ಮನೆಗೆ ಈ ಹೆಸರು ಇಟ್ಟರೆ ಅದೃಷ್ಟ ಹೆಚ್ಚುತ್ತಾ? ವಾಸ್ತು ಹೇಳುವ ಕುತೂಹಲಕಾರಿ ನಿಯಮಗಳು!
ಸ್ವಂತ ಮನೆ ಎಂಬುದು ಪ್ರತಿಯೊಬ್ಬರ ಜೀವನದ ದೊಡ್ಡ ಕನಸು. ವರ್ಷಗಳ ಪರಿಶ್ರಮ, ಉಳಿತಾಯ ಮತ್ತು ಶ್ರಮದ ಫಲವಾಗಿ ನಿರ್ಮಾಣವಾಗುವ ಮನೆ ಎಂಬುದು ಕುಟುಂಬದ ನೆಮ್ಮದಿ, ಸಂತೋಷ ಮತ್ತು ನೆನಪುಗಳ ನೆಲೆ. ಆದ್ದರಿಂದಲೇ ಅನೇಕರು ಮನೆ ಕಟ್ಟಿದ ನಂತರ ಅದಕ್ಕೆ ಒಂದು ಅರ್ಥಪೂರ್ಣವಾದ ಹೆಸರನ್ನೂ ಇಡಲು ಬಯಸುತ್ತಾರೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹೆಸರು ಕೇವಲ ಗುರುತಿಗಾಗಿ ಇಡುವುದಷ್ಟೆ ಅಲ್ಲ. ಅದು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವ ಒಂದು ಸಂಕೇತವೂ ಆಗಿದೆ ಎಂದು ನಂಬಲಾಗಿದೆ. ಮನೆಯ ಹೆಸರಿನ ಆಯ್ಕೆ, ನಾಮಫಲಕದ ಸ್ಥಾನ ಮತ್ತು ಅದರ ವಿನ್ಯಾಸಕ್ಕೂ ವಾಸ್ತುವಿನಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಮನೆಯ ಹೆಸರನ್ನು ಹೇಗೆ ಆಯ್ಕೆ ಮಾಡಬೇಕು?
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹೆಸರಿನಲ್ಲಿ ಸದಾ ಸಕಾರಾತ್ಮಕ ಅರ್ಥ ಇರಬೇಕು. ಶಾಂತಿ, ಸಮೃದ್ಧಿ, ಪ್ರೀತಿ, ಆಶೀರ್ವಾದ, ಸಂತೋಷ ಅಥವಾ ಆಧ್ಯಾತ್ಮಿಕತೆಯನ್ನು ಪ್ರತಿಬಿಂಬಿಸುವ ಹೆಸರುಗಳನ್ನು ಆಯ್ಕೆ ಮಾಡಿದರೆ ಉತ್ತಮ.
ಇನ್ನೊಂದು ಪ್ರಮುಖ ಸಲಹೆ ಎಂದರೆ, ನಿಮ್ಮ ಮನೆಯ ಹೆಸರು ವಿಶಿಷ್ಟವಾಗಿರಬೇಕು. ಈಗಾಗಲೇ ಪಕ್ಕದ ಮನೆ ಅಥವಾ ಅದೇ ಪ್ರದೇಶದಲ್ಲಿ ಇರುವ ಹೆಸರನ್ನು ಮರುಬಳಕೆ ಮಾಡುವುದಕ್ಕಿಂತ ಹೊಸ ಹಾಗೂ ಅರ್ಥಪೂರ್ಣ ಹೆಸರನ್ನು ಆರಿಸುವುದು ಉತ್ತಮ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ.
ಜನ್ಮ ನಕ್ಷತ್ರದ ಹೆಸರು
ಮನೆಯ ಹೆಸರನ್ನು ಆಯ್ಕೆ ಮಾಡುವಾಗ ಮನೆಯ ಮುಖ್ಯಸ್ಥನ ಜನ್ಮ ನಕ್ಷತ್ರ ಮತ್ತು ರಾಶಿಗೆ ಹೊಂದಿಕೆಯಾಗುವ ಅಕ್ಷರಗಳನ್ನು ಬಳಸುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಶ್ರೇಯಸ್ಕರ. ಮಂಗಳಕರ ಹೆಸರುಗಳು ಕೇವಲ ಗುರುತಿಗಾಗಿ ಮಾತ್ರವಲ್ಲದೆ, ಮನೆಯ ವಾಸ್ತು ದೋಷಗಳನ್ನು ನಿವಾರಿಸಿ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ನೆರವಾಗುತ್ತವೆ. ಅರ್ಥಪೂರ್ಣ ಸಂಸ್ಕೃತ ಹೆಸರುಗಳು ಕುಟುಂಬದಲ್ಲಿ ನೆಮ್ಮದಿ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಉತ್ತೇಜಿಸುವ ಶಕ್ತಿಯನ್ನು ಹೊಂದಿರುತ್ತವೆ.
