ಪ್ರಯಾಣಿಕರೇ ಗಮನಿಸಿ: ಜುಲೈ 22ರಿಂದ ಈ ಮಾರ್ಗದ ರೈಲುಗಳ ಸಂಚಾರ ಭಾಗಶಃ ರದ್ದು, ಹಲವು ರೈಲುಗಳು ಲೇಟ್
ಜುಲೈ ಕೊನೆಯ ವಾರದಲ್ಲಿ ರೈಲಿನಲ್ಲಿ ಪ್ರಯಾಣಿಸಲು ನೀವೇನಾದರೂ ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಹಾಗಿದ್ದರೆ ನಿಮಗೊಂದು ಪ್ರಮುಖ ಮಾಹಿತಿಯಿದೆ. ನೈಋತ್ಯ ರೈಲ್ವೆ ವಲಯದ ಈ ಪ್ರಮುಖ ನಿಲ್ದಾಣದಲ್ಲಿ ವಿಶೇಷ ತಾಂತ್ರಿಕ ಕಾರಣಗಳಿಂದಾಗಿ ಜುಲೈ 22ರಿಂದ ಜುಲೈ 28ರವರೆಗೆ ಹಲವು ಪ್ರಮುಖ ರೈಲುಗಳ ವೇಳಾಪಟ್ಟಿಯಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಕೆಲವು ರೈಲುಗಳು ಸಂಪೂರ್ಣವಾಗಿ ಬದಲಾದ ನಿಲ್ದಾಣದಿಂದ ಸಂಚರಿಸಲಿದ್ದರೆ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಹೊರಡುವ ಇನ್ನೂ ಕೆಲವು ಎಕ್ಸ್‌ಪ್ರೆಸ್ ರೈಲುಗಳು ಗಂಟೆಗಟ್ಟಲೆ ತಡವಾಗಿ ಓಡಲಿವೆ. ಹೀಗಾಗಿ ಪ್ರಯಾಣದ ದಿನದಂದು ನಿಲ್ದಾಣಕ್ಕೆ ಹೋಗಿ ಪರದಾಡುವ ಮುನ್ನ ಯಾವೆಲ್ಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ? ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಹೌದು, ಲೊಂಡಾ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ರೈಲ್ವೆ ಇಲಾಖೆಯು ತುರ್ತು ಇಂಜಿನಿಯರಿಂಗ್ ಕಾಮಗಾರಿ ಕೈಗೆತ್ತಿಕೊಂಡಿದೆ. ಈ ತಾಂತ್ರಿಕ ಕೆಲಸಗಳ ಹಿನ್ನೆಲೆಯಲ್ಲಿ ಬೆಳಗಾವಿ, ಲೊಂಡಾ, ಮಿರಜ್ ಹಾಗೂ ಕ್ಯಾಸಲ್ ರಾಕ್ ಮಾರ್ಗವಾಗಿ ಚಲಿಸುವ ಹಲವು ಪ್ಯಾಸೆಂಜರ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಇದರೊಂದಿಗೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬರುವ ಕೆಲವು ಪ್ರಮುಖ ರೈಲುಗಳು ಮಾರ್ಗಮಧ್ಯೆ ವಿಳಂಬವಾಗಿ ಸಂಚರಿಸಲಿವೆ.

ಬದಲಾಗಿರುವ ರೈಲುಗಳ ಸಂಪೂರ್ಣ ವೇಳಾಪಟ್ಟಿ
ಜು.24ರಿಂದ 27ರವರೆಗೆ ರೈಲು ಸಂಖ್ಯೆ 56931 ಮಿರಜ್-ಲೊಂಡಾ ಡೈಲಿ ಪ್ಯಾಸೆಂಜರ್ ರೈಲು ಬೆಳಗಾವಿ ಮತ್ತು ಲೊಂಡಾ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಲೊಂಡಾ ಬದಲಿಗೆ ಬೆಳಗಾವಿಯಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಇದೇ ಮಾರ್ಗದ ಮರುಪ್ರಯಾಣದ ರೈಲು ಸಂಖ್ಯೆ 56932 ಲೊಂಡಾ-ಮಿರಜ್ ಡೈಲಿ ಪ್ಯಾಸೆಂಜರ್ ರೈಲು 25ರಿಂದ 28ರವರೆಗೆ ಲೊಂಡಾ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಇದು ಲೊಂಡಾ ಬದಲಿಗೆ ಬೆಳಗಾವಿಯಿಂದಲೇ ತನ್ನ ನಿಗದಿತ ಸಮಯಕ್ಕೆ ಮಿರಜ್ ಕಡೆಗೆ ಪ್ರಯಾಣವನ್ನು ಪ್ರಾರಂಭಿಸಲಿದೆ.
ಇನ್ನು ಕ್ಯಾಸಲ್ ರಾಕ್ ಮಾರ್ಗದ ರೈಲುಗಳಿಗೂ ಈ ಕಾಮಗಾರಿ ಬಿಸಿ ತಟ್ಟಿದ್ದು, ಇದೇ ಅವಧಿಯಲ್ಲಿ ರೈಲು ಸಂಖ್ಯೆ 17333 ಮಿರಜ್-ಕ್ಯಾಸಲ್ ರಾಕ್ ಡೈಲಿ ಎಕ್ಸ್‌ಪ್ರೆಸ್ ರೈಲು ಬೆಳಗಾವಿ ಮತ್ತು ಕ್ಯಾಸಲ್ ರಾಕ್ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಕ್ಯಾಸಲ್ ರಾಕ್ ಬದಲಿಗೆ ಬೆಳಗಾವಿಯಲ್ಲಿಯೇ ತನ್ನ ಪ್ರಯಾಣವನ್ನು ಮುಗಿಸಲಿದೆ. ರೈಲು ಸಂಖ್ಯೆ 17334 ಕ್ಯಾಸಲ್ ರಾಕ್-ಮಿರಜ್ ಡೈಲಿ ಎಕ್ಸ್‌ಪ್ರೆಸ್ ರೈಲು ಕೂಡ ಕ್ಯಾಸಲ್ ರಾಕ್ ಮತ್ತು ಬೆಳಗಾವಿ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಕ್ಯಾಸಲ್ ರಾಕ್ ಬದಲಿಗೆ ಬೆಳಗಾವಿಯಿಂದಲೇ ತನ್ನ ನಿಗದಿತ ಸಮಯಕ್ಕೆ ಮಿರಜ್ ಕಡೆಗೆ ಸಂಚಾರ ಆರಂಭಿಸಲಿದೆ.
ಯಾವೆಲ್ಲ ರೈಲು ವಿಳಂಬ
ಕಾಮಗಾರಿಯ ಅವಧಿಯಲ್ಲಿ ರೈಲುಗಳ ಸುರಕ್ಷತೆಯ ದೃಷ್ಟಿಯಿಂದ ಕೆಲವು ರೈಲುಗಳನ್ನು ಮಾರ್ಗಮಧ್ಯೆ ನಿಯಂತ್ರಿಸಿ ತಡವಾಗಿ ಚಲಿಸಲು ವ್ಯವಸ್ಥೆ ಮಾಡಲಾಗಿದೆ. ಜುಲೈ 22ರಂದು ಲೋಕಮಾನ್ಯ ತಿಲಕ್ ಟರ್ಮಿನಸ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16554 ಲೋಕಮಾನ್ಯ ತಿಲಕ್ ಟರ್ಮಿನಸ್-ಎಸ್ಎಮ್'ವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ 40 ನಿಮಿಷಗಳ ಕಾಲ ವಿಳಂಬವಾಗಲಿದೆ. ಇದರೊಂದಿಗೆ ಜು.26 ಮತ್ತು 27ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 20653 ಕೆಎಸ್ಆರ್ ಬೆಂಗಳೂರು-ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ ರೈಲು ಮಾರ್ಗಮಧ್ಯೆ ಕ್ರಮವಾಗಿ 30 ನಿಮಿಷ ಹಾಗೂ 60 ನಿಮಿಷಗಳ ಕಾಲ ವಿಳಂಬವಾಗಿ ಸಂಚರಿಸಲಿದೆ. ಈ ನಿಲ್ದಾಣಗಳ ಮಾರ್ಗವಾಗಿ ಪ್ರಯಾಣ ಬೆಳೆಸುವ ಸಾರ್ವಜನಿಕರು ರೈಲ್ವೆ ಇಲಾಖೆಯ ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನಿಸಿ, ತಮ್ಮ ಪ್ರಯಾಣವನ್ನು ಪ್ಲ್ಯಾನ್ ಮಾಡಿಕೊಳ್ಳುವಂತೆ ಕೋರಲಾಗಿದೆ.












Click it and Unblock the Notifications