Yelahanka flyover: ಯಲಹಂಕ ಮೇಲ್ಸೇತುವೆ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲು ಗಡುವು
ಬೆಂಗಳೂರು: ನಗರದ ಉತ್ತರ ಭಾಗದ ಯಲಹಂಕ ಫ್ಲೈಓವರ್ ಕಾಮಗಾರಿಯನ್ನು ಈ ವರ್ಷ ಸೆಪ್ಟೆಂಬರ್ ಅಂತ್ಯದೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಬೆಂಗಳೂರು ಉತ್ತರ ನಗರ ನಿಗಮ ವ್ಯಾಪ್ತಿಯ ವಿವಿಧ ಪ್ರದೇಶಗಳನ್ನು ಶನಿವಾರ ಪರಿಶೀಲಿಸಿದ ಅವರು, ದೊಡ್ಡಬಳ್ಳಾಪುರ ಮುಖ್ಯ ರಸ್ತೆಯಲ್ಲಿನ ಸುಮಾರು 2 ಕಿಲೋಮೀಟರ್ ಉದ್ದದ ಯಲಹಂಕ ಮೇಲ್ಸೇತುವೆ ಕಾಮಗಾರಿ ಈಗಾಗಲೇ ಶೇ.70ರಷ್ಟು ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.

ರಾತ್ರಿ ಸಮಯದಲ್ಲಿ ಮಾತ್ರ ಕಾಮಗಾರಿ
"ಒಟ್ಟು 56 ಪಿಲ್ಲರ್‌ಗಳ ಪೈಕಿ 51 ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಮುಗಿದಿದೆ. ಉಳಿದ ಐದು ಪಿಲ್ಲರ್‌ಗಳ ಕಾಮಗಾರಿ ಬಾಕಿಯ ಇದೆ. 447 ಸೆಗ್ಮೆಂಟ್‌ಗಳಲ್ಲಿ 351 ಸೆಗ್ಮೆಂಟ್‌ಗಳನ್ನು ಈಗಾಗಲೇ ಅಳವಡಿಸಲಾಗಿದ್ದು, ಇನ್ನೂ 96 ಸೆಗ್ಮೆಂಟ್‌ಗಳ ಅಳವಡಿಕೆ ಬಾಕಿ ಇದೆ. ಹಗಲು ವೇಳೆ ಈ ಭಾಗದಲ್ಲಿ ನಿರಂತರವಾಗಿ ವಾಹನ ಸಂಚಾರ ಇರುವುದರಿಂದ ರಾತ್ರಿ ಸಮಯದಲ್ಲಿ ಮಾತ್ರ ಕಾಮಗಾರಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.
ನಗರ ಪಾಲಿಕೆಯಿಂದ ಡೀಡ್ ನೀಡಿರುವ ಜಾಗಗಳನ್ನು ಕೂಡಲೇ ವಶಕ್ಕೆ ಪಡೆದು ಫೆನ್ಸಿಂಗ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಸ್ಪಷ್ಟ ಸೂಚನೆ ನೀಡಿದರು.
ಈ ವೇಳೆ ಹೆಣ್ಣೂರು-ಬಾಗಲೂರು ರಸ್ತೆಯ 5 ಕಿಲೋಮೀಟರ್ ವ್ಯಾಪ್ತಿಯ ವೈಟ್‌ಟಾಪಿಂಗ್ ಕಾಮಗಾರಿಯ ಪ್ರಗತಿಯನ್ನು ಸಹ ಪರಿಶೀಲಿಸಿದರು. ರಸ್ತೆಯ ಒಂದು ಬದಿಯಲ್ಲಿ 4 ಕಿಮೀ ವೈಟ್‌ಟಾಪಿಂಗ್ ಕೆಲಸ ಪೂರ್ಣಗೊಂಡಿದ್ದು, ಉಳಿದ 1 ಕಿಮೀ ಕಾಮಗಾರಿ 15 ದಿನಗಳೊಳಗೆ ಮುಗಿಸಲು ಸೂಚನೆ ನೀಡಲಾಗಿದೆ. ಇನ್ನೊಂದು ಬದಿಯ ವೈಟ್‌ಟಾಪಿಂಗ್ ಕಾಮಗಾರಿಯನ್ನು ಒಂದು ತಿಂಗಳೊಳಗೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ರೈಲ್ವೆ ಅಂಡರ್‌ಬ್ರಿಡ್ಜ್‌ಗೆ ಗಡುವು
ಯಲಹಂಕ ರೈಲ್ವೆ ಅಂಡರ್‌ಬ್ರಿಡ್ಜ್ (ಆರ್‌ಯುಬಿ) ಕಾಮಗಾರಿಯ ಕುರಿತು ಮಾತನಾಡಿದ ಅವರು, ಒಂದು ಬದಿಯ ಕೆಲಸ ಸಂಪೂರ್ಣವಾಗಿ ಮುಗಿದಿದ್ದು, ಬಾಕ್ಸ್ ಪುಷಿಂಗ್ ಕಾರ್ಯವೂ ಪೂರ್ಣಗೊಂಡಿದೆ. ಆದರೆ ಮತ್ತೊಂದು ಬದಿಯ ಕಾಮಗಾರಿ ಭೂಸ್ವಾಧೀನ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ರೈಲ್ವೆ ಭೂಮಿ ಸಂಬಂಧಿತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ, ಉಳಿದ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ರಸ್ತೆ ಅಗಲೀಕರಣಕ್ಕೂ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.
ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ, ರೈಲ್ವೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಉಳಿದ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಈ ಭಾಗದಲ್ಲಿ ವಾಹನ ಸಂಚಾರದ ಒತ್ತಡ ಕಡಿಮೆ ಮಾಡಲು ರಸ್ತೆ ಅಗಲೀಕರಣಕ್ಕೂ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಯಲಹಂಕ ಫ್ಲೈಓವರ್ ಪೂರ್ಣಗೊಂಡ ಬಳಿಕ ಉತ್ತರ ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆ, ಹೆಬ್ಬಾಳ, ಬಾಗಲೂರು ಹಾಗೂ ಯಲಹಂಕ ಭಾಗಗಳಲ್ಲಿ ಸಂಚಾರ ಸುಗಮವಾಗಲಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದ್ದು, ನಗರಾಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications