Union Budget 2026: ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ನ್ಯಾಯಸಮ್ಮತ ಬೇಡಿಕೆಗೆ ಅನ್ಯಾಯ: ಸಿದ್ದರಾಮಯ್ಯ ಅಸಮಾಧಾನ
ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ವಿಕಸಿತ ಭಾರತ', 'ಕರ್ತವ್ಯ' ಎಂಬ ಘೋಷವಾಕ್ಯಗಳಿಗೆ ಈ ಬಜೆಟ್ ಹೆಚ್ಚಿನ ಒತ್ತು ನೀಡಿದ್ದರೂ, ಜಾರಿಗೆ ಸಂಬಂಧಿಸಿದ ಸ್ಪಷ್ಟ ಯೋಜನೆ ಹಾಗೂ ಹೊಣೆಗಾರಿಕೆ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.
ಈ ಬಜೆಟ್ ಉದ್ದೇಶಗಳಲ್ಲಿ ಶ್ರೀಮಂತವಾಗಿದ್ದರೂ, ಹಣಕಾಸಿನ ಬದ್ಧತೆಯಲ್ಲಿ ದುರ್ಬಲವಾಗಿದೆ. ದೃಷ್ಟಿಕೋನವನ್ನು ಘೋಷಿಸಿ, ಜಾರಿಗೆ ಮುಂದೂಡುವ ಪ್ರವೃತ್ತಿ ಇದರಲ್ಲಿ ಸ್ಪಷ್ಟವಾಗಿದೆ. 'ಎನೇಬಲ್, ಎನ್‌ಕರೇಜ್, ಸಪೋರ್ಟ್' ಎಂಬ ಅಸ್ಪಷ್ಟ ಪದಗಳನ್ನೇ ಅವಲಂಬಿಸಿರುವ ಈ ದಾಖಲೆ ಜವಾಬ್ದಾರಿಯ ಬಜೆಟ್ ಅಲ್ಲ, ವಾಕ್ಚಾತುರ್ಯದ ಬಜೆಟ್ ಎಂದು ಸಿಎಂ ಹೇಳಿದರು.

ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ನ್ಯಾಯಸಮ್ಮತ ಬೇಡಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ರಾಜ್ಯಗಳ ಹೊಣೆಗಾರಿಕೆಗಳು ಹೆಚ್ಚುತ್ತಿರುವುದರ ನಡುವೆಯೂ ಕೇಂದ್ರ-ರಾಜ್ಯ ತೆರಿಗೆ ಹಂಚಿಕೆ ಶೇ.41ರಲ್ಲೇ ನಿಲ್ಲಿಸಲಾಗಿದೆ. ಹಂಚಿಕೆಗೇ ಸೇರದ ಸೆಸ್ ಮತ್ತು ಸರ್ಚಾರ್ಜ್‌ಗಳ ಮೂಲಕ ಕೇಂದ್ರ ಸರ್ಕಾರ ಆದಾಯವನ್ನು ತನ್ನಲ್ಲೇ ಉಳಿಸಿಕೊಂಡಿದ್ದು, ಕೇಂದ್ರ ಪ್ರಾಯೋಜಿತ ಯೋಜನೆಗಳ ವೆಚ್ಚವನ್ನು ಕ್ರಮೇಣ ರಾಜ್ಯಗಳ ಮೇಲೆ ಹೊರಿಸುತ್ತಿರುವುದು ಅನ್ಯಾಯಕರ ಎಂದು ಹೇಳಿದರು.
ಜಿಎಸ್‌ಟಿ ಸಂಬಂಧಿತ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಕೈಗೊಳ್ಳುತ್ತಿರುವುದರಿಂದ ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳ ಪಾಲು ಕನಿಷ್ಠ ಶೇ.50ಕ್ಕೆ ಹೆಚ್ಚಳವಾಗಬೇಕೆಂಬ ನಿರೀಕ್ಷೆ ಈ ಬಜೆಟ್‌ನಲ್ಲಿ ನಿರಾಶೆಯಾಗಿ ಉಳಿದಿದೆ ಎಂದರು.
16ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ನಷ್ಟ
16ನೇ ಹಣಕಾಸು ಆಯೋಗದ ಶಿಫಾರಸ್ಸು ಕರ್ನಾಟಕಕ್ಕೆ ತೀವ್ರ ನಿರಾಸೆ ತಂದಿದೆ. 14ನೇ ಹಣಕಾಸು ಆಯೋಗದಲ್ಲಿ ಶೇ.4.71ರಷ್ಟಿದ್ದ ಕರ್ನಾಟಕದ ತೆರಿಗೆ ಪಾಲು ಇದೀಗ ಶೇ.4.131ಕ್ಕೆ ಇಳಿಕೆಯಾಗಿದೆ. ಇದರಿಂದ ರಾಜ್ಯಕ್ಕೆ ವರ್ಷಕ್ಕೆ ಸುಮಾರು ₹10,000-15,000 ಕೋಟಿ ನಷ್ಟವಾಗುತ್ತಿದ್ದು, ಕಲ್ಯಾಣ ಯೋಜನೆಗಳು, ಮೂಲಸೌಕರ್ಯ, ನೀರಾವರಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಲಿದೆ ಎಂದು ಎಚ್ಚರಿಸಿದರು. ರಾಷ್ಟ್ರೀಯ ಬೆಳವಣಿಗೆಗೆ ಕರ್ನಾಟಕ ನೀಡುತ್ತಿರುವ ಮಹತ್ವದ ಕೊಡುಗೆಗೆ ತಕ್ಕ ಪ್ರತಿಫಲ ಈ ಬಜೆಟ್‌ನಲ್ಲಿ ಸಿಗಲಿಲ್ಲ ಎಂದರು.
ಹಣಕಾಸು ಶಿಸ್ತು ಹೆಸರಿನಲ್ಲಿನ ವೆಚ್ಚ ಕಡಿತ
2025-26ರಲ್ಲಿ ಶೇ.4.4ರ ಹಣಕಾಸು ಕೊರತೆ ಸಾಧಿಸಿರುವುದಾಗಿ ಕೇಂದ್ರ ಹೇಳಿಕೊಂಡಿದ್ದರೂ, ಇದು ಉತ್ತಮ ಆಡಳಿತದಿಂದ ಅಲ್ಲ, ವೆಚ್ಚ ಕಡಿತ ಮತ್ತು ಬದ್ಧತೆ ಮುಂದೂಡುವ ಮೂಲಕ ಸಾಧಿಸಲಾಗಿದೆ ಎಂದು ಆರೋಪಿಸಿದರು. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಬಜೆಟ್‌ನಲ್ಲಿ ₹5.41 ಲಕ್ಷ ಕೋಟಿ ಘೋಷಿಸಿದರೂ, ಪರಿಷ್ಕೃತ ಅಂದಾಜುಗಳಲ್ಲಿ ವೆಚ್ಚ ಕೇವಲ ₹4.20 ಲಕ್ಷ ಕೋಟಿಯಷ್ಟೇ ಇದೆ. ಮುಂದೂಡಿದ ಭರವಸೆಗಳ ಮೇಲೆ ಕಟ್ಟಿದ ಹಣಕಾಸು ಶಿಸ್ತು ವಿಶ್ವಾಸಾರ್ಹವಲ್ಲ ಎಂದರು.
ಹೈ-ಸ್ಪೀಡ್ ರೈಲು ಯೋಜನೆಗಳ ಬಗ್ಗೆ ಅಸಮಾಧಾನ
ಹೈದರಾಬಾದ್-ಬೆಂಗಳೂರು ಹಾಗೂ ಚೆನ್ನೈ-ಬೆಂಗಳೂರು ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು ಕರ್ನಾಟಕಕ್ಕಿಂತ ಹೆಚ್ಚು ಪಕ್ಕದ ರಾಜ್ಯಗಳಿಗೆ ಲಾಭ ನೀಡುತ್ತವೆ. ಬೆಂಗಳೂರು-ಮುಂಬೈ ಅಥವಾ ಬೆಂಗಳೂರು-ಪುಣೆ ಮಾರ್ಗಕ್ಕೆ ಆದ್ಯತೆ ನೀಡಿದ್ದರೆ, ಸಮತೋಲನದ ರಾಷ್ಟ್ರೀಯ ಸಂಪರ್ಕ ಸಾಧ್ಯವಾಗುತ್ತಿತ್ತು. ಮೂಲಸೌಕರ್ಯ ಯೋಜನೆಗಳು ಹಾದು ಹೋಗುವ ರಾಜ್ಯಗಳನ್ನು ಬಲಪಡಿಸಬೇಕು, ದುರ್ಬಲಗೊಳಿಸಬಾರದು ಎಂದು ಸಿಎಂ ಅಭಿಪ್ರಾಯಪಟ್ಟರು.
ಈ ಬಜೆಟ್ ರೈತರು ಹಾಗೂ ಗ್ರಾಮೀಣ ಆರ್ಥಿಕತೆಗೆ ತೀವ್ರ ನಿರಾಸೆ ತಂದಿದೆ. ಕಬ್ಬು ಬೆಳೆಗಾರರು, ತೊಗರಿ ಬೆಳೆಗಾರರು ಮತ್ತು ಆಹಾರಧಾನ್ಯ ಉತ್ಪಾದಕರಿಗೆ ಯಾವುದೇ ಸ್ಪಷ್ಟ ಪರಿಹಾರ ಇಲ್ಲ. ಬೆಳೆ ರೋಗಗಳು, ನಷ್ಟ ಪರಿಹಾರ, ಮಾರುಕಟ್ಟೆ ಸಂಪರ್ಕ ಹಾಗೂ ಬೆಲೆ ನಿಗದಿ ಕುರಿತು ಜವಾಬ್ದಾರಿಯುತ ಕ್ರಮಗಳಿಲ್ಲ ಎಂದು ಸಿಎಂ ಟೀಕಿಸಿದರು.
ಕರ್ನಾಟಕದ ನೀರಾವರಿ ಆದ್ಯತೆಗಳನ್ನು ಮತ್ತೊಮ್ಮೆ ಕಡೆಗಣಿಸಲಾಗಿದೆ. ಮೇಕೆದಾಟು ಯೋಜನೆಗೆ ಅನುಮೋದನೆ ಇಲ್ಲ, ಭದ್ರಾ ಮೇಲ್ದಂಡೆ ನಿಧಿಗಳು ಬಿಡುಗಡೆ ಆಗಿಲ್ಲ, ಕೃಷ್ಣ ಮೇಲ್ದಂಡೆ ಯೋಜನೆ ನಿರ್ಲಕ್ಷ್ಯಗೊಂಡಿದೆ. ಮಹಾದಾಯಿ ಯೋಜನೆಗೂ ಯಾವುದೇ ಉಲ್ಲೇಖವಿಲ್ಲ. ಇದರಿಂದ ನೀರಿನ ಭದ್ರತೆ ಹಾಗೂ ರೈತರ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.
ಇನ್ನು ಜಲ ಜೀವನ್ ಮಿಷನ್ ಅಡಿಯಲ್ಲಿ ₹67,000 ಕೋಟಿ ಘೋಷಿಸಿದ್ದರೂ, ವಾಸ್ತವ ವೆಚ್ಚ ಕೇವಲ ₹17,000 ಕೋಟಿ ಮಾತ್ರ. ಕರ್ನಾಟಕಕ್ಕೇ ₹13,004 ಕೋಟಿ ಬಾಕಿ ಉಳಿದಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಹಣ ಕಡಿತ ಮಾಡಿರುವುದು ರಾಜ್ಯಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದರು.
ಕೇಂದ್ರ ಪ್ರಾಯೋಜಿತ ಯೋಜನೆಗಳ ಕಡಿತ
ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ತೀವ್ರ ಕಡಿತ ಮಾಡುವ ಮೂಲಕ ಈ ಬಜೆಟ್ 'ಭರವಸೆ ಹೆಚ್ಚು-ಕಾರ್ಯಕ್ಷಮತೆ ಕಡಿಮೆ' ಎನ್ನುವಂತಾಗಿದೆ. ಚಾಮರಾಜನಗರ ಸೇರಿದಂತೆ ಕರ್ನಾಟಕದ ಭಾಗಗಳಲ್ಲಿ ಅಪರೂಪದ ಭೂತತ್ವ ಸಂಪನ್ಮೂಲಗಳಿದ್ದರೂ, ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದರು. ಈ ಬಜೆಟ್ ಅತ್ಯಂತ ನಿರಾಶಾಜನಕವಾಗಿದ್ದು, ಸಹಕಾರಾತ್ಮಕ ಸಂಯುಕ್ತ ವ್ಯವಸ್ಥೆ ಎಂಬ ತತ್ವದ ಅಡಿಪಾಯವನ್ನೇ ದುರ್ಬಲಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.












Click it and Unblock the Notifications