ಗೂಗಲ್, ಚಾಟ್‌ಜಿಪಿಟಿಯೇ ತಪ್ಪು ಒಪ್ಕೊಂಡ್ವು.. ಭಾರತದಲ್ಲಿ ಮೊದಲ ವಿದ್ಯುತ್ ದೀಪ ಬೆಳಗಿದ್ದು ಕರ್ನಾಟಕದ ಈ ಊರಲ್ಲಿ
Power: ಹಿಂದಿನ ಕಾಲದಲ್ಲಿ ಬರೀ ಸೀಮೆ ಎಣ್ಣೆ ದೀಪವೊಂದಿದ್ದರೆ ಸಾಕಾಗಿತ್ತು, ಆ ಬೆಳಕಿನಲ್ಲೇ ರಾತ್ರಿ ಕಳೆಯುತ್ತಿದ್ದರು. ಆದರೆ ಈಗಿನ ಆಧುನಿಕ ಯುಗದಲ್ಲಿ ದಿನದ 24 ಗಂಟೆಯೂ ಕರೆಂಟ್ ಅತ್ಯಗತ್ಯವಾಗಿದೆ. ಆದರೆ ಭಾರತದಲ್ಲಿ ಈ ವಿದ್ಯುತ್ ದೀಪ ಮೊದಲು ಬೆಳಗಿದ್ದು ಕರ್ನಾಟಕದಲ್ಲೇ ಎನ್ನುವುದು ಅದೆಷ್ಟೋ ಮಂದಿಗೆ ಗೊತ್ತಿಲ್ಲದ ವಿಚಾರವಾಗಿದೆ. ಹಾಗಾದ್ರೆ ಖ್ಯಾತ ಇತಿಹಾಸಕಾರರೊಬ್ಬರು ಈ ಕುರಿತು ಬಿಚ್ಚಿಟ್ಟ ಮಹತ್ವದ ಮಾಹಿತಿ ಇಲ್ಲಿದೆ ನೋಡಿ.
ಖ್ಯಾತ ಲೇಖಕ ಹಾಗೂ ಇತಿಹಾಸ ಸಂಶೋಧಕರಾದ ಗಜಾನನ ಶರ್ಮ ಅವರು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಭಾರತದ ವಿದ್ಯುತ್ ಇತಿಹಾಸಕ್ಕೆ ಸಂಬಂಧಿಸಿದ ಅತ್ಯಂತ ಕುತೂಹಲಕಾರಿ ಮತ್ತು ಅಪರೂಪದ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲೇ ಅತ್ಯಂತ ಮೊದಲ ಬಾರಿಗೆ ವಿದ್ಯುತ್ ದೀಪ ಉರಿದಿದ್ದು ನಮ್ಮ ಹೆಮ್ಮೆಯ ಕನ್ನಡ ನಾಡಿನ ರಾಜಮಹಾರಾಜರ ಊರಿನಲ್ಲಿ ಎಂಬ ಸತ್ಯವನ್ನು ಈ ವಿಡಿಯೋದಲ್ಲಿ ಅವರು ಬಿಚ್ಚಿಟ್ಟಿದ್ದಾರೆ.

ಭಾರತದಲ್ಲಿ ಮೊದಲು ವಿದ್ಯುತ್ ದೀಪ ಬೆಳಗಿದ್ದು ಕರುನಾಡಲ್ಲಿ
'ಇಂದಿಗೂ ಗೂಗಲ್ ಅಥವಾ ಇಂಟರ್ನೆಟ್‌ಗಳಲ್ಲಿ ಹುಡುಕಿದರೆ ಭಾರತದಲ್ಲಿ ಮೊದಲ ಬಾರಿಗೆ 1881ರಲ್ಲಿ ಕೊಲ್ಕತ್ತಾದಲ್ಲಿ ವಿದ್ಯುತ್ ದೀಪವನ್ನು ಬೆಳಗಿಸಲಾಯಿತು ಎಂಬ ತಪ್ಪು ಮಾಹಿತಿ ಲಭ್ಯವಾಗುತ್ತದೆ. ಈ ವಿಷಯವಾಗಿ ಅವರು ಕೃತಕ ಬುದ್ಧಿಮತ್ತೆಯ ಚಾಟ್‌ಜಿಪಿಟಿ (ChatGPT)ಯಲ್ಲಿಯೂ ಸುದೀರ್ಘ ಹುಡುಕಾಟ ನಡೆಸಲಾಯಿತು. ಅಂತಿಮವಾಗಿ ಲಭ್ಯವಿರುವ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಚಾಟ್‌ಜಿಪಿಟಿ ಸಹ ಮೈಸೂರಿನಲ್ಲೇ ಮೊದಲು ವಿದ್ಯುತ್ ದೀಪ ಉರಿದಿದ್ದು ಎಂಬ ಸತ್ಯವನ್ನು ಒಪ್ಪಿಕೊಂಡಿದೆ,' ಎಂದು ಗಜಾನನ ಶರ್ಮ ಅವರು ವಿವರಿಸಿದ್ದಾರೆ.
ಐತಿಹಾಸಿಕ ಹಿನ್ನೆಲೆ ಮತ್ತು ದಾಖಲೆಯ ವಿವರ
ದಾಖಲೆಗಳ ಪ್ರಕಾರ, 1878ರ ಮೇ 27ರಂದು ಮೈಸೂರಿನಲ್ಲಿ ಈ ಐತಿಹಾಸಿಕ ಘಟನೆ ನಡೆದಿತ್ತು. ಮೈಸೂರಿನ ಹೆಸರಾಂತ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಂದೆ-ತಾಯಿಯ ವಿವಾಹದ ಸಂದರ್ಭದಲ್ಲಿ ಈ ಅದ್ಭುತ ನಡೆದಿತ್ತು. ಅಂದರೆ ಮೈಸೂರಿನ 10ನೇ ಚಾಮರಾಜೇಂದ್ರ ಒಡೆಯರ್ ಮತ್ತು ಕೆಂಪನಂಜಮ್ಮಣ್ಣಿ ಅವರ ವಿವಾಹ ಮಹೋತ್ಸವದ ಶುಭ ದಿನದಂದು ಈ ದೀಪಗಳನ್ನು ಬೆಳಗಿಸಲಾಯಿತು.
ಗಜಾನನ ಶರ್ಮ ಹೇಳಿದ್ದೇನು?
'ಮದುವೆಯ ಸಂಭ್ರಮಕ್ಕಾಗಿ ಇಂಗ್ಲೆಂಡ್‌ನಿಂದ ವಿಶೇಷವಾಗಿ 'ಡೈನಮೋ' ಯಂತ್ರಗಳನ್ನು ತರಿಸಲಾಗಿತ್ತು. ಅಂದಿನ ವಿವಾಹ ಮಂಟಪವಾಗಿದ್ದ ಮೈಸೂರಿನ ಪ್ರಸಿದ್ಧ ಜಗನ್ಮೋಹನ ಅರಮನೆಯ ಹೊರಭಾಗದಲ್ಲಿ ಒಟ್ಟು 12 ಆರ್ಕ್ ಲ್ಯಾಂಪ್‌ಗಳನ್ನು ಅಳವಡಿಸಿ ಪ್ರಕಾಶಮಾನವಾಗಿ ಬೆಳಗಿಸಲಾಗಿತ್ತು. ಇದು ಭಾರತದ ಇತಿಹಾಸದಲ್ಲೇ ವಿದ್ಯುತ್ ಬಳಕೆಯ ಅಧಿಕೃತ ಮತ್ತು ಮೊದಲ ದಾಖಲೆಯಾಗಿದೆ. ಇದಾದ ನಂತರವಷ್ಟೇ ಕೊಲ್ಕತ್ತಾ ಮತ್ತು ಬಾಂಬೆಯಂತಹ ಮಹಾನಗರಗಳಲ್ಲಿ ವಿದ್ಯುತ್ ದೀಪಗಳನ್ನು ಬಳಸಲಾಯಿತು,' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೈಸೂರು ಸಂಸ್ಥಾನವು ಕೇವಲ ಕಲೆ, ಸಾಹಿತ್ಯಕ್ಕೆ ಮಾತ್ರವಲ್ಲದೆ, ಇಡೀ ದೇಶದಲ್ಲೇ ತಂತ್ರಜ್ಞಾನ ಮತ್ತು ನಾವೀನ್ಯತೆಯನ್ನು ಅಳವಡಿಸಿಕೊಳ್ಳುವಲ್ಲಿ ಹೇಗೆ ಮುಂಚೂಣಿಯಲ್ಲಿತ್ತು ಎಂಬುದಕ್ಕೆ ಗಜಾನನ ಶರ್ಮ ಅವರು ಹಂಚಿಕೊಂಡಿರುವ ಈ ಮಾಹಿತಿ ಉತ್ತಮ ಉದಾಹರಣೆಯಾಗಿದೆ. ಕನ್ನಡಿಗರು ಹೆಮ್ಮೆಪಡುವಂತಹ ಈ ಇತಿಹಾಸ ಇಂದಿನ ಪೀಳಿಗೆಗೆ ತಿಳಿಸಬೇಕಾದದ್ದು ಅತ್ಯಗತ್ಯವಾಗಿದೆ. ಯಾಕೆಂದ್ರೆ ಈಗಿನ ಎಷ್ಟೋ ಮಂದಿಗೆ ವಿದ್ಯುತ್ ವ್ಯತ್ಯಯ, ಕರೆಂಟ್ ಬಿಲ್, ವಿದ್ಯುತ್ ಉದ್ಪಾದನೆ ಬಗ್ಗೆ ಮಾತ್ರ ಗೊತ್ತಿರುತ್ತದೆ. ಆದರೆ ಈ ವಿದ್ಯುತ್ ನಮ್ಮ ಹೆಮ್ಮೆಯ ಕರ್ನಾಟಕದ ಮೈಸೂರಿನಲ್ಲಿ ಎನ್ನುವ ವಿಚಾರ ಗೊತ್ತಿಲ್ಲ. ಆದ್ದರಿಂದ ಇದನ್ನು ತಿಳಿದುಕೊಳ್ಳಲೇಬೇಕಿದೆ.
ಒಟ್ಟಿನಲ್ಲಿ ಹೇಳುವುದಾದರೆ ಈಗಿನ ಕಾಲದಲ್ಲಿ ಅದೆಷ್ಟೇ ವಿದ್ಯುತ್ ಉತ್ಪಾದನೆ ಮಾಡಿದರೂ ಅದು ಲೆಕ್ಕಕ್ಕೆ ಬರುವುದಿಲ್ಲ. ಬದಲಿಗೆ ಈ ವಿದ್ಯುತ್ ಮೊದಲು ಬೆಳಗಿದ್ದು ಎಲ್ಲಿ ಎನ್ನುವ ಮ್ಯಾಟರ್ ತುಂಬಾ ಮುಖ್ಯವಾಗುತ್ತದೆ. ಅದರಲ್ಲೂ ಗಜಾನನ ಶರ್ಮ ಅವರು ಕರುನಾಡಲ್ಲೇ ಇದು ಮೊದಲಿಗೆ ಆರಂಭವಾಗಿದ್ದು ಎಂದು ತಿಳಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.












Click it and Unblock the Notifications