ಬನಶಂಕರಿ ಮೆಟ್ರೋ ನಿಲ್ದಾಣ ಬಳಿ ಸ್ಕೈವಾಕ್ ಇಲ್ಲದೇ ದುರ್ಘಟನೆ; ವಿಡಿಯೋ ಮೂಲಕ ಯೋಜನೆ ಪುನಾರಂಭಕ್ಕೆ ಸಂಸದ ಒತ್ತಾಯ
ಬೆಂಗಳೂರು: ಬೆಂಗಳೂರಿನಲ್ಲಿ ವಾಹನ ಸವಾರರು, ಪ್ರಯಾಣಿಕರು ಮಾತ್ರವಲ್ಲದೇ ಪಾದಾಚಾರಿಗಳು ಮೂಲಸೌಕರ್ಯ ಇಲ್ಲದೇ ಪರದಾಡುತ್ತಿದ್ದಾರೆ. ಇತ್ತೀಚೆಗೆ ರಸ್ತೆ ದಾಟುತ್ತಿದ್ದ ವೃದ್ಧೆಯೊಬ್ಬರಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾಲಿನ ಮೂಳೆ ಮುರಿದು ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದೆ ಘಟನೆ ನಡೆದಿತ್ತು. ಇದರ ವಿಡಿಯೋ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ ಅವರು, ಇಲ್ಲಿ ನಮ್ಮ ಮೆಟ್ರೋ ನಿಲ್ದಾಣ- ಬಿಎಂಟಿಸಿ ಬಸ್ ಟರ್ಮಿನಲ್ ಮಧ್ಯ ಸ್ಕೈವಾಕ್‌ಗೆ ನಿರ್ಮಿಸದ ಸರ್ಕಾರದ ನಿರ್ಲಕ್ಷ್ಯವೇ ಇಂತಹ ಘಟನೆಗಳಿಗೆ ಕಾರಣವೆಂದು ಆಕ್ರೋಶ ಹೊರ ಹಾಕಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳ ನಿರ್ಮಾಣ, ಮೆಟ್ರೋ ಮಾರ್ಗ, ಟನಲ್ ರಸ್ತೆ ನಿರ್ಮಾಣ ಎಷ್ಟು ಮುಖ್ಯವೋ ಅದೇ ರೀತಿ ನಗರದ ಪಾದಾಚಾರಿಗಳಿಗೆ ಪಾದಾಚರಿ ಮಾರ್ಗ, ಸ್ಕೈವಾಕ್ ಇನ್ನಿತರ ಮೂಲ ಸೌಲಭ್ಯ ಒದಗಿಸುವುದು ಅಷ್ಟೇ ಮುಖ್ಯವಾಗಿದೆ. ಬನಶಂಕರಿ ಮೆಟ್ರೋ ನಿಲ್ದಾಣ ಹಾಗೂ ಬಿಎಂಟಿಸಿ ಬಸ್ ಟರ್ಮಿನಲ್ ಮಧ್ಯ ಸ್ಕೈವಾಕ್ ನಿರ್ಮಾಣಕ್ಕೆ ಈ ಹಿಂದೆ ಸಂಸದ ತೇಜಸ್ವಿ ಸೂರ್ಯ ಅವರು ಒತ್ತಾಯಿಸಿದ್ದರು. ಇನ್ನೂವರೆಗೂ ನಿರ್ಮಾಣವಾಗಿಲ್ಲ. ಇದೀಗ ಅಲ್ಲಿಯೇ ರಸ್ತೆ ದಾಟುತ್ತಿದ್ದ ವೃದ್ಧೆಗೆ ವಾಹನ ಗುದ್ದಿತ್ತು. ಅಪಘಾತವಾತ ಸ್ಥಳದಲ್ಲೇ ಆ ವೃದ್ಧೆ ಸಾವು, ಬದುಕಿನ ಮಧ್ಯೆ ಹೋರಾಡಿ ಪ್ರಾಣ ಬಿಟ್ಟಿದ್ದರು.

ಸ್ಕೈವಾಕ್ ಯೋಜನೆ ಸ್ಥಳ ಪರಿಶೀಲನೆಗೆ ಹೋದಾಗ ಸ್ಥಳೀಯರು ನೀಡಿದ ವೃದ್ಧೆ ಅಪಘಾತದ ವಿಡಿಯೋವನ್ನು ಇಂದು ಸೋಮವಾರ ಸಂಸದರು ಹಂಚಿಕೊಂಡಿದ್ದಾರೆ. 'ಬೆಂಗಳೂರಿನಲ್ಲಿ ಸಾಮಾನ್ಯ ಪಾದಚಾರಿಗಳ ದುಃಸ್ಥಿತಿಯನ್ನು ನೋಡಿ' ಎಂದು ವಿಡಿಯೋಗೆ ಶಿರ್ಷಿಕೆ ನೀಡಿ ಪೋಸ್ಟ್ ಮಾಡಿದ್ದಾರೆ.
ಸಿಎಂ ಫೋಟೋ ಪೋಸ್ ಬಳಿಕ ಯೋಜನೆ ಸ್ಥಗಿತ!
ನಾನು ಐದು ವರ್ಷಗಳಿಂದ, ನಾನು ಬನಶಂಕರಿ ಮೆಟ್ರೋ ನಿಲ್ದಾಣ ಮತ್ತು ಬಿಎಂಟಿಸಿ ಬಸ್ ಟರ್ಮಿನಲ್ ಅನ್ನು ಸಂಪರ್ಕಿಸುವ ಸ್ಕೈವಾಕ್ ನಿರ್ಮಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದೇನೆ. ಆದರೆ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ತಿಂಗಳ ಹಿಂದೆ ಡಿಕೆ ಶಿವಕುಮಾರ್ ಅವರೇ ನೀವು ಬಂದು ಫೋಟೋಗಳಿಗೆ ಪೋಸ್ ನೀಡಿ ಮತ್ತು ಶಿಲಾನ್ಯಾಸ ಸಮಾರಂಭ ಮಾಡಿದ್ದೀರಿ. ಇನ್ನೇನು ಸ್ಕೈವಾಕ್ ಯೋಜನೆ ಆರಂಭವಾಗಲಿದೆ ಎಂದು ಭಾವಿಸಿದ್ದೆ!.
ಆದರೆ ಕೆಲವು ಗುತ್ತಿಗೆದಾರರು ಇದೇ ಸ್ಥಳದಲ್ಲಿ ಫ್ಲೈಓವರ್ ನಿರ್ಮಿಸಲು ಮುಂದಾಗಿದ್ದರಿಂದ ಸ್ಕೈವಾಕ್ ಯೋಜನೆ ನೆನಗುದಿಗೆ ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ನಾನು ಸ್ಥಳಕ್ಕೆ ಭೇಟಿ ನೀಡಿದಾಗ ಕೆಲವು ವಾರಗಳ ಹಿಂದೆ ಈ ರಸ್ತೆಯನ್ನು ದಾಟಲು ಪ್ರಯತ್ನಿಸುವಾಗ ಪ್ರಾಣ ಕಳೆದುಕೊಂಡ ವೃದ್ಧೆ ಮಹಿಳೆಯ ವೀಡಿಯೊವನ್ನು ಸ್ಥಳೀಯರು ನನಗೆ ತೋರಿಸಿದರು ಎಂದು ಅಪಘಾತ ಹಾಗೂ ಈ ಸ್ಥಳದಲ್ಲಿ ಸ್ಕೈವಾಕ್ ಅಗತ್ಯತೆಯನ್ನು ಅವರು ವಿವರಿಸಿದರು.
ಪ್ರಸ್ತು ರಾಜ್ಯ ಸರ್ಕಾರಕ್ಕೆ ಪಾದಚಾರಿಗಳು ಆದ್ಯತೆಯ ವಿಷಯವೇ ಅಲ್ಲ. ನಮ್ಮ ಮೆಟ್ರೋ ಪ್ರಯಾಣಿಕರು, ಬಿಎಂಟಿಸಿ ಪ್ರಯಾಣಿಕರು, ರಸ್ತೆ ದಾಟಲು ತಮ್ಮ ಪ್ರಾಣವನ್ನು ಪಣಕ್ಕಿಡುವ ವೃದ್ಧ ನಾಗರಿಕರ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ. ನಿಮ್ಮ ಆದ್ಯತೆ ಏನಿದ್ದರು ಸವಲತ್ತು ಪಡೆದ ಕೆಲವೇ ಕೆಲವರಿಗೆ ಮಾತ್ರ. ಅದಕ್ಕಾಗಿಯೇ ನೀವು ಬರೋಬ್ಬರಿ 50,000 ಕೋಟಿ ರೂ. ವೆಚ್ಚದ ಸುರಂಗ ಯೋಜನೆಗೆ ಆದ್ಯತೆ ನೀಡುತ್ತಿದ್ದೀರಿ ಎಂದು ಸಿಎಂ ಡಿಕೆ ಶಿವಕುಮಾರ್ ವಿರುದ್ಧ ಹರಿಹಾಯ್ದರು.
ಸ್ಕೈವಾಕ್ ಯೋಜನೆ ನಿಲ್ಲಿಸಿದ್ದೇಕೆ?
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸ್ವಲ್ಪವಾದರೂ ಮಾನವೀಯತೆ ಉಳಿದಿದ್ದರೆ, ಈ ಯೋಜನೆಯನ್ನು ತಕ್ಷಣ ಪುನರಾರಂಭಿಸಬೇಕು. ಈ ಭಾಗದಲ್ಲಿ ಮತ್ತೊಂದು ಮುಗ್ಧ ಜೀವ ಬಲಿಯಾಗುವವರೆಗೆ ಕಾಯಬಾರದು. ಶೀಘ್ರವೇ ಬನಶಂಕರಿ ಮೆಟ್ರೋ ನಿಲ್ದಾಣ ಹಾಗೂ ಬಿಎಂಟಿಸಿ ಬಸ್ ಟರ್ಮಿನಲ್ ಗೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಪುನಾರಂಭಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಇನ್ನೂ ಯೋಜನೆ ಕುರಿತು ಸರ್ಕಾರದ ಪ್ರತಿಕ್ರಿಯೆ ಏನೆಂದು ಪಾದಾಚಾರಿಗಳು ಕಾಯುತ್ತಿದ್ದಾರೆ.














Click it and Unblock the Notifications