Kalyana Karnataka: ಕಲ್ಯಾಣ ಕರ್ನಾಟಕ ಜನತೆಗೆ ಡಬಲ್ ಗುಡ್ ನ್ಯೂಸ್ ರಾಜ್ಯ ಸರ್ಕಾರ!
ಕಲಬುರಗಿ, ಸೆಪ್ಟೆಂಬರ್ 17: ಬಹುದಿನದ ಬೇಡಿಕೆಯಂತೆ ಕಲ್ಯಾಣ ಕರ್ನಾಟಕ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಸಂಪುಟ ಅನುಮೋದನೆ ನೀಡಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗಾಗಿ ಕೆಲಸಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮತ್ತು ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ ಮಾಡಲು ಕಲ್ಯಾಣ ಕರ್ನಾಟಕ ಪ್ರದೇಶ ಸಚಿವಾಲಯ ಸ್ಥಾಪನೆಗೆ ಇಂದು ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ದೊರೆತರೂ ಇದುವರೆಗೆ ಇಲ್ಲಿ ಸಚಿವಾಲಯ ಸ್ಥಾಪನೆಯಾಗಿರಲಿಲ್ಲ. ಇದನ್ನು ಮನಗಂಡ ನಮ್ಮ ಸರ್ಕಾರವು ಕಲ್ಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಸಚಿವಾಲಯವನ್ನು ಸ್ಥಾಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಮುಂದಿನ ವಾರದೊಳಗೆ ಹುದ್ದೆಗಳ ಸಮೇತ ಅಧಿಸೂಚನೆ ಹೊರಡಿಸುತ್ತೇವೆಂದು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿನ 8 ಐತಿಹಾಸಿಕ ಮತ್ತು ಪ್ರಾಚೀನ ಸ್ಮಾರಕಗಳನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಸಂರಕ್ಷಣೆಗೆ ಕಳೆದ ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ್ದು, ಇದಕ್ಕಾಗಿ ಸುಮಾರು 313 ಕೋಟಿ ರೂ. ವೆಚ್ಚ ಮಾಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಐತಿಹಾಸಿಕ ಸನ್ನತಿ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ಪ್ರಾಧಿಕಾರವನ್ನು ರಚಿಸಲಾಗುತ್ತಿದೆ.
ಕಳೆದ ವರ್ಷ ಕಲ್ಬುರ್ಗಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ 11,770 ಕೋಟಿ ರೂ. ಗಳಷ್ಟು ಬೃಹತ್ ಮೊತ್ತದ ಯೋಜನೆಗಳು ಹಾಗೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ತೀರ್ಮಾನ ಮಾಡಲಾಗಿತ್ತು. ಅದರಂತೆ ಅದರಲ್ಲಿ ಬಹುತೇಕ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ದಿನಾಂಕ 16-9-2025 ರಂದು ಬೆಂಗಳೂರಿನಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕವೂ ಸೇರಿದಂತೆ ಉತ್ತರ ಕರ್ನಾಟಕದ ಜನರ ಬದುಕನ್ನು ಸುಧಾರಿಸಿ ಹೊಸ ದಿಕ್ಕಿನತ್ತ ಮುನ್ನಡೆಯುವ ಎರಡು ಮಹತ್ವದ ತೀರ್ಮಾನಗಳನ್ನು ನಮ್ಮ ಸರ್ಕಾರವು ತೆಗೆದುಕೊಂಡಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ನೀರಾವರಿ ಯೋಜನೆಗಳಿಗೆ ಅಗತ್ಯವಿರುವ ಭೂಮಿಯನ್ನು ರೈತರಿಂದ ಒಪ್ಪಿಗೆ ಆಧಾರದಲ್ಲಿ ಪಡೆದುಕೊಂಡು ಆಲಮಟ್ಟಿ ಅಣೆಕಟ್ಟೆಯನ್ನು ಎತ್ತರಿಸುವ ಮೂಲಕ 15 ಲಕ್ಷ ಎಕರೆಗೂ ಹೆಚ್ಚಿನ ಭೂ-ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲು ನೀರ್ಮಾನಿಸಿದ್ದೇವೆ. ಈ ಯೋಜನೆಯಿಂದ ರಾಯಚೂರು, ಯಾದಗಿರಿ, ಕಲ್ಬುರ್ಗಿ, ಕೊಪ್ಪಳ ಜಿಲ್ಲೆಗಳ ಬಹುಪಾಲು ಒಣಭೂಮಿಗಳಿಗೆ ನೀರಾವರಿ ಸೌಲಭ್ಯ ದೊರಕುತ್ತದೆ. ಇದಕ್ಕಾಗಿ ಮುಂದಿನ 3 ವರ್ಷಗಳಲ್ಲಿ ನಮ್ಮ ಸರ್ಕಾರವು 70000 ಕೋಟಿ ರೂಗಳಿಗೂ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಲು ತೀರ್ಮಾನಿಸಿದೆ.
ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ತಮ್ಮೆಲ್ಲರಿಗೂ ಶುಭ ಕೋರುತ್ತಾ, ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗದ ಹೊರತು ಸಂಪೂರ್ಣ ರಾಜ್ಯದ ಅಭಿವೃದ್ಧಿ ಅಸಾಧ್ಯ. ಇಲ್ಲಿನ ಜನರ ತಲಾದಾಯವನ್ನು ಹೆಚ್ಚಿಸುವುದರ ಜೊತೆಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲಸೌಕರ್ಯ ಸುಧಾರಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ನಮ್ಮ ಸರ್ಕಾರದ ಗುರಿಯಾಗಿದೆ. ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಬದ್ಧರಾಗಿ ದೃಢ ಸಂಕಲ್ಪ ಮಾಡುವುದರ ಮೂಲಕ ನವ ಭಾರತ ಮತ್ತು ನವ ಕರ್ನಾಟಕ ನಿರ್ಮಿಸೋಣ.
ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳಿಗೆ ಹಾಗೂ ಹೈಮಾಸ್ಟ್ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವುದಕ್ಕಾಗಿ 2023-24ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಟ್ಟು 3,411 ಕೋಟಿ ರೂ. ಒದಗಿಸಲಾಗಿದೆ. ಕೆ.ಕೆ.ಆರ್.ಡಿ.ಬಿ. ಮತ್ತು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರಗಳ ಜಂಟಿ ಅನುದಾನದಲ್ಲಿ ಕಲಬುರಗಿ ನಗರದಲ್ಲಿ ತರಕಾರಿ ಮಾರುಕಟ್ಟೆಯನ್ನು 27 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಶೀಘ್ರವೇ ಇದನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲಾಗುವುದು.
ಪೌರಾಣಿಕ ಹಾಗೂ ಐತಿಹಾಸಿಕವಾಗಿ ಪ್ರಖ್ಯಾತಿ ಹೊಂದಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರವಾಸಿ ಸೌಲಭ್ಯ ಅಭಿವೃದ್ಧಿಪಡಿಸಲು 100 ಕೋಟಿ ರೂ.ಗಳನ್ನು ಒದಗಿಸಲು ಬದ್ಧವಾಗಿದ್ದೇವೆ. ಈಗಾಗಲೇ 10 ಕೋಟಿ ರೂ ನೀಡಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ 2025-26ನೇ ಸಾಲಿನಲ್ಲಿ ಒಟ್ಟು 25 ಕೋಟಿ ರೂ.ಗಳ ಅನುದಾನ ನೀಡಲಾಗಿದೆ.












Click it and Unblock the Notifications