ಚಿತ್ರದುರ್ಗದ ಜೆರಾಕ್ಸ್ ಅಂಗಡಿಯಿಂದ ದೇಶದ ಅಥ್ಲೆಟಿಕ್ಸ್ ಟ್ರ್ಯಾಕ್‌ವರೆಗೆ.. ಅಮೋಘ ಸಾಧನೆ ಮಾಡಿದ ಪ್ರಕೃತಿ ರಾವ್
ಚಿತ್ರದುರ್ಗ, ಜೂನ್ 29: ಛಲವೊಂದಿದ್ದರೆ ಏನು ಬೇಕಾದರೂ ಜಯಿಸಬಹುದು ಎನ್ನುವುದಕ್ಕೆ ಚಿತ್ರದುರ್ಗದ ಬಾಲಕಿಯ ಈ ಅದ್ಭುತ ಸಾಧನೆಯೇ ಪ್ರಮುಖ ಸಾಕ್ಷಿಯಾಗಿದೆ. ಪ್ರಕೃತಿ ಬಿ. ರಾವ್ ಎಂಬುವರು ಭುವನೇಶ್ವರದಲ್ಲಿ ನಡೆದ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ 4x100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಚಿನ್ನದ ಪದಕ ಗೆದ್ದುಕೊಟ್ಟು ಗಮನ ಸೆಳೆದಿದ್ದಾರೆ. ಈ ಕುರಿತ ಸಂಪೂರ್ಣ ಸುದ್ದಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭುವನೇಶ್ವರದಲ್ಲಿ ನಡೆದ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮಹಿಳೆಯರ 4x100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕ ಚಿನ್ನದ ಪದಕ ಮುಡಿಗೇರಿಸಿಕೊಂಡಿತು. ಈ ವೇಳೆ ಚಿತ್ರದುರ್ಗದ ಓಟಗಾರ್ತಿ ಪ್ರಕೃತಿ ಬಿ. ರಾವ್ ಅವರ ಮುಖದಲ್ಲಿ ಮೂಡಿದ ಸಂತಸ ಎರಡು ಪದಕ ಗೆದ್ದಿರುವುದಕ್ಕಿಂತಲೂ ಹೆಚ್ಚಾಗಿತ್ತು. ಅದು ಅವರ ಕಠಿಣ ಪರಿಶ್ರಮ ಮತ್ತು ಅದ್ಭುತ ಯಶೋಗಾಥೆಯ ಪ್ರತಿಬಿಂಬವಾಗಿತ್ತು. ಈ ಓಟದಲ್ಲಿ ಮೊದಲ ಹಂತವನ್ನು ಯಶಸ್ವಿಯಾಗಿ ಮುನ್ನಡೆಸಿದ ಪ್ರಕೃತಿ, ತಮ್ಮ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದು ಅವರ ಕ್ರೀಡಾ ಜೀವನದ ಅತ್ಯಂತ ಯಶಸ್ವಿ ಅವಧಿಯ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾಗಿದೆ.

ಕೆಲವೇ ತಿಂಗಳುಗಳ ಹಿಂದೆ ಯಾರೂ ಗುರುತಿಸದಿದ್ದ ಅಥ್ಲೀಟ್ ಆಗಿದ್ದ ಪ್ರಕೃತಿ ಇಂದು ಕರ್ನಾಟಕದ ಅತ್ಯಂತ ವೇಗದ ಮಹಿಳಾ ಓಟಗಾರ್ತಿಯರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. 100 ಮೀಟರ್ ಓಟವನ್ನು ಕೇವಲ 11.65 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ಈ ಮೂಲಕ ಅವರು ಉನ್ನತಿ ಬೊಳ್ಳಂಡ, ವಿ.ಸುಧೀಕ್ಷಾ ಮತ್ತು ದಾನೇಶ್ವರಿ ಟಿ. ಅವರಂತಹ ಅನುಭವಿ ಓಟಗಾರ್ತಿಯರನ್ನೇ ಸೋಲಿಸಿ ಗಮನ ಸೆಳೆದಿದ್ದಾರೆ.
ರಾಜ್ಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದ ಪ್ರಕೃತಿ
2026ರ ಕರ್ನಾಟಕ ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 100 ಮೀಟರ್ ಓಟದಲ್ಲಿ ಪ್ರಕೃತಿ ಚಿನ್ನ ಗೆದ್ದು ರಾಜ್ಯದ ಅಥ್ಲೆಟಿಕ್ಸ್ ವಲಯದಲ್ಲೇ ದೊಡ್ಡ ಸಂಚಲನ ಮೂಡಿಸಿದ್ದರು. ಅಲ್ಲಿಯವರೆಗೆ ಉನ್ನತಿ ಬೊಳ್ಳಂಡ, ವಿ. ಸುಧೀಕ್ಷಾ ಮತ್ತು ದಾನೇಶ್ವರಿ ಟಿ. ಅವರಂತಹ ಅನುಭವಿ ಕ್ರೀಡಾಪಟುಗಳೇ ಮುಂಚೂಣಿಯಲ್ಲಿದ್ದರು. ಯಾರೂ ನಿರೀಕ್ಷಿಸದ ಸಮಯದಲ್ಲಿ ಪ್ರಕೃತಿ ಈ ಹಿರಿಯ ಆಟಗಾರ್ತಿಯರನ್ನು ಸೋಲಿಸಿ ಚಿನ್ನದ ಪದಕ ಪಡೆದರು. ಈ ಬಗ್ಗೆ ಪ್ರಕೃತಿ ಮಾತನಾಡಿದ್ದು, 'ಯಾರೂ ನನ್ನಿಂದ ಗೆಲುವನ್ನು ನಿರೀಕ್ಷಿಸದೇ ಇದ್ದಾಗ ಬರುವ ಕಿಕ್ ಮತ್ತು ಆ ಮ್ಯಾಜಿಕ್ ನನಗೆ ಇಷ್ಟ,' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ
100 ಮೀಟರ್ ಓಟದಲ್ಲಿ ಇವರು ಸ್ಥಿರವಾಗಿ 11.65 ಸೆಕೆಂಡುಗಳ ಸಮಯವನ್ನು ದಾಖಲಿಸುತ್ತಾ ಬಂದಿದ್ದಾರೆ. ಇದೇ ಪ್ರದರ್ಶನವನ್ನು ತಿರುವನಂತಪುರಂನಲ್ಲಿ ನಡೆದ ಇಂಡಿಯನ್ ಅಥ್ಲೆಟಿಕ್ಸ್ ಸರಣಿಯಲ್ಲೂ ಮುಂದುವರಿಸಿದ್ದಾರೆ. ವಾಸ್ತವವಾಗಿ ಪ್ರಕೃತಿ ಅವರ ಮುಖ್ಯ ಗಮನವಿದ್ದದ್ದು 200 ಮೀಟರ್ ಓಟದ ಮೇಲೆ. ಆದರೆ ಅನಿರೀಕ್ಷಿತವಾಗಿ ಅವರು 100 ಮೀಟರ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಲು ಆರಂಭಿಸಿದರು.
ಅಂತರರಾಜ್ಯ ಚಾಂಪಿಯನ್‌ಶಿಪ್‌ನ 200 ಮೀಟರ್ ಸೆಮಿಫೈನಲ್‌ನಲ್ಲಿ ಅವರು 23.78 ಸೆಕೆಂಡುಗಳ ಸಮಯ ದಾಖಲಿಸಿದ್ದರು. ತಾಂತ್ರಿಕವಾಗಿ ಇನ್ನೂ ಸ್ವಲ್ಪ ಸುಧಾರಣೆ ಮಾಡಿಕೊಂಡರೆ ಮತ್ತಷ್ಟು ಉತ್ತಮ ಸಮಯ ದಾಖಲಿಸಬಹುದು ಎಂಬ ನಂಬಿಕೆ ಅವರಿಗಿದೆ.
ಕುಟುಂಬದ ಬೆಂಬಲದಿಂದ ಪ್ರಕೃತಿ ಅದ್ಭುತ ಸಾಧನೆ
ಚಿತ್ರದುರ್ಗ ಮೂಲದ ಪ್ರಕೃತಿ ಪ್ರಸ್ತುತ ಚೆನ್ನೈನ ಹಡ್ಲರ್ಸ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ತರಬೇತುದಾರ ವಿಕ್ಟರ್ ಜೆಬಾ ಸಿಂಗ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರ ಈ ಸಾಧನೆಯ ಹಿಂದೆ ಹೆತ್ತವರ ಅಪಾರ ತ್ಯಾಗವಿದೆ. 'ತಾಯಿ ಉಮ್ಮೆ ಸಲ್ಮಾ ಅವರು ರಾಷ್ಟ್ರಮಟ್ಟದ ಮಾಜಿ ಕಬಡ್ಡಿ ಆಟಗಾರ್ತಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದು, ನನ್ನ ಕನಸಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ,' ಎಂದು ಪ್ರಕೃತಿ ಹೆಮ್ಮೆಯಿಂದ ಹೇಳಿದ್ದಾರೆ.
ತಂದೆ ಬೈರೋಜಿ ರಾವ್ ಅವರು ಚಿತ್ರದುರ್ಗದಲ್ಲಿ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದು, ಕ್ರೀಡಾ ಹಿನ್ನೆಲೆ ಇಲ್ಲದಿದ್ದರೂ ನನಗೆ ನಿರಂತರ ಪ್ರೋತ್ಸಾಹ ನೀಡಿದ್ದಾರೆ. ಶಾಲಾ ದಿನಗಳಲ್ಲಿ ತರಬೇತಿಯ ಕೊರತೆಯಿಂದ ಬೇಸತ್ತಿದ್ದಾಗ, 'ಸಮಯ ಇಂದು ನಿನ್ನ ಪರ ಇಲ್ಲಿದಿರಬಹುದು, ಆದರೆ ಮುಂದೊಂದು ದಿನ ನಿನ್ನ ಕಾಲ ಬಂದೇ ಬರುತ್ತದೆ,' ಎಂದು ತಂದೆ ಹೇಳಿದ್ದರು. ಆ ಮಾತುಗಳೇ ಇಂದಿಗೂ ನನಗೆ ಸ್ಪೂರ್ತಿಯಾಗಿವೆ,' ಎಂದು ಪ್ರಕೃತಿ ಹೇಳಿದ್ದಾರೆ.
ಪ್ರಕೃತಿ ಮುಂದಿನ ಗುರಿ ಏನು?
ಆರಂಭದಲ್ಲಿ ತಮ್ಮ ಮೇಲೆಯೇ ನಂಬಿಕೆ ಇಲ್ಲದಿದ್ದ ಪ್ರಕೃತಿಗೆ, ಈಗಿನ ಗೆಲುವುಗಳು ಆತ್ಮವಿಶ್ವಾಸವನ್ನು ತುಂಬಿವೆ. ಏಷ್ಯನ್ ಗೇಮ್ಸ್‌ಗೆ ಭಾರತೀಯ ಮಹಿಳಾ ರಿಲೇ ತಂಡ ಅರ್ಹತೆ ಪಡೆದರೆ, ದೇಶದ ಪ್ರಮುಖ ಓಟಗಾರ್ತಿಯರಲ್ಲಿ ಒಬ್ಬರಾಗಿರುವ ಪ್ರಕೃತಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಸದ್ಯಕ್ಕೆ ರಾಷ್ಟ್ರಮಟ್ಟದಲ್ಲಿ ವೈಯಕ್ತಿಕ ಪದಕ ಗೆಲ್ಲುವುದು ಅವರ ಪ್ರಮುಖ ಗುರಿಯಾಗಿದೆ. ಈಗ ಆರಂಭವಾದ ಅದ್ಭುತ ಪಯಣ ಪ್ರಕೃತಿ ಬಿ. ರಾವ್ ಅವರಿಗೆ ಹೊಸ ಭರವಸೆಯನ್ನು ಮೂಡಿಸಿದೆ.












Click it and Unblock the Notifications