ಹೆಸರಾಯಿತು ಕಲ್ಯಾಣ ಕರ್ನಾಟಕ... ಉಸಿರಾಗಲಿ ಅಭಿವೃದ್ಧಿ... Kalyana Karnataka
ಕನ್ನಡ ಭಾಷೆಯ ಮೂಲ ಉತ್ತರ ಕರ್ನಾಟಕ, ಅದರಲ್ಲೂ ಕನ್ನಡ ಭಾಷೆ ಹುಟ್ಟಿ ಬೆಳೆದು ಇಷ್ಟೆಲ್ಲಾ ದೊಡ್ಡ ಇತಿಹಾಸ ಹೊಂದಲು ಕಾರಣ ಆಗಿದ್ದೇ ಉತ್ತರ ಕರ್ನಾಟಕದ ನಮ್ಮ ನೆಲದ ರಾಜರು. ಹೀಗೆ ಕನ್ನಡ ಭಾಷೆಯನ್ನ ಬೆಳೆಸಿ, ಕೀರ್ತಿ ಮೆರೆಸಿದ್ದ ಉತ್ತರ ಕರ್ನಾಟಕದಲ್ಲಿ ಈಗ ಪರಿಸ್ಥಿತಿ ಹೇಗಿದೆ ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ. ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು ಮತ್ತು ದೇವಗಿರಿ ಸೇವುಣರು ಆಳಿದ್ದ ಕನ್ನಡ ನಾಡಲ್ಲಿ ಇದೀಗ ಭೀಕರ ಬಡತನ ಕಾಡುತ್ತಿದ್ದು, ದಕ್ಷಿಣ ಕರ್ನಾಟಕ & ಉತ್ತರ ಕರ್ನಾಟಕದ ನಡುವೆ ತಾರತಮ್ಯವೂ ಆಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹಾಗಾದರೆ ಉತ್ತರ ಕರ್ನಾಟಕದ ಅಭಿವೃದ್ಧಿ ಯಾವಾಗ?
ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಎರಡೂ ಒಂದೇ ಕರ್ನಾಟಕ... ಇಲ್ಲಿ ವಾಸಿಸುವ ಎಲ್ಲರೂ ಕನ್ನಡಿಗರು. 18 & 19ನೇ ಶತಮಾನದಲ್ಲಿ ನಮ್ಮ ಕನ್ನಡ ನಾಡಿನಲ್ಲಿ ಆದ ಬದಲಾವಣೆಗಳ ಪರಿಣಾಮ ನಮ್ಮ ಕನ್ನಡ ನಾಡು ಹರಿದು ಹಂಚಿ ಹೋಗಿತ್ತು. ಒಂದು ಕಡೆ ಮರಾಠರು ಕನ್ನಡ ನಾಡಿನ ಒಂದು ಭಾಗ ಪಡೆದರೆ, ಇನ್ನೊಂದು ಕಡೆ ಹೈದರಾಬಾದ್‌ನ ನಿಜಾಮರು ಕರ್ನಾಟಕದ ಒಂದಷ್ಟು ಭಾಗವನ್ನು ಆಕ್ರಮಿಸಿ ಆಳಿದರು. 1947 ಆಗಸ್ಟ್ 15ರ ಸ್ವಾತಂತ್ರ್ಯದ ತನಕವೂ ಕರ್ನಾಟಕ ಇದೇ ರೀತಿಯಾಗಿ ಹರಿದು ಹಂಚಿ ಹೋಗಿತ್ತು.

ಹೀಗಾಗಿ ಉತ್ತರ ಕರ್ನಾಟಕದಲ್ಲಿ ಕನ್ನಡಿಗರೇ ಇಲ್ಲದ ರಾಜ ಮನೆತನಗಳ ಆಳ್ವಿಕೆ ಕಾಲದಲ್ಲಿ ದೌರ್ಜನ್ಯ ಹೆಚ್ಚಾಯ್ತು, ಹಾಗೇ ಅಭಿವೃದ್ಧಿಯೂ ಕುಂಟಿತವಾಗಿತ್ತು. ಮತ್ತೊಂದು ಕಡೆಯಲ್ಲಿ ದಕ್ಷಿಣ ಕರ್ನಾಟಕ ಮೈಸೂರು ರಾಜರ ಕೈಯಲ್ಲಿ ಇದ್ದಿದ್ದರಿಂದ ಕನ್ನಡ ಭಾಷೆ ಉಳಿಯಿತು & ಈ ಮೂಲಕ ಅಭಿವೃದ್ಧಿ ಆಗಿದೆ ಅನ್ನೋದು ಕೆಲವರ ವಾದ. ಆದರೆ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದು ಹೋಗಿದ್ದರೂ ಕಲ್ಯಾಣ ಕರ್ನಾಟಕ & ಕಿತ್ತೂರು ಕರ್ನಾಟಕದ ಅಭಿವೃದ್ಧಿ ಯಾಕೆ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೊಡುವವರು ಯಾರೂ ಇಲ್ಲ...
ಅಸಮಾನತೆ ಮೊದಲು ತೊಲಗಬೇಕಿದೆ...
ಹೌದು, ನಾವು ಆಧುನಿಕ ಕಾಲದಲ್ಲಿ ಇದ್ದು ಇಡೀ ಜಗತ್ತಿನಲ್ಲಿ ಕರ್ನಾಟಕ & ಕನ್ನಡಿಗರು ಹೆಸರನ್ನು ಮಾಡಿದ್ದಾರೆ. ಹೀಗಿದ್ದರೂ ನಮ್ಮ ರಾಜ್ಯದಲ್ಲೇ ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಎಂಬ ಭಾರಿ ದೊಡ್ಡ ತಾರತಮ್ಯ ಇದೆ ಎಂಬ ಆರೋಪವೂ ಪದೇ ಪದೇ ಕೇಳಿಬರುತ್ತಲೇ ಇದೆ. ಹೀಗಾಗಿ ಇದನ್ನೆಲ್ಲಾ ಮೊದಲು ನಾವು ತೊಲಗಿಸಬೇಕು ಎಂಬ ಆಗ್ರಹ ಜನರದ್ದು. ಒಂದು ಕಡೆ ರಾಜಕೀಯವಾಗಿ ಬಲಿಷ್ಠ & ಉತ್ತಮ ಹಿಡಿತ ಇದ್ದರೂ ಉತ್ತರ ಕರ್ನಾಟಕ ಅದರಲ್ಲೂ ಪ್ರಮುಖವಾಗಿ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿಯೇ ಆಗಿಲ್ಲ.
ಹೀಗಾಗಿ ಅದನ್ನೆಲ್ಲಾ ಮೊದಲು ಸರಿ ಮಾಡಿಕೊಳ್ಳಬೇಕಿದೆ. ಸರ್ಕಾರವೇ ಈಗ ಹೇಳಿರುವ ರೀತಿ, 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವಿಶೇಷ ಅನುದಾನ ಬಿಡುಗಡೆ ಆಗಿದೆ. ಈ ರೀತಿ ಇದ್ದರೂ ಅಭಿವೃದ್ಧಿ ಮರೀಚಿಕೆ ಆಗಿದೆ ಎಂಬ ಆರೋಪ ಇದೆ. ಕೂಡಲೇ ಇದೆಲ್ಲವನ್ನು ಸರಿಯಾದ ದಾರಿಗೆ ತರಬೇಕು ಎಂಬ ಒತ್ತಾಯದ ಜೊತೆಗೆ ಉತ್ತರ ಕರ್ನಾಟಕದಲ್ಲಿ ಪ್ರಮುಖ ಕೈಗಾರಿಕೆಗಳು & ಐಟಿ ಕಂಪನಿಗಳ ಸ್ಥಾಪನೆಯೂ ಆಗಬೇಕು ಎಂಬ ಆಗ್ರಹ ಜನರದ್ದಾಗಿದೆ.
ಸರ್ಕಾರಿ ಉದ್ಯೋಗಗಳ ಸೃಷ್ಟಿಗೆ ಆದ್ಯತೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಆ ಹುದ್ದೆಗಳನ್ನು ತುಂಬಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಇದೆ. ಹೀಗಾಗಿ ಅದನ್ನು ಮೊದಲು ಸರಿ ಮಾಡಬೇಕಿದೆ. ಹಾಗೇ ಕಲ್ಯಾಣ ಕರ್ನಾಟಕ ಭಾಗದ ನಿವಾಸಿಗಳು ತಮ್ಮ ಸ್ಥಳೀಯ ರಾಜಕಾರಣಿಗಳ ಮೇಲೆ ಅಲಂಬಿತರಾಗದೆ ಸರ್ಕಾರದ ಸೌಲಭ್ಯಗಳನ್ನ ಬಳಸಿಕೊಳ್ಳಬೇಕಿದೆ. ಹಾಗೇ ಪ್ರತಿವರ್ಷ ಬರುವ ನೂರಾರು ಕೋಟಿ ರೂಪಾಯಿ ಅನುದಾನ ಖರ್ಚಾಗದೆ ಹಾಗೇ ವಾಪಸ್ ಹೋಗುತ್ತಿದೆ ಎನ್ನುವ ಭಾರಿ ಗಂಭೀರ ಆರೋಪಗಳು ಕೂಡ ಕೇಳಿ ಬರುತ್ತಿದ್ದು, ಈ ಬಗ್ಗೆ ಕೂಡ ಜಾಗರೂಕತೆ ಅಗತ್ಯವಾಗಿದೆ.
ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು
2025 ಎಐ ಯುಗದ ಆರಂಭ ಅಂದ್ರೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಬ್ಬರವು ಶುರುವಾಗುತ್ತಿರುವ ಕಾಲಘಟ್ಟ ಎನ್ನಲಾಗುತ್ತಿದೆ. ಈ ದೃಷ್ಟಿಕೋನದಲ್ಲಿ ನೋಡುವುದಾದರೆ ಕೂಡಲೇ ಕಲ್ಯಾಣ ಕರ್ನಾಟಕ ಭಾಗವೂ ಸೇರಿದಂತೆ ಕಿತ್ತೂರು ಕರ್ನಾಟಕ ಹಾಗೂ ಒಟ್ಟಾರೆ ಉತ್ತರ ಕರ್ನಾಟಕ ಭಾಗದಲ್ಲಿ ಗುಣಮಟ್ಟದ ಆಧುನಿಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಒಟ್ನಲ್ಲಿ ಇದೆಲ್ಲಾ ನಡೆದರೆ ಮಾತ್ರ ಭವಿಷ್ಯದ ಹೋರಾಟ ಮತ್ತು ಬದುಕಿಗೆ ಕಲ್ಯಾಣ ಕರ್ನಾಟಕದ ಮಕ್ಕಳು ಸಿದ್ಧವಾಗಲು ಸಾಧ್ಯ. ಹೀಗಾಗಿ ಕೂಡಲೇ ಆಗಿರುವ ತಪ್ಪುಗಳನ್ನು ಸರಿ ಮಾಡಿಕೊಳ್ಳುವ ಕೆಲಸ ಶುರುವಾಗಬೇಕು ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ.












Click it and Unblock the Notifications