"ಬಾಸ್ ಇದು ಆಫೀಸಾ ಅಥವಾ ರೆಸ್ಟೋರೆಂಟಾ?": ಗೂಗಲ್ ಆಫೀಸ್ ಊಟ ನೋಡಿ ದಂಗಾದ ಮೆಟಾ ಉದ್ಯೋಗಿ Video Viral
ಲಂಡನ್: ಜಾಗತಿಕ ಟೆಕ್ ದೈತ್ಯ ಕಂಪನಿಗಳಾದ ಗೂಗಲ್, ಮೆಟಾ, ಮತ್ತು ಮೈಕ್ರೋಸಾಫ್ಟ್ ತಮ್ಮ ಉದ್ಯೋಗಿಗಳಿಗೆ ನೀಡುವ ಐಷಾರಾಮಿ ಸೌಲಭ್ಯಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲೂ ಕಚೇರಿಯಲ್ಲಿ ಸಿಗುವ ಉಚಿತ ಮತ್ತು ರುಚಿಕರವಾದ ಆಹಾರದ ಬಗ್ಗೆ ಸದಾ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ಲಂಡನ್‌ನ ಮೆಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ಟೆಕ್ಕಿಯೊಬ್ಬರು, ಗೂಗಲ್ ಕಚೇರಿಗೆ ಊಟಕ್ಕೆ ಭೇಟಿ ನೀಡಿ ಅಲ್ಲಿನ ವೈಭವವನ್ನು ಕಂಡು ನಿಬ್ಬೆರಗಾಗಿದ್ದಾರೆ.
ಅಮಿತ್ ದತ್ತಾ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. "ನಾನು ಇತ್ತೀಚೆಗೆ ಕೇವಲ ಊಟ ಮಾಡಲೆಂದೇ ಲಂಡನ್‌ನ ಗೂಗಲ್ ಕಚೇರಿಗೆ ಭೇಟಿ ನೀಡಿದ್ದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಸ್ಥಳವನ್ನು ಆಫೀಸ್ ಎಂದು ಕರೆಯುವುದು ಅಪರಾಧವೆನಿಸುತ್ತದೆ," ಎಂದು ಅಮಿತ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಅಮಿತ್ ದತ್ತಾ ಅವರು ಗೂಗಲ್ ಕಚೇರಿಯ ಒಳಾಂಗಣ ವಿನ್ಯಾಸವನ್ನು ನೋಡಿ ಬೆರಗಾಗಿದ್ದಾರೆ. ಕಚೇರಿಯು ಒಂದು 'ಟೆಕ್ ಮ್ಯೂಸಿಯಂ'ನಂತೆ ಭಾಸವಾಗುತ್ತದೆ ಎಂದು ಅವರು ಬಣ್ಣಿಸಿದ್ದಾರೆ. ಬಾಲ್ಯದ ನೆನಪುಗಳನ್ನು ಮರುಕಳಿಸುವಂತಹ ಕಾರ್ಟೂನ್ ಪಾತ್ರಗಳಿರುವ ಗಾಜಿನ ಬಾಗಿಲುಗಳು ಮತ್ತು ಅಲ್ಲಿನ ವಾತಾವರಣ ಕೆಲಸದ ಒತ್ತಡವನ್ನು ಮರೆಸುವಂತಿದೆ ಎಂದು ಅವರು ಹೇಳಿದ್ದಾರೆ.
ಬಾಯಿ ನೀರೂರಿಸುವ ಮೆನು:
ವಿಡಿಯೋದ ಪ್ರಮುಖ ಆಕರ್ಷಣೆಯೇ ಗೂಗಲ್ ಕ್ಯಾಂಟೀನ್. ಅಲ್ಲಿನ ಆಹಾರದ ಆಯ್ಕೆಗಳನ್ನು ಕಂಡು ಅಮಿತ್ ತಮ್ಮ "ಸಂಯಮ" ಕಳೆದುಕೊಂಡರಂತೆ. ಮೆನುವಿನಲ್ಲಿ ಮ್ಯಾಕ್ ಅಂಡ್ ಚೀಸ್ , ರೆಡ್ ವೈನ್ ಸಾಸ್‌ನಲ್ಲಿ ಅದ್ದಿದ ಸೋಯಾ ಬೀನ್ಸ್ ಮತ್ತು ಲೆಕ್ಕವಿಲ್ಲದಷ್ಟು ಬಗೆಯ ಸಲಾಡ್‌ಗಳು ಇದ್ದವು. "ಸೋಯಾ ಬೀನ್ಸ್‌ಗೆ ಸಿಂಪ್ಲಿಸಿಟಿ ಮೀಟ್‌ಬಾಲ್ಸ್ ಎಂದು ಹೆಸರಿಟ್ಟಿರುವುದು ಸ್ವಲ್ಪ ವಿಚಿತ್ರ ಎನಿಸಿದರೂ, ರುಚಿ ಅದ್ಭುತವಾಗಿತ್ತು," ಎಂದು ಅವರು ತಮಾಷೆಯಾಗಿ ಹೇಳಿದ್ದಾರೆ.
ಇದರ ಜೊತೆಗೆ ವೈಲ್ಡ್ ಬೆರ್ರಿ ಐಸ್ಡ್ ಟೀ ಊಟದ ರುಚಿಯನ್ನು ಮತ್ತಷ್ಟು ಹೆಚ್ಚಿಸಿತ್ತು. "ಆರೇಂಜ್ ಪಸೀ ಸೀಡ್ ಕೇಕ್ ನೋಡಿದ ಮೇಲೆ ಇಲ್ಲ ಎಂದು ಹೇಳಲು ಸಾಧ್ಯವೇ ಇರಲಿಲ್ಲ," ಎಂದು ಅಮಿತ್ ಹೇಳಿದ್ದಾರೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಇಷ್ಟವಾಗಿದ್ದು ಅಲ್ಲಿನ ಕಾಫಿ. ಸಾಮಾನ್ಯವಾಗಿ ಆಫೀಸ್‌ಗಳಲ್ಲಿ ಕಾಫಿ ಮಷೀನ್‌ಗಳಿರುತ್ತವೆ. ಆದರೆ ಇಲ್ಲಿ ಒಬ್ಬ ವೃತ್ತಿಪರ 'ಬರಿಸ್ತಾ' (Barista - ಕಾಫಿ ತಯಾರಕ) ಖುದ್ದಾಗಿ ಮೋಚಾ ತಯಾರಿಸಿ ಕೊಡುತ್ತಿದ್ದರು. "ಯಾರಾದರೂ ಕಾಳಜಿಯಿಂದ ಮಾಡಿಕೊಟ್ಟಾಗ ಆಫೀಸ್ ಕಾಫಿ ಕೂಡ ಇಷ್ಟು ಚೆನ್ನಾಗಿರುತ್ತದೆ ಎಂಬುದನ್ನು ನಾನು ಮರೆತಿದ್ದೆ," ಎಂದು ಅವರು ಶ್ಲಾಘಿಸಿದ್ದಾರೆ.
ಇದು ಕೇವಲ ಊಟವಲ್ಲ, ತಂತ್ರ
ತಮ್ಮ ವಿಡಿಯೋದ ಕೊನೆಯಲ್ಲಿ ಅಮಿತ್ ದತ್ತಾ ಹೇಳಿರುವ ಮಾತು ನೆಟ್ಟಿಗರ ಗಮನ ಸೆಳೆದಿದೆ. "ಇದು ಕೇವಲ ಮಧ್ಯಾಹ್ನದ ಊಟವಲ್ಲ, ಇದು ಉದ್ಯೋಗಿಗಳನ್ನು ಕಂಪನಿಯಲ್ಲಿ ಉಳಿಸಿಕೊಳ್ಳುವ ತಂತ್ರ," ಎಂದು ಅವರು ಮಾರ್ಮಿಕವಾಗಿ ಹೇಳಿದ್ದಾರೆ. ಅಂದರೆ, ಇಂತಹ ಉತ್ತಮ ಸೌಲಭ್ಯಗಳನ್ನು ನೀಡಿದರೆ ಉದ್ಯೋಗಿಗಳು ಕೆಲಸ ಬಿಟ್ಟು ಹೋಗುವುದಿಲ್ಲ ಎಂಬುದು ಅವರ ಅಭಿಪ್ರಾಯ.
ನೆಟ್ಟಿಗರ ಪ್ರತಿಕ್ರಿಯೆ:
ಈ ವಿಡಿಯೋಗೆ ಸಾವಿರಾರು ಲೈಕ್ಸ್ ಮತ್ತು ಕಮೆಂಟ್‌ಗಳು ಹರಿದು ಬಂದಿವೆ. "ನಾವು ಕೂಡ ಊಟಕ್ಕೆ ಗೂಗಲ್‌ಗೆ ಹೋಗಬಹುದೇ?" ಎಂದು ಒಬ್ಬರು ಕೇಳಿದ ಪ್ರಶ್ನೆಗೆ, "ಅತಿಥಿಯಾಗಿ ಹೋಗಬಹುದು," ಎಂದು ಅಮಿತ್ ಉತ್ತರಿಸಿದ್ದಾರೆ. ಮತ್ತೊಬ್ಬರು, "ಗೂಗಲ್ ಎಲ್ಲಾ ರೆಸ್ಟೋರೆಂಟ್‌ಗಳಿಗಿಂತ ಉತ್ತಮವಾಗಿದೆ," ಎಂದರೆ, ಇನ್ನು ಕೆಲವರು "ನಾನು ಮುಂದೊಂದು ದಿನ ಇಲ್ಲೇ ಕೆಲಸ ಮಾಡಬೇಕು ಎಂದು ಬಯಸುತ್ತೇನೆ," ಎಂದು ಬರೆದುಕೊಂಡಿದ್ದಾರೆ.
ಒಟ್ಟಿನಲ್ಲಿ, ಕಾರ್ಪೊರೇಟ್ ಜಗತ್ತಿನ ಈ ಐಷಾರಾಮಿ ಸೌಲಭ್ಯಗಳು ಸಾಮಾನ್ಯ ಉದ್ಯೋಗಿಗಳಿಗೆ ಕನಸಿನಂತೆ ಕಂಡರೆ, ಟೆಕ್ ಉದ್ಯೋಗಿಗಳಿಗೆ ಇದು ಪ್ರತಿಷ್ಠೆಯ ವಿಷಯವಾಗಿದೆ.












Click it and Unblock the Notifications