ಮೊಮ್ಮಗನ ಚಿಕಿತ್ಸೆಯ ಹಣಕ್ಕಾಗಿ 'ಬ್ಯೂಟಿ ಇನ್ಫ್ಲುಯೆನ್ಸರ್' ಆದ 75ರ ಅಜ್ಜ: ದುಡ್ಡು ಹೊಂದಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ
ಅಜ್ಜ ಅಜ್ಜಿ ಪ್ರೀತಿಗೆ ಬೆಲೆ ಕಟ್ಟುವುದು ಸಾಧ್ಯವೇ ಇಲ್ಲ. ಅಜ್ಜ-ಅಜ್ಜಿ ಪ್ರೀತಿ ನೆರಳಲ್ಲಿ ಬೆಳೆದ ಮಕ್ಕಳು ನಿಜಕ್ಕೂ ಅದೃಷ್ಟವಂತರೇ ಸರಿ. ತಂದೆ ತಾಯಿಯ ಪ್ರೀತಿ ಒಂದು ಲೆಕ್ಕ ಆದರೆ ಅಜ್ಜ-ಅಜ್ಜಿಯದ್ದು ಇನ್ನೊಂದು. ಮೊಮ್ಮಕ್ಕಳಿಗಾಗಿ ಏನು ಮಾಡುವುದಕ್ಕೂ ಸಿದ್ದರಿರುತ್ತಾರೆ ಅವರು. ಮೊಮ್ಮಕ್ಕಳಿಗಾಗಿ ಏನಾದರೂ ಮಾಡಬೇಕು ಎನ್ನುವ ಸ್ಥಿತಿ ಬಂದರೆ ವಯಸ್ಸು, ಸುಸ್ತು, ಕಾಯಿಲೆ ಯಾವುದೂ ಗಣನೆಗೆ ಬರುವುದೇ ಇಲ್ಲ.
ಇಂಥದ್ದೇ ಒಂದು ಘಟನೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಮೊಮ್ಮಗನ ಅಪರೂಪದ ಕಾಯಿಲೆಯ ಚಿಕಿತ್ಸೆಗಾಗಿ ಹಣ ಹೊಂದಿಸಲು, 75 ವರ್ಷದ ಅಜ್ಜ 'ಬ್ಯೂಟಿ ಇನ್ಫ್ಲುಯೆನ್ಸರ್' ಆಗಿ ಬದಲಾಗಿದ್ದಾರೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮೊಮ್ಮಗನಿಗಿತ್ತು ಅಪರೂಪ್ದ ಕಾಯಿಲೆ:
ಚೀನಾದ ಝು ಯುನ್‌ಚಾಂಗ್ ಎಂಬ ಅಜ್ಜನಿಗೆ ತನ್ನ ಮೊಮ್ಮಗ ಎಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಈ ಮಗುವಿಗೆ ಸ್ಪೈನಲ್ ಮಸ್ಕುಲರ್ ಅಟ್ರೋಫಿ' (SMA Type 1) ಎಂಬ ಗಂಭೀರ ಮತ್ತು ಅಪರೂಪದ ಅನುವಂಶೀಯ ಕಾಯಿಲೆ ಇರುವುದು ಬಾಲ್ಯದಲ್ಲೇ ಪತ್ತೆಯಾಗಿತ್ತು. ವೈದ್ಯರು ಕೂಡಾ ಈ ಮಗು ಹೆಚ್ಚೆಂದರೆ 18 ತಿಂಗಳು ಬದುಕುಳಿಯಬಹುದು ಎಂದು ಹೇಳಿದ್ದರು. ಆದರೆ ಪ್ರೀತಿಯ ಮೊಮ್ಮಗ ಕಾವೊ ಜಿಂಗ್ಯಾನ್ ನನ್ನು ಕಳೆದುಕೊಳ್ಳುವ ಬಗ್ಗೆ ಈ ಅಜ್ಜ ಕನಸಿನಲ್ಲಿಯೂ ಯೋಚಿಸರಲಿಲ್ಲ. ಏನೇ ಆದರೂ ಮೊಮ್ಮಗನನ್ನು ಉಳಿಸಿಕೊಂಡೇ ಉಳಿಸಿಕೊಳ್ಳುತ್ತೇನೆ ಎನ್ನುವ ನಿರ್ಧಾರಕ್ಕೆ ಬಂದಿದ್ದರು ಅಜ್ಜ.

