ತಿಂಗಳಿಗೆ 71,000 ರೂ. ಖರ್ಚು ಮಾಡುತ್ತಿರುವ ಬೆಂಗಳೂರು ಟೆಕ್ಕಿ: ಮನೆ ಬಾಡಿಗೆಯೇ 28 ಸಾವಿರ! ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ
ಭಾರತದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಸಿಲಿಕಾನ್ ಸಿಟಿ ಬೆಂಗಳೂರು, ಯುವ ವೃತ್ತಿಪರರು ಹಾಗೂ ಐಟಿ ಉದ್ಯೋಗಿಗಳ ನೆಚ್ಚಿನ ತಾಣ. ಆದರೆ, ಇಲ್ಲಿ ದೈನಂದಿನ ಜೀವನ ವೆಚ್ಚ ಅನೇಕ ಬಾರಿ ಸಾಮಾನ್ಯ ಜನರ ಊಹೆಗೂ ನಿಲುಕುವುದಿಲ್ಲ. ಮನೆ ಬಾಡಿಗೆಯಿಂದ ಹಿಡಿದು ದಿನನಿತ್ಯದ ಖರ್ಚು-ವೆಚ್ಚಗಳು, ವಾರಾಂತ್ಯದ ಮೋಜು-ಮಸ್ತಿ ಸೇರಿದಂತೆ ಮಾಸಿಕ ಬಜೆಟ್ ದೊಡ್ಡ ಮೊತ್ತವನ್ನೇ ಬೇಡುತ್ತದೆ.
ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಎಂಜಿನಿಯರ್ ಅಂಜಲಿ ಎಂಬುವವರು ತಮ್ಮ ಮಾಸಿಕ ಖರ್ಚಿನ ಸಂಪೂರ್ಣ ಲೆಕ್ಕಾಚಾರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಆನ್‌ಲೈನ್‌ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಟ್ಲಾಸಿಯನ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಜಲಿ, ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ 'ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕಾರ್ಪೊರೇಟ್ ಹುಡುಗಿ' ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದಾರೆ. ಕೇವಲ ಮೇ ಒಂದು ತಿಂಗಳ ಅವಧಿಯಲ್ಲಿ ತಾವು ಮನೆ ಬಾಡಿಗೆ, ಊಟ, ಶಾಪಿಂಗ್, ಪ್ರಯಾಣ ಹಾಗೂ ಜೀವನಶೈಲಿಗಾಗಿ ಬರೋಬ್ಬರಿ 71,000 ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಅವರು ಬಹಿರಂಗಪಡಿಸಿದ್ದಾರೆ. ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ವಾಸಿಸುವಾಗ ತಿಂಗಳಿಗೆ 71 ಸಾವಿರ ರೂ. ಖರ್ಚು ಮಾಡುವುದು ಅಷ್ಟೇನೂ ಕೆಟ್ಟದ್ದಲ್ಲ ಎಂಬುದು ಅವರ ಅಭಿಪ್ರಾಯ.
ದುಬಾರಿ ಮನೆ ಬಾಡಿಗೆ
ವೈರಲ್ ಆಗಿರುವ ವಿಡಿಯೋದಲ್ಲಿ ಅಂಜಲಿ ತಮ್ಮ ಖರ್ಚಿನ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ಅತಿದೊಡ್ಡ ಖರ್ಚು ಮನೆ ಬಾಡಿಗೆಗೆ ಹೋಗುತ್ತಿದೆ. ತಾವು ವಾಸಿಸುತ್ತಿರುವ 1BHK ಅಪಾರ್ಟ್‌ಮೆಂಟ್‌ನ ಬಾಡಿಗೆ ಹಾಗೂ ಅದರ ನಿರ್ವಹಣಾ ವೆಚ್ಚ ಸೇರಿ ಪ್ರತಿ ತಿಂಗಳು 28,000 ರೂ. ಪಾವತಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಇದರ ಜೊತೆಗೆ ನೀರು ಮತ್ತು ವಿದ್ಯುತ್ ಬಿಲ್ ಗಾಗಿ 1,000 ರೂ. ಖರ್ಚಾಗುತ್ತಿದೆ.
ಅಂಜಲಿ ಕೆಲಸ ಮಾಡುವ ಐಟಿ ಕಂಪನಿಯು ವಾರದ ದಿನಗಳಲ್ಲಿ ಉಚಿತವಾಗಿ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಒದಗಿಸುತ್ತದೆ. ಹೀಗಾಗಿ ಅವರ ಆಹಾರದ ಮೇಲಿನ ಖರ್ಚು ಸ್ವಲ್ಪ ಕಡಿಮೆಯಿದೆ. ಆದರೆ, ರಾತ್ರಿಯ ಊಟ ತಯಾರಿಸಲು ಅಡುಗೆಯವರನ್ನು ನೇಮಿಸಿಕೊಂಡಿದ್ದು, ಅವರಿಗೆ ತಿಂಗಳಿಗೆ 3,000 ರೂ. ಪಾವತಿಸುತ್ತಾರೆ. ದಿನಸಿ ವಸ್ತುಗಳಿಗಾಗಿ 3,000 ದಿಂದ 4,000 ರೂ. ಖರ್ಚಾಗುತ್ತದೆ.
