ಕರ್ನಾಟಕ ವಿದ್ಯುತ್ ನಿಗಮಗಳ ಖಾಸಗೀಕರಣಕ್ಕೆ ಬ್ರೇಕ್? ಅಂತಿಮ ತೀರ್ಮಾನ ಸಚಿವ ಸಂಪುಟದಲ್ಲೇ: ಡಿಕೆಶಿ
ಬೆಂಗಳೂರು: ರಾಜ್ಯಾದ್ಯಂತ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡದಿರುವ ವಿಚಾರ ಸಂಬಂಧ ಮುಖ್ಯಮಂತ್ರಿಯಾಗಿ ನಾನೊಬ್ಬನೇ ತೀರ್ಮಾನಿಸಲು ಸಾಧ್ಯವಿಲ್ಲ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಆ ಬಗ್ಗೆ ಗಂಭೀರ ಚರ್ಚೆ ಮಾಡಿ ನಿರ್ಧರಿಸಲಾಗುವುದು ಎಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಬಿಜೆಪಿ ಸರ್ಕಾರ ಖಾಸಗೀಕರಣದ ಕಾನೂನು ತಂದಾಗ ನೀವು ಯಾಕೆ ವಿರೋಧಿಸಲಿಲ್ಲ? ವಿದ್ಯುತ್ ಇಲಾಖೆ ನೌಕರರನ್ನು ಅವರು ಖಾರವಾಗಿ ಪ್ರಶ್ನಿಸಿದ್ದಾರೆ. ನೀವು ನಮ್ಮ ಬಗ್ಗೆ ಕಾಳಜಿ ವಹಿಸು, ನಾವು ನಿಮ್ಮ ಕುರಿತು ಕಾಳಜಿ ವಹಿಸುತ್ತೇವೆ ಎಂದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಅಸೋಸಿಯೇಷನ್ ಒಕ್ಕೂಟದವರು ಬೆಂಗಳೂರು ಅರಮನೆ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು. ನೀವು ವಿದ್ಯುತ್ ನಿಗಮಗಳನ್ನು ಖಾಸಗೀಕರಣ ಮಾಡಬಾರದು ಎಂದು ನೀವು ಹೋರಾಟ ಮಾಡುತ್ತಿದ್ದೀರಿ. ಈ ಖಾಸಗೀಕರಣದ ಪ್ರಸ್ತಾಪವು 2003ರಲ್ಲೇ ಆಗಿದೆ.

ಬಿಜೆಪಿ ಖಾಸಗಿಕರಣ ನಿರ್ಧಾರ ಯಾಕೆ ವಿರೋಧಿಸಲಿಲ್ಲ?
ವಿದ್ಯುತ್ ನಿಗಮಗಳ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಕಾನೂನು ತಂದಿದ್ದು ಬಿಜೆಪಿ ಸರ್ಕಾರ. ನೀವು ಯಾರೂ ಆಗ ಬಿಜೆಪಿ ನಿರ್ಧಾರಗಳ ವಿರುದ್ಧ ಧ್ವನಿ ಎತ್ತಲಿಲ್ಲ. ಯಾರೂ ಹೋರಾಟ ಮಾಡಲಿಲ್ಲ, ಧಿಕ್ಕಾರ ಹೇಳಲಿಲ್ಲ. ನನ್ನ ಬಳಿ ಹಾಗೂ ಇಂದನ ಸಚಿವ ಕೆ.ಜೆ.ಜಾರ್ಜ್ ಅವರ ಬಳಿ ಬಂದು ಖಾಸಗೀಕರಣಕ್ಕೆ ಅವಕಾಶ ನೀಡಬೇಡಿ ಎಂದು ಹೇಳುತ್ತಿದ್ದೀರಿ. ನೀವು ಸದಾ ನನ್ನ ಜೊತೆ ಇರುತ್ತೀರಿ ಎಂದು ಹೇಳುತ್ತಿದ್ದೀರಿ. ತಪ್ಪು ಮಾಡಿದವರ ವಿರುದ್ಧ ಧಿಕ್ಕಾರ ಹೇಳಿದಾಗ, ಒಳ್ಳೆಯ ಕೆಲಸ ಮಾಡಿದವರಿಗೆ ಜೈಕಾರ ಹೇಳಿದಾಗ ಮಾತ್ರ ಅದಕ್ಕೆ ಗೌರವ ಬರುತ್ತದೆ ಎಂದು ಹೇಳಿದರು.
ಬಿಜೆಪಿ ಜಾರಿಗೊಳಿಸಿದ ಕಾನೂನು ಸರಿ ಇಲ್ಲ ಎಂದು ನಿಮ್ಮ ವಿದ್ಯುತ್ ನಿಗಮಳಿಗೆ ಸಂಬಂಧಿಸಿದ ಸಂಘಟನೆಗಳ ಅಧ್ಯಕ್ಷರುಗಳಲ್ಲಿ ಯಾರೊಬ್ಬರು ಮಾತನಾಡಿಲ್ಲ. ಬಿಜೆಪಿಯವರು ಎಲ್ಲಾ ವಿಚಾರದಲ್ಲೂ ಟೀಕೆಗಳನ್ನು ಮಾಡುತ್ತಿದ್ದಾರೆ. ಅವರ ಟೀಕೆಗಳೆಲ್ಲಾ ಸಾಯುತ್ತವೆ, ನಮ್ಮ ಕೆಲಸಗಳು ಮಾತ್ರ ಉಳಿಯುತ್ತವೆ. ನೀವೆಲ್ಲರೂ ನಮ್ಮ ಸರ್ಕಾರದ ಹೆಬ್ಬೆಟ್ಟು. ಮುಂಬೈ, ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಖಾಸಗೀಕರಣ ಮಾಡಲಾಗಿದೆ. ನೂರಾರು ವರ್ಷಗಳಿಂದ ವಿದ್ಯುತ್ ಲೈನ್ ಎಳೆದವರು ನೀವು, ಬೆಂಬಲ ಕೊಟ್ಟಿದ್ದು ಸರ್ಕಾರ ಎಂದರು.
ನಿಮ್ಮ ಡಿಕೆ..ಡಿಕೆ..ಕೂಗು 2028ರಲ್ಲಿ ಸಾಬೀತಾಗಲಿ
'ನೀವು ಡಿಕೆ, ಡಿಕೆ ಎಂದು ಕೂಗಿದಾಕ್ಷಣ ನಾನು ಹಿಗ್ಗುವುದಿಲ್ಲ, ಜಗ್ಗುವುದಿಲ್ಲ. ನಮ್ಮದು ಏನಿದ್ದರೂ ಗೀವ್ ಅಂಡ್ ಟೇಕ್ (ಕೊಡು, ಕೊಳ್ಳುವ), ಶೇರಿಂಗ್ ಅಂಡ್ ಕೇರಿಂಗ್ ಪದ್ಧತಿ. ನೀವು ನಮಗೆ ಕಾಳಜಿ ತೋರಬೇಕು, ನಾವು ನಿಮಗೆ ಕಾಳಜಿ ತೋರಬೇಕು. ಈ ಒಪ್ಪಂದಕ್ಕೆ ನೀವು ಬದ್ಧರಾಗಿರುತ್ತೀರಾ? 2028ರಲ್ಲಿ ನಿಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು ತಾನೆ? ನುಡಿದಂತೆ ನಡೆಯಬೇಕು, ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಸಚಿವರಾದ ಜಾರ್ಜ್ ಅವರು ಎಲ್ಲಾ ಎಸ್ಕಾಂ ಅಧ್ಯಕ್ಷರುಗಳು ಡಿ.ಕೆ. ಶಿವಕುಮಾರ್ ಕಾಲದಲ್ಲಿ ಯಾವುದೇ ಕಾರಣಕ್ಕೂ ಖಾಸಗೀಕರಣ ಆಗಬಾರದು ಎಂದು ನನಗೆ ಕಿವಿಯಲ್ಲಿ ಹೇಳಿದ್ದಾರೆ. ಈ ವಿಚಾರದಲ್ಲಿ ನನ್ನ ಅಭಿಪ್ರಾಯ ನಾನು ಈಗಾಗಲೇ ಹೇಳಿದ್ದೇನೆ. ಅದರೆ ಈ ಬಗ್ಗೆ ನಾನೋಬ್ಬನೇ ತೀರ್ಮಾನ ಮಾಡುವುದಿಲ್ಲ. ಆದರೆ ನೀವು ನನ್ನ ಮೇಲಿಟ್ಟ ನಂಬಿಕೆ ಉಳಿಸಿಕೊಳ್ಳುತ್ತೇನೆ" ಎಂದು ವಾಗ್ದಾನ ಕೊಟ್ಟರು.
