ರಾಯ್ ನನ್ನ ಸ್ನೇಹಿತನಿಗಿಂತಲೂ ಹೆಚ್ಚು: ಕಂಬನಿ ಮಿಡಿದ ನಟ ಮೋಹನ್ ಲಾಲ್
ಖ್ಯಾತ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ.ರಾಯ್ ಅವರ ಅಕಾಲಿಕ ನಿಧನಕ್ಕೆ ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ನಟ ಮೋಹನ್ ಲಾಲ್ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ರಾಯ್ ಅವರ ಆತ್ಮಹತ್ಯೆ ಸುದ್ದಿ ತಿಳಿದ ಕೂಡಲೇ, ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅವರು ತಮ್ಮ ಆಪ್ತ ಸ್ನೇಹಿತನನ್ನು ಕಳೆದುಕೊಂಡ ನೋವನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಅತ್ಯಂತ ಆತ್ಮೀಯ ಸ್ನೇಹಿತ
ಫೇಸ್‌ಬುಕ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ನಟ ಮೋಹನ್ ಲಾಲ್, "ನನ್ನ ಅತ್ಯಂತ ಆತ್ಮೀಯ ಸ್ನೇಹಿತ ಸಿ.ಜೆ. ರಾಯ್ ಅವರನ್ನು ಕಳೆದುಕೊಂಡಿರುವುದು ಇನ್ನೂ ನಿಜವೆನಿಸುವುದಿಲ್ಲ. ಈ ನೋವು ನಂಬಲಾಗದಷ್ಟು ಆಳವಾಗಿದೆ. ಈ ದುಃಖದ ಕ್ಷಣದಲ್ಲಿ ಅವರ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಸಾಂತ್ವನಗಳು" ಎಂದು ಬರೆದುಕೊಂಡಿದ್ದಾರೆ.

"ರಾಯ್ ನನ್ನ ಸ್ನೇಹಿತನಿಗಿಂತಲೂ ಹೆಚ್ಚು. ಪ್ರೀತಿ, ಆತ್ಮೀಯತೆ ಮತ್ತು ಮಾನವೀಯತೆಯಿಂದ ಸದಾ ನೆನಪಾಗುವ ವ್ಯಕ್ತಿ. ಈ ಅಪಾರ ದುಃಖದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನನ್ನ ಹೃದಯ ಇದೆ" ಎಂದು ಮೋಹನ್ ಲಾಲ್ ಭಾವುಕರಾಗಿ ಹೇಳಿದ್ದಾರೆ.
ಸಿ.ಜೆ.ರಾಯ್ ಅವರ ನಿಧನವು ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಅವರ ಸ್ನೇಹಿತರು, ಉದ್ಯಮ ವಲಯ ಹಾಗೂ ಚಿತ್ರರಂಗದ ಹಲವರಿಗೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರ ಆತ್ಮೀಯ ಸ್ವಭಾವ, ಸ್ನೇಹಭಾವ ಮತ್ತು ಮಾನವೀಯ ಗುಣಗಳನ್ನು ಸ್ಮರಿಸುತ್ತಾ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಸಿ.ಜೆ.ರಾಯ್ ಅವರು ಕಳೆದ ಶುಕ್ರವಾರ ಬೆಂಗಳೂರಿನ ಹೊಸೂರು ರಸ್ತೆಯ ಲ್ಯಾಂಗ್‌ಫರ್ಡ್ ಟೌನ್‌ನಲ್ಲಿರುವ ತಮ್ಮ ಕಂಪನಿಯ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ಅವರು ತಮ್ಮ ಪರವಾನಗಿ ಪಡೆದ ಪಿಸ್ತೂಲ್‌ನಿಂದಲೇ ಗುಂಡು ಹಾರಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಸಿ.ಜೆ.ರಾಯ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಈ ಹಿಂದೆ ಹಲವು ಬಾರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ. ಇತ್ತೀಚೆಗೆ ಕೂಡ ಅವರ ಕಂಪನಿಯ ಮೇಲೆ ಐಟಿ ದಾಳಿ ನಡೆದಿದ್ದು, ಕಚೇರಿಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಈ ಘಟನೆ ಉದ್ಯಮ ವಲಯದಲ್ಲಿ ತೀವ್ರ ಆಘಾತ ಮೂಡಿಸಿದ್ದು, ಸಿ.ಜೆ.ರಾಯ್ ಅವರ ಅಕಾಲಿಕ ಅಗಲಿಕೆಗೆ ವಿವಿಧ ವಲಯಗಳಿಂದ ಸಂತಾಪ ವ್ಯಕ್ತವಾಗುತ್ತಿದೆ.












Click it and Unblock the Notifications