AI Video: ಮೋದಿ & ತಾಯಿಯ ಎಐ ವಿಡಿಯೋ ಮಾಡಿದ ಕಾಂಗ್ರೆಸ್‌ಗೆ ಬಿಗ್ ಶಾಕ್
ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಂದ ಮೇಲೆ ಜಾಗತಿಕ ಕ್ರಾಂತಿಯಾಗುತ್ತಿದೆ. ಮತ್ತೊಂದೆಡೆ ದೊಡ್ಡ ದೊಡ್ಡ ಅವಾಂತರಗಳನ್ನೂ ಸೃಷ್ಟಿಸುತ್ತಿದೆ. ಸುಲಭವಾಗಿ ಫೋಟೋ ಎಡಿಟ್, ವಿಡಿಯೋ ಕ್ರಿಯೇಟ್ ಆಯ್ಕೆಗಳು ಐಎನಲ್ಲಿದ್ದು, ದೊಡ್ಡ ಅಪಾಯ ತಂದೊಡ್ಡುತ್ತಿವೆ. ರಾಜಕೀಯ ವಲಯದಲ್ಲೂ ಎಐ ವಿಡಿಯೋಗಳು ಟ್ರೆಂಡಾಗುತ್ತಿವೆ. ಇದೀಗ ಪ್ರಧಾನಿ ಮೋದಿ ಹಾಗೂ ಅವರ ತಾಯಿಯ ಕುರಿಯಾದ ಎಐ ವಿಡಿಯೋ ಹಾಕುವ ಮೂಲಕ ಕಾಂಗ್ರೆಸ್ ಫಜೀತಿಗೆ ಸಿಲುಕಿದೆ. ಬಿಹಾರ ಕಾಂಗ್ರೆಸ್ ಘಟಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಈ ಎಐ ವಿಡಿಯೋ ತಕ್ಷಣ ಡಿಲೀಟ್ ಮಾಡುವಂತೆ ಪಾಟ್ನಾ ಹೈಕೋರ್ಟ್ ಸೂಚನೆ ನೀಡಿದೆ.
ಸೆಪ್ಟೆಂಬರ್ 10ರಂದು ಬಿಹಾರ ಕಾಂಗ್ರೆಸ್ ಘಟಕವು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿ ಹೀರಾಬೆನ್ ಅವರ ಎಐ ಆಧಾರಿತ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿತ್ತು. ಈ 36 ಸೆಕೆಂಡುಗಳ ವೀಡಿಯೊ ಪೋಸ್ಟ್ ಮಾಡಿದ ನಂತರ ವಿವಾದ ಸೃಷ್ಟಿಸಿತ್ತು. ಆ ವಿಡಿಯೋ ಜೊತೆಗೆ "ಪ್ರಧಾನಿಯವರು ತಮ್ಮ ದಿವಂಗತ ತಾಯಿಯ ಬಗ್ಗೆ ಕನಸು ಕಾಣುತ್ತಿದ್ದಾರೆ, ಅವರು ಬಿಹಾರದಲ್ಲಿ ತಮ್ಮ ರಾಜಕೀಯದ ಬಗ್ಗೆ ಟೀಕಿಸುತ್ತಿದ್ದಾರೆ" ಎಂದು ಬರೆಯಲಾಗಿತ್ತು. ಇದನ್ನು ಪಾಟ್ನಾ ಹೈಕೋರ್ಟ್ ಕೂಡಲೇ ತೆಗೆದುಹಾಕುವಂತೆ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದೆ.

ಈ ವಿಡಿಯೋ ವೈರಲ್ ಆದ ನಂತರ ಬಿಜೆಪಿ ಮತ್ತು ಎನ್‌ಡಿಎ ಮಿತ್ರಪಕ್ಷಗಳು ಖಂಡನೆ ವ್ಯಕ್ತಪಡಿಸಿದ್ದವು. ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಲು ಕಾಂಗ್ರೆಸ್ ಇಂತಹ ನಾಚಿಕೆಗೇಡಿನ ತಂತ್ರಗಳನ್ನು ಬಳಸುತ್ತಿದೆ ಎಂದು ಆರೋಪಿಸಿದ್ದವು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಪ್ರಚೋದನೆಯಾಗಿ ಈ ವೀಡಿಯೊ ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಪ್ರಧಾನಿ ಮೋದಿ ಹಾಗೂ ಅವರ ದಿವಂಗತ ತಾಯಿಯ ಬಗ್ಗೆ ನಾವು ಯಾವುದೇ ಅಗೌರವ ತೋರಿಸಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.
ಬಿಜೆಪಿ ದೆಹಲಿ ಚುನಾವಣಾ ಘಟಕದ ಸಂಚಾಲಕ ಸಂಕೇತ್ ಗುಪ್ತಾ ಅವರು ಈ ಸಂಬಂಧ ದೂರು ನೀಡಿದ್ದರು. ಇದರ ಆಧಾರದ ಮೇಲೆ ದೆಹಲಿ ಪೊಲೀಸರು ಸೆಪ್ಟೆಂಬರ್ 13ರಂದು ಕಾಂಗ್ರೆಸ್ ಮತ್ತು ಅದರ ಐಟಿ ಘಟಕದ ವಿರುದ್ಧ ವೀಡಿಯೋ ಸಂಬಂಧ ಪ್ರಕರಣ ದಾಖಲಿಸಿಕೊಂಡಿತ್ತು. ಈ ಎಐ ದೃಶ್ಯಗಳು ಮಾನಹಾನಿಕರ, ಅವು ಪ್ರಧಾನಿ ಮೋದಿಯವರ ತಾಯಿಯ ಘನತೆ ಹಾಗೂ ಸಾಮಾನ್ಯವಾಗಿ ಮಾತೃತ್ವದ ಘನತೆಗೆ ಧಕ್ಕೆ ತರುತ್ತವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ಒಂದು ತಿಂಗಳ ಅವಧಿಯಲ್ಲಿ ಪ್ರಧಾನಿ ಅವರ ದಿವಂಗತ ತಾಯಿ ರಾಜಕೀಯ ವಿವಾದಕ್ಕೆ ಸಿಲುಕುತ್ತಿರುವುದು ಇದು ಎರಡನೇ ಬಾರಿ ಎನ್ನಲಾಗಿದೆ. ಆಗಸ್ಟ್‌ನಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ನೇತೃತ್ವದಲ್ಲಿ ನಡೆದ ಮತದಾರ ಅಧಿಕಾರ ಯಾತ್ರೆಯ ಸಂದರ್ಭದಲ್ಲೂ ಪ್ರಧಾನಿ ಮೋದಿ ಮತ್ತು ಹೀರಾಬೆನ್ ಮೋದಿ ಅವರನ್ನುದ್ದೇಶಿಸಿ ಕೆಟ್ಟ ಘೋಷಣೆಗಳನ್ನು ಕೂಗಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ಈ ಘಟನೆ ದೇಶದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳಿಗೆ ಮಾಡಿದ ಅವಮಾನ ಎಂದಿದ್ದರು. ತನ್ನ ತಾಯಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೋದಿ ಹೇಳಿದ್ದರು. ಇದೀಗ ಕಾಂಗ್ರೆಸ್ ಹಂಚಿಕೊಂಡಿದ್ದ ಈ ಎಐ ವಿಡಿಯೋವನ್ನು ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕುವಂತೆ ಕೋರ್ಟ್ ಕಾಂಗ್ರೆಸ್‌ಗೆ ನಿರ್ದೇಶನ ನೀಡಿದೆ.












Click it and Unblock the Notifications