ಭಾರತದ ಟೆಕ್ ಭವಿಷ್ಯಕ್ಕೆ ಬೂಸ್ಟ್: 1.64 ಲಕ್ಷ ಕೋಟಿ ರೂ,ನ 12 ಸೆಮಿಕಂಡಕ್ಟರ್ ಯೋಜನೆಗಳಿಗೆ ಕೇಂದ್ರ ಗ್ರೀನ್ ಸಿಗ್ನಲ್
ನವದೆಹಲಿ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಎಲೆಕ್ಟ್ರಾನಿಕ್ ಮತ್ತು ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಮಾಡಲು ಬಹುಕೋಟಿ ವೆಚ್ಚದಲ್ಲಿ ಬರೋಬ್ಬರಿ 12 ಯೋಜನೆಗಳಿಗೆ ಕೇಂದ್ರ ಅನುಮೋದನೆ ನೀಡಿದೆ. ಇದು ದೇಶವನ್ನು ಆರ್ಥಿಕ ಸ್ವಾವಲಂಬಿಯನ್ನಾಗಿಸುತ್ತದೆ.
ದೇಶದ ಆರ್ಥಿಕ ಭದ್ರತೆ ಮತ್ತು ತಂತ್ರಜ್ಞಾನದ ಸಾರ್ವಭೌಮತ್ವವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಭಾರತೀಯ ಸೆಮಿಕಂಡಕ್ಟರ್ ಮಿಷನ್ (ಐಎಸ್ಎಂ) ಮೂಲಕ ಭಾರಿ ಹೂಡಿಕೆಗೆ ಚಾಲನೆ ನೀಡಿದೆ. ಇದರಿಂದ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಯಲ್ಲಿ ಸೆಮೆ ಕಂಡಕ್ಟರ್ ವಲಯದ ಅಭಿವೃದ್ಧಿಗೆ ವೇಗ ನೀಡುವ ಜೊತೆಗೆ ಈ ನಿರ್ಧಾರಗಳು ದೇಶಾದ್ಯಂತ ಅತ್ಯಾಧುನಿಕ ಚಿಪ್ ತಯಾರಿಕಾ ಮೂಲಸೌಕರ್ಯಗಳು ಪೂರಕ ವಾತಾವರಣ ನಿರ್ಮಿಸುತ್ತದೆ. ಈಗಾಗಲೇ ಈ ವಲಯದಲ್ಲಿ ಸುಮಾರು 1.64 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಿರೀಕ್ಷಿತ ಹೂಡಿಕೆಯ ಪ್ರಮುಖ ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಇದರಿಂದ 'ಮಿಷನ್ 2.0 ಮತ್ತು ದೇಶಿ ಚಿಪ್ ವಿನ್ಯಾಸ' ಜೊತೆಗೆ ಬಲಿಷ್ಟ ಜಾಲ ನಿರ್ಮಿಸಲಿದೆ.

ಸಿಲಿಕಾನ್ ವೇಫರ್ ಫ್ಯಾಬ್ರಿಕೇಶನ್ ಘಟಕ
ಈ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ಸಿಗೆ ಸಾಕ್ಷಿ ಎಂಬಂತೆ, ಗುಜರಾತ್‌ನ ಸನಂದ್‌ನಲ್ಲಿ ಮೈಕ್ರಾನ್ ತಂತ್ರಜ್ಞಾನ ಸಂಸ್ಥೆಯು ಈಗಾಗಲೇ ವಾಣಿಜ್ಯ ಬಳಕೆಯ ಉತ್ಪಾದನೆಯನ್ನು ಆರಂಭಿಸಿದೆ. ಇದರೊಂದಿಗೆ, ಧೋಲೇರಾದಲ್ಲಿ ಪ್ರಖ್ಯಾತ ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ತೈವಾನ್‌ನ ಪಿಎಸ್ಎಂಸಿ ಸಹಯೋಗದೊಂದಿಗೆ ದೇಶದ ಮೊದಲ ಸುಧಾರಿತ ಸಿಲಿಕಾನ್ ವೇಫರ್ ಫ್ಯಾಬ್ರಿಕೇಶನ್ ಘಟಕವು ನಿರ್ಮಾಣ ಹಂತ ತಲುಪಿದೆ. ಇದನ್ನು ಕೇವಲ ಒಂದು ರಾಜ್ಯಕ್ಕೆ ಸೀಮಿತಗೊಳಿಸದೆ ರಾಜಸ್ಥಾನ ಮತ್ತು ಗುಜರಾತ್‌ನ ಇತರ ಭಾಗ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಈ ಉದ್ಯಮವನ್ನು ವ್ಯವಸ್ಥಿತವಾಗಿ ವಿಸ್ತರಿಸಲಾಗುತ್ತಿದೆ.
