Bidadi Township: ಬಿಡದಿ ಟೌನ್‌ಶಿಪ್ ರದ್ದುಗೊಳಿಸುವವರೆಗೂ ವಿಧಾನಸೌಧದಲ್ಲಿ ಧರಣಿ ಕೂರುವೆ: ಯತ್ನಾಳ್ ಘೋಷಣೆ
ಬೆಂಗಳೂರು: ರಾಜ್ಯ ರಾಜಧಾನಿಯ ಹೊರವಲಯದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ ನಡೆಯುತ್ತಿರುವ ರೈತರ ಹೋರಾಟ ಈಗ ಮತ್ತೊಂದು ಆಯಾಮ ಪಡೆದುಕೊಂಡಿದೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೈಗೊಂಡಿರುವ ಹೋರಾಟದ ನಿರ್ಧಾರಕ್ಕೆ ಈಗ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ರಾಜಕೀಯ ಇತಿಹಾಸದಲ್ಲೇ ಅಪರೂಪದ ಒಗ್ಗಟ್ಟಿಗೆ ಸಾಕ್ಷಿಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ವಿಧಾನಸೌಧದ ಒಳಗೆ ಧರಣಿ ಕೂರಲು ನಿರ್ಧರಿಸಿರುವ ದೇವೇಗೌಡರ ನಿಲುವಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲ ಘೋಷಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.
ದೇವೇಗೌಡರ ಜೊತೆ ನಾನೂ ಧರಣಿ ಕೂರುವೆ; ಯತ್ನಾಳ್
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿರುವ ಬಸನಗೌಡ ಪಾಟೀಲ್ ಯತ್ನಾಳ್, ಮಣ್ಣಿನ ಮಗ ಎಚ್.ಡಿ.ದೇವೇಗೌಡರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಾರಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆಯ ವಿರುದ್ಧ ಗೌಡರು ವಿಧಾನಸೌಧದಲ್ಲಿ ಧರಣಿ ಕೂರುವುದಾಗಿ ಘೋಷಿಸಿದ್ದಾರೆ. ಅವರ ಈ ನಿಲುವಿಗೆ ನನ್ನ ಪೂರ್ಣ ಬೆಂಬಲವಿದೆ. ಈ ವಿವಾದಿತ ಯೋಜನೆಯನ್ನು ಸರ್ಕಾರ ಸಂಪೂರ್ಣವಾಗಿ ರದ್ದುಗೊಳಿಸುವವರೆಗೂ ದೇವೇಗೌಡರ ಜೊತೆ ನಾನೂ ವಿಧಾನಸೌಧದ ಒಳಗೇ ಧರಣಿ ಸತ್ಯಾಗ್ರಹ ನಡೆಸಲಿದ್ದೇನೆ ಎಂದು ಯತ್ನಾಳ್ ಘೋಷಿಸಿದ್ದಾರೆ.

ರೈತರ ಮೇಲಿನ ಕೇಸ್ ವಾಪಸ್ ಪಡೆಯಿರಿ
ಕೇವಲ ಯೋಜನೆ ರದ್ದತಿಗೆ ಮಾತ್ರವಲ್ಲದೆ, ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರ ಪರವಾಗಿಯೂ ಯತ್ನಾಳ್ ಧ್ವನಿ ಎತ್ತಿದ್ದಾರೆ. ಟೌನ್‌ಶಿಪ್ ಯೋಜನೆಗಾಗಿ ಸರ್ಕಾರ ನಡೆಸುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯನ್ನ ರೈತರು ವಿರೋಧಿಸುತ್ತಿದ್ದಾರೆ. ಈ ಹೋರಾಟದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ ಅನ್ನದಾತರ ಮೇಲೆ ಸರ್ಕಾರ ದಾಖಲಿಸಿರುವ ಎಲ್ಲ ಪೊಲೀಸ್ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ವಯೋಸಹಜ ಆರೋಗ್ಯ ಏರುಪೇರುಗಳ ನಡುವೆಯೂ ರೈತರ ಹಿತ ಕಾಯಲು ವಿಧಾನಸೌಧದಲ್ಲೇ ಧರಣಿ ಕೂರಲು ಮಾಜಿ ಪ್ರಧಾನಿ ದೇವೇಗೌಡರು ನಿರ್ಧರಿಸಿರುವುದು ಈಗಾಗಲೇ ಸರ್ಕಾರದ ಮೇಲೆ ಭಾರಿ ಒತ್ತಡ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ಯತ್ನಾಳ್ ಕೂಡ ಈ ಹೋರಾಟಕ್ಕೆ ಧುಮುಕುತ್ತಿರುವುದು ಬಿಡದಿ ಟೌನ್‌ಶಿಪ್ ವಿವಾದವನ್ನು ರಾಜ್ಯ ಮಟ್ಟದ ಬೃಹತ್ ಹೋರಾಟವಾಗಿ ಮಾರ್ಪಡಿಸುವ ಮುನ್ಸೂಚನೆ ನೀಡಿದೆ. ವಿಪಕ್ಷಗಳ ಈ ಜಂಟಿ ಆಪರೇಷನ್‌ಗೆ ಸರ್ಕಾರ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications