CJ Roy cremation: ನೆಚ್ಚಿನ ಐಷಾರಾಮಿ ಕಾರುಗಳೊಂದಿಗೆ ಅಂತಿಮ ಯಾತ್ರೆ; ಕ್ರಿಶ್ಚಿಯನ್ ಸಂಪ್ರದಾಯದಂತೆ ಸಿಜೆ ರಾಯ್ ಅಂತ್ಯಕ್ರಿಯೆ
ಬೆಂಗಳೂರು: ಸಾವಿರಾರು ಕೋಟಿ ಒಡೆತನದ ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಿದ್ದ ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಹಾಗೂ ಸಂಸ್ಥಾಪಕ ಸಿಜೆ ರಾಯ್ ಅವರು ಭಾನುವಾರ ತಮ್ಮಿಚ್ಛೆಯಂತೆ ಮಣ್ಣಿನ ಮಡಿಲು ಸೇರಿದರು. ಬನ್ನೇರುಘಟ್ಟ ಸಮೀಪದ ಕಾಸಾಗ್ರಾಂಡ್‌ನಲ್ಲಿ ಕ್ರಿಶ್ಚಿಯನ್ ವಿಧಿ-ವಿಧಾನಗಳಂತೆ ಸಂಜೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಅಂತ್ಯಕ್ರಿಯೆಗೂ ಮುನ್ನ, ಬನ್ನೇರುಘಟ್ಟದಲ್ಲಿರುವ ಕಾಸಾಗ್ರಾಂಡ್‌ನಲ್ಲಿ ಮಧ್ಯಾಹ್ನ ಎರಡು ಗಂಟೆಯವರೆಗೆ ಸಿಜೆ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಈ ವೇಳೆ ಕುಟುಂಬದ ಸದಸ್ಯರು, ಸಂಬಂಧಿಕರು, ಆಪ್ತ ಸ್ನೇಹಿತರು, ಉದ್ಯಮ ವಲಯದ ಗಣ್ಯರು ಹಾಗೂ ಅಭಿಮಾನಿಗಳು ಆಗಮಿಸಿ ಅಂತಿಮ ಗೌರವ ಸಲ್ಲಿಸಿದರು. ಈ ಭಾವುಕ ವಾತಾವರಣದಲ್ಲಿ ಅನೇಕರು ಕಣ್ಣೀರಿಟ್ಟರು.

ಕ್ರಿಶ್ಚಿಯನ್ ಸಂಪ್ರದಾಯದ ಪ್ರಾರ್ಥನೆಗಳೊಂದಿಗೆ ಅಂತ್ಯಸಂಸ್ಕಾರ ವಿಧಿವಿಧಾನಗಳು ನೆರವೇರಿದ್ದು, ಧಾರ್ಮಿಕ ಮುಖಂಡರು ಪ್ರಾರ್ಥನೆ ಸಲ್ಲಿಸಿದರು. ಕುಟುಂಬದ ಸದಸ್ಯರು ದುಃಖದಲ್ಲೇ ಕೊನೆಯ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಕಾಸಾಗ್ರಾಂಡ್ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಅಂತಿಮ ಯಾತ್ರೆಯ ವೇಳೆ 'ಸಿಜೆ ರಾಯ್ ಅಮರರಾಗಿ', 'ಒಳ್ಳೆಯ ಹೃದಯದ ಉದ್ಯಮಿ' ಎಂದು ಹಲವರು ಸ್ಮರಿಸಿದರು.
ಕೇರಳ ಮೂಲದ ಸಿಜೆ ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ ಸ್ಥಾಪಿಸಿ, ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ರಿಯಲ್ ಎಸ್ಟೇಟ್, ಆತಿಥ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮ ಸಾಮ್ರಾಜ್ಯ ನಿರ್ಮಿಸಿದ್ದರು. ಅವರ ಅಕಾಲಿಕ ನಿಧನವು ಉದ್ಯಮ ವಲಯಕ್ಕೆ ದೊಡ್ಡ ನಷ್ಟವನ್ನುಂಟುಮಾಡಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ನೆಚ್ಚಿನ ಕಾರುಗಳೊಂದಿಗೆ ಮೆರವಣಿಗೆ
ಸಿಜೆ ರಾಯ್ ಅವರಿಗೆ ಕಾರುಗಳ ಮೇಲೆ ಅಪಾರ ಪ್ರೀತಿ ಇತ್ತು. ಐಷಾರಾಮಿ ಕಾರುಗಳನ್ನು ಖರೀದಿಸುವುದು, ಸ್ವತಃ ಚಾಲನೆ ಮಾಡುವುದನ್ನು ಅವರು ಬಹಳ ಇಷ್ಟಪಡುತ್ತಿದ್ದರು. ಅವರ ಅಂತಿಮಯಾತ್ರೆಯಲ್ಲೂ ಆ ಕಾರುಗಳು ಜೊತೆಯಾದವು. ರಾಯ್ ಅವರ ಅಂತಿಮ ಪ್ರಯಾಣಕ್ಕೆ ಅವರ ಮೆಚ್ಚಿನ ಐಷಾರಾಮಿ ಕಾರುಗಳನ್ನು ಬಳಸಿದ್ದು, ಕಣ್ಣೀರನ್ನು ತರಿಸುವಂತಿತ್ತು.
ರೋಲ್ಸ್ ರಾಯ್ಸ್, ಮರ್ಸಿಡಿಸ್ ಬೆನ್ಜ್, ರೇಂಜ್ ರೋವರ್, ಬುಗಾಟಿ ಹಾಗೂ ಆಡಿ ಕಾರುಗಳು ಅಂತಿಮಯಾತ್ರೆಯಲ್ಲಿ ಸಾಲುಗಟ್ಟಿ ಸಾಗಿದವು. ಪ್ರತಿಯೊಂದು ಕಾರಿನೊಂದಿಗೂ ರಾಯ್ ಅವರಿಗೆ ಸಂಬಂಧಿಸಿದ ಅನೇಕ ನೆನಪುಗಳು ಇದ್ದವು ಎಂದು ಕುಟುಂಬದವರು ಭಾವುಕರಾಗಿ ನೆನಪಿಸಿಕೊಂಡರು. ಸಿಜೆ ರಾಯ್ ಅವರಿಗೆ ಕಾರುಗಳು ಕೇವಲ ವಾಹನಗಳಲ್ಲ, ಜೀವನದ ಭಾಗವಾಗಿದ್ದವು.

ರಾಯ್ ಅವರ ಕಾರ್ ಕ್ರೇಜ್ ಆಸಕ್ತಿಗೆ ಗೌರವ ಸೂಚಿಸುವ ಉದ್ದೇಶದಿಂದಲೇ ಕುಟುಂಬದವರು ಅಂತಿಮಯಾತ್ರೆಯಲ್ಲಿ ಅವರ ನೆಚ್ಚಿನ ಕಾರುಗಳನ್ನು ಬಳಸಲು ನಿರ್ಧರಿಸಿದರು. ಅಂತಿಮ ಮೆರವಣಿಗೆಯ ವೇಳೆ ಕುಟುಂಬದ ಸದಸ್ಯರು ಹಾಗೂ ಆಪ್ತರು ಕಣ್ಣೀರಿಡುತ್ತಾ, ಆ ಕಾರುಗಳ ಮೂಲಕ ರಾಯ್ ಅವರನ್ನು ನೆನಪಿಸಿಕೊಂಡರು.
ಸೇಂಟ್ ಜೋಸೆಫ್ ಚರ್ಚ್‌ನಲ್ಲಿ ಪ್ರಾರ್ಥನೆ
ಅಂತ್ಯಕ್ರಿಯೆಗೂ ಮುನ್ನ ಸಿಜೆ ರಾಯ್ ಅವರ ಪಾರ್ಥಿವ ಶರೀರವನ್ನು ಸೇಂಟ್ ಜೋಸೆಫ್ ಚರ್ಚ್‌ಗೆ ಕೊಂಡೊಯ್ದು, ಕ್ರಿಶ್ಚಿಯನ್ ಧರ್ಮದ ಪ್ರಾರ್ಥನೆಗಳು ಹಾಗೂ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪ್ರಾರ್ಥನೆಯ ನಂತರ ಅಂತ್ಯಸಂಸ್ಕಾರ ನೆರವೇರಿತು. ಉದ್ಯಮ ವಲಯದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲೂ ವಿಭಿನ್ನ ಆಸಕ್ತಿಗಳ ಮೂಲಕ ಗುರುತಿಸಿಕೊಂಡಿದ್ದ ರಾಯ್ ಅವರ ಅಂತಿಮಯಾತ್ರೆ, ಅವರ ಕಾರು ಪ್ರೀತಿಯ ಕಾರಣದಿಂದ ವಿಶೇಷವಾಗಿಯೇ ಉಳಿಯಿತು. ಈ ದೃಶ್ಯವನ್ನು ಕಂಡ ಅನೇಕರು ಭಾವುಕರಾದರು.












Click it and Unblock the Notifications