Bengaluru: "ದಿನಕ್ಕೆ 16 ಗಂಟೆ ದುಡಿದ್ರೂ ಕೈಗೆ ಸಿಗೋದು 1 ಸಾವಿರ", ಕ್ಯಾಬ್ ಚಾಲಕನ ಪೋಸ್ಟ್ ವೈರಲ್

ಬೆಂಗಳೂರು: "ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಆ್ಯಪ್ ಹಿಂದೆ ದುಡಿಯುವ ನಮ್ಮಂತಹವರ ಬದುಕು ನಾಯಿಪಾಡಾಗಿದೆ..." - ಇದು ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರು ಸಾಮಾಜಿಕ ಜಾಲತಾಣ 'ರೆಡ್ಡಿಟ್'ನಲ್ಲಿ ತೋಡಿಕೊಂಡಿರುವ ಅಳಲು. ಸುಮಾರು ಒಂದೂವರೆ ವರ್ಷ ನಿರುದ್ಯೋಗಿಯಾಗಿದ್ದ ಪದವೀಧರರೊಬ್ಬರು, ಅನಿವಾರ್ಯವಾಗಿ ಕ್ಯಾಬ್ ಏರಿ, ದಿನಕ್ಕೆ 16 ಗಂಟೆ ದುಡಿದರೂ ಹೇಗೆ ಸಾಲದ ಸುಳಿಯಿಂದ ಹೊರಬರಲಾಗದೆ ಒದ್ದಾಡುತ್ತಿದ್ದಾರೆ ಎಂಬ ಕಟು ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

"ದಿ ರ್ರ್ಯಾಂಟ್ ಆಫ್ ಎ ರಿವರ್" (The rant of a river) ಎಂಬ ಶೀರ್ಷಿಕೆಯಡಿ ಅವರು ಬರೆದಿರುವ ಪೋಸ್ಟ್ ಈಗ ವೈರಲ್ ಆಗಿದೆ. ವ್ಯಾಪಾರದಲ್ಲಿ ಕೈಸುಟ್ಟುಕೊಂಡು, ಸಾಲದ ಹೊರೆ ಹೊತ್ತಿರುವ ಇವರು, ಜೀವನ ನಿರ್ವಹಣೆಗಾಗಿ ಬಾಡಿಗೆ ಕಾರನ್ನು ಪಡೆದು ಊಬರ್ ಮತ್ತು ರ‍್ಯಾಪಿಡೋಗಳಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

Bengaluru Cab Driver Reveals Harsh Reality of Gig Economy on Reddit Is This Even Living

ಲೆಕ್ಕಾಚಾರದ ವ್ಯಥೆ:

ಅವರು ನೀಡಿದ ಮಾಹಿತಿಯ ಪ್ರಕಾರ, ದಿನಕ್ಕೆ ಸುಮಾರು 4,000 ರೂ.ಗಳಷ್ಟು ವಹಿವಾಟು ನಡೆಸುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ:
1. ಕಾರಿನ ಬಾಡಿಗೆ: 1,500 ರೂ.
2. ಸಿಎನ್‌ಜಿ : 1,200 ರೂ.
3. ಊಟ ಮತ್ತು ತಿಂಡಿ: 200 ರೂ.

ಎಲ್ಲಾ ಖರ್ಚು ಕಳೆದು, 16 ಗಂಟೆಗಳ ಟ್ರಾಫಿಕ್ ಜಂಜಾಟದ ನಂತರ ಅವರ ಕೈಗೆ ಸಿಗುವುದು ಕೇವಲ 1,000 ರೂ. (ಅಂದಾಜು) ಮಾತ್ರ. "ಈ ದುಡಿಮೆಯಲ್ಲಿ ಉಳಿತಾಯ ಮಾಡುವುದು ಅಸಾಧ್ಯ, ಕೇವಲ ಬದುಕನ್ನು ದೂಡುತ್ತಿದ್ದೇವೆ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಕೇವಲ ಆರ್ಥಿಕ ಸಮಸ್ಯೆ ಮಾತ್ರವಲ್ಲ, ಆಪ್ ಆಧಾರಿತ ಕೆಲಸದ ಒತ್ತಡವನ್ನೂ ಅವರು ವಿವರಿಸಿದ್ದಾರೆ. "ಬುಕ್ಕಿಂಗ್ ಬಂದ 5-6 ಸೆಕೆಂಡುಗಳಲ್ಲಿ ಸ್ವೀಕರಿಸದಿದ್ದರೆ ಬೇರೆಯವರು ಅದನ್ನು ಪಡೆದುಕೊಳ್ಳುತ್ತಾರೆ. ಇದರಿಂದ ನಮ್ಮ ರೇಟಿಂಗ್ ಕಡಿಮೆಯಾಗುತ್ತದೆ. ದಿನಕ್ಕೆ ಕೇವಲ 6 ಗಂಟೆ ನಿದ್ದೆ ಮಾಡುತ್ತೇನೆ. ಕಾಲು ನೋವು, ಮಂಡಿ ನೋವು ನಿತ್ಯದ ಸಂಗತಿಯಾಗಿದೆ," ಎಂದು ಅವರು ಹೇಳಿಕೊಂಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ:

ಚಾಲಕನ ಈ ಪೋಸ್ಟ್ ಓದಿದ ಅನೇಕರು ಮರುಗಿದ್ದಾರೆ. "ಕ್ಯಾಬ್ ಮತ್ತು ಆಟೋ ಚಾಲಕರು ಯಾಕೆ ಸದಾ ಸಿಟ್ಟಿನಿಂದ ಇರುತ್ತಾರೆ, ಟ್ರಾಫಿಕ್ ನಿಯಮ ಮುರಿಯುತ್ತಾರೆ ಎಂಬುದು ಈಗ ಅರ್ಥವಾಗುತ್ತಿದೆ. ಅವರ ಈ ಕಷ್ಟದ ಮುಂದೆ ನಮ್ಮ ಸಮಸ್ಯೆಗಳು ಗೌಣ," ಎಂದು ಹಲವರು ಕಮೆಂಟ್ ಮಾಡಿದ್ದಾರೆ. "ಶೋಷಕನಾಗು ಅಥವಾ ಶೋಷಿತನಾಗು, ಇದೇ ಇಂದಿನ ಸತ್ಯ," ಎಂಬ ಚಾಲಕನ ಮಾತು ಐಟಿ ಸಿಟಿಯ ಕರಾಳ ಮುಖವನ್ನು ಅನಾವರಣಗೊಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+