ಭಕ್ತಿಯಿಲ್ಲದೆ ಕೊಟ್ಟವರ ಹಣ ಕದ್ದಿರಬಹುದು: ರಾಮ ಮಂದಿರದ ದೇಣಿಗೆ ಬಗ್ಗೆ ಯುಪಿ ಸ್ಪೀಕರ್ ಹೇಳಿಕೆಗೆ ಆಕ್ರೋಶ
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕಳ್ಳತನವಾಗಿರುವ ಪ್ರಕರಣದ ಕುರಿತು ಉತ್ತರ ಪ್ರದೇಶದ ವಿಧಾನಸಭೆ ಸ್ಪೀಕರ್ ಸತೀಶ್ ಮಹಾನ ಅವರು ನೀಡಿರುವ ಹೇಳಿಕೆಯೊಂದು ಈಗ ದೇಶಾದ್ಯಂತ ವಿವಾದಕ್ಕೆ ಗುರಿಯಾಗಿದೆ. ದೇಣಿಗೆ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ಸತೀಶ್ ಮಹಾನ ಬಹುಶಃ ಯಾರ ಹಣ ಕಳ್ಳತನವಾಗಿದೆಯೋ, ಅವರು ನಿಜವಾದ ಶ್ರದ್ಧೆ ಮತ್ತು ಭಕ್ತಿಯಿಂದ ದೇಣಿಗೆ ನೀಡಿರಲಿಕ್ಕಿಲ್ಲ. ನಾವು ಸಂಪೂರ್ಣ ಭಕ್ತಿಯಿಂದ ದೇಣಿಗೆ ನೀಡಿದ್ದೇವೆ, ನಮ್ಮ ಹಣ ಇನ್ನೂ ಮಂದಿರದಲ್ಲೇ ಸುರಕ್ಷಿತವಾಗಿದೆ ಎಂದಿದ್ದಾರೆ. ಅವರ ಹೇಳಿಕೆಗೆ ವಿರೋಧ ಪಕ್ಷಗಳು ಕೂಡ ಆಕ್ರೋಶ ವ್ಯಕ್ತಪಡಿಸಿವೆ.
ಭಕ್ತಿ ಅಳೆಯಲು ಜಿಪಿಎಸ್ ಇಟ್ಟಿದ್ದೀರಾ?
ಸ್ಪೀಕರ್ ಅವರ ಈ ಹೇಳಿಕೆಗೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಾಯಕರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಎಸ್ಪಿ ನಾಯಕ ಅಶುತೋಷ್ ವರ್ಮಾ ಮಾತನಾಡಿ, ವಿಧಾನಸಭೆಯ ಸ್ಪೀಕರ್ ಸ್ಥಾನದಲ್ಲಿರುವವರು ಸಾರ್ವಜನಿಕರ ನಂಬಿಕೆ ಮತ್ತು ಭಕ್ತರ ಕಾಣಿಕೆಯ ವಿಷಯವನ್ನು ಇಷ್ಟು ಲಘುವಾಗಿ ತೆಗೆದುಕೊಳ್ಳಬಾರದು. ಇದು ಅತ್ಯಂತ ಹಾಸ್ಯಾಸ್ಪದ ಮತ್ತು ಬೇಜವಾಬ್ದಾರಿ ಹೇಳಿಕೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ವಕ್ತಾರ ಅಂಶು ಅವಸ್ತಿ ಮಾತನಾಡಿ, "ಬಿಜೆಪಿ ನಾಯಕರು ರಾಮ ಮಂದಿರಕ್ಕೆ ಬಂದ ದೇಣಿಗೆಯನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಕಳ್ಳತನವು 140 ಕೋಟಿ ಭಾರತೀಯರ ನಂಬಿಕೆಗೆ ದ್ರೋಹ ಬಗೆದಿದೆ. ಜನರು ಯಾವ ಮಟ್ಟದ ಭಕ್ತಿಯಿಂದ ದೇಣಿಗೆ ನೀಡಿದ್ದಾರೆ ಎಂದು ಅಳೆಯಲು ಸ್ಪೀಕರ್ ಅವರ ಬಳಿ ಏನಾದರೂ ಜಿಪಿಎಸ್ ಇತ್ತೇ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಏನಿದು ಅಯೋಧ್ಯೆ ದೇಣಿಗೆ ವಿವಾದ?
ಜೂನ್ ಮೊದಲ ವಾರದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಬಂದ ಕಾಣಿಕೆ ಹಣದ ಎಣಿಕೆಯಲ್ಲಿ ಭಾರಿ ವ್ಯತ್ಯಾಸಗಳು ಕಂಡುಬಂದಾಗ ಈ ಹಗರಣ ಬೆಳಕಿಗೆ ಬಂದಿತ್ತು. ಮಂದಿರದ ಟ್ರಸ್ಟ್ ನೀಡಿದ ದೂರಿನ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನ ರಚಿಸಿತ್ತು. ತನಿಖೆ ವೇಳೆ ಪ್ರಾಥಮಿಕ ಹಂತದಲ್ಲೇ ಹಣ ದುರುಪಯೋಗವಾಗಿರುವುದು ಪತ್ತೆಯಾಗಿದ್ದು, ಎಫ್ಐಆರ್ ದಾಖಲಿಸಿ ಹಣ ಎಣಿಕೆ ಕಾರ್ಯದಲ್ಲಿದ್ದ 8 ಜನರನ್ನು ಈಗಾಗಲೇ ಬಂಧಿಸಲಾಗಿದೆ.