ಇನ್ನು ಕಚೇರಿಗೆ ಹೋಗಿ ಬರಲು ಕಂಪನಿಯೇ ಕ್ಯಾಬ್ ಸೌಲಭ್ಯ ನೀಡಿರುವುದರಿಂದ ಸಾರಿಗೆ ವೆಚ್ಚ ಉಳಿತಾಯವಾಗಿದೆ. ಇದರ ಹೊರತಾಗಿ, ಜಿಮ್ ಸದಸ್ಯತ್ವ, ವೈ-ಫೈ, ಆರ್‌ಒ ವಾಟರ್ ಸೇವೆಗಳು ಹಾಗೂ ವಿವಿಧ ಒಟಿಟಿ ಚಂದಾದಾರಿಕೆಗಳಿಗಾಗಿ ತಿಂಗಳಿಗೆ ಸುಮಾರು 3,000 ರೂ. ಖರ್ಚು ಮಾಡುತ್ತಿದ್ದಾರೆ.
ವಾರಾಂತ್ಯದ ಟ್ರಿಪ್
ಅಂಜಲಿ ಅವರ ಮಾಸಿಕ ಬಜೆಟ್‌ನ ಗಣನೀಯ ಭಾಗವು ಅವರ ಜೀವನಶೈಲಿ ಮತ್ತು ಮೋಜು-ಮಸ್ತಿಗಾಗಿ ಬಳಕೆಯಾಗುತ್ತಿದೆ. ಹೊರಗಡೆ ಊಟ ಮಾಡುವುದು, ವಾರಾಂತ್ಯದ ಚಟುವಟಿಕೆಗಳು ಮತ್ತು ಶಾಪಿಂಗ್‌ಗಾಗಿ ಅವರು 12,000 ದಿಂದ 15,000 ರೂ.ಗಳವರೆಗೆ ಖರ್ಚು ಮಾಡುತ್ತಾರೆ.
ಇದರ ಜೊತೆಗೆ, ಬೆಂಗಳೂರಿನಿಂದ 3-4 ದಿನಗಳ ಶಾರ್ಟ್ ಟ್ರಿಪ್ ಹೋಗಲು ಇಷ್ಟಪಡುವ ಅವರು, ಇದಕ್ಕಾಗಿ ತಿಂಗಳಿಗೆ ಹೆಚ್ಚುವರಿಯಾಗಿ 15,000 ದಿಂದ 20,000 ರೂ. ವೆಚ್ಚ ಮಾಡುತ್ತಾರೆ. ಈ ಎಲ್ಲಾ ಖರ್ಚುಗಳನ್ನು ಸೇರಿಸಿದರೆ ಮೇ ತಿಂಗಳ ಅವರ ಒಟ್ಟು ವೆಚ್ಚ ಸರಿಸುಮಾರು 71,000 ರೂ. ಆಗಿದೆ.
ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ಅಂಜಲಿ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಒಬ್ಬ ಬಳಕೆದಾರರು ಪ್ರತಿಕ್ರಿಯಿಸುತ್ತಾ, "ಪ್ರೀಮಿಯಂ ಬ್ರ್ಯಾಂಡ್‌ಗಳ ಶಾಪಿಂಗ್, ಐಷಾರಾಮಿ ಜೀವನಶೈಲಿಗಾಗಿ ಮಾಡುವ ಖರ್ಚು ವ್ಯರ್ಥ. ಇದರ ಬದಲು ಮನೆ, ಸೈಟು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ 40ನೇ ವಯಸ್ಸಿನ ನಂತರ ನಿಮಗೆ ಅನುಕೂಲವಾಗುತ್ತದೆ" ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, "ಆಕೆಯ ಒಂದು ತಿಂಗಳ ಖರ್ಚು ಬೆಂಗಳೂರಿನ ಬಹುಪಾಲು ಜನರ ತಿಂಗಳ ಸಂಬಳವಾಗಿದೆ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಆದರೆ ಅಂಜಲಿ ಬೆಂಬಲಕ್ಕೆ ನಿಂತಿರುವ ಮತ್ತೊಬ್ಬ ನೆಟ್ಟಿಗ, "ನಾನು ಬೆಂಗಳೂರಿನಲ್ಲಿ ವಾಸಿಸಿದ್ದೇನೆ, ಇದು ಸಮರ್ಥನೀಯ ಖರ್ಚು. ಕಾಮೆಂಟ್ ಮಾಡುವವರಿಗೆ ಅಲ್ಲಿನ ಬಾಡಿಗೆಯ ಬಗ್ಗೆ ತಿಳಿದಿಲ್ಲ. ಉತ್ತಮ ಸ್ಥಳದಲ್ಲಿ ಮನೆ ಬೇಕೆಂದರೆ 28 ಸಾವಿರ ರೂ. ಬಾಡಿಗೆ ನ್ಯಾಯಸಮ್ಮತವಾಗಿದೆ ಎಂದು ವಾದಿಸಿದ್ದಾರೆ.












Click it and Unblock the Notifications