ಇಲಾಖೆ ವ್ಯಾಪ್ತಿಯಲ್ಲಿ ಬರಲಿವೆ ಅನೇಕ ಯೋಜನೆಗಳು
ಇಂಧನ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೇವೆ. ಸಚಿವರ ನೇತೃತ್ವದಲ್ಲಿ ಅನೇಕ ಯೋಜನೆಗಳನ್ನು ತರಲಿದ್ದೇವೆ. ಬಿಜೆಪಿ ಸರ್ಕಾರದಲ್ಲಿ ಇಂಧನ ಉತ್ಪಾದನೆ ಹೆಚ್ಚಿಸಲು ಯಾವುದಾದರೂ ಯೋಜನೆ ತರಲಾಯಿತೇ? ಇಲಾಖೆಗೆ ಹೊಸ ಭವನ ಕಟ್ಟಿದರೇ? ಕಳೆದ ನಮ್ಮ ಸರ್ಕಾರದ ವೇಳೆ ಇಂಧನ ಭವನ ಕಟ್ಟಲಾಯಿತು. ರೇಸ್ ಕೋರ್ಸ್ ರಸ್ತೆ ಬಳಿ ಖಾಲಿ ಜಾಗದಲ್ಲಿ ಇಂಧನ ಭವನ ನಿರ್ಮಿಸಿ ಸಾಕ್ಷಿಗುಡ್ಡೆ ನಿರ್ಮಿಸಿದ್ದೇವೆ. ಕ್ರೆಡೆಲ್ ಕಟ್ಟಡ ನೋಡಿದ್ದೀರಾ? ನಾವು ಅವಕಾಶ ಸಿಕ್ಕಾಗೆಲ್ಲಾ ಸಾಕ್ಷಿಗುಡ್ಡೆ ನೀಡಿದ್ದೇವೆ ಎಂದು ತಮ್ಮ ಆಡಳಿತಕ್ಕೆ ಸಮರ್ಥನೆ ಕೊಡುವ ಜೊತೆಗೆ ಬಿಜೆಪಿಯನ್ನು ಟೀಕಿಸಿದರು.
ನೌಕರರಿಗೆ ವೇತನ ಪರಿಷ್ಕರಣೆಗೆ ಕೊಡುಗೆ
ಈ ಹಿಂದೆ 7 ವರ್ಷಕ್ಕೊಮ್ಮೆ ಮಾಡಲಾಗುತ್ತಿದ್ದ ವೇತನ ಪರಿಷ್ಕರಣೆ ಅವಧಿಯನ್ನು ನಾನು ಐದು ವರ್ಷಕ್ಕೆ ಇಳಿಸಿದೆ. ವೇತನ ಹೆಚ್ಚಳದ ಪರ್ಸೆಂಟ್ ನಿಮಗೆ ನೆನಪಿದೆಯಾ?. ನಮ್ಮ ತೀರ್ಮಾನಗಳು ನಿಮಗೆ ಆಸರೆಯಾಗಿವೆ. ಪೆನ್ಸಿಲ್ ನಲ್ಲಿ ಬರೆಸಿ, ನಂತರ ಅದನ್ನು ತಿದ್ದುವ ಕೆಲಸ ಮಾಡಿಲ್ಲ. ನಾನು ಒಬ್ಬರಿಂದ ಒಂದು ರೂಪಾಯಿ ಲಂಚ ಪಡೆಯದೇ 25 ಸಾವಿರ ಜನರನ್ನು ಇಲಾಖೆಯಲ್ಲಿ ನೇಮಕ ಮಾಡಿದ್ದೇನೆ ಎಂದು ವಿವರಿಸಿದರು.
ಇಂಧನ ಸೋರಿಕೆಗೆ ಬ್ರೇಕ್
ನಾನು ಇಂಧನ ಸಚಿವರಾನಗಿದ್ದಾಗ ವರ್ಗಾವಣೆ ವೇಳೆ ಶೇ. 19 ರಷ್ಟು ಇಂಧನ ಸೋರಿಕೆಯಾಗುತ್ತಿತ್ತು. ಈಗ ಅದು ಶೇ.10ಕ್ಕೆ ಇಳಿಕೆಯಾಗಿದೆ. ಇನ್ನೂ 13 ಸಾವಿರ ಎಕರೆ ಜಮೀನನ್ನು ಒಂದೇ ಜಾಗದಲ್ಲಿ ಒಂದು ಎಕರೆ ಭೂಸ್ವಾಧೀನ ಮಾಡದೇ, 2400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿರುವ ಸೋಲಾರ್ ಪಾರ್ಕ್ ಅಂದಿನ ದಿನಗಳಲ್ಲಿ ದೇಶದಲ್ಲೇ ದೊಡ್ಡ ಇತಿಹಾಸವಾಗಿತ್ತು. ಇಂದು ಅನೇಕ ರಾಜ್ಯ ಹಾಗೂ ದೇಶಗಳಲ್ಲಿ ಇದನ್ನು ಅನುಸರಿಸಿರಬಹುದು. ನಂತರ ಪ್ರತಿ ತಾಲ್ಲೂಕಿನಲ್ಲಿ 20-50 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆದು ಅಲ್ಲೇ ವಿದ್ಯುತ್ ಉತ್ಪಾದನೆ ಮಾಡಿ ರೈತರಿಗೆ ನೀಡಲಾಗುತ್ತಿದೆ. ಆಮೂಲಕ ವರ್ಗಾವಣೆ ವೇಳೆ ಇಂಧನ ಸೋರಿಕೆ ತಡೆಯಲಾಗಿದೆ ಎಂದು ಅವರು ಮಾಹಿತಿ ಕೊಟ್ಟರು.













Click it and Unblock the Notifications