ಇಂದು ಸ್ಟ್ರಾಬೆರಿ ಮೂನ್ ಸಂಭ್ರಮ: ಪ್ರೀತಿ, ಪ್ರಕೃತಿ ಮತ್ತು ಚಂದ್ರನ ಅಪರೂಪದ ಸಂಗಮ
Strawberry Moon 2026: ಇಂದು ತುಸು ಕತ್ತಲಾದ ಮೇಲೆ ನೀವು ಆಕಾಶದತ್ತ ಕತ್ತೆತ್ತಿ ನೋಡಿ. ಅಲ್ಲೆಲ್ಲೋ ಮಾಮರಗಳ ಕೊಂಬೆಯಾಚೆಗೆ ಎದ್ದು ಬರುತ್ತಿರುವ ಚಂದ್ರನಲ್ಲಿ ಒಂದು ವಿಶೇಷತೆಯನ್ನು ಗುರುತಿಸುವಿರಿ. ಅದು ಕೆಂಪಲ್ಲ, ಗುಲಾಬಿಯಲ್ಲ. ಊಹೂಂ, ಆರೆಂಜ್ ಕೂಡ ಅಲ್ಲ. ಸ್ವಲ್ಪ ಸ್ಟ್ರಾಬೆರಿ ಬಣ್ಣಕ್ಕೆ ಮ್ಯಾಚ್ ಆಗುತ್ತದೆ. ಅದರ ಹೆಸರು ಸ್ಟ್ರಾಬೆರಿ ಮೂನ್. ನೀವು ಜೋಡಿಯಾಗಿದ್ದರೆ, ನಿಮ್ಮ ಸಂಜೆಯನ್ನು ಈ ಸ್ಟ್ರಾಬೆರಿ ಚಂದ್ರ ಇನ್ನಷ್ಟು ರಮ್ಯವಾಗಿಸುತ್ತಾನೆ ಖಂಡಿತ.
ಅದ್ಸರಿ, ಯಾಕೆ ಸ್ಟ್ರಾಬೆರಿ ಮೂನ್ ಎಂಬ ಹೆಸರು? ಈ ಹೆಸರನ್ನು ಕೇಳಿದ ತಕ್ಷಣ ಚಂದ್ರ ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸುತ್ತಾನೆಯೇ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದೇನೂ ಪೂರ್ತಿ ನಿಜವಲ್ಲ. ಚಂದ್ರನ ಬಣ್ಣದಲ್ಲಿ ಯಾವುದೇ ವಿಶೇಷ ಬದಲಾವಣೆ ಆಗುವುದಿಲ್ಲ. ಈ ಹೆಸರು ಬಂದಿರುವುದು ಒಂದು ಸುಂದರವಾದ ಪ್ರಕೃತಿ ಸಂಪ್ರದಾಯದಿಂದ.

ಸ್ಟ್ರಾಬೆರಿಯ ಕಾಲ
ಉತ್ತರ ಅಮೆರಿಕದ ಸ್ಥಳೀಯ ಮೂಲನಿವಾಸಿ ಸಮುದಾಯಗಳು ಜೂನ್ ತಿಂಗಳಲ್ಲಿ ಕಾಡು ಸ್ಟ್ರಾಬೆರಿ ಹಣ್ಣುಗಳು ಹಣ್ಣಾಗುವ ಕಾಲವನ್ನು ಗುರುತಿಸಲು ಈ ಹುಣ್ಣಿಮೆಗೆ 'ಸ್ಟ್ರಾಬೆರಿ ಮೂನ್' ಎಂದು ಹೆಸರು ಇಟ್ಟರು. ಇದು ಋತು ಬದಲಾವಣೆಯ ಸಂಕೇತ. ಹಳೆಯ ಕಾಲದಲ್ಲಿ ಕ್ಯಾಲೆಂಡರ್‌ಗಳಿಲ್ಲದ ಜನರು ಪ್ರಕೃತಿಯನ್ನೇ ತಮ್ಮ ಗಡಿಯಾರವಾಗಿ ಬಳಸುತ್ತಿದ್ದರು. ಪ್ರತಿ ಹುಣ್ಣಿಮೆಗೆ ಒಂದು ವಿಶೇಷ ಹೆಸರು ನೀಡಿ, ಅದರ ಮೂಲಕ ಬಿತ್ತನೆ, ಕೊಯ್ಲು, ಬೇಟೆ ಹಾಗೂ ಋತುಗಳ ಬದಲಾವಣೆಯನ್ನು ಗುರುತಿಸುತ್ತಿದ್ದರು. ಸ್ಟ್ರಾಬೆರಿ ಮೂನ್ ಕೂಡ ಅಂತಹ ಹೆಸರೇ.
ಈ ವರ್ಷದ ಸ್ಟ್ರಾಬೆರಿ ಮೂನ್ ವಿಶೇಷತೆ
ಈ ವರ್ಷ ಜೂನ್ ತಿಂಗಳ ಹುಣ್ಣಿಮೆ ಜೂನ್ 29ರಂದು ಕಾಣಿಸಿಕೊಳ್ಳುತ್ತದೆ. ಸೂರ್ಯಾಸ್ತದ ನಂತರ ಪೂರ್ವ ದಿಕ್ಕಿನಲ್ಲಿ ನಿಧಾನವಾಗಿ ಉದಯಿಸುವ ಈ ಹುಣ್ಣಿಮೆ, ಕ್ಷಿತಿಜದ ಸಮೀಪ ಇರುವಾಗ ಚಿನ್ನದ ಅಥವಾ ಕಿತ್ತಳೆ ಬಣ್ಣದ ಹೊಳಪಿನಲ್ಲಿ ಕಾಣಿಸಬಹುದು. ಇದು ವಾತಾವರಣದಲ್ಲಿರುವ ಧೂಳು ಮತ್ತು ಗಾಳಿಯ ಕಣಗಳಿಂದ ಉಂಟಾಗುವ ಸಹಜ ದೃಶ್ಯ. ಚಂದ್ರನು ಮೇಲಕ್ಕೆ ಏರುತ್ತಾ ಹೋದಂತೆ ಮತ್ತೆ ತನ್ನ ಸಾಮಾನ್ಯ ಬೆಳ್ಳಿಯ ಹೊಳಪಿಗೆ ಮರಳುತ್ತಾನೆ.
ಜೂನ್ ತಿಂಗಳು ಪ್ರಕೃತಿಯಲ್ಲಿ ಹೊಸ ಜೀವದ ಸಂಭ್ರಮದ ಕಾಲ. ಮಳೆಗಾಲದ ಆರಂಭ, ಹಸಿರಿನ ಚಿಗುರು, ಹಣ್ಣುಗಳ ಸುವಾಸನೆ - ಇವೆಲ್ಲವೂ ಭೂಮಿಯ ಹೊಸ ಅಧ್ಯಾಯವನ್ನು ಸಾರುತ್ತವೆ. ಹೀಗೆ ಸ್ಟ್ರಾಬೆರಿ ಮೂನ್ ಪ್ರಕೃತಿ, ಋತು ಮತ್ತು ಮಾನವನ ನಡುವಿನ ಸಂಬಂಧವನ್ನು ನೆನಪಿಸುವ ಸಂಕೇತ.
ಬೇರೆ ಬೇರೆ ಹೆಸರುಗಳು
ಜೂನ್ ಹುಣ್ಣಿಮೆಗೆ ವಿವಿಧ ದೇಶಗಳಲ್ಲಿ ವಿಭಿನ್ನ ಹೆಸರುಗಳಿವೆ. ಯುರೋಪಿನ ಕೆಲವು ಭಾಗಗಳಲ್ಲಿ ಇದನ್ನು 'ರೋಸ್ ಮೂನ್' ಎಂದು ಕರೆಯುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ 'ಹನಿ ಮೂನ್' ಎಂಬ ಹೆಸರೂ ಇದೆ. ಇದೇ ಪದದಿಂದ ಮದುವೆಯ ನಂತರದ 'ಹನಿಮೂನ್' ಎಂಬ ಪದವೂ ಜನಪ್ರಿಯವಾಗಿದೆ ಎನ್ನುವ ಅಭಿಪ್ರಾಯವಿದೆ.
ದಿನನಿತ್ಯದ ಗದ್ದಲದ ನಡುವೆ ಕೆಲ ಕ್ಷಣ ಆಕಾಶದತ್ತ ನೋಡಿದರೆ ಮನಸ್ಸಿಗೆ ಸಿಗುವ ನೆಮ್ಮದಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸ್ಟ್ರಾಬೆರಿ ಮೂನ್ ಕೂಡ ಹಾಗೆ ಮನಸ್ಸಿಗೆ ತಂಪಿನ ಧಾರೆ ಎರೆಯುವ ಒಂದು ಸುಂದರ ದೃಶ್ಯ. ಅದನ್ನು ನೋಡುವ ನಮ್ಮ ಮನಸ್ಸು ಹೊಸ ಬೆಳಕಿನಿಂದ ತುಂಬಬಹುದು.
ಸ್ಟ್ರಾಬೆರಿ ಮೂನ್ ಪ್ರೀತಿ, ವಾತ್ಸಲ್ಯ ಮತ್ತು ಅನುರಾಗದ ಸಂಕೇತವೆಂದೂ ಜನಪ್ರಿಯವಾಗಿದೆ. ಸ್ಟ್ರಾಬೆರಿ ಹಣ್ಣು ಕೆಂಪು ಬಣ್ಣ, ಸಿಹಿ ರುಚಿ ಮತ್ತು ಹೃದಯದ ಆಕಾರದಿಂದ ಪ್ರೀತಿ ಹಾಗೂ ಪ್ರಣಯದ ಸಂಕೇತವಾಗಿ ಬಹಳ ಹಿಂದಿನಿಂದಲೂ ಪರಿಗಣಿಸಲಾಗಿದೆ. ಆದ್ದರಿಂದ ಸ್ಟ್ರಾಬೆರಿ ಮೂನ್ ಎಂಬ ಹೆಸರೇ ಪ್ರೀತಿ ಮತ್ತು ಮಧುರ ಸಂಬಂಧಗಳ ಭಾವನೆಯನ್ನು ಮೂಡಿಸುತ್ತದೆ. ಉತ್ತರ ಗೋಳಾರ್ಧದಲ್ಲಿ ಜೂನ್ ತಿಂಗಳು ಬೇಸಿಗೆಯ ಸಂಭ್ರಮದ ಕಾಲ. ಪ್ರಕೃತಿ ಹೂ-ಹಣ್ಣುಗಳಿಂದ ಕಂಗೊಳಿಸುವ ಈ ಸಮಯದೊಂದಿಗೆ ಹೊಸ ಸಂಬಂಧಗಳು, ಹೊಸ ಪ್ರೀತಿ ಮತ್ತು ಹೊಸ ಜೋಡಿಗಳು ಜೋಡಿಸಿಕೊಂಡಿವೆ.
ಯುರೋಪ್‌ನಲ್ಲಿ ಜೂನ್ ತಿಂಗಳಲ್ಲಿ ಮದುವೆಗಳು ಹೆಚ್ಚಾಗಿ ನಡೆಯುತ್ತಿದ್ದವು. ಈ ಅವಧಿಯ ಹುಣ್ಣಿಮೆಯನ್ನು ಕೆಲವೆಡೆ 'ಹನಿ ಮೂನ್' ಎಂದೂ ಕರೆಯಲಾಗುತ್ತಿತ್ತು. ಮದುವೆಯ ನಂತರದ 'ಹನಿಮೂನ್' ಎಂಬ ಪದವೂ ಇದೇ ಸಂಪ್ರದಾಯದೊಂದಿಗೆ ಸಂಬಂಧ ಹೊಂದಿದೆಯಂತೆ. ಇದರಿಂದ ಜೂನ್ ಹುಣ್ಣಿಮೆ ಪ್ರೀತಿ ಮತ್ತು ದಾಂಪತ್ಯದ ಸಂಕೇತವಾಗಿ ಜನಪ್ರಿಯವಾಯಿತು. ಇತ್ತೀಚಿನ ದಿನಗಳಲ್ಲಿ ಸ್ಟ್ರಾಬೆರಿ ಮೂನ್‌ಗೆ ಇನ್ನೊಂದು ಅರ್ಥವೂ ಬಂದಿದೆ-ಹಳೆಯ ನೋವುಗಳನ್ನು ಬಿಟ್ಟು ಹೊಸ ಪ್ರೀತಿ, ಕ್ಷಮೆ ಮತ್ತು ಸಂಬಂಧಗಳನ್ನು ಸ್ವಾಗತಿಸುವ ಸಮಯ.
ಬರಹ: ಭವಾನಿ ಭಟ್












Click it and Unblock the Notifications