ಪಿಸಿಬಿ ಘಟಕಗಳ ಸ್ಥಾಪನೆಗೂ ಆದ್ಯತೆ
ಸೆಮಿಕಂಡಕ್ಟರ್ ಮಿಷನ್ 1.0 ಮತ್ತು ಮುದ್ರಿತ ಸರ್ಕ್ಯೂಟ್ ಬೋರ್ಡ್ ಉತ್ಪಾದನೆಯಲ್ಲಿ ಭಾರತೀಯ ಸೆಮಿಕಂಡಕ್ಟರ್ ಮಿಷನ್ 1.0 ಅಡಿಯಲ್ಲಿ ಚಾಲನೆ ಪಡೆದ ಯೋಜನೆಗಳು ಕೇವಲ ಚಿಪ್ ವಿನ್ಯಾಸಕ್ಕಷ್ಟೇ ಸೀಮಿತವಾಗಿಲ್ಲ. ಇಲೆಕ್ಟ್ರಾನಿಕ್ಸ್ ವಲಯಕ್ಕೆ ಅತ್ಯಂತ ಆಧಾರವಾಗಿರುವ ಮುದ್ರಿತ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಘಟಕಗಳ ತಯಾರಿಕೆಗೂ ದೇಶದಲ್ಲಿ ಮೊದಲ ಬಾರಿಗೆ ಭಾರಿ ಆದ್ಯತೆ ನೀಡಲಾಗಿದೆ. ಇದಕ್ಕಾಗಿ ಉತ್ತರ ಪ್ರದೇಶದ ಪವಿತ್ರ ಜೇವರ್ ಪ್ರದೇಶದಲ್ಲಿ ಸುಮಾರು 6,750 ಕೋಟಿ ರೂಪಾಯಿ ಒಟ್ಟು ವೆಚ್ಚದ ಸುಧಾರಿತ ಪಿಸಿಬಿ ಉದ್ದಿಮೆಯ ಶಂಕುಸ್ಥಾಪನೆಯನ್ನು ಇತ್ತೀಚೆಗೆ ನೆರವೇರಿಸಲಾಗಿದೆ.
ಕಳೆದ ಹಲವು ದಶಕಗಳಿಂದ ಭಾರತವು ಪ್ರತಿ ವರ್ಷ ಒಟ್ಟು 40 ಸಾವಿರ ಕೋಟಿ ರೂಪಾಯಿ ಮೌಲ್ಯದ ಸುಧಾರಿತ ಮಲ್ಟಿ-ಲೇಯರ್ ಪಿಸಿಬಿಗಳನ್ನು ವಿದೇಶಗಳಿಂದ ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿತ್ತು. ದೇಶೀಯವಾಗಿ ಇವುಗಳ ಬೃಹತ್ ಉತ್ಪಾದನೆ ಆರಂಭವಾಗುವುದರಿಂದ ಬೊಕ್ಕಸದ ವಿದೇಶಿ ವಿನಿಮಯ ಹೊರಹರಿವು ಸಂಪೂರ್ಣ ನಿಲ್ಲಲಿದೆ. ಜತೆಗೆ ರಕ್ಷಣೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ವಲಯಗಳಿಗೆ ಬೇಕಾದ ಅತ್ಯಾಧುನಿಕ 20 ರಿಂದ 22 ಪದರಗಳ ವಿಶೇಷ ಬೋರ್ಡ್‌ಗಳು ದೇಶದಲ್ಲೇ ಲಭ್ಯವಾಗಲಿವೆ.
ಕೇಂದ್ರ ಬಜೆಟ್: ಸೆಮಿಕಂಡಕ್ಟರ್ ಮಿಷನ್ 2.0
ಮೊದಲ ಹಂತದ ಯಶಸ್ವಿ ಯೋಜನೆಗಳ ನಂತರ, ಸರ್ಕಾರವು ಇತ್ತೀಚಿನ ಕೇಂದ್ರ ಬಜೆಟ್ 2026-27 ರಲ್ಲಿ ಭಾರತೀಯ ಸೆಮಿಕಂಡಕ್ಟರ್ ಮಿಷನ್ 2.0 ಆವೃತ್ತಿಯನ್ನು ಅಧಿಕೃತವಾಗಿ ಘೋಷಿಸಿದೆ. ಹೊಸ ದ್ವಿತೀಯ ಹಂತವು ಕೇವಲ ಚಿಪ್ ಜೋಡಣೆ ಅಥವಾ ಬಾಹ್ಯ ತಯಾರಿಕೆಗೆ ಸೀಮಿತವಾಗಿರದೆ, ಇಡೀ ಪೂರೈಕೆ ಸರಪಳಿಯ ಆಳವಾದ ಮೂಲಸೌಕರ್ಯ ಅಭಿವೃದ್ಧಿಗೆ ವೇಗವಾದ ಒತ್ತು ನೀಡಲಿದೆ. ಈ ನವೀನ ಯೋಜನೆಯು ಉದ್ಯಮಕ್ಕೆ ಅಗತ್ಯವಾದ ರಾಸಾಯನಿಕಗಳು, ಕಚ್ಚಾ ವಸ್ತುಗಳು ಮತ್ತು ತಾಂತ್ರಿಕ ಸಂಶೋಧನೆ ಒಳಗೊಂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಹೊಸ ಸುಧಾರಿತ ಮಿಷನ್ ಅಡಿಯಲ್ಲಿ ಅಮೆರಿಕ, ತೈವಾನ್, ದಕ್ಷಿಣ ಕೊರಿಯಾ ಮತ್ತು ಜಪಾನ್‌ನಂತಹ ಮುಂಚೂಣಿ ತಂತ್ರಜ್ಞಾನ ಹೊಂದಿರುವ ರಾಷ್ಟ್ರಗಳ ಜಾಗತಿಕ ದೈತ್ಯ ಕಂಪನಿಗಳೊಂದಿಗೆ ಕಾರ್ಯತಂತ್ರದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇದು ಸ್ಥಳೀಯ ಮಟ್ಟದಲ್ಲಿ ನುರಿತ ತಜ್ಞ ವಿನ್ಯಾಸಕಾರರನ್ನು ಸೃಷ್ಟಿಸಲು ಮತ್ತು ಭಾರತೀಯ ಸಾರ್ವಭೌಮ ಬೌದ್ಧಿಕ ಆಸ್ತಿಯನ್ನು (ಐಪಿ) ರಕ್ಷಿಸಲು ಸಹಕಾರಿಯಾಗಲಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸುದೀರ್ಘ ಭವಿಷ್ಯದ ಹಾದಿಯನ್ನು ಭದ್ರಪಡಿಸಲಿದೆ.
ಲಕ್ಷಾಂತರ ಉದ್ಯೋಗ ಸೃಷ್ಟಿ
ಕೈಗಾರಿಕಾ ಕ್ಷೇತ್ರದಲ್ಲಿ ಬದಲಾಗುತ್ತಿರುವ ಉತ್ಪಾದನಾ ಕ್ರಾಂತಿಯು ಮುಂಬರುವ ದಿನಗಳಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲಿದೆ. ಅತ್ಯಂತ ವ್ಯವಸ್ಥಿತವಾದ ಯೋಜನೆಗಳ ಮೂಲಕ ಆಮದು ಅವಲಂಬನೆ ಹಂತ-ಹಂತವಾಗಿ ತಗ್ಗಲಿದೆ. ಜಾಗತಿಕ ತಂತ್ರಜ್ಞಾನ ಒಕ್ಕೂಟದಲ್ಲಿ ಯಾವುದೇ ದೇಶವನ್ನು ಅವಲಂಬಿಸದ ಅತ್ಯಂತ ವಿಶ್ವಾಸಾರ್ಹ ಸಾಧನಗಳ ತಯಾರಿಕಾ ಪೂರೈಕೆದಾರನಾಗಿ ಭಾರತ ಹೊರಹೊಮ್ಮಲಿದೆ.












Click it and Unblock the Notifications