ಈ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಲ್ಲಿ ಭಾರಿ ಬದಲಾವಣೆಗಳಾಗಿವೆ. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಅವರು ಜುಲೈ 6ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಟ್ರಸ್ಟ್ ಅದನ್ನು ಅಂಗೀಕರಿಸಿದೆ. ಅವರ ಜಾಗಕ್ಕೆ ನಿವೃತ್ತ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಕೃಷ್ಣ ಮೋಹನ್ ಅವರನ್ನು ನೇಮಿಸಲಾಗಿದೆ. ಟ್ರಸ್ಟಿ ಅನಿಲ್ ಮಿಶ್ರಾ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಗೋಪಾಲ್ ರಾವ್ ಅವರನ್ನ ಟ್ರಸ್ಟ್ನಿಂದ ಉಚ್ಚಾಟನೆ ಮಾಡಲಾಗಿದೆ. ಭಕ್ತರ ಕೋಟ್ಯಂತರ ರೂಪಾಯಿ ದೇಣಿಗೆ ಕಳ್ಳತನವಾಗಿರುವ ಬೆನ್ನಲ್ಲೇ ಸ್ಪೀಕರ್ ನೀಡಿರುವ ಈ ಹೇಳಿಕೆ ಸದ್ಯ ಉತ್ತರ ಪ್ರದೇಶ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.
ದೇಣಿಗೆ ಹಣ ದುರುಪಯೋಗ ಭಕ್ತರಿಗೆ ನೋವು ತಂದಿದೆ; ಯೋಗಿ ಆದಿತ್ಯನಾಥ್
ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಹಣ ದುರುಪಯೋಗವಾಗಿರುವ ಪ್ರಕರಣದ ಕುರಿತು ಮಾತನಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಕಳ್ಳತನವು ಕೋಟ್ಯಂತರ ರಾಮಭಕ್ತರ ನಂಬಿಕೆ ಮತ್ತು ಭಾವನೆಗಳಿಗೆ ಆಘಾತ ಉಂಟುಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಜೂನ್ ಮೊದಲ ವಾರದಲ್ಲಿ ಬೆಳಕಿಗೆ ಬಂದಿದ್ದ ಈ ದೇಣಿಗೆ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಈ ಘಟನೆಯು ನಮ್ಮಂತಹ ಪ್ರತಿಯೊಬ್ಬ ರಾಮಭಕ್ತರ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ.
ಆದರೆ ಇಡೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಅದರಲ್ಲಿ ಸರ್ಕಾರದ ಹಸ್ತಕ್ಷೇಪವಿರುವುದಿಲ್ಲ. ಟ್ರಸ್ಟ್ ಮನವಿ ಮಾಡಿದ ತಕ್ಷಣವೇ ನಾವು ಎಸ್ಐಟಿ ರಚಿಸಿ, ತನಿಖಾ ವರದಿ ಬಂದ ತಕ್ಷಣ ಕಠಿಣ ಕಾನೂನು ಕ್ರಮ ಜರುಗಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಸುಮಾರು 150 ಜನರಲ್ಲಿ ಕೇವಲ 8 ವ್ಯಕ್ತಿಗಳ ವಿರುದ್ಧ ಮಾತ್ರ ಸಾಕ್ಷ್ಯಗಳು ಲಭ್ಯವಾಗಿದ್ದು, ಈಗಾಗಲೇ 6 ಜನರನ್ನು ಬಂಧಿಸಲಾಗಿದೆ ಮತ್ತು ಇಬ್ಬರನ್ನ ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ಗೆ ಯಾವುದೇ ನೈತಿಕತೆ ಇಲ್ಲ
ನೈತಿಕ ಹೊಣೆ ಹೊತ್ತು ಟ್ರಸ್ಟ್ನ ಪ್ರಮುಖ ಪದಾಧಿಕಾರಿಗಳಾದ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೆಲವು ವ್ಯಕ್ತಿಗಳು ಮಾಡಿದ ತಪ್ಪಿಗಾಗಿ ಇಡೀ ಅಯೋಧ್ಯೆ, ರಾಮ ಜನ್ಮಭೂಮಿ ಮತ್ತು ಹಿಂದೂಗಳ ಶ್ರದ್ಧಾಕೇಂದ್ರವನ್ನು ಜಾಗತಿಕವಾಗಿ ಮಲಿನಗೊಳಿಸಲು ಪಿತೂರಿ ನಡೆಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ರಾಮಭಕ್ತರ ಮೇಲೆ ಗುಂಡು ಹಾರಿಸಿದ ಹಾಗೂ ಭಗವಾನ್ ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳಿಗೆ ಇಂದು ಅಯೋಧ್ಯೆಯ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಅವರು ಖಾರವಾಗಿ ಟೀಕಿಸಿದರು.












Click it and Unblock the Notifications