ದಾರೆ" ಎಂದು ಸಮರ್ಥಿಸಿಕೊಂಡಿದ್ದರು. ಈ ವರ್ಷದ ಜನವರಿ ತಿಂಗಳಲ್ಲೂ ಇವರ ವಿಚ್ಛೇದನದ ವದಂತಿಗಳು ಹರಡಿದಾಗ, ಆಕಾಂಕ್ಷಾ ಅದನ್ನು ನಿರಾಕರಿಸಿದ್ದರು. ಆದರೆ ಈಗ 'ಲಾಕ್ ಅಪ್ 2' ವೇದಿಕೆಯಲ್ಲಿ ಅಧಿಕೃತವಾಗಿ ವಿಚ್ಛೇದನವನ್ನು ಘೋಷಿಸಿದ್ದಾರೆ.












Click it and Unblock the Notifications