500 ವರ್ಷಗಳ ಕಾಲ ಹೊರ ಜಗತ್ತಿನ ಸಂಪರ್ಕವಿಲ್ಲದೆ ಬದುಕಿದ ಸಮುದಾಯ: ಕಲ್ಲಿನ ಗುಹೆಯಲ್ಲಿಯೇ ಇವರ ವಾಸ

ಆರಂಭಿಕ ಮಧ್ಯಕಾಲೀನ ಯುಗದಲ್ಲಿ ಐಬೀರಿಯನ್ ದ್ವೀಪ ದೊಡ್ಡ ಮಟ್ಟದ ಜನಸಂಖ್ಯಾ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು. ಆದರೆ, ಇತ್ತೀಚಿನ ಒಂದು ಮಹತ್ವದ ಪುರಾತನ ಜೆನೆಟಿಕ್ ಅಧ್ಯಯನವು ಇತಿಹಾಸದ ಹೊಸ ಪುಟವೊಂದನ್ನು ತೆರೆದಿದೆ. ಉತ್ತರ ಸ್ಪೇನ್‌ನ ಬರ್ಗೋಸ್ ಪ್ರಾಂತ್ಯದಲ್ಲಿರುವ 'ಲಾಸ್ ಗೋಬಾಸ್' ಎಂಬಲ್ಲಿನ ಕಲ್ಲಿನ ಗುಹೆಗಳಲ್ಲಿ ವಾಸಿಸುತ್ತಿದ್ದ ಒಂದು ಸಣ್ಣ ಸಮುದಾಯವು, ಸುಮಾರು 5 ಶತಮಾನಗಳ ಕಾಲ ಹೊರಗಿನ ಪ್ರಪಂಚದ ಸಂಪರ್ಕವೇ ಇಲ್ಲದೆ ಸಂಪೂರ್ಣ ಪ್ರತ್ಯೇಕವಾಗಿ ಬದುಕಿತ್ತು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

500 ವರ್ಷಗಳ ಕಾಲ ಸಂಪೂರ್ಣ ಐಸೋಲೇಶನ್:

ಸ್ಟಾಕ್‌ಹೋಮ್‌ನ ಸೆಂಟರ್ ಫಾರ್ ಪ್ಯಾಲಿಯೋಜಿನೆಟಿಕ್ಸ್‌ನ ಸಂಶೋಧಕ ರಿಕಾರ್ಡೊ ರೊಡ್ರಿಗಸ್ ವರೆಲಾ ನೇತೃತ್ವದ ತಂಡವು ಈ ಸಂಶೋಧನೆ ನಡೆಸಿದೆ. 7ನೇ ಶತಮಾನದಿಂದ 11ನೇ ಶತಮಾನದವರೆಗೆ ಜೀವಿಸಿದ್ದ 33 ವ್ಯಕ್ತಿಗಳ ಡಿಎನ್‌ಎಯ ವಿಶ್ಲೇಷಣೆ ನಡೆಸಿದೆ. ಈ ಸಮುದಾಯವು ಹೊರಗಿನವರೊಂದಿಗೆ ಯಾವುದೇ ಸಂಪರ್ಕ ಹೊಂದಿರಲಿಲ್ಲ ಎಂಬುದು ಇವರು ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ. ಆ ಸಮಯದಲ್ಲಿ ಇಸ್ಲಾಮಿಕ್ ಆಕ್ರಮಣದಿಂದಾಗಿ ಇಡೀ ಐಬೀರಿಯನ್ ದ್ವೀಪದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗುತ್ತಿದ್ದರೂ, ಈ ಗುಹಾಂತರ ಸಮುದಾಯ ಮಾತ್ರ ತಮ್ಮ ಮೂಲ ಸಂಪ್ರದಾಯ ಮತ್ತು ಜೀನ್ ರಚನೆಯನ್ನು ಕಾಪಾಡಿಕೊಂಡಿತ್ತು.

Old Isolated Cave Community
ಜಗತ್ತಿನ ಅತಿ ದೊಡ್ಡ ವಿಜ್ಞಾನ ಕೇಂದ್ರದ ಎದುರು ಹಿಂದೂ ಧರ್ಮದ ನಟರಾಜನ ಮೂರ್ತಿ! ಏನಿದರ ರಹಸ್ಯ?
ಜಗತ್ತಿನ ಅತಿ ದೊಡ್ಡ ವಿಜ್ಞಾನ ಕೇಂದ್ರದ ಎದುರು ಹಿಂದೂ ಧರ್ಮದ ನಟರಾಜನ ಮೂರ್ತಿ! ಏನಿದರ ರಹಸ್ಯ?

ರಕ್ತ ಸಂಬಂಧಿಕರ ನಡುವೆಯೇ ಮದುವೆ:

ಅಧ್ಯಯನದ ಪ್ರಕಾರ, ಈ ಸಣ್ಣ ಸಮುದಾಯದಲ್ಲಿ ಹೊರಗಿನವರ ಪ್ರವೇಶ ಇರಲಿಲ್ಲ. ಹಾಗಾಗಿ ಇವರಿಗೆ 'ಎಂಡೋಗಮಿ' ಅಂದರೆ ತಮ್ಮದೇ ಸಮುದಾಯದವರಲ್ಲಿ ಮದುವೆಯಾಗುವ ಪದ್ಧತಿ ಅನಿವಾರ್ಯವಾಗಿತ್ತು. ಪರೀಕ್ಷೆಗೊಳಪಡಿಸಿದ ಶೇ. 63ರಷ್ಟು ಅಸ್ಥಿಪಂಜರಗಳಲ್ಲಿ ತಂದೆ-ತಾಯಿ ಇಬ್ಬರಿಂದಲೂ ಒಂದೇ ರೀತಿಯ ಡಿಎನ್‌ಎ ಇರುವುದು ಕಂಡುಬಂದಿದೆ. ಇದು ನಿಕಟ ಸಂಬಂಧಿಕರ ಅಂದರೆ ಸೋದರಸಂಬಂಧಿಗಳ ನಡುವೆಯೇ ಸಂತಾನೋತ್ಪತ್ತಿ ನಡೆಯುತ್ತಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ.

ಹಿಂಸೆ ಮತ್ತು ರೋಗಗಳ ಕರಾಳ ನೆರಳು:

ಈ ಗುಹಾಂತರ ಸಮುದಾಯ ಕೇವಲ ಭೌಗೋಳಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಕಷ್ಟದ ಪರಿಸ್ಥಿತಿಯಲ್ಲಿತ್ತು ಎಂಬುದು ಅಸ್ಥಿಪಂಜರಗಳ ಪರೀಕ್ಷೆಯಿಂದ ತಿಳಿದುಬಂದಿದೆ. ಅನೇಕ ತಲೆಬುರುಡೆಗಳಲ್ಲಿ ಆಳವಾದ ಗಾಯದ ಗುರುತುಗಳಿದ್ದು, ಇವು ತೀಕ್ಷ್ಣವಾದ ಆಯುಧಗಳಿಂದಾದ ಹಲ್ಲೆಯಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂದರೆ, ಮಧ್ಯಕಾಲೀನ ಗಡಿನಾಡಿನ ಪ್ರದೇಶಗಳಲ್ಲಿ ಈ ಸಮುದಾಯ ಭೀಕರ ಹಿಂಸಾಚಾರಕ್ಕೆ ಬಲಿಯಾಗಿತ್ತು.

ಕೋಲಾರ ಗೋಲ್ಡ್ ಫೀಲ್ಡ್ಸ್‌ನಂತೆ ಚಿನ್ನದ ಹುಡುಕಾಟ! ನಗರದಲ್ಲಿ ಅಡಗಿಸಿದ 21 ಲಕ್ಷ ರೂ. ನಾಣ್ಯ ಎಲ್ಲಿದೆ?
ಕೋಲಾರ ಗೋಲ್ಡ್ ಫೀಲ್ಡ್ಸ್‌ನಂತೆ ಚಿನ್ನದ ಹುಡುಕಾಟ! ನಗರದಲ್ಲಿ ಅಡಗಿಸಿದ 21 ಲಕ್ಷ ರೂ. ನಾಣ್ಯ ಎಲ್ಲಿದೆ?

ಹಂದಿ ಸಾಕಾಣೆಯ ಗುರುತು:

ಪ್ರಾಚೀನ ಡಿಎನ್‌ಎ ಸಂರಕ್ಷಣೆಯು ಸಂಶೋಧಕರಿಗೆ ಐತಿಹಾಸಿಕ ಸೂಕ್ಷ್ಮಜೀವಿಗಳಿಗಾಗಿ ಅಸ್ಥಿಪಂಜರದ ಅವಶೇಷಗಳನ್ನು ಪರೀಕ್ಷಿಸಲು ಅವಕಾಶ ಮಾಡಿಕೊಟ್ಟಿತು. ಈ ತಪಾಸಣೆಯು ಸಮುದಾಯದ ದೈನಂದಿನ ಅಭ್ಯಾಸಗಳು ಮತ್ತು ಆರೋಗ್ಯದ ಬಗ್ಗೆ ನಿರ್ಣಾಯಕ ಒಳನೋಟಗಳನ್ನು ನೀಡಿತು. ಮೆಟಾಜೆನೊಮಿಕ್ ವಿಶ್ಲೇಷಣೆಯು ಸಾಕುಪ್ರಾಣಿಗಳೊಂದಿಗೆ ನೇರ ಸಂಪರ್ಕದಿಂದಾಗಿ ತೆರೆದ ಗಾಯಗಳ ಮೂಲಕ ಮನುಷ್ಯರಿಗೆ ಸೋಂಕು ತಗುಲಿಸುವ ಪ್ರಾಣಿಗಳ ಬ್ಯಾಕ್ಟೀರಿಯಾವನ್ನು ಗುರುತಿಸಿದೆ. ಗುಹೆ ನಿವಾಸಿಗಳು ಜೀವನಾಧಾರಕ್ಕಾಗಿ ಹಂದಿ ಸಾಕಣೆಯನ್ನು ಹೆಚ್ಚಾಗಿ ಅವಲಂಬಿಸಿದ್ದರು ಎಂಬುದಕ್ಕೆ ಈ ಸಂಶೋಧನೆಯು ಬಲವಾದ ಪುರಾವೆಗಳನ್ನು ನೀಡುತ್ತದೆ.

ಸಿಡುಬು ರೋಗದ ಬಗ್ಗೆ ಹೊಸ ಸತ್ಯ:

ಈ ಸಂಶೋಧನೆಯ ಅತ್ಯಂತ ಪ್ರಮುಖ ಅಂಶವೆಂದರೆ 'ಸಿಡುಬು' ರೋಗದ ಮೂಲ ಪತ್ತೆ. 10ನೇ ಶತಮಾನದ ವ್ಯಕ್ತಿಯೊಬ್ಬನ ಅವಶೇಷದಲ್ಲಿ ಸಿಡುಬಿನ ವೈರಸ್ ಪತ್ತೆಯಾಗಿದೆ. ದಕ್ಷಿಣ ಐರೋಪ್ಯ ದೇಶಗಳಲ್ಲಿ ಪತ್ತೆಯಾದ ಅತ್ಯಂತ ಹಳೆಯ ಪ್ರಕರಣ ಇದಾಗಿದೆ. ಐತಿಹಾಸಿಕವಾಗಿ ಸಿಡುಬು ರೋಗವು ದಕ್ಷಿಣದ ಇಸ್ಲಾಮಿಕ್ ವ್ಯಾಪಾರ ಮಾರ್ಗಗಳ ಮೂಲಕ ಐಬೀರಿಯಾಕ್ಕೆ ಬಂದಿದೆ ಎನ್ನಲಾಗಿತ್ತು. ಆದರೆ, ಈ ವೈರಸ್‌ನ ಜೆನೆಟಿಕ್ ರಚನೆಯು ಸ್ಕ್ಯಾಂಡಿನೇವಿಯಾ, ಜರ್ಮನಿ ಮತ್ತು ರಷ್ಯಾದ ವೈರಸ್‌ಗಳಿಗೆ ಹೋಲಿಕೆಯಾಗಿದೆ. ಹಾಗಾಗಿ ಈ ರೋಗವು ಉತ್ತರ ಯುರೋಪಿನ ಮಾರ್ಗವಾಗಿ ಹರಡಿದೆ ಎಂಬ ಹೊಸ ಸತ್ಯವನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.

ಈ ಸಂಶೋಧನೆಯು ಐತಿಹಾಸಿಕ ಸಿದ್ಧಾಂತಗಳನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಮಧ್ಯಕಾಲೀನ ಮನುಷ್ಯನ ವಲಸೆ ಮತ್ತು ಬದುಕುಳಿಯುವಿಕೆಯ ಹೋರಾಟದ ಮೇಲೆ ಹೊಸ ಬೆಳಕು ಚೆಲ್ಲಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+