ಬೆಂಗಳೂರಲ್ಲಿ ಆಸ್ತಿ ತೆರಿಗೆ ಬಾಕಿದಾರರಿಗೆ ಜಿಬಿಎ ಪಾಲಿಕೆಯಿಂದ ಬಿಗ್ ಶಾಕ್!
ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದ ಆಸ್ತಿ ತೆರಿಗೆ ವಸೂಲಿ ಮಾಡುವುದಕ್ಕೆ ಗ್ರೇಟರ್ ಬೆಂಗಳೂರು ಆಡಳಿತದ ಪ್ರಮುಖ ಪಾಲಿಕೆ ಮುಂದಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಕೆ.ಎನ್.ರಮೇಶ್ ಅವರು ಬುಧವಾರ ಕಂದಾಯ ವಿಭಾಗದ ಅಧಿಕಾರಿ ನೌಕರರೊಂದಿಗೆ ನಡೆದ ಸಭೆಯಲ್ಲಿ ಆಸ್ತಿ ತೆರಿಗೆ ವಸೂಲಿ ಹಾಗೂ ಇ-ಖಾತಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಅಗತ್ಯ ನಿರ್ದೇಶನಗಳನ್ನು ನೀಡಿದ್ದಾರೆ.
ಆಸ್ತಿತೆರಿಗೆ ವಸೂಲಾತಿಯಲ್ಲಿ ಅತೀ ಹೆಚ್ಚು ಬಾಕಿ ಉಳಿಸಿಕೊಂಡಿರುವ ಉಪವಿಭಾಗಗಳ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಹೆಚ್ಚು ಆಸ್ತಿತೆರಿಗೆ ವಸೂಲಾತಿ ಮಾಡುವಂತೆ ಸೂಚಿಸಿದ್ದಾರೆ. ಬಹುಮಹಡಿ ಕಟ್ಟಡಗಳ ಘೋಷಣೆಗಳನ್ನು ಪುನರ್ ಪರಿಶೀಲನೆಗೂ ಇದೇ ಸಂದರ್ಭದಲ್ಲಿ ಸೂಚನೆ ನೀಡಲಾಗಿದೆ. ಬೃಹತ್ ಅಳತೆಯುಳ್ಳ ಕಟ್ಟಡಗಳನ್ನು ಪಟ್ಟಿ ಮಾಡಿಕೊಳ್ಳಲು ಹಾಗೂ ಅಂತಹ ಕಟ್ಟಡಗಳ ಆಸ್ತಿತೆರಿಗೆ ಘೋಷಣೆಗಳನ್ನು ಪರಿಶೀಲಿಸಿ ಅಗತ್ಯವಿದ್ದಲ್ಲಿ ಟೋಟಲ್ ಸ್ಟೇಷನ್ ಸರ್ವೆ ಮೂಲಕ ವೈಜ್ಞಾನಿಕವಾಗಿ ಕಟ್ಟಡದ ಅಳತೆಯನ್ನು ಮಾಡಿ ವ್ಯತ್ಯಾಸ ಕಂಡುಬಂದ ಪ್ರಕರಣಗಳಲ್ಲಿ ಆಸ್ತಿತೆರಿಗೆ ಪರಿಷ್ಕರಿಸಲು ಸೂಚಿಸಿದರು. ಈಗಾಗಲೇ ಟೋಟಲ್ ಸ್ಟೇಷನ್ ಸರ್ವೆ ನಡೆಸಲಾಗಿರುವ ಸ್ವತ್ತುಗಳಿಂದ ಚಾಲ್ತಿ ಸಾಲಿನ ಆಸ್ತಿತೆರಿಗೆ ಪಾವತಿಗಳನ್ನು ಪರಿಶೀಲಿಸಿ ಕಡಿಮೆ ಮೊತ್ತ ಪಾವತಿಸಿದ್ದಲ್ಲಿ ಕಾಯ್ದೆ ಹಾಗೂ ನಿಯಮಗಳನುಸಾರ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ.

ಆಸ್ತಿ ತೆರಿಗೆ ಕುರಿತ ನ್ಯಾಯಾಲಯದ ಪ್ರಕರಣಗಳ ಮಾಹಿತಿ: ಇನ್ನು ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿತೆರಿಗೆ ಕುರಿತಂತೆ ಸ್ವತ್ತಿನ ಮಾಲೀಕರು ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಸಿರುವ ದಾವೆಗಳನ್ನು ಕುರಿತಂತೆ, ಸ್ವತ್ತಿನ ವಿವರ, ದಾವೆಯ ಕಾರಣ, ಬೇಡಿಕೆ ಮೊತ್ತ, ದಾವೆಯ ಹಾಲಿ ಸ್ಥಿತಿ, ಇತ್ತೀಚಿನ ಆದೇಶ ಮುಂತಾದ ವಿವರಗಳನ್ನು ಒಳಗೊಂಡಂತೆ ಸಂಪೂರ್ಣ ಮಾಹಿತಿಯನ್ನು ಸಲ್ಲಿಸಲು ಉಪವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು. ಸದರಿ ದಾವೆಗಳ ಇತ್ಯರ್ಥಕ್ಕೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ.
ಓ.ಸಿ. ಪಡೆದಿರುವ ಕಟ್ಟಡಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ: ಇನ್ನು ಕಳೆದ 5 ವರ್ಷಗಳಲ್ಲಿ ಪಾಲಿಕೆಯ ನಗರ ಯೋಜನೆ ವಿಭಾಗದಿಂದ ನೀಡಲಾಗಿರುವ ಸ್ವಾಧೀನಾನುಭವ ಪ್ರಮಾಣ ಪತ್ರಗಳ ಮಾಹಿತಿಯನ್ನು ಉಪವಿಭಾಗದ ಅಧಿಕಾರಿಗಳು ಪಡೆಯುವುದರೊಂದಿಗೆ, ಅಂತಹ ಸ್ವತ್ತುಗಳಿಗೆ ವಿಶೇಷವಾಗಿ ವಸತಿ ಸಮುಚ್ಛಯಗಳನ್ನು ಪರಿಶೀಲಿಸಿ ಅವುಗಳಲ್ಲಿನ ಎಲ್ಲಾ ಘಟಕಗಳಿಗೆ (Flats) ಖಾತೆ ನೀಡುವುದರೊಂದಿಗೆ ಎಲ್ಲಾ ಸ್ವತ್ತುಗಳನ್ನು ಆಸ್ತಿತೆರಿಗೆ ಜಾಲಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಪಿಜಿ ಕಟ್ಟಡಗಳ ಆಸ್ತಿ ತೆರಿಗೆಗಳನ್ನು ಪರಿಶೀಲಿಸಿ: ಬೆಂಗಳೂರಿನ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಪೇಯಿಂಗ್ ಗೆಸ್ಟ್ ಉಪಯೋಗದ ಕಟ್ಟಡಗಳನ್ನು ಪಟ್ಟಿ ಮಾಡಿಕೊಂಡು ಅಂತಹ ಸ್ವತ್ತುಗಳ ಬೆಸ್ಕಾಂ ಸಂಪರ್ಕದ ಮಾಹಿತಿಯ ಆಧಾರದ ಮೇಲೆ ಉಪಯೋಗ ಹಾಗೂ ಅಳತೆಗಳ ಅನುಸಾರ ಅನ್ವಯಿಸುವ ಆಸ್ತಿತೆರಿಗೆಯನ್ನು ಲೆಕ್ಕಾಚಾರ ಮಾಡಿಕೊಂಡು ಎಸ್‌ಎಎಸ್ ಘೋಷಣೆಗಳನ್ನು ಪರಿಶೀಲಿಸಿ ತಪ್ಪಾಗಿರುವ ಪ್ರಕರಣಗಳಿಗೆ ಕಾಯ್ದೆ ಹಾಗೂ ನಿಯಮಗಳಂತೆ ಆಸ್ತಿತೆರಿಗೆ ಪರಿಷ್ಕರಿಸಲು ಸೂಚಿಸಿದ್ದಾರೆ.












Click it and Unblock the Notifications