ನಿಧಿಗಾಗಿ ದೇವರ ಗುಡಿಯನ್ನೇ ನಾಶ ಮಾಡಿದ ದುಷ್ಕರ್ಮಿಗಳು
ಮಡಿಕೇರಿ, ಫೆಬ್ರವರಿ 22 : ದುಷ್ಕರ್ಮಿಗಳ ನಿಧಿ ಆಸೆಗೆ ಪುರಾತನ ದೇವರ ಗುಡಿಯೊಂದನ್ನು ಅಗೆದು ನಾಶ ಮಾಡಿ ನಿಧಿ ಸಿಗದೆ ಖಾಲಿ ಕೈನಲ್ಲಿ ಪರಾರಿಯಾಗಿರುವ ಘಟನೆಯೊಂದು ತಾಲೂಕಿನ ಮೂರ್ನಾಡು ಬಳಿ ಬೆಳಕಿಗೆ ಬಂದಿದೆ.
ಮೂರ್ನಾಡು ಸಮೀಪದ ಬಲಮುರಿ ಗ್ರಾಮದ ಉಪ್ಪುಗುಂಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಪುರಾತನ ಕಾಲದ್ದು ಎನ್ನಲಾದ ಲವಣೇಶ್ವರ ದೇವರ ಗುಡಿ ಸಂಪೂರ್ಣ ನಾಶವಾಗಿದ್ದು, ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿರುವ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಕಾಡಿನೊಳಗೆ ಇರುವ ದೇವರ ಗುಂಡಿಯ ಲಿಂಗಗಳ ಕೆಳಗೆ ನಿಧಿಯಿರುತ್ತದೆ ಎಂಬ ಮಾತುಗಳನ್ನು ವಯಸ್ಸಾದವರು ಹೇಳುತ್ತಿರುತ್ತಾರೆ. ಬಹುಶಃ ಇದನ್ನೇ ನಂಬಿದ ಯಾರೋ ದುಷ್ಕರ್ಮಿಗಳು ಈ ಕೃತ್ಯಕ್ಕೆ ಕೈಹಾಕಿರಬಹುದೆಂದು ಶಂಕಿಸಲಾಗಿದೆ.

ಇದೀಗ ನಾಶವಾಗಿರುವ ಗುಡಿ ಸಾರ್ವಜನಿಕರಿಂದ ದೂರವಾಗಿ ಕಾವೇರಿ ನದಿ ತಟದ ಕಾಡಿನಲ್ಲಿತ್ತು. ಸ್ಕಂದ ಪುರಾಣದ ಮಾಹಿತಿ ಪ್ರಕಾರ ಕಾವೇರಿ ನದಿ ಉಗಮಿಸುವುದಕ್ಕಿಂತ ಮೊದಲೇ ಈ ದೇವರ ಗುಡಿ ಇತ್ತು ಎನ್ನಲಾಗುತ್ತಿದೆ. ಈ ಗುಡಿಗೆ ಕಾವೇರಿ ಪ್ರದಕ್ಷಿಣೆ ಹಾಕಿದ್ದಳು ಎಂಬ ದಂತಕಥೆಯೂ ಇದೆ.
ಈ ಗುಡಿಯನ್ನು ಶಿವರಾತ್ರಿ ಅಂಗವಾಗಿ ಸಂಘಟನೆಯೊಂದರ ಕಾರ್ಯಕರ್ತರು ಸ್ಪಚ್ಛಗೊಳಿಸಿ ಪೂಜೆ ಸಲ್ಲಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಅದನ್ನು ಪ್ರಚಾರ ಮಾಡಿದ್ದರು. ಇದನ್ನು ಗಮನಿಸಿದ ದುಷ್ಕರ್ಮಿಗಳು ಬಹುಶಃ ಇಲ್ಲಿನ ಒಡಲನ್ನು ಬಗೆದರೆ ನಿಧಿ ಸಿಕ್ಕರೂ ಸಿಗಬಹುದೆಂಬ ಆಸೆಯಿಂದ ಶಿವಲಿಂಗವನ್ನು ಕಿತ್ತು ಹಾಕಿ ನೆಲವನ್ನು ಅಗೆದು ನೋಡಿದ್ದಾರೆ.
ಆದರೆ ಅವರಿಗೆ ಅಲ್ಲಿ ಯಾವುದೇ ರೀತಿಯ ನಿಧಿ ಸಿಕ್ಕಿರುವ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ಅವರು ಖಾಲಿ ಕೈನಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂದು ಹೋಗಿದ್ದಾರೆ. ಆದರೆ ಪುರಾತನ ಗುಡಿಯೊಂದು ದುಷ್ಕರ್ಮಿಗಳ ನಿಧಿ ಆಸೆಗೆ ನಾಶವಾಗಿರುವುದು ಮಾತ್ರ ನಿಜಕ್ಕೂ ಬೇಸರದ ಸಂಗತಿಯಾಗಿದೆ.











Click it and Unblock the Notifications