ಕರ್ನಾಟಕಕ್ಕೆ ಏಮ್ಸ್ ಇಲ್ಲ, ಹೈ ಸ್ಪೀಡ್ ರೈಲಿನಿಂದ ಲಾಭವಿಲ್ಲ: ಸಂಸದ ತೇಜಸ್ವಿ ಸೂರ್ಯ ಟ್ವೀಟ್‌ಗೆ ಕನ್ನಡಿಗರು ಗರಂ
ಕರ್ನಾಟಕಕ್ಕೆ ಈ ಬಾರಿಯೂ ಈ ಬಾರಿಯೂ ಏಮ್ಸ್ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕದ ರಾಯಚೂರಿನಲ್ಲಿ ಏಮ್ಸ್ ನಿರ್ಮಾಣ ಮಾಡಬೇಕು. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏಮ್ಸ್ ಘೋಷಣೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು.
ರಾಯಚೂರು ಅತ್ಯಂತ ಹಿಂದುಳಿದಿದೆ. ಈ ಭಾಗದಲ್ಲಿ ಏಮ್ಸ್ ನಿರ್ಮಾಣವಾದರೆ ರಾಯಚೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಲಾಗಿತ್ತು. ಆದರೆ ಈ ಬಾರಿಯೂ ನಿರಾಸೆ ಮುಂದುವರಿದಿದೆ. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಅವರು ಮಾಡಿರುವ ಟ್ವೀಟ್ ಕನ್ನಡಿಗರ ಆಕ್ಷೇಪಕ್ಕೆ ಕಾರಣವಾಗಿದೆ.

2026-27ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು ಎಂದು ಸಂಸದ ತೇಜಸ್ವಿ ಸೂರ್ಯ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ಕನ್ನಡಿಗರು ಉತ್ತರ ಭಾರತದಲ್ಲಿ ಹೊಸ ನಿಮ್ಹಾನ್ಸ್ (NIMHANS) ಸ್ಥಾಪನೆಯಾದರೆ ಕನ್ನಡಿಗರಿಗೇನು ಲಾಭ ಎಂದು ಪ್ರಶ್ನೆ ಮಾಡಿದ್ದಾರೆ.
2026-27ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು? ಎನ್ನುವ ಸಾಲುಗಳೊಂದಿಗೆ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದು, ಅದರಲ್ಲಿ
1. ತೆಂಗು ಹಾಗೂ ಗೋಡಂಬಿ ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ.
2. ಟೆಕ್ಸ್ಟೈಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಮತ್ತು ರಫ್ತು ಹೆಚ್ಚಳಕ್ಕೆ ಒತ್ತು.
3. ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ.
4. 2047ರ ವೇಳೆಗೆ ಜಾಗತಿಕ ಐಟಿ ಕ್ಷೇತ್ರದಲ್ಲಿ ಭಾರತದ ಪಾಲು ಶೇ. 10ಕ್ಕೆ ಏರಿಸುವ ಗುರಿ - ಇದರಿಂದ ಬೆಂಗಳೂರಿನಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿ.
5. ಉತ್ತರ ಭಾರತದಲ್ಲಿ ಹೊಸ ನಿಮ್ಹಾನ್ಸ್ (NIMHANS) ಸ್ಥಾಪನೆ - ಇದರಿಂದ ಸ್ಥಳೀಯರಿಗೆ ಹೆಚ್ಚಿನ ವೈದ್ಯಕೀಯ ಸೌಲಭ್ಯ ಲಭ್ಯ.
6. ಒಟ್ಟಾರೆಯಾಗಿ ರೈತರಿಂದ ಹಿಡಿದು ಐಟಿ ವೃತ್ತಿಪರರವರೆಗೆ ಎಲ್ಲರನ್ನೂ ಒಳಗೊಂಡ ಭವಿಷ್ಯದ ಬಜೆಟ್ ಇದಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2026-27ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು?
— Tejasvi Surya (@Tejasvi_Surya) February 1, 2026
ತೆಂಗು ಹಾಗೂ ಗೋಡಂಬಿ ಬೆಳೆಗಾರರಿಗೆ ವಿಶೇಷ ಪ್ರೋತ್ಸಾಹ.
ಟೆಕ್ಸ್ಟೈಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಮತ್ತು ರಫ್ತು ಹೆಚ್ಚಳಕ್ಕೆ ಒತ್ತು.
ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ.
2047ರ ವೇಳೆಗೆ ಜಾಗತಿಕ ಐಟಿ ಕ್ಷೇತ್ರದಲ್ಲಿ… pic.twitter.com/R4hkgVrDrG
ಹೈಸ್ಪೀಡ್ ರೈಲುಗಳು ಕನ್ನಡಿಗರಿಗಾಗಿ ಅಲ್ಲ, ವಲಸೆ ಕಾರ್ಮಿಕರಿಗಾಗಿ. ನೀವು ಕರ್ನಾಟಕದ ಜನರ ಬಗ್ಗೆ ಕಾಳಜಿ ಹೊಂದಿದ್ದರೆ, ಮೊದಲು ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ಹೈಸ್ಪೀಡ್ ರೈಲು ಸಂಪರ್ಕಕ್ಕೆ ಆದ್ಯತೆ ನೀಡಿ ಎಂದು ಕನ್ನಡಿಗರು ಆಗ್ರಹಿಸಿದ್ದಾರೆ. ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಕಾರ್ತಿಕ್ ದೇವರಾಜ್ ಎನ್ನುವವರು ಹೇಳಿದ್ದಾರೆ.
ಟೆಕ್ಸ್ಟೈಲ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಮತ್ತು ರಫ್ತು ಹೆಚ್ಚಳಕ್ಕೆ ಒತ್ತು. ಈಗಾಗಲೇ ಘೋಷಣೆ ಮಾಡಿದ ಪಾರ್ಕ್‌ಗಳೇ ಸ್ಥಾಪನೆ ಆಗಿಲ್ಲ. ಬೆಂಗಳೂರಿನಿಂದ ಹೈದರಾಬಾದ್ ಮತ್ತು ಚೆನ್ನೈಗೆ ಹೈ-ಸ್ಪೀಡ್ ರೈಲು ಕಾರಿಡಾರ್ ಘೋಷಣೆ. ಕರ್ನಾಟಕಕ್ಕೆ ಏನು ಪ್ರಯೋಜನವಿಲ್ಲ. ಉತ್ತರ ಭಾರತದಲ್ಲಿ ಹೊಸ ನಿಮ್ಹಾನ್ಸ್ (NIMHANS) ಸ್ಥಾಪನೆ - ಕರ್ಣಾಟಕಕ್ಕೆ ಇಲ್ಲ ಎಂದು ರಾಘವೇಂದ್ರ ಎಂ.ಎಸ್ ಎನ್ನುವವರು ಹೇಳಿದ್ದಾರೆ.
ನಿರ್ಮಲಾ ಸೀತಾ 'ನಾಮ' ಎಂದ ಕಾಂಗ್ರೆಸ್
ಇದು ನಿರ್ಮಲಾ ಸೀತಾ 'ನಾಮ' ಎಂದು ಕಾಂಗ್ರೆಸ್ ಮುಖಂಡ ರವಿ ಭೋಸರಾಜು ಅವರು ದೂರಿದ್ದಾರೆ. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ, ದಕ್ಷಿಣ ರಾಜ್ಯಗಳು ಎಂದರೆ ಅಸಡ್ಡೆ. ಚುನಾವಣೆ ಬಂದಾಗ ಮಾತ್ರ ಬಾಯಲ್ಲಿ ಮುತ್ತು ಉದುರುವಂತೆ ಮಾತನಾಡುವ ಪ್ರಧಾನಿಗಳು ರಾಯಚೂರಿಗೆ ಏಮ್ಸ್ ಮಂಜೂರು ಮಾಡುವ ವಿಚಾರದಲ್ಲಿ ಎಂದಿನಂತೆ ಈ ಬಜೆಟ್ ನಲ್ಲೂ ತಮ್ಮ ಪರಮ ತಾರತಮ್ಯ ಸಂಪ್ರದಾಯ ಮುಂದುವರಿಸಿದ್ದಾರೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಒಳಗೊಂಡಂತೆ, ಇಡೀ ರಾಜ್ಯ ಸಂಪುಟವೇ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಮನವಿಮಾಡಿದ್ದಾಯಿತು. ರಾಯಚೂರು ಜಿಲ್ಲೆಯ ಜನರು ಒಕ್ಕೊರಲಿನಲ್ಲಿ ಕೇಳಿದ್ದಾಯಿತು. ಆದರೂ, ದೇಶದ ಇತರೆ 22 ರಾಜ್ಯಗಳಿಗೆ ಏಮ್ಸ್ ಮಂಜೂರು ಮಾಡಿ, ಕಲ್ಯಾಣ ಕರ್ನಾಟಕದ ಮಂದಿಯ ಕಣ್ಣಿಗೆ ಸುಣ್ಣ ಇಕ್ಕಿದರು. ಈ ಸಲದ ಬಜೆಟ್ ನಲ್ಲೂ ಉತ್ತರ ಭಾರತದ ರಾಜ್ಯಗಳಿಗೆ ಅನುದಾನ ಧಾರೆ ಎರೆಯುವ ಹುನ್ನಾರ ಮಾಡುತ್ತಿದ್ದರೂ, ನಮ್ಮ ಬಿಜೆಪಿ ಕರ್ನಾಟಕದ ನಾಯಕರು 'ನಮೋನಿಷ್ಠತೆ'ಯನ್ನು ತೋರ್ಪಡಿಸಲು, ಕಲ್ಯಾಣ ಕರ್ನಾಟಕದ ಜನರ ಹಿತವನ್ನು ಬಲಿಗೊಟ್ಟು ಬಾಯಿಗೆ ಬಟ್ಟೆ ತುರುಕಿಕೊಂಡಿದ್ದಾರೆ. ಇಡೀ ನಾಡಿನ ಹಾಗೂ ಕಲ್ಯಾಣ ಕರ್ನಾಟಕದ ಜನರ ಪರವಾಗಿ ಕೇಂದ್ರದ ಬಿಜೆಪಿ ಸರ್ಕಾರದ ಈ ತಾರತಮ್ಯವನ್ನು ಖಂಡಿಸುತ್ತೇನೆ ಎಂದಿದ್ದಾರೆ.
ಕರ್ನಾಟಕಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಹೊಸ ಯೋಜನೆ ಅಥವಾ ಕೊಡುಗೆಯನ್ನು ಕೊಟ್ಟಿಲ್ಲ ಎಂದು ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications