Karnataka Weather: ಮುಂದಿನ 7 ದಿನ ವ್ಯಾಪಕ ಬಿಸಿಲು ಮುನ್ಸೂಚನೆ, ಕನಿಷ್ಠ ತಾಪಮಾನಲ್ಲಿ 3-5 ಡಿಸೆ ಇಳಿಕೆ
ಬೆಂಗಳೂರು: ಕರ್ನಾಟಕದ ಹಲವೆಡೆ ಬೆಳಗ್ಗೆ ಚಳಿ ಮತ್ತು ಮಂಜಿನ ವಾತಾವರಣ ಕಂಡು ಬರಲಿದೆ. ಇಂದು ಭಾನುವಾರ (ಜನವರಿ 31) ದಿಂದ ರಾಜ್ಯದೆಲ್ಲಡೆ ಒಣಹವೆ ಉಂಟಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ಸೇರಿ ಹಲವೆಡೆ ಕನಿಷ್ಠ ತಾಪಮಾನದಲ್ಲಿ ಬದಲಾವಣೆ ಆದರೂ ಸಹಿತ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಲಿದ್ದು, ಶುಷ್ಕ ವಾತಾವರಣ ನಿರ್ಮಾಣವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ತಾಪಮಾನ ಕುಸಿತವಾಗಿದ್ದು, ಚಳಿ ಕಂಡು ಬಂದಿದೆ. ಅದರ ವಿವರ ಮುಂದಿದೆ.
ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಸಾಮಾನ್ಯ ವಾಡಿಕೆ ಕನಿಷ್ಠ ತಾಪಮಾನಕ್ಕಿಂತ ಕಡಿಮೆ -3.1 ರಿಂದ 5.0 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಕೆ ಆಗುವ ಮೂಲಕ ಕೆಲವೆಡೆ ಹೆಚ್ಚಿನ ಚಳಿ ಅನುಭವವಾಗಿದೆ. ಇದೇ ಉತ್ತರ ಕರ್ನಾಟಕದ ಒಂದೆರಡು ಭಾಗಗಳಲ್ಲಿ ಗರಿಷ್ಠ ತಾಪಮಾನ 3.1 ರಿಂದ 5.0 ರಷ್ಟು ವಾಡಿಕೆಗಿಂತ ಅಧಿಕ ದಾಖಲಾಗುವ ಮೂಲಕ ಇಲ್ಲಿ ಚಳಿ ಮತ್ತು ಶಾಖದ ಅನುಭವ ನೀಡಿದೆ.

ಕಳೆದ ವಾರ ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆಗಳಲ್ಲಿ ಹಗುರ ಮಳೆ ಆಗಿತ್ತು. ಆದರೆ ಮುಂದಿನ ಒಂದು ವಾರ ಎಲ್ಲಿಯೂ ಮಳೆ ಮುನ್ಸೂಚನೆ ಇಲ್ಲ. ಸಂಪೂರ್ಣ ನೀಲಿ ಆಕಾಶ ಕಂಡು ಬರಲಿದ್ದು, ಒಣಹವೆ ಮುಂದುವರಿಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿ ಒಳನಾಡಿನ ಕೆಲವೆಡೆ ಬೆಳಗ್ಗೆ, ರಾತ್ರಿ ಚಳಿ ಗಾಳಿ ಬೀಸಬಹುದು. ಇದರಿಂದಿಗೆ ಯಾವುದೇ ಗಂಭೀರ ಸ್ವರೂಪದ ಹವಾಮಾನ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಇನ್ನೂ ಚಳಿ ಇರುವ ಜಿಲ್ಲೆಗಳು ಯಾವುವು?
ರಾಜ್ಯದಲ್ಲಿ ಬಿಸಿಲು ಹೆಚ್ಚಾಗುತ್ತಿದೆ. ಹೀಗಿದ್ದರು ಚಳಿ ಪ್ರಮಾಣದ ಕೆಲವೆಡೆ ಕಡಿಮೆ ಆಗಿಲ್ಲ. ಆ ಪೈಕಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಹೌದು. ಇಲ್ಲಿ ಕ್ರಮವಾಗಿ 9.7 ಮತ್ತು 9.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಉಳಿದಂತೆ ಕೋಲಾರದಲ್ಲಿ 7.9 ಡಿಗ್ರಿ ಸೆಲ್ಸಿಯಸ್, ಚಿಕ್ಕಬಳ್ಳಾಪುರ 8.7 ಡಿಗ್ರಿ ಸೆಲ್ಸಿಯಸ್, ತುಮಕೂರು 8.9 ಡಿಗ್ರಿ ಸೆಲ್ಸಿಯಸ್, ಹಾಸನ 10.2 ಡಿಗ್ರಿ ಸೆಲ್ಸಿಯಸ್, ಚಿಕ್ಕಮಗಳೂರು 10.8 ಡಿಗ್ರಿ ಸೆಲ್ಸಿಯಸ್, ಮೈಸೂರು 10.7 ಡಿಗ್ರಿ ಸೆಲ್ಸಿಯಸ್, ಮಂಡ್ಯ 10.8 ಡಿಗ್ರಿ ಸೆಲ್ಸಿಯಸ್, ಬೆಳಗಾವಿ, ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ 12.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಇದೇ ಪ್ರದೇಶಗಳಲ್ಲಿ ಹಗಲು ತಾಪಮಾನದಲ್ಲಿ ಏರಿಕೆ ಆಗಿದೆ. ಈಗಾಗಲೇ ಕರ್ನಾಟಕದ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಖದ ಅಲೆ ವಾತಾವರಣ ನಿರ್ಮಾಣವಾಗಿದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications