ರಾಮದಾಸ್ ಇಂದ ಜಿಲ್ಲೆಯ ಅಭಿವೃದ್ಧಿ ಶೂನ್ಯ; ಸೋಮಶೇಖರ್ ಆರೋಪ
ಮೈಸೂರು, ಮೇ 12: ಶಾಸಕ ರಾಮದಾಸ್ ಅವರಿಂದ ಜಿಲ್ಲೆಯ ಅಭಿವೃದ್ಧಿ ಶೂನ್ಯ. ರಾಮದಾಸ್ ಅವರು ಮೈಸೂರಿಗೆ ಒಂದೇ ಒಂದು ಯೋಜನೆಯನ್ನೂ ಈವರೆಗೆ ತಂದಿಲ್ಲ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಆರೋಪಿಸಿದ್ದಾರೆ.
ಇಂದು ಇಲ್ಲಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ರಾಮದಾಸ್ ಅವರು ಕೆಲಸ ಮಾಡಿದ್ದಾರೆ ಅನ್ನೋದಾದರೆ ಅವರ ಕೆಲಸದ ಬಗ್ಗೆ ಮುಕ್ತ ಚರ್ಚೆಗೆ ಬರಲಿ. ನಾನು ನನ್ನ ಕೆಲಸ ಬಗ್ಗೆ ಮುಕ್ತ ಚರ್ಚೆಗೆ ಬರುತ್ತೇನೆ. ಅವರು ಮೈಸೂರಿನಲ್ಲಿ ಯಾವುದೇ ಅಭಿವೃದ್ಧಿಗೂ ಸಹಕಾರ ನೀಡಿಲ್ಲ. ಯಾವುದನ್ನೂ ಗೊತ್ತಿಲ್ಲ ಅಂತಾರೆ. ಇವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ಮಾಡಿದ್ದು ಏನೂ ಇಲ್ಲ" ಎಂದು ಆರೋಪಿಸಿದರು. ಇವರು ಸಾರ್ವಜನಿಕ ಜೀವನದಲ್ಲಿ ಇದ್ದು, ಸೇವೆ ಮಾಡುವ ಅವಕಾಶ ಇದ್ದರೂ ಏನೂ ಮಾಡದೆ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ರಾಮದಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸೂಯೆಜ್ ಫಾರಂ ಪ್ರಾಜೆಕ್ಟ್ ಬಗ್ಗೆ ಮೊದಲು ಮಾಹಿತಿ ಕೊಡಿ; ಶಾಸಕ ರಾಮದಾಸ್ ತಿರುಗೇಟು
ಕಳೆದ ನಾಲ್ಕು ದಿನಗಳಿಂದ ಮೈಸೂರು ನಗರದಲ್ಲಿ ದೊಡ್ಡ ನಾಟಕ ನಡೆಯುತ್ತಿದೆ. ರಾಮದಾಸ್ ಯಾವತ್ತೂ ಅಭಿವೃದ್ಧಿ ಕೆಲಸದ ಪರ ಇದ್ದವರಲ್ಲ. ಚುನಾವಣೆ ಸಂದರ್ಭದಲ್ಲಿ ಇವರು ಹಿಂದೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಿ ಸುಯೇಜ್ ಫಾರಂ ಮುಂದೆ ನಾಟಕ ಮಾಡಿದ್ದರು. ಈಗ ಅವರು ಗೆದ್ದು ಎರಡು ವರ್ಷ ಆಗಿದೆ. ಅಷ್ಟು ದಿನಗಳಿಂದ ಏನ್ ಮಾಡ್ತಿದ್ರು, ಅವರು ಈಗ ಎಲ್ಲವನ್ನು ಮರೆತಿದ್ದಾರೆ.
ರಾಮದಾಸ್ ಸುದೀರ್ಘ ನಿದ್ರೆಯಲ್ಲಿದ್ದು, ಈಗ ಎದ್ದು ಬಂದು ಸಭೆ ಸಮಾರಂಭ ಅಂತಿದ್ದಾರೆ. ಶಾಸಕನಾಗಲು ಇವರು ಅರ್ಹರಲ್ಲ. ನಗರಪಾಲಿಕೆಯಿಂದ ನನಗೆ ಯಾವುದೇ ಪತ್ರ ಬಂದಿಲ್ಲ ಅಂತಾರೆ. ಒಬ್ಬ ಶಾಸಕನಾಗಿ ತಮ್ಮ ಕ್ಷೇತ್ರದ ಸಭೆಗೆ ಪತ್ರ ಬಂದಿಲ್ಲ ಅಂತಾರೆ. ಇದು ನಂಬುವ ಮಾತಾ? ಎಂದು ವಾಗ್ದಾಳಿ ನಡೆಸಿದರು. ರಾಮದಾಸ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದೂ ಅವರು ಒತ್ತಾಯಿಸಿದರು.