"ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆ ಈಗ ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣ"
ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಮೂರು ವರ್ಷಗಳಾಗುತ್ತಿದೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದಾಗಿನಿಂದಲೂ ಒಂದಿಲ್ಲೊಂದು ವಿಷಯದ ಕಾರಣಕ್ಕೆ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆ ನಡೆಯುತ್ತಲ್ಲೇ ಇದೆ. ಇದೀಗ "ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆ ಈಗ ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣ" ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಈ ವಿಷಯದ ಬಗ್ಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಲ್ಲಿನ ಲೋಪಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆ ಈಗ ರಾಜ್ಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾಗಿ ಮಾರ್ಪಟ್ಟಿದೆ. ಬ್ಯಾಂಕ್ ಖಾತೆಯೇ ಇಲ್ಲದ 23,262 ಜನರಿಗೆ ಬರೋಬ್ಬರಿ 46.52 ಕೋಟಿ ರೂ. ಪಾವತಿಯಾಗಿರುವುದು ಮತ್ತು 19,020 ಜನರಿಗೆ ಒಂದೇ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದನ್ನು ಸ್ವತಃ ಸಿಎಜಿ (CAG) ವರದಿಯೇ ಬಯಲಿಗೆಳೆದಿದೆ! 10 ಲಕ್ಷಕ್ಕೂ ಅಧಿಕ ಫಲಾನುಭವಿಗಳ ಖಾತೆಗಳು ನಿರಂತರವಾಗಿ ಬದಲಾಗುತ್ತಿರುವುದು ರಾಜ್ಯದ ಬಡ ಮಹಿಳೆಯರ ಹೆಸರಿನಲ್ಲಿ ನಡೆಯುತ್ತಿರುವ ಬೃಹತ್ ಲೂಟಿಗೆ ಸಾಕ್ಷಿಯಲ್ಲವೇ ಮಾನ್ಯ ಮುಖ್ಯಮಂತ್ರಿಗಳೇ ಎಂದು ಬಿ.ವೈ ವಿಜಯೇಂದ್ರ ಅವರು ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಅರ್ಹ ತಾಯಂದಿರಿಗೆ, ಸೋದರಿಯರಿಗೆ ತಲುಪಬೇಕಾದ ಸಾರ್ವಜನಿಕರ ತೆರಿಗೆ ಹಣವನ್ನು ವ್ಯವಸ್ಥಿತವಾಗಿ ನುಂಗಿರುವ ಈ ಭ್ರಷ್ಟಾಚಾರದ ಹಿಂದೆ ಯಾರ ಕೈವಾಡವಿದೆ? ಸ್ವತಃ ಸಿಎಜಿ ಕೇಳಿದರೂ ಬ್ಯಾಂಕ್ ಖಾತೆಗಳ ವಿವರ ನೀಡದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಚ್ಚಿಡುತ್ತಿರುವುದಕ್ಕೆ ಕಾರಣವಾದರೂ ಏನು? ಈ ಹಗರಣದ ಬೇರುಗಳು ಈ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಬಹಳ ಗಾಢವಾಗಿ ಹರಡಿಕೊಂಡಿರುವ ಸಂಶಯ ಮತ್ತಷ್ಟು ಬಲಗೊಳ್ಳುತ್ತದೆ. ಬಡವರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿರುವ ಗಂಭೀರ ಭ್ರಷ್ಟಾಚಾರದ ಬಗ್ಗೆ ತಕ್ಷಣ ಅತ್ಯಂತ ಪಾರದರ್ಶಕವಾಗಿ, ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು.
ಹಾಗೆಯೇ, ಸರ್ಕಾರದ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿ ಲೂಟಿಯಾಗುತ್ತಿರುವುದು, 'ಗ್ಯಾರಂಟಿ ಅನುಷ್ಠಾನ ಸಮಿತಿ'ಗಳು ಎಷ್ಟು ಅಪ್ರಸ್ತುತವಾಗಿವೆ. ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ ಹಂಚುವ, ಸಾರ್ವಜನಿಕರ ತೆರಿಗೆ ಹಣದಲ್ಲಿ ಮೋಜು ಮಾಡುವ ಗಂಜಿ ಕೇಂದ್ರಗಳಾಗಿವೆ ಎನ್ನುವುದೂ ಕೂಡ ಸಾಬೀತಾಗಿದೆ. ಜನರ ದುಡ್ಡಿನಲ್ಲಿ ಕಾರು, ಬಂಗಲೆ, ಸಂಬಳ ಪಡೆದು ಐಷಾರಾಮಿ ಜೀವನ ನಡೆಸುತ್ತಿರುವ ಈ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಇಂತಹ ಬೃಹತ್ ಹಗರಣ ನಡೆಯುವಾಗ ಕಣ್ಣು ಮುಚ್ಚಿ ಕುಳಿತಿದ್ದರೇ? ಅಥವಾ ಅವರಿಗೆ ತಿಳಿದೇ ಭ್ರಷ್ಟಾಚಾರ ನಡೆಯುತ್ತಿದೆಯೇ? ಇದು ಕೇವಲ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ ಮಾತ್ರವಲ್ಲ, ಗ್ಯಾರಂಟಿಗಳ ಹೆಸರಿನಲ್ಲಿ ಸ್ವಪಕ್ಷದವರ ಜೇಬು ತುಂಬಿಸಲು ಮತ್ತು ಸಾರ್ವಜನಿಕರ ಖಜಾನೆಯನ್ನು ನಿರ್ಲಜ್ಜವಾಗಿ ಯೋಜಿತ ರೀತಿಯಲ್ಲಿ ಲೂಟಿ ಹೊಡಿಯಲಾಗುತ್ತಿದೆ!
ಇಷ್ಟು ಸಾಲದೆಂಬಂತೆ, ಒಂದೆಡೆ ಖಾತೆ ಇಲ್ಲದವರಿಗೆ ಹಣ ಲೂಟಿಯಾಗುತ್ತಿದ್ದರೆ, ಇನ್ನೊಂದೆಡೆ ಕೋಟ್ಯಂತರ ಅರ್ಹ ತಾಯಂದಿರಿಗೆ ನೀಡಬೇಕಿದ್ದ 2 ತಿಂಗಳ (ಫೆಬ್ರವರಿ-ಮಾರ್ಚ್ 2025) ಬರೋಬ್ಬರಿ 5,000 ಕೋಟಿ ರೂ. ಹಣ ಫಲಾನುಭವಿಗಳಿಗೆ ತಲುಪದೆ ನಾಪತ್ತೆಯಾಗಿದ್ದು, ಅದಕ್ಕೆ ಈ ಕಾಂಗ್ರೆಸ್ ಸರ್ಕಾರ ಇನ್ನೂ ಉತ್ತರ ನೀಡಿಲ್ಲ!! ಬಡ ತಾಯಂದಿರಿಗೆ ನೀಡಬೇಕಾದ ಈ 5,000 ಕೋಟಿ ರೂ. ಎಲ್ಲಿ ಹೋಯಿತು, ಯಾರ ಜೇಬು ಸೇರಿತು ಎಂದು ಈ ಸರ್ಕಾರ ಉತ್ತರಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಆಕ್ಷೇಪಿಸಿ ನೋಟಿಸ್ ಜಾರಿ ಮಾಡಿದೆ. ಹಗರಣಗಳ ಸರಮಾಲೆಯಾಗಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ನಡೆಸುವ ಯಾವ ನೈತಿಕತೆಯೂ ಉಳಿದಿಲ್ಲ ಎಂದು ಅವರು ದೂರಿದ್ದಾರೆ.














Click it and Unblock the Notifications