ಈ ರೀತಿ ಅರ್ಥಪೂರ್ಣ ಮತ್ತು ಸಂಸ್ಕೃತ ಮೂಲದ ಹೆಸರುಗಳನ್ನು ಇಡುವುದರಿಂದ ಮನೆಯ ವಾತಾವರಣವು ಪವಿತ್ರಗೊಳ್ಳುತ್ತದೆ. ನಾಮಕರಣ ಮಾಡುವಾಗ ಮನೆಯ ಯಜಮಾನ ಅಥವಾ ಯಜಮಾನಿಯ ರಾಶಿಗೆ ಅನುಗುಣವಾದ ಅಕ್ಷರದಿಂದ ಆರಂಭವಾಗುವ ಹೆಸರನ್ನು ಆರಿಸುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮತ್ತಷ್ಟು ಶ್ರೇಯಸ್ಕರ.
ನಾಮಫಲಕ ಎಲ್ಲಿರಬೇಕು?
ಅನೇಕರು ಮನೆಯ ಮುಖ್ಯ ಗೇಟ್ ಮೇಲೆಯೇ ನಾಮಫಲಕವನ್ನು ಅಳವಡಿಸುತ್ತಾರೆ. ಆದರೆ ವಾಸ್ತು ಪ್ರಕಾರ, ಮನೆಯ ಹೆಸರನ್ನು ಮುಖ್ಯ ಗೇಟ್ ಮೇಲೆ ಬರೆಯುವುದಕ್ಕಿಂತ ಪ್ರವೇಶದ್ವಾರದ ಗೋಡೆಯ ಮೇಲೆ ಕಲ್ಲು ಅಥವಾ ಮರದ ಫಲಕದಲ್ಲಿ ಕೆತ್ತಿಸಿ ಅಳವಡಿಸುವುದು ಉತ್ತಮ.
ನಾಮಫಲಕದ ಮೇಲೆ ಸಣ್ಣ ದೀಪ ಅಥವಾ ಲೈಟ್ ಅಳವಡಿಸಿದರೆ ಅದು ಸದಾ ಪ್ರಕಾಶಮಾನವಾಗಿ ಕಾಣುತ್ತದೆ. ವಾಸ್ತು ನಂಬಿಕೆಯ ಪ್ರಕಾರ, ಇದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಕೆಲವರು ನಾಮಫಲಕದ ಮೇಲೆ ಅಥವಾ ಪಕ್ಕದಲ್ಲಿ ʼಓಂʼ ಅಥವಾ ಸ್ವಸ್ತಿಕ್ ಚಿಹ್ನೆಯನ್ನೂ ಬಳಸುತ್ತಾರೆ. ಇದನ್ನು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಮನೆಯ ಹೊರಗೆ ನಿಮ್ಮ ಹೆಸರನ್ನು ಬರೆಯಬಹುದೇ?
ಇತ್ತೀಚಿನ ದಿನಗಳಲ್ಲಿ ಅನೇಕರು ಮನೆಯ ಹೆಸರಿನ ಜೊತೆಗೆ ತಮ್ಮ ಹೆಸರನ್ನೂ ನಾಮಫಲಕದಲ್ಲಿ ಬರೆಯುತ್ತಾರೆ. ಆದರೆ ಕೆಲವು ವಾಸ್ತು ತಜ್ಞರ ಅಭಿಪ್ರಾಯದ ಪ್ರಕಾರ, ಮನೆಯ ಹೊರಭಾಗದಲ್ಲಿ ವ್ಯಕ್ತಿಯ ಹೆಸರನ್ನು ಪ್ರಮುಖವಾಗಿ ಪ್ರದರ್ಶಿಸುವುದನ್ನು ತಪ್ಪಿಸುವುದು ಒಳಿತು.
ವಾಸ್ತು ನಂಬಿಕೆಯ ಪ್ರಕಾರ, ಮನೆಯ ಸುತ್ತಮುತ್ತ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳ ಸಂಚಾರ ನಿರಂತರವಾಗಿರುತ್ತದೆ. ಈ ಕಾರಣದಿಂದ ಮನೆಯ ಬಾಗಿಲಲ್ಲಿ ವೈಯಕ್ತಿಕ ಹೆಸರನ್ನು ಬರೆಯುವುದರಿಂದ ಅನಗತ್ಯ ಋಣಾತ್ಮಕ ಪ್ರಭಾವ ಉಂಟಾಗಬಹುದು. ಇದೇ ಕಾರಣಕ್ಕೆ ಮನೆಗೆ ಪ್ರತ್ಯೇಕ ಹೆಸರನ್ನು ನೀಡಿ ಅದನ್ನೇ ನಾಮಫಲಕದಲ್ಲಿ ಬಳಸುವಂತೆ ಸಲಹೆ ನೀಡಲಾಗುತ್ತದೆ.
ಮನೆಗೆ ಇಡಬಹುದಾದ ಕೆಲವು ಅರ್ಥಪೂರ್ಣ ಹೆಸರುಗಳು
* ಶ್ರೀನಿವಾಸ - ಲಕ್ಷ್ಮಿಯ ಕೃಪೆಯ ನಿವಾಸ, ಸಮೃದ್ಧಿಯ ಸಂಕೇತ
* ತೇಜೋಮಯ- ತೇಜಸ್ಸಿನಿಂದ ತುಂಬಿದ
* ಶಾಂತಿನಿಕೇತನ - ಶಾಂತಿಯ ನೆಲೆ
* ಪ್ರೇಮ ಕುಂಜ - ಪ್ರೀತಿ ತುಂಬಿದ ಮನೆ
* ಆಶಿಯಾನಾ - ಆಶ್ರಯ, ನೆಲೆ
* ಆಶೀರ್ವಾದ - ದೇವರ ಅನುಗ್ರಹದ ಸಂಕೇತ
* ಆನಂದ ನಿಲಯಂ - ಸಂತೋಷ ಮತ್ತು ನೆಮ್ಮದಿಯ ನಿವಾಸ
* ಶಾಶ್ವತ - ಶಾಶ್ವತತೆ, ಹೊಸ ಆರಂಭ
* ಅನುಗ್ರಹ- ದೇವರ ಕೃಪೆ ತುಂಬಿದ ಮನೆ
* ಪ್ರಾರ್ಥನೆ - ಭಕ್ತಿ ಮತ್ತು ನಂಬಿಕೆಯ ಸಂಕೇತ
* ಶಿವಶಕ್ತಿ - ಶಿವನ ಮತ್ತು ಶಕ್ತಿಯ ಆಶೀರ್ವಾದವನ್ನು ಸೂಚಿಸುವ ಹೆಸರು
ಮನೆಗೆ ಹೆಸರು ಇಡುವಾಗ ನಿಮ್ಮ ಕುಟುಂಬದ ಇಷ್ಟ, ಸಂಸ್ಕೃತಿ ಮತ್ತು ವೈಯಕ್ತಿಕ ಅಭಿರುಚಿಗೆ ಮೊದಲ ಆದ್ಯತೆ ನೀಡಿ. ವಾಸ್ತು ನಿಯಮಗಳನ್ನು ಅನುಸರಿಸುವುದು ಹಿತಕರ. ಮನೆಗೆ ಇಡುವ ಹೆಸರು ನಿಮ್ಮ ಕನಸು, ಭಾವನೆ ಮತ್ತು ಕುಟುಂಬದ ಮೌಲ್ಯಗಳನ್ನು ಪ್ರತಿಬಿಂಬಿಸುವ ಸಂಕೇತ. ಅರ್ಥಪೂರ್ಣ, ಸಕಾರಾತ್ಮಕ ಮತ್ತು ಮನಸ್ಸಿಗೆ ಹತ್ತಿರವಾದ ಹೆಸರನ್ನು ಆಯ್ಕೆ ಮಾಡಿಕೊಂಡರೆ ಅದು ಮನೆಯ ಸೌಂದರ್ಯವನ್ನಷ್ಟೇ ಅಲ್ಲ, ಮನೆಯೊಂದಿಗಿನ ಭಾವನಾತ್ಮಕ ಬಾಂಧವ್ಯವನ್ನೂ ಮತ್ತಷ್ಟು ಗಟ್ಟಿಗೊಳಿಸುತ್ತದೆ.
(ಬರಹ: ಭವಾನಿ ಭಟ್)














Click it and Unblock the Notifications