ಕಣ್ಣಿಗೆ ಮೂಗಿನ ಡ್ರಾಪ್ಸ್‌ ಹಾಕಿದ ವೈದ್ಯ, ದೃಷ್ಟಿ ಕಳೆದುಕೊಡ 19 ತಿಂಗಳ ಕಂದಮ್ಮ.. ಪೋಷಕರ ಆಕ್ರಂದನ

ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ವೈದ್ಯಕೀಯ ಕ್ಷೇತ್ರವೇ ತಲೆತಗ್ಗಿಸುವಂತಹ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯಕ್ಕೆ ಕೇವಲ 19 ತಿಂಗಳ ಮುಗ್ಧ ಕಂದಮ್ಮ ತನ್ನ ಎರಡೂ ಕಣ್ಣುಗಳ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡಿದೆ. ಪೋಷಕರ ಕಣ್ಣೀರು ಮತ್ತು ಆಕ್ರೋಶಕ್ಕೆ ಕಾರಣವಾಗಿರುವ ಈ ಘಟನೆ ಇಡೀ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲೆಯೇ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುವಂತೆ ಮಾಡಿದೆ.

ಸಾಗರ್ ಜಿಲ್ಲೆಯ ಭೂಸಾ ಕಮಲಪುರ ಗ್ರಾಮದ ನಿವಾಸಿ ಇಂದ್ರಜ್ ವಿಶ್ವಕರ್ಮ ಅವರ 19 ತಿಂಗಳ ಗಂಡು ಮಗು ವಿನಯ್‌ಗೆ ಮೇ 29ರಂದು ತೀವ್ರ ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು. ಜೊತೆಗೆ ಮಗುವಿನ ಕಣ್ಣುಗಳು ಸಹ ಸ್ವಲ್ಪ ಕೆಂಪಾಗಿದ್ದವು. ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಗಮನಿಸಿದ ಪೋಷಕರು ತಕ್ಷಣವೇ ಸಾಗರ್ ಜಿಲ್ಲೆಯ ಬಂದಾ ಸಿವಿಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ.

19-Month-Old Baby Loses Eyesight After Alleged Medical Negligence in Madhya Pradesh Hospital

ವೈದ್ಯರ ಎಡವಟ್ಟಿನಿಂದ ದೃಷ್ಟಿ ಕಳೆದುಕೊಂಡ ಕಂದಮ್ಮ

ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಮಕ್ಕಳ ವೈದ್ಯರು ಆ ಮಗುವನ್ನು ಪರೀಕ್ಷಿಸಿದ್ದಾರೆ. ಆದರೆ ಚಿಕಿತ್ಸೆ ನೀಡುವ ಆತುರದಲ್ಲಿ ಅವರು ದೊಡ್ಡ ಎಡವಟ್ಟು ಮಾಡಿದ್ದಾರೆ. ಸಾಮಾನ್ಯವಾಗಿ ಮೂಗಿಗೆ ಹಾಕಬೇಕಿದ್ದ 'ಸಲೈನ್ ಡ್ರಾಪ್ಸ್' (Saline Drops) ಅನ್ನು ಮಗುವಿನ ಕಣ್ಣಿಗೆ ಹಾಕಿದ್ದಾರೆ. ಇದರ ಜೊತೆಗೆ ಪ್ಯಾರಾಸಿಟಮಾಲ್ ಸಿರಪ್, ಇಂಜೆಕ್ಷನ್ ಸೇರಿದಂತೆ ಇತರೆ ಕೆಲವು ಔಷಧಿಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಮೂಗಿನ ಹನಿಯನ್ನು ಕಣ್ಣಿಗೆ ಹಾಕಿದ ಕೆಲವೇ ಗಂಟೆಗಳಲ್ಲಿ ಮಗುವಿನ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸಿವಿಲ್ ಆಸ್ಪತ್ರೆಯಲ್ಲೇ ಮಗುವಿಗೆ ಸುದೀರ್ಘ ಕಾಲ ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಬಂದಾ ಆಸ್ಪತ್ರೆಯ ವೈದ್ಯರ ತಕ್ಷಣವೇ ಮಗುವನ್ನು ಸಾಗರ್ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಅಲ್ಲಿಯೂ ಪರಿಸ್ಥಿತಿ ಸುಧಾರಿಸದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್‌ನ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರು ಪೋಷಕರಿಗೆ ಹೇಳಿದ್ದೇನು?

ಭೋಪಾಲ್ ಏಮ್ಸ್ ಆಸ್ಪತ್ರೆಯಲ್ಲಿ ಮಗುವನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು ಪೋಷಕರಿಗೆ ಭೀಕರ ಶಾಕಿಂಗ್ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ನಿರ್ಲಕ್ಷ್ಯದ ಕಾರಣದಿಂದಾಗಿ ಮಗುವಿನ ಎರಡೂ ಕಣ್ಣುಗಳ ದೃಷ್ಟಿ ಶಾಶ್ವತವಾಗಿ ಹೊರಟುಹೋಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಮಗುವಿನ ತಂದೆ ಇಂದ್ರಜ್ ವಿಶ್ವಕರ್ಮ ಅವರು ಆರೋಪ ಮಾಡಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗುವಿನ ಪೋಷಕರು

ಹಸುಗೂಸಿನ ಜೀವನ ಕತ್ತಲಾಗಿರುವುದನ್ನು ಕಂಡು ಆಕ್ರೋಶಗೊಂಡ ತಂದೆ ಇಂದ್ರಜ್, ಬಂದಾ ಪೊಲೀಸ್ ಠಾಣೆಗೆ ತೆರಳಿ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಮಗೆ ವೈದ್ಯರ ಹೆಸರು ತಿಳಿದಿಲ್ಲದಿದ್ದರೂ, ಅವರನ್ನು ಪ್ರತ್ಯಕ್ಷವಾಗಿ ನೋಡಿದರೆ ಗುರುತಿಸಬಲ್ಲೆ ಎಂದು ಉಲ್ಲೇಖಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಈ ಗಂಭೀರ ಆರೋಪ ಕೇಳಿಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿಗಳು ಘಟನೆಯ ಕುರಿತು ತನಿಖೆ ನಡೆಸಲು ವಿಶೇಷ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬ್ಲಾಕ್ ವೈದ್ಯಾಧಿಕಾರಿ ಯೋಗೇಂದ್ರ ಖಟಿಕ್ ಅವರು, 'ಸಮಿತಿಯು ಪ್ರಸ್ತುತ ತನಿಖೆ ನಡೆಸುತ್ತಿದ್ದು, ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು,' ಎಂದು ಭರವಸೆ ನೀಡಿದ್ದಾರೆ.

ಆದರೆ ಈವರೆಗೂ ಇಲಾಖೆಯಿಂದಾಗಲಿ ಅಥವಾ ಬಂದಾ ಸಿವಿಲ್ ಆಸ್ಪತ್ರೆಯ ಆಡಳಿತ ಮಂಡಳಿಯಿಂದಾಗಲಿ ಯಾವುದೇ ಅಧಿಕೃತ ಪ್ರಕಟಣೆ ಅಥವಾ ಸಮರ್ಥನೆ ಹೊರಬಿದ್ದಿಲ್ಲ. ಮಗುವಿನ ಕುಟುಂಬವು ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಮತ್ತು ಕಂದಮ್ಮನ ಜೀವನದ ಜೊತೆ ಆಟವಾಡಿದ ವೈದ್ಯರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕಣ್ಣೀರಿಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ನಡೆದಿದ್ದೇನು ಎಂಬ ಸಂಪೂರ್ಣ ಸತ್ಯ ತಿಳಿದುಬರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+