ಜಗತ್ತಿನ ಅತಿ ದೊಡ್ಡ ವಿಜ್ಞಾನ ಕೇಂದ್ರದ ಎದುರು ಹಿಂದೂ ಧರ್ಮದ ನಟರಾಜನ ಮೂರ್ತಿ! ಏನಿದರ ರಹಸ್ಯ?

ಯುರೋಪಿನ ಸ್ವಿಟ್ಜರ್ಲೆಂಡ್ ಮತ್ತು ಫ್ರಾನ್ಸ್ ಗಡಿಯಲ್ಲಿ ಜಗತ್ತಿನ ಅತಿದೊಡ್ಡ ಕಣಭೌತಶಾಸ್ತ್ರ ಸಂಶೋಧನಾ ಸಂಸ್ಥೆ ಇದೆ. ಅದರ ಹೆಸರು ಯುರೋಪಿಯನ್‌ ಪರಮಾಣು ಅಧ್ಯಯನ ಕೇಂದ್ರ (CERN - European Organization for Nuclear Research). ಇದು ಜಗತ್ತಿನ ಅತೀ ಪ್ರಮುಖವಾದ ಭೌತಶಾಸ್ತ್ರ ಪ್ರಯೋಗಗಳು ನಡೆಯುವ, ವಿಜ್ಞಾನಿಗಳು ಮಾತನಾಡುವ, ಚರ್ಚಿಸುವ, ಸ್ಥಳ. ಇಲ್ಲಿ ವಿಜ್ಞಾನಿಗಳು ಬ್ರಹ್ಮಾಂಡ ಹೇಗೆ ಹುಟ್ಟಿತು? ಪದಾರ್ಥದ ಮೂಲ ಘಟಕಗಳು ಯಾವುವು? ಎಂಬಂಥ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತಿರುತ್ತಾರೆ. ಇಲ್ಲಿಯೇ ವಿಶ್ವದ ಅತ್ಯಂತ ದೊಡ್ಡ ಕಣ ವೇಗವರ್ಧಕವಾದ ʼLarge Hadron Colliderʼ ಕೂಡ ಕಾರ್ಯನಿರ್ವಹಿಸುತ್ತದೆ. ಇಲ್ಲಿ 2012ರಲ್ಲಿ ʼದೇವಕಣʼದ ಆವಿಷ್ಕಾರ ಆಯಿತು. 100 ದೇಶಗಳ ವಿಜ್ಞಾನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಭಾರತೀಯರಿಗೆ ರೋಮಾಂಚನ ಉಂಟುಮಾಡುವ ಸಂಗತಿ ಎಂದರೆ, ಈ ಕೇಂದ್ರದ ಎದುರು, ಹಿಂದೂ ಧರ್ಮದ ಪರಮ ಪವಿತ್ರ ದೇವರಾದ ಈಶ್ವರನ ಇನ್ನೊಂದು ಸ್ವರೂಪ ನಟರಾಜನ ಮೂರ್ತಿಯನ್ನು ನಿಲ್ಲಿಸಲಾಗಿದೆ. ಎರಡು ಮೀಟರ್‌ ಎತ್ತರದ, ಕಂಚಿನ ಸುಂದರ ಶಿಲ್ಪ. ಒಂದು ಕಾಲಿನಲ್ಲಿ ನಿಂತು, ಇನ್ನೊಂದು ಕಾಲನ್ನು ವ್ಯೋಮಕ್ಕೇ ಎತ್ತಿ ನಾಟ್ಯವಾಡುತ್ತಿರುವ ಈ ಮನೋಹರ ಮೂರ್ತಿ ಇಲ್ಲಿ ಹೇಗೆ, ಯಾಕೆ ಬಂತು?

Lord Nataraja Statue Installed

ನಟರಾಜ ಯಾರು?

ನಟರಾಜ ಎಂದರೆ ವಿಶ್ವಾತ್ಮಕ ನಾಟ್ಯವಾಡುತ್ತಿರುವ ಶಿವ. ಅಲ್ಲಿ ಶಿವನ ನೃತ್ಯ ಬ್ರಹ್ಮಾಂಡದ ಚಲನೆಗೆ ಸಂಕೇತ. ಹಿಂದೂ ತತ್ವಶಾಸ್ತ್ರದ ಪ್ರಕಾರ ಶಿವನ ತಾಂಡವ ಐದು ಕ್ರಿಯೆಗಳನ್ನು ಸೂಚಿಸುತ್ತದೆ- ಸೃಷ್ಟಿ, ಸ್ಥಿತಿ, ಸಂಹಾರ, ತಿರೋಭಾವ (ಮಾಯೆ) ಮತ್ತು ಅನುಗ್ರಹ. ಅಂದರೆ ವಿಶ್ವದಲ್ಲಿ ನಡೆಯುವ ಪ್ರತಿಯೊಂದು ಬದಲಾವಣೆ ಈ ನೃತ್ಯದ ಪ್ರತೀಕ. ವಿಜ್ಞಾನ ಇಂದು ಅದನ್ನು ಶೋಧಿಸಿದೆ. ಆದರೆ ಭಾರತದ ಯೋಗಿಗಳು ಶಿವನ ತಾಂಡವದ ಮೂಲಕ 1500 ವರ್ಷಗಳ ಹಿಂದೆಯೇ ಇದನ್ನು ಕಂಡುಕೊಂಡಿದ್ದರು.

ಇಷ್ಟು ಆಧುನಿಕ ವಿಜ್ಞಾನ ಕೇಂದ್ರದಲ್ಲಿ ಹಿಂದೂ ದೇವರ ಮೂರ್ತಿ ಯಾಕೆ? ಇದೊಂದು ಪ್ರಶ್ನೆಯೇ ಸರಿ. ಕೆಲವರು ಇದನ್ನು ರಹಸ್ಯ ಎಂದು ಹೇಳುತ್ತಾರೆ. ಕೆಲವರು ಇದಕ್ಕೆ ಧಾರ್ಮಿಕ ಕಾರಣಗಳಿವೆ ಎಂದು ಭಾವಿಸುತ್ತಾರೆ. ವಿಜ್ಞಾನ, ಭಾರತೀಯ ಸಂಸ್ಕೃತಿ ಮತ್ತು ತತ್ವಶಾಸ್ತ್ರಗಳನ್ನು ಒಂದಕ್ಕೊಂದು ಕೈಜೋಡಿಸುವ ವಿಷಯ ಇದು.

ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ: ಮರಾಠ ವೀರನಿಗೆ ಅಂತಾರಾಷ್ಟ್ರೀಯ ಗೌರವ
ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ: ಮರಾಠ ವೀರನಿಗೆ ಅಂತಾರಾಷ್ಟ್ರೀಯ ಗೌರವ

CERNಗೆ ಈ ಮೂರ್ತಿ ಹೇಗೆ ಬಂತು?

ಈ ಮೂರ್ತಿಯನ್ನು 2004ರಲ್ಲಿ ಭಾರತ ಸರ್ಕಾರ CERNಗೆ ಉಡುಗೊರೆಯಾಗಿ ನೀಡಿತು. ಭಾರತ ಹಲವು ದಶಕಗಳಿಂದ CERNನ ಪ್ರಮುಖ ವೈಜ್ಞಾನಿಕ ಸಹಭಾಗಿಯಾಗಿದೆ. ಆ ವೈಜ್ಞಾನಿಕ ಸ್ನೇಹದ ಸಂಕೇತವಾಗಿ ಸುಮಾರು ಎರಡು ಮೀಟರ್ ಎತ್ತರದ ಕಂಚಿನ ನಟರಾಜ ಮೂರ್ತಿಯನ್ನು ಸ್ಥಾಪಿಸಲಾಯಿತು. ಇದು ಧಾರ್ಮಿಕ ಪ್ರತಿಷ್ಠಾಪನೆಯಲ್ಲ. ಇದು ಭಾರತದ ಸಾಂಸ್ಕೃತಿಕ ಕೊಡುಗೆ ಮತ್ತು ವಿಜ್ಞಾನ ಸಹಕಾರದ ಸಂಕೇತ.

ಯಾಕೆ ನಟರಾಜನೇ ಆಗಬೇಕು? ಕಣಭೌತಶಾಸ್ತ್ರದ ಪ್ರಕಾರ ಬ್ರಹ್ಮಾಂಡದಲ್ಲಿರುವ ಎಲ್ಲವೂ ನಿರಂತರ ಚಲನೆಯಲ್ಲಿವೆ. ಪರಮಾಣುಗಳು ಚಲಿಸುತ್ತವೆ, ಎಲೆಕ್ಟ್ರಾನ್‌ಗಳು ಚಲಿಸುತ್ತವೆ. ಶಕ್ತಿಯ ರೂಪಗಳು ಬದಲಾಗುತ್ತವೆ. ಕಣಗಳು ಹುಟ್ಟುತ್ತವೆ, ಕಣಗಳು ನಾಶವಾಗುತ್ತವೆ. ವಿಶ್ವವೇ ನಿರಂತರ ಬದಲಾವಣೆಯಲ್ಲಿದೆ. ನಟರಾಜನ ತಾಂಡವವೂ ಇದೇ ಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಅನೇಕ ವಿಜ್ಞಾನಿಗಳಿಗೆ ಇದು ವಿಜ್ಞಾನ ಮತ್ತು ತತ್ವಶಾಸ್ತ್ರದ ನಡುವಿನ ಸುಂದರ ರೂಪಕವಾಗಿ ಕಂಡಿತು.

 Ambedkar Statue: ಬೆಂಗಳೂರಿನಲ್ಲಿ ದೇಶದ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ: ಸಿಎಂ
Ambedkar Statue: ಬೆಂಗಳೂರಿನಲ್ಲಿ ದೇಶದ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ: ಸಿಎಂ

ಪ್ರಸಿದ್ಧ ಭೌತಶಾಸ್ತ್ರಜ್ಞನ ಅಭಿಪ್ರಾಯ

ಖ್ಯಾತ ಭೌತಶಾಸ್ತ್ರಜ್ಞ Fritjof Capra ತಮ್ಮ ಪ್ರಸಿದ್ಧ ಪುಸ್ತಕ ʼThe Tao of Physicsʼ ನಲ್ಲಿ ಒಂದು ಪ್ರಸಿದ್ಧ ವಿಚಾರವನ್ನು ಹೇಳಿದ್ದಾರೆ. ಅವರ ಪ್ರಕಾರ, ಆಧುನಿಕ ಭೌತಶಾಸ್ತ್ರದಲ್ಲಿ ಕಾಣುವ ಉಪಪರಮಾಣು ಕಣಗಳ ನಿರಂತರ ಚಲನೆಯನ್ನು ಶಿವನ ಕಾಸ್ಮಿಕ್ ಡ್ಯಾನ್ಸ್‌ಗೆ ಹೋಲಿಸಬಹುದು. ವೈಜ್ಞಾನಿಕ ಸತ್ಯವನ್ನೂ ಧಾರ್ಮಿಕ ನಂಬಿಕೆಯನ್ನೂ ಇಲ್ಲಿ ಸಮೀಕರಿಸಬಹುದು. ಇದು ಒಂದು ರೂಪಕ ಮಾತ್ರ.

ನಟರಾಜ ಮೂರ್ತಿಯ ಬಳಿ ಒಂದು ಫಲಕವಿದೆ. ಅದರಲ್ಲಿ ಶಿವನ ಕಾಸ್ಮಿಕ್ ಡ್ಯಾನ್ಸ್ ಬ್ರಹ್ಮಾಂಡದ ಸೃಷ್ಟಿ ಮತ್ತು ವಿನಾಶದ ಸಂಕೇತವಾಗಿದೆ ಎಂದು ವಿವರಿಸಲಾಗಿದೆ. ಅದರ ಜೊತೆಗೆ ಫ್ರಿಟ್ಜೋಫ್ ಕಾಪ್ರಾ ಅವರ ವಿಚಾರಗಳನ್ನೂ ಉಲ್ಲೇಖಿಸಲಾಗಿದೆ.

ಈ ಮೂರ್ತಿಗೆ ಇಲ್ಲಿ ಪೂಜೆಯೇನೂ ಸಲ್ಲುವುದಿಲ್ಲ. CERN ಹಲವು ದೇಶಗಳ ವಿಜ್ಞಾನಿಗಳು ಕೆಲಸ ಮಾಡುವ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆ. ಅಲ್ಲಿ ಯಾವುದೇ ಒಂದು ಧರ್ಮವನ್ನು ಪ್ರತಿನಿಧಿಸುವ ಉದ್ದೇಶದಿಂದ ಈ ಮೂರ್ತಿ ಇಡಲಾಗಿಲ್ಲ. ಇದು ಭಾರತೀಯ ನಾಗರಿಕತೆಯ ಕಲಾ ಪರಂಪರೆ ಮತ್ತು ವಿಜ್ಞಾನ-ತತ್ವಶಾಸ್ತ್ರದ ನಡುವಿನ ಸಾಂಕೇತಿಕ ಸಂಬಂಧವನ್ನು ಗೌರವಿಸುವ ಸಲುವಾಗಿ ಇರಿಸಲಾಗಿದೆ.

ಈ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. CERNನಲ್ಲಿ ಶಿವನ ಪೂಜೆ ನಡೆಯುತ್ತದೆ ಎನ್ನುತ್ತಾರೆ ಕೆಲವರು. ಇದು ನಿಜವಲ್ಲ. ವಿಜ್ಞಾನಿಗಳು ಶಿವನನ್ನು ನಿಜವಾಗಿಯೂ ಬ್ರಹ್ಮಾಂಡದ ದೇವರು ಎಂದು ಒಪ್ಪಿಕೊಂಡಿದ್ದಾರೆ ಎಂಬುದು ಕೂಡ ತಪ್ಪು. ವಿಜ್ಞಾನಿಗಳು ಶಿವನ ತಾಂಡವವನ್ನು ಒಂದು ʼಸಾಂಕೇತಿಕ ರೂಪಕʼವಾಗಿ ಉಲ್ಲೇಖಿಸುತ್ತಾರೆ. CERNನಲ್ಲಿ ಬ್ರಹ್ಮಾಂಡವನ್ನು ನಾಶ ಮಾಡುವ ಪ್ರಯೋಗಗಳು ನಡೆಯುತ್ತಿವೆ ಎಂಬುದು ಕೂಡ ಹಲವು ವರ್ಷಗಳಿಂದ ಹರಿದಾಡುತ್ತಿರುವ ಸುಳ್ಳು ವದಂತಿ. Large Hadron Colliderನಲ್ಲಿ ನಡೆಯುವ ಪ್ರಯೋಗಗಳು ಕಣಗಳ ವರ್ತನೆಯನ್ನು ಅಧ್ಯಯನ ಮಾಡಲು ಇರುವುದು. ಭೂಮಿಗೆ ಅಥವಾ ಬ್ರಹ್ಮಾಂಡಕ್ಕೆ ಅಪಾಯ ಉಂಟಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+