ಮನೆ ಮಠ ಎಲ್ಲವನ್ನೂ ಕಳೆದುಕೊಂಡಿದ್ದರು:
ಆದರೆ ಮೊಮ್ಮಗನ ಈ ಕಾಯಿಲೆಗೆ ಅಗತ್ಯವಿರುವ ದುಬಾರಿ ಚಿಕಿತ್ಸೆಯನ್ನು ಮುಂದುವರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಹಣದ ತೀವ್ರ ಕೊರತೆಯಿತ್ತು. ಮೊಮ್ಮಗನ ಔಷಧಿಗಾಗಿ ಹಣ ಖರ್ಚು ಮಾಡುತ್ತಾ ಮಾಡುತ್ತಾ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಗುರಿಯಾಯಿತು. ಇದನ್ನು ಸರಿಹೊಂದಿಸುವುದಕ್ಕಾಗಿ ಅಜ್ಜ ತಮ್ಮ ಮನೆಯನ್ನು ಮಾರಾಟ ಮಾಡಿದರು. ಸಂಬಂಧಿಕರಿಂದ ಸಾಲ ಪಡೆದರು. ಆದರೆ ಯಾವುದೂ ಸಾಕಾಗಲಿಲ್ಲ. ಮುಂದೆ ಹಣಕ್ಕೆ ಏನು ಮಾಡುವುದು ಎಂದು ಯೋಚಿಸಿದಾಗ ಅವರಿಗೆ ಹೊಳೆದದ್ದೇ ಈ ಹೊಸ ಆಲೋಚನೆ. ಇವರು ಆನ್‌ಲೈನ್ ಲೈವ್‌ಸ್ಟ್ರೀಮಿಂಗ್ ಮೂಲಕ ಸೌಂದರ್ಯ ವರ್ಧಕಗಳನ್ನು ಪ್ರಮೋಟ್ ಮಾಡಲು ನಿರ್ಧರಿಸಿದರು.
ಲೈವ್‌ನಲ್ಲಿ ಮೇಕಪ್ ಪರೀಕ್ಷೆ:
ರಾತ್ರಿಯ ಸಮಯದಲ್ಲಿ ಲೈವ್ ಬರುವ ಅಜ್ಜ, ತನ್ನ ಮಗಳು ಖರೀದಿಸಿ ತಂದ ಸೌಂದರ್ಯ ವರ್ಧಕಗಳನ್ನು ಧರಿಸಿ, ಲಿಪ್‌ಸ್ಟಿಕ್ ಬಣ್ಣಗಳನ್ನು ಪರೀಕ್ಷಿಸಿ ಪ್ರಮೋಟ್ ಮಾಡುವುದಕ್ಕೆ ಮುಂದಾಗುತ್ತಾರೆ. ಅಜ್ಜನ ಈ ಅಸಾಮಾನ್ಯ ಪ್ರಯತ್ನಕ್ಕೆ ನೆಟಿಜನ್‌ಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಜ್ಜನ ಈ ಪ್ರಯತ್ನಕ್ಕೆ ಫಲ ಸಿಗುತ್ತದೆ.
ಫಲ ನೀಡಿದ ಪರಿಶ್ರಮ:
ಕಾಲಾನಂತರದಲ್ಲಿ ಚೀನಾ ಸರ್ಕಾರವು ಈ ಕಾಯಿಲೆಗೆ ನೀಡುವ ಚಿಕಿತ್ಸೆಯನ್ನು ವೈದ್ಯಕೀಯ ವಿಮಾ ಯೋಜನೆಗೆ ಸೇರ್ಪಡೆಗೊಳಿಸಿದ್ದರಿಂದಾಗಿ ಚಿಕಿತ್ಸೆಯ ವೆಚ್ಚ ಗಣನೀಯವಾಗಿ ಕಡಿಮೆಯಾಯಿತು. ಅಲ್ಲಿಯವರೆಗೆ ಅಜ್ಜ ಮೊಮ್ಮಗನಿಗಾಗಿ ನಿತ್ಯ ಲೈವ್ ಬಂದು ಪ್ರೊಡಕ್ಟ್‌ಗಳನ್ನು ಮಾರಿದ್ದೇ ಮಾರಿದ್ದು. ಇಂದು, 9 ವರ್ಷದ ಜಿಂಗ್ಯಾನ್ ಆರೋಗ್ಯದಲ್ಲಿ ಸುಧಾರಣೆ ಕಂಡು, ಶಾಲೆಗೆ ಹೋಗುತ್ತಿದ್ದಾನೆ. ಎಲ್ಲರಂತೆ ಗೆಳೆಯರೊಂದಿಗೆ ಸಮಯ ಕಳೆಯುತ್ತಿದ್ದಾನೆ.
"ತನ್ನ ಮಗಳಿಗೇನಾದರೂ ಆದರೆ, ಇಡೀ ಕುಟುಂಬವೇ ಕುಸಿದುಹೋಗುತ್ತದೆ" ಎಂದು ಹೇಳುವ ಅಜ್ಜ, ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ನನ್ನ ತಂದೆ ಸದಾ ಆಕ್ಟಿವ್ ಆಗಿ ಇರುತ್ತಾರೆ. ಅವರು ನಿಜವಾದ ಸೂಪರ್‌ಮ್ಯಾನ್ ಎನ್ನುವುದು ಈ ಅಜ್ಜನ ಮಗಳ ಭಾವುಕ ನುಡಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications