ಕನಕಗುರುಪೀಠ ಜಾತ್ಯಾತೀತ, ಬೇಡಿಕೆಗಳಿಗೆ ಹೆಚ್ಚಿನ ಅನುದಾನ: ಸಿಎಂ ಸಿದ್ದರಾಮಯ್ಯ ಭರವಸೆ
ರಾಯಚೂರು: ರಾಜ್ಯದಲ್ಲಿ ಕನಕಗುರುಪೀಠ ಜಾತ್ಯಾತೀತ ಪೀಠವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣ, ಆಧ್ಯಾತ್ಮ ಹಾಗೂ ಸಾಮಾಜಿಕ ಸಮಾನತೆಯ ಮೌಲ್ಯಗಳನ್ನು ಸಮಾಜದಲ್ಲಿ ಬೇರೂರಿಸುವ ಮಹತ್ವದ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಸತಿ ನಿಲಯ, ಯಾತ್ರಿನಿವಾಸ ಸೇರಿದಂತೆ ಗುರುಪೀಠದ ವಿವಿಧ ಬೇಡಿಕೆಗಳಿಗೆ ಸರ್ಕಾರದಿಂದ ಅಗತ್ಯ ಅನುದಾನ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ದೇವದುರ್ಗದ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಬ್ರಿಡ್ಜ್ ವತಿಯಿಂದ ಆಯೋಜಿಸಲಾಗಿದ್ದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನಕಗುರುಪೀಠದಲ್ಲಿ ಪೂಜ್ಯರು ಶಿಕ್ಷಣ, ಆಧ್ಯಾತ್ಮ ಮತ್ತು ಜಾತ್ಯಾತೀತ ಮನೋಭಾವಕ್ಕೆ ಅಪಾರ ಮಹತ್ವ ನೀಡಿದ್ದರು. ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬಲಪಡಿಸುವಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.

ಕುರುಬ ಸಮುದಾಯಕ್ಕೆ ಮೊದಲ ಬಾರಿಗೆ 1992ರಲ್ಲಿ ಕಾಗಿನೆಲೆ ಗುರುಪೀಠ ಸ್ಥಾಪನೆಯಾಗಿದ್ದು, ಶ್ರೀ ತಾರಕಾನಂದ ಸ್ವಾಮೀಜಿಯವರು ಮೊದಲ ಗುರುಗಳಾಗಿದ್ದರು. ಬಳಿಕ ಕಲ್ಯಾಣ ಕರ್ನಾಟಕ, ಬೆಂಗಳೂರು, ಮೈಸೂರು ಹಾಗೂ ಮುಂಬಯಿ ಕರ್ನಾಟಕ ವಿಭಾಗಗಳನ್ನು ಸ್ಥಾಪಿಸಿ, ಪ್ರತಿ ವಿಭಾಗಕ್ಕೂ ಪ್ರತ್ಯೇಕ ಗುರುಗಳನ್ನು ನೇಮಕ ಮಾಡಲಾಗಿತ್ತು. ಈ ವಿಭಾಗದ ಗುರುಗಳಾಗಿ ಶ್ರೀಸಿದ್ದರಾಮಾನಂದಪುರಿ ಸ್ವಾಮೀಜಿಯವರು ಸೇವೆ ಸಲ್ಲಿಸಿ, ಶಿಕ್ಷಣ ಮತ್ತು ಜಾತ್ಯತೀತ ಚಿಂತನೆಗೆ ಬಲ ತುಂಬಿದರು ಎಂದು ತಿಳಿಸಿದರು.
ಸಮಸಮಾಜ ನಿರ್ಮಾಣವೇ ಗುರುಪೀಠದ ಗುರಿ
ಕಾಗಿನೆಲೆ ಗುರುಪೀಠ ಸ್ಥಾಪನೆಯ ಮೂಲ ಉದ್ದೇಶವೇ ಸಮಸಮಾಜ ನಿರ್ಮಾಣ. ಈ ಆಶಯವನ್ನು ಸ್ವಾಮೀಜಿಯವರು ತಮ್ಮ ಬದುಕಿನ ಮೂಲಕ ಅನುಷ್ಠಾನಗೊಳಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬ ಹಾಗೂ ಸಮಾಜಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಸಿದ್ದರಾಮಯ್ಯ ಪ್ರಾರ್ಥಿಸಿದರು.
ಜಾತ್ಯತೀತ ಚಿಂತನೆ ಅಗತ್ಯ
ಇನ್ನು ಕನಕದಾಸರ 'ಕುಲಕುಲವೆಂದು ಹೊಡೆದಾಡದಿರಿ' ಎಂಬ ವಚನವನ್ನು ಉಲ್ಲೇಖಿಸಿದ ಅವರು, ಬುದ್ಧ, ಬಸವಾದಿ ಶರಣರು ಜಾತಿ ವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿರುವುದನ್ನು ನೆನಪಿಸಿದರು. ನಮ್ಮ ಸಮಾಜ ಹಲವು ಜಾತಿ, ಧರ್ಮ, ಭಾಷೆ ಮತ್ತು ವರ್ಗಗಳಿಂದ ಕೂಡಿದ್ದು, ಎಲ್ಲರೂ ಒಂದೇ ಕುಟುಂಬ ಎಂಬ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಸಾಮಾಜಿಕ ಚಿಂತಕ ರಾಮಮನೋಹರ ಲೋಹಿಯಾ ಅವರ ಮಾತುಗಳನ್ನು ಸ್ಮರಿಸಿದ ಅವರು, ಮುಂದುವರಿದ ಜಾತಿಯವರು ಸಮಾಜವನ್ನು ದಾರಿತಪ್ಪಿಸುವ ಪ್ರವೃತ್ತಿ ತೋರಿದರೆ ಸಮಾನತೆ ಸಾಧ್ಯವಿಲ್ಲ ಎಂದು ಹೇಳಿದರು. ಸಮಾನ ಅವಕಾಶ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಇರುವ ಸಮಾಜ ನಿರ್ಮಾಣವೇ ಇಂದಿನ ಅಗತ್ಯ ಎಂದರು.
ಶಿಕ್ಷಣದ ಜೊತೆಗೆ ಸ್ವಾಭಿಮಾನ ಮುಖ್ಯ
ಕೆಲವರಿಗೆ ಶಿಕ್ಷಣ ದೊರೆತರೂ ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬರಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಿಎಂ, ಯುವಪೀಳಿಗೆ ವೈಚಾರಿಕ ಮತ್ತು ವೈಜ್ಞಾನಿಕ ಶಿಕ್ಷಣದ ಮೂಲಕ ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ಸಮಯದಲ್ಲಿ ಶೇ.15ರಷ್ಟಿದ್ದ ಶಿಕ್ಷಣ ಇಂದು ಶೇ.76ಕ್ಕೆ ಏರಿದರೂ, ಜಾತಿವ್ಯವಸ್ಥೆ ಇನ್ನೂ ನಾಶವಾಗಿಲ್ಲ. ಸಮಾಜದ ಜಡತ್ವ ಕಳೆದು ಚಲನೆ ಬರಲು ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಅಗತ್ಯ ಎಂದು ಹೇಳಿದರು. ಸಮಾಜದಲ್ಲಿನ ಮೌಢ್ಯಗಳನ್ನು ಅಳಿಸುವ ಕೆಲಸದಲ್ಲಿ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ನಿರಂತರವಾಗಿ ತೊಡಗಿಸಿಕೊಂಡಿದ್ದರು ಎಂದು ಪ್ರಶಂಸಿಸಿದರು.
ಜನರ ಆಶೀರ್ವಾದದಿಂದ ಎಂಟು ಬಾರಿ ಶಾಸಕನಾಗಿ ಗೆದ್ದು, ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವುದಾಗಿ ತಿಳಿಸಿದ ಸಿಎಂ, ನಾಡಿನ ಜನರ ಪ್ರೀತಿಯಿಂದಲೇ ರಾಜಕೀಯ ಬದುಕು ಸಾಧ್ಯವಾಗಿದೆ ಎಂದರು. ಧ್ವನಿಯಿಲ್ಲದವರ ಪರವಾಗಿ ಹೋರಾಡುವುದೇ ನನ್ನ ಮೊದಲ ಆದ್ಯತೆ. ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಗಳಿಗೆ ಬೆಂಗಳೂರಿನಲ್ಲಿ ಸುಮಾರು 50 ಎಕರೆ ಜಾಗ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಘೋಷಿಸಿದರು.
ಕುರುಬ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸುವ ಕುರಿತು ರಾಜ್ಯ ಸರ್ಕಾರ ಈಗಾಗಲೇ ತನ್ನ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಅಂತಿಮ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದರು. ಜಾತಿಗಣತಿ ವರದಿ ಇನ್ನೊಂದು ತಿಂಗಳೊಳಗೆ ಸಲ್ಲಿಕೆಯಾಗಲಿದ್ದು, ಸೂಕ್ತ ಚರ್ಚೆಯ ಬಳಿಕ ಅದನ್ನು ಅಂಗೀಕರಿಸಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.












Click it and Unblock